ಆ.೧೯ ರಿಂದ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್.

ಕೊಪ್ಪಳ, ಆ.೧೭ (ಕ ವಾ): ಸಾರ್ವಜನಿಕ ಶಿಕ್ಷಣ ಇಲಾಖೆ, ಕೊಪ್ಪಳ ಇವರಿಂದ ಪ್ರಸಕ್ತ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಕೋರಿಕೆ ವರ್ಗಾವಣೆಯ ಕೌನ್ಸೆಲಿಂಗ್ ಪ್ರಕ್ರಿಯೆ ಆ.೧೯ ರಿಂದ ಆರಂಭಗೊಳ್ಳಲಿದೆ. 
ಪ್ರಸಕ್ತ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆಯ ಅಂತಿಮ ಆದ್ಯತಾ ಪಟ್ಟಿಯನ್ನು ಈಗಾಗಲೇ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದ್ದು, ಈ ಅಂತಿಮ ಪಟ್ಟಿಯನುಸಾರವಾಗಿ ವರ್ಗಾವಣೆಯ ಕೌನ್ಸೆಲಿಂಗ್ ಪ್ರಕ್ರಿಯೆಯು ಆ.೧೯ ರಿಂದ ೨೨ ರವರೆಗೆ ಬೆಳಿಗ್ಗೆ ೧೦ ಗಂಟೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಾರ್ಯಾಲಯ, ಕೊಪ್ಪಳದಲ್ಲಿ ನಡೆಯಲಿದೆ.
     ಸರ್ಕಾರಿ ಪ್ರಾಥಮಿಕ ಶಾಲಾ ಸಹಶಿಕ್ಷಕರ ಆದ್ಯತಾ ಪಟ್ಟಿಯಲ್ಲಿ ೦೧ ರಿಂದ ೨೦೦  ರವರೆಗಿನ ಕ್ರಮ ಸಂಖ್ಯೆ ಹೊಂದಿರುವವರು ಆ.೧೯ ರಂದು ಕೌನ್ಸಿಲಿಂಗ್‌ನಲ್ಲಿ ಭಾಗವಹಿಸಬೇಕು. ಆ. ೨೦ ರಂದು ೨೦೧ ರಿಂದ ೪೫೦ ರವರೆಗೆ ಕ್ರಮ ಸಂಖ್ಯೆ ಹೊಂದಿರುವವರು. ಆ.೨೧ ರಂದು ೪೫೧ ರಿಂದ ೬೦೦ ರವರೆಗೆ ಕ್ರಮ ಸಂಖ್ಯೆ ಹೊಂದಿರುವವರು.  ಆ. ೨೨ ರಂದು ೬೦೧ ರಿಂದ ಪೂರ್ಣಗೊಳ್ಳುವವರೆಗೆ ಕ್ರಮ ಸಂಖ್ಯೆ ಹೊಂದಿರುವವರು ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಬಹುದಾಗಿದೆ.
          ಅದೇ ರೀತಿ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ (ಹೆಚ್‌ಪಿಎಸ್ ಹೆಚ್‌ಎಮ್ ಮತ್ತು ಎನ್‌ಜಿಹೆಚ್‌ಎಮ್) ಹಾಗೂ ವಿಶೇಷ ಶಿಕ್ಷಕರು (ಮ್ಯೂಸಿಕ್, ಕ್ರಾಫ್ಟ್, ಡ್ರಾಯಿಂಗ್, ಪೆಟ್) ಆದ್ಯತಾ ಪಟ್ಟಿಯಲ್ಲಿ ಕ್ರಮ ಸಂಖ್ಯೆ ೦೧ ರಿಂದ ಮುಕ್ತಾಯದವರೆಗಿನ ಕ್ರಮ ಸಂಖ್ಯೆ ಹೊಂದಿರುವವರು ಕೂಡಾ ಆ.೨೨ ರಂದು ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಬಹುದಾಗಿದೆ.
     ಕೌನ್ಸೆಲಿಂಗ್‌ಗೆ ಹಾಜರಾಗುವ ಶಿಕ್ಷಕರು ತಮ್ಮೊಂದಿಗೆ ಅರ್ಜಿ ಪ್ರತಿ, ಬಿಇಓ ಅನುಮೋದಿತ ಅರ್ಜಿ ಪ್ರತಿ, ಆದ್ಯತೆಗೆ ಸಂಬಂಧಿಸಿದಂತೆ ಪ್ರಮಾಣ ಪತ್ರದ ಮೂಲ ಪ್ರತಿ, ಸೇವಾ ಪ್ರಮಾಣ ಪತ್ರ ಇತ್ಯಾದಿ ದಾಖಲೆಗಳನ್ನು ತಪ್ಪದೇ ತರಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.  

Please follow and like us:
error

Related posts

Leave a Comment