fbpx

ಮತ ಜಾಗೃತಿ : ಗ್ರಾಮೀಣರ ಮನಗೆಲ್ಲಲು ಬೀದಿನಾಟಕ ಅತ್ಯುತ್ತಮ ಮಾಧ್ಯಮ- ಕೃಷ್ಣ ಡಿ ಉದಪುಡಿ

 ಲೋಕಸಭೆ ಚುನಾವಣೆಯಲ್ಲಿ ಗ್ರಾಮೀಣ ಪ್ರದೇಶಗಳ ಮತದಾರರನ್ನು ಮತಗಟ್ಟೆಯತ್ತ ಸೆಳೆಯಲು, ಹಾಗೂ ಅವರಲ್ಲಿ ಮತದಾನದ ಮಹತ್ವವನ್ನು ಅರಿಯುವಂತೆ ಮಾಡಲು ಬೀದಿನಾಟಕ ಮತ್ತು ಜಾನಪದ ಸಂಗೀತ   ಅತ್ಯುತ್ತಮ ಮಾಧ್ಯಮವಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು ಹೇಳಿದರು.
  ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಮತದಾರರಿಗೆ ಕಡ್ಡಾಯ ಮತದಾನದ ಮಹತ್ವವನ್ನು ಬಿತ್ತರಿಸಲು ವಾರ್ತಾ ಇಲಾಖೆಯು ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ಬೀದಿನಾಟಕ ಮತ್ತು ಜಾನಪದ ಸಂಗೀತ ಅಭಿಯಾನ ಕಾರ್ಯಕ್ರಮಕ್ಕೆ ಭಾಗ್ಯನಗರದಲ್ಲಿ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
  ಕಳೆದ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಅತ್ಯಂತ ಕಡಿಮೆ ಮತದಾನ ದಾಖಲಾಗಿರುವ ಗ್ರಾಮಗಳಲ್ಲಿ ವಾರ್ತಾ ಇಲಾಖೆಯು ಬೀದಿ ನಾಟಕ ಮತ್ತು ಜಾನಪದ ಸಂಗೀತ ಕಾರ್ಯಕ್ರಮಗಳ ಮೂಲಕ ಮತದಾರರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಸಂಗತಿಯಾಗಿದೆ.  ಗ್ರಾಮೀಣರಲ್ಲಿ ಮತದಾನದ ಮಹತ್ವ ಮೂಡಿಸಿ, ಅವರನ್ನು ಏ. ೧೭ ರಂದು ಮತಗಟ್ಟೆಗಳತ್ತ ಸೆಳೆದು, ದಾಖಲೆಯ ಮತದಾನ ಆಗುವಂತೆ ಮಾಡಲು ಬೀದಿನಾಟಕ ಹಾಗೂ ಜಾನಪದ ಸಂಗೀತ ಕಾರ್ಯಕ್ರಮಗಳು ಅತ್ಯಂತ ಪರಿಣಾಮಕಾರಿ ಮಾಧ್ಯಮವಾಗಲಿದೆ.  ಗ್ರಾಮೀಣ ಭಾಷೆಯ ಸೊಗಡಿನಲ್ಲಿ, ಅವರಲ್ಲಿ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲು ಈ ಬಾರಿ ವಾರ್ತಾ ಇಲಾಖೆಯು ಬೀದಿ ನಾಟಕದ ಸಂಭಾಷಣೆಗಳನ್ನು ಸಹ ರಚಿಸಿದೆ ಅಲ್ಲದೆ, ಮತದಾರರ ಜಾಗೃತಿಗೆ ಅತ್ಯಂತ ಪರಿಣಾಮಕಾರಿಯಾದಂತಹ ಹಾಡುಗಳನ್ನು ಸಿದ್ಧಪಡಿಸಿ, ಬಿತ್ತರಿಸುತ್ತಿದೆ.  ಜಿಲ್ಲೆಯಾದ್ಯಂತ ನಡೆಯುವ ಈ ಬೀದಿನಾಟಕ ಅಭಿಯಾನ ಅತ್ಯಂತ ಯಶಸ್ವಿಯಾಗಿ, ಹೆಚ್ಚಿನ ಪ್ರಮಾಣದ ಮತದಾನ ದಾಖಲಾಗುವ ಸಾಧ್ಯತೆ ಇದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
  ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಈ ಸಂದರ್ಭದಲ್ಲಿ ಮಾತನಾಡಿ, ಕಳೆದ ಬಾರಿ ನಡೆದ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಅತ್ಯಂತ ಕಡಿಮೆ ಮತದಾನ ದಾಖಲಾದ ಗ್ರಾಮಗಳಲ್ಲಿ, ಈ ಬಾರಿ ಬೀದಿನಾಟಕ ಮತ್ತು ಜಾನಪದ ಸಂಗೀತ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಅರಿವು ಮೂಡಿಸಲು ವಾರ್ತಾ ಇಲಾಖೆ ಈ ಅಭಿಯಾನ ಹಮ್ಮಿಕೊಂಡಿದೆ. ಬೀದಿ ನಾಟಕ ಮತ್ತು ಜಾನಪದ ಸಂಗೀತ ಕಾರ್ಯಕ್ರಮ ಮಾ. ೨೮ ರಿಂದ ಏ. ೧೦ ರವರೆಗೆ ಜಿಲ್ಲೆಯಾದ್ಯಂತ ಜರುಗಲಿದ್ದು, ಪ್ರತಿದಿನ ಎರಡು ಗ್ರಾಮಗಳಲ್ಲಿ ಬೀದಿನಾಟಕ ಮತ್ತು ಎರಡು ಗ್ರಾಮಗಳಲ್ಲಿ ಜಾನಪದ ಸಂಗೀತ ಕಾರ್ಯಕ್ರಮ ಸೇರಿದಂತೆ ದಿನವೊಂದಕ್ಕೆ ನಾಲ್ಕು ಗ್ರಾಮಗಳಲ್ಲಿ ಕಾರ್ಯಕ್ರಮ ನಡೆಸಲಾಗುವುದು.  ಮಾ. ೨೮ ರಂದು ಕೊಪ್ಪಳ ತಾಲೂಕಿನ ಭಾಗ್ಯನಗರ, ಯತ್ನಟ್ಟಿ, ಕಿನ್ನಾಳ, ಹನುಮನಹಳ್ಳಿ.  ಮಾ. ೨೯ ರಂದು ಗಿಣಿಗೇರಾ, ಹುಲಿಗಿ, ಅಬ್ಬಿಗೇರಿ, ಮುನಿರಾಬಾದ್.  ಏ. ೦೧ ರಂದು ಹಿರೇಸಿಂದೋಗಿ, ಕವಲೂರು, ಹೊಸಳ್ಳಿ, ಬಿಸರಳ್ಳಿ.  ಏ. ೦೨ ರಂದು ಯಲಬುರ್ಗಾ ತಾಲೂಕಿನ ಇಟಗಿ, ಕುಕನೂರ, ಮನ್ನಾಪುರ, ಚಿಕ್ಕೇನಕೊಪ್ಪ. 
 ಏ. ೦೩ ರಂದು ಸಂಗನಹಾಲ್, ಬಂಡಿಹಾಳ, ಆಡೂರು, ತೊಂಡಿಹಾಳ.  ಏ. ೦೪ ರಂದು ಕರಮುಡಿ, ಹಿರೇಅರಳಿಹಳ್ಳಿ, ಸಂಕನೂರು, ಮಾಟರಂಗಿ.  ಏ. ೦೫ ರಂದು ಕುಷ್ಟಗಿ ತಾಲೂಕಿನ ಹಿರೇವಂಕಲಕುಂಟಾ, ಅಡವಿಬಾವಿ, ಕಲಕಬಂಡಿ, ಹೊಸಳ್ಳಿ.  ಏ. ೦೬ ರಂದು ಕಬ್ಬರಗಿ, ಹೂಲಗೇರಾ, ಯರಿಗೋನಾಳ, ಮಾವಿನಇಟಗಿ.  ಏ. ೦೭ ರಂದು ಹನುಮಸಾಗರ, ಮುದೇನೂರು, ವೆಂಕಟಾಪುರ, ದೋಟಿಹಾಳ.  ಏ. ೦೮ ರಂದು ಗಂಗಾವತಿ ತಾಲೂಕಿನ ಕನಕಗಿರಿ, ಕರಡೋಣ, ಸೋಮಸಾಗರ, ಗುಡದೂರ.  ಏ. ೦೯ ರಂದು ಕಾರಟಗಿ, ಬೂದಗುಂಪಾ, ಬೇವಿನಾಳ, ಯರಡೋಣ.  ಹಾಗೂ ಏ. ೧೦ ರಂದು ಸಿದ್ದಾಪುರ, ಹೊಸಕೇರಾ, ಗುಂಡೂರು, ಮರಳಿ ಗ್ರಾಮಗಳಲ್ಲಿ ಬೀದಿನಾಟಕ ಮತ್ತು ಜಾನಪದ ಸಂಗೀತ ಕಾರ್ಯಕ್ರಮ ನಡೆಯಲಿವೆ ಎಂದು ತಿಳಿಸಿದರು.
  ಜಿಲ್ಲಾ ಸ್ವೀಪ್ ಸಮಿತಿಯ ಜಿಲ್ಲಾ ನೋಡಲ್ ಅಧಿಕಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೊಟ್ರಪ್ಪ ಚೋರನೂರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ, ಗ್ರಾ.ಪಂ. ಪಿಡಿಓ ಜಂಬಣ್ಣ, ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  ಶಿವಮೂರ್ತಿ ಮೇಟಿ ನೇತೃತ್ವದ ತಂಡದಿಂದ ಮತದಾನದ ಮಹತ್ವ ಕುರಿತು ಬೀದಿನಾಟಕ, ದಾವಲ್‌ಸಾಬ್ ಅತ್ತಾರ್ ಜಾನಪದ ಸಂಗೀತ ಕಾರ್ಯಕ್ರಮ ಪ್ರದರ್ಶನಗೊಳಿಸಿದರು. 
ಭಾಗ್ಯನಗರದಲ್ಲಿ ಮತದಾರರ ಪ್ರತಿಜ್ಞಾ ವಿಧಿ ಸ್ವೀಕಾರ
 ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ, ನೈತಿಕವಾಗಿ ಕಡ್ಡಾಯ ಮತದಾನ ಮಾಡುತ್ತೇವೆ ಎಂಬುದಾಗಿ  ಭಾಗ್ಯನಗರದ ಸಾರ್ವಜನಿಕರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
  ಜಿಲ್ಲಾ ಸ್ವೀಪ್ ಸಮಿತಿಯಿಂದ ಭಾಗ್ಯನಗರದಲ್ಲಿ ಏರ್ಪಡಿಸಲಾಗಿದ್ದ ಮತದಾರರ ಜಾಗೃತಿ ಕಾರ್ಯಕ್ರಮದ ಸಂದರ್ಭದಲ್ಲಿ ಭಾಗ್ಯನಗರದ ಗ್ರಾಮಸ್ಥರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಕಡ್ಡಾಯ ಮತದಾನದ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.   ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು, ಭಾಗ್ಯನಗರದ ಎಲ್ಲ ಮನೆ, ಮನೆಗಳಿಗೆ ಭೇಟಿ ನೀಡಿ, ಸಾರ್ವಜನಿಕರಲ್ಲಿ ಮತದಾನದ ಮಹತ್ವವನ್ನು ಪ್ರಚುರಪಡಿಸುವಂತೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚನೆ ನೀಡಿದರು.    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೊಟ್ರಪ್ಪ ಚೋರನೂರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ, ಗ್ರಾ.ಪಂ. ಪಿಡಿಓ ಜಂಬಣ್ಣ, ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 
ಇರಕಲ್ಲಗಡದಲ್ಲಿ ಮತದಾರರ ಜಾಗೃತಿ ಜಾಥಾ
ಕೊಪ್ಪಳ ಮಾ. ೨೮ (ಕ.ವಾ): ಮತದಾರರ ಜಾಗೃತಿಗಾಗಿ ಇರಕಲ್ಲಗಡಾದ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ, ಕಡ್ಡಾಯ ಮತದಾನ ಮಾಡುವಂತೆ ಘೋಷಣೆಗಳನ್ನು ಕೂಗಿದರು.
  ಮತದಾರರ ಜಾಗೃತಿ ಜಾಥಾದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿಗಳು, ಪ್ರಾಚಾರ್ಯರು, ಸಿಬ್ಬಂದಿಗಳು ಪಾಲ್ಗೊಂಡು, ಸಾರ್ವಜನಿಕರಲ್ಲಿ ಕಡ್ಡಾಯ ಮತದಾನದ ಬಗ್ಗೆ ಅರಿವು ಮೂಡಿಸಿದರು.

  ಯುನಿಸೆಫ್‌ನಿಂದ ಗ್ರಾಮ ಮಟ್ಟದಲ್ಲಿ ಮತದಾರರ ಜಾಗೃತಿ
 ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಮತದಾನ ಪ್ರಮಾಣ ದಾಖಲಾಗುವಂತೆ ಮಾಡಲು ಜಿಲ್ಲಾ ಸ್ವೀಪ್ ಸಮಿತಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.  ಇದಕ್ಕೆ ಪೂರಕವೆಂಬಂತೆ ಯುನಿಸೆಫ್ ಸಹ ಮತದಾರರಲ್ಲಿ ಜಾಗೃತಿ ಮೂಡಿಸಲು ಗ್ರಾಮ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಿದೆ.
  ಈ ಕುರಿತಂತೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
  ಯುನಿಸೆಫ್ ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲೂ ಸಮುದಾಯದ ಜಾಗೃತಿಗಾಗಿ ತನ್ನ ಕಾರ್ಯ ವ್ಯಾಪ್ತಿಯನ್ನು ಹೊಂದಿದ್ದು, ಮತದಾರರ ಜಾಗೃತಿಗಾಗಿ ಯುನಿಸೆಫ್ ಸಕ್ರಿಯವಾಗಿ ತೊಡಗಿಸಿಕೊಳ್ಳಬಹುದಾಗಿದೆ.  ಯುನಿಸೆಫ್‌ನ ಸಮುದಾಯ ಸಂಘಟಕರು, ತಾಲೂಕು ಸಂಯೋಜಕರು ತಮ್ಮ ವ್ಯಾಪ್ತಿಯಲ್ಲಿ ಮತದಾರರ ಜಾಗೃತಿಗೆ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮನವಿ ಮಾಡಿಕೊಂಡರು.
  ಯುನಿಸೆಫ್‌ನ ಹರೀಶ್ ಜೋಗಿ ಅವರು ಮಾತನಾಡಿ, ಮತದಾರರ ಜಾಗೃತಿ ಒಂದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಪ್ರತಿಯೊಂದು ಮತವೂ ಅಮೂಲ್ಯವಾಗಿದೆ.  ಯಾವುದೇ ಮತದಾರರು ಮತದಾನದಿಂದ ವಿಮುಖರಾಗದಂತೆ ಜನಜಾಗೃತಿ ಮೂಡಿಸಲು ಯುನಿಸೆಫ್ ಪ್ರಾಮಾಣಿಕ ಯತ್ನ ಮಾಡಲಿದೆ ಎಂದರು.
  ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲೆಯ ಎಲ್ಲ ೧೩೪ ಗ್ರಾಮ ಪಂಚಾಯತಿಗಳ ಸಮುದಾಯ ಸಂಘಟಕರು, ತಾಲೂಕು ಸಂಯೋಜಕರು ಇದೇ ಸಂದರ್ಭದಲ್ಲಿ ಕಡ್ಡಾಯ ಮತದಾನದ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

Please follow and like us:
error

Leave a Reply

error: Content is protected !!