ಮರುಕುಂಬಿ ವೀರೇಶ ಸಾವಿನ ಬಗ್ಗೆ ನ್ಯಾಯಾಂಗ ತನಿಖೆಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹ.

ಕೊಪ್ಪಳ, ಜು.೧೫ : ಕಳೆದ ದಿ: ೧೦ ರಂದು ಆರ್.ಟಿ.ಓ. ಕಛೇರಿ ಹತ್ತಿರ ರೇಲ್ವೆ ಹಳಿಯ ಮೇಲೆ ದೊರೆತ ಮರುಕುಂಬಿಯ ದೊಡ್ಡ ವೀರೇಶ ಗುಡಿಸಲ ಸಾವಿನ ಪ್ರಕರಣ ತುಂಬಾ ನಿಗೂಢವಾಗಿದ್ದು ಇತನ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಘಟಕ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಇಂದು ಮನವಿ ನೀಡಿ ಒತ್ತಾಯಿಸಿತು.ಈ ಸಾವಿನ ಬಗ್ಗೆ ಅನೇಕ ಅನುಮಾನಗಳಿವೆ. ಕಳೆದ ವರ್ಷ ಅಗಷ್ಟ ತಿಂಗಳಲ್ಲಿ ಕ್ಷೌರದ ವಿಷಯವಾಗಿ ಮರುಕುಂಬಿಯಲ್ಲಿ ಹುಟ್ಟಿಕೊಂಡ ದಲಿತರ ಮೇಲಿನ ದೌರ್ಜನ್ಯದ ಘಟನೆ ಅವರ ಮನೆಗಳನ್ನು ಸುಡುವಲ್ಲಿಯವರೆಗೆ ಮುಂದುವರೆದು, ಆ ಬೆಂಕಿ ಆರದೇ ಸರಕಾರ ಮತ್ತು ಸಚಿವರು ಸಹಿತ ಆರಿಸಲು ಪ್ರಯತ್ನಿಸದೇ ಅದು ಎಲ್ಲರ ಎದೆಯಲ್ಲಿ ಉರಿಯುವಂತೆ ಮಾಡಲಾಯಿತು. ಸದರಿ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ವೀರೇಶ ಇದರಲ್ಲಿ ಬಾಳಷ್ಟು ನೊಂದಿರುವ ಕುರಿತು ಆತನ ಡೆತ್ ನೋಟ್‌ನಲ್ಲಿಯೇ ಉಲ್ಲೇಖವಿದೆ. ಅಲ್ಲದೇ ಆತನ ಹೆಣವನ್ನು ಗಮನಿಸಿದಾಗ ಕಾಲಷ್ಟೇ ಕತ್ತರಿಸಿದೆ ಪಕ್ಕದಲ್ಲಿ ನೈಲನ್ ದಾರ ತುಂಡರಿಸಿ ಬಿದ್ದಿದೆ ಎಂದಾಗ ಆತನನ್ನು ಯಾರೋ ಹೊಡೆದು ತಂದು ಕಾಲುಕಟ್ಟಿ ರೈಲ್ವೆ ಹಳಿಯ ಮೇಲೆ ಹಾಕಿರಬಹುದೆನಿಸುತ್ತಿದೆ. ಅಲ್ಲದೇ ತಲೆಗೆ ಯಾವುದೋ ಸಲಕರಣೆಯಿಂದ ಹೊಡೆದ ಗಾಯ ಇದೆ. ರೈಲ್ವೆ ಹಳಿಗೆ ಬಿದ್ದರೆ ತುಂಡರಿಸಬೇಕು. ಬಡಿದ ಗಾಯ ಹೇಗಾಗುತ್ತದೆ. ಆತ ಸಾಕ್ಷಿಗೆ ಬರಬೇಕಾದ ಮುನ್ನಾ ದಿನವೇ ಈ ಘಟನೆ ನಡೆದಿದೆ. ಈ ಎಲ್ಲಾ ಅನುಮಾನಗಳು ಆತನನ್ನು ಯಾರೋ ಹೊಡೆದು ಹಾಕಿರಬಹುದೆನ್ನುವುದನ್ನು ಸಾಬಿತು ಪಡಿಸುತ್ತಿವೆ.
    ಈ ಕುರಿತಂತೆ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ಮಾಡಿಸಿ ಸತ್ಯಾಂಶವನ್ನು ಬಹಿರಂಗ ಪಡಿಸಿ ಅಪರಾಧಿಗಳಿಗೆ ಶಿಕ್ಷೆಯಾಗಲಿ ಮತ್ತು ನೊಂದ ಕುಟುಂಬಕ್ಕೆ ಕನಿಷ್ಟ ೧೦ ಲಕ್ಷ ರೂ. ಪರಿಹಾರವನ್ನು ಸರಕಾರ ನೀಡಬೇಕೆಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವಿಠ್ಠಪ್ಪ ಗೋರಂಟ್ಲಿ, ಬಾರದ್ವಾಜ್, ಡಿ.ಹೆಚ್. ಪೂಜಾರ, ಬಸವರಾಜ ಶೀಲವಂತರ    , ಗಾಳೆಪ್ಪ ಮುಂಗೋಲಿ, ಮಂಜುನಾಥ ಚಕ್ರಸಾಲಿ, ಬಸವರಾಜ ನರೇಗಲ್ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.

Related posts

Leave a Comment