You are here
Home > Koppal News > ಕರಡಿ ಕಾಂಗ್ರೆಸ್‌ಗೆ ! ಹಿಟ್ನಾಳ ಲೋಕಸಭೆಗೆ ?

ಕರಡಿ ಕಾಂಗ್ರೆಸ್‌ಗೆ ! ಹಿಟ್ನಾಳ ಲೋಕಸಭೆಗೆ ?

ಕೊಪ್ಪಳ : ಚುನಾವಣೆಗಳು ಸಮೀಪಿಸುತ್ತಿರುವಂತೆಯೇ ಪಕ್ಷಾಂತರದ ಪರ್ವ ಆರಂಭವಾಗಿದೆ. ಕರ್ನಾಟಕದ ಮಟ್ಟಿಗೆ ಬಿ.ಎಸ್.ಯಡಿಯೂರಪ್ಪನವರ ರಾಜೀನಾಮೆ ಹಾಗೂ ಕೆಜೆಪಿ ಸಮಾವೇಶ ಬಹಳಷ್ಟು ಮಹತ್ವ ಪಡೆದುಕೊಂಡಿದೆ.
    ಇನ್ನೂ  ೪-೫ ತಿಂಗಳ ಅವಧಿ ಇರುವ ಶಾಸಕತ್ವವನ್ನು ತೊರೆಯಲು ಇಷ್ಟವಿಲ್ಲದ ಯಾವೊಬ್ಬ ಶಾಸಕರು ನೇರವಾಗಿ ಕೆಜೆಪಿಯೊಂದಿಗೆ ಗುರುತಿಸಿಕೊಳ್ಳದಿದ್ದರೂ ಚುನಾವಣೆ ಸಂದರ್ಭದಲ್ಲಿ ಚಿತ್ರಣ ಬದಲಾಗಲಿದೆ. ಕೊಪ್ಪಳ ಜಿಲ್ಲೆಯ ಮಟ್ಟಿಗೆ ಇನ್ನೂ ನೇರವಾಗಿ ಯಾರೂ ಕೆಜೆಪಿಯೊಂದಿಗೆ ಗುರುತಿಸಿಕೊಳ್ಳುತ್ತಿಲ್ಲ. ಯಾರೂ ಗುಟ್ಟುಬಿಟ್ಟುಕೊಟ್ಟಿಲ್ಲ.

    ಕಾಂಗ್ರೆಸ್‌ನಲ್ಲಿ ಉಸಿರುಗಟ್ಟುವ ವಾತಾವರಣವಿದೆ ಎಂದು ಹೇಳಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಜೆಡಿಎಸ್‌ಗೆ ಮರಳಿದ್ದಾರೆ.  ಪ್ರತಿಲೋಕಸಭಾ ಕ್ಷೇತ್ರದಲ್ಲಿ ಒಬ್ಬ ಅಲ್ಪಸಂಖ್ಯಾತರಿಗೆ ಟಿಕೇಟ್ ನೀಡಬೇಕು ಎನ್ನುವ ಕಾಂಗ್ರೆಸ್ ನೀತಿಯಿಂದಾಗಿ ಇಕ್ಬಾಲ್ ಅನ್ಸಾರಿಗೆ ಸಿಗಬೇಕಾಗಿದ್ದ ಟಿಕೇಟ್ ಈಗ ಅನಾಯಾಸವಾಗಿ ಕುಷ್ಟಗಿಯ ಹಸನ್‌ಸಾಬ ದೋಟಿಹಾಳರಿಗೆ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಆದರೆ ಕ್ಷೇತ್ರ ಯಾವುದು ಎನ್ನುವ ನಿರ್ಧಾರವಾಗಿಲ್ಲ ಎನ್ನಲಾಗುತ್ತಿದೆ.

ಕಾಂಗ್ರೆಸ್‌ಗೆ ಕರಡಿ ಸಂಗಣ್ಣ !
    ತಮ್ಮ ಸಾಧನೆಗಳ ಪಟ್ಟಿಯ ಫ್ಲೆಕ್ಸ್‌ಗಳನ್ನು ನಗರದ ವಿವಿಧ ಭಾಗಗಳಲ್ಲಿ ಹಾಕಿಸುವುದರೊಂದಿಗೆ ಚುನಾವಣೆಯ ಕಾರ್‍ಯಗಳಿಗೆ, ಪ್ರಚಾರಕ್ಕೆ ಅಧಿಕೃತವಾಗಿಯೇ ಶಾಸಕ ಕರಡಿ ಸಂಗಣ್ಣ ಚಾಲನೆ ನೀಡಿದ್ದಾರೆ. ಫ್ಲೆಕ್ಸ್ ಗಳಲ್ಲಿ ಯಾವುದೇ ರಾಜಕೀಯ ನಾಯಕರ ಚಿತ್ರಗಳಿಲ್ಲ.  ಕರಡಿ ಸಂಗಣ್ಣ ಬಿಜೆಪಿಯಲ್ಲಿರುತ್ತಾರೋ ಅಥವಾ ಕೆಜೆಪಿಯೋ ಎನ್ನುವ ಪ್ರಶ್ನೆಗೆ ನೇರ ಉತ್ತರ ನೀಡದೇ ಸಧ್ಯಕ್ಕಂತೂ ಬಿಜೆಪಿಯಲ್ಲಿದ್ದೇನೆ. ಹಾವೇರಿ ಸಮಾವೇಶದ ಡೆಡ್‌ಲೈನ್ ನಂತರ ಯಾವ ರೀತಿ ರಾಜಕೀಯ ಚಿತ್ರಣ ಬದಲಾಗುತ್ತೋ ನೋಡೋಣ. ಸಧ್ಯದ ರಾಜಕೀಯ ಪರಿಸ್ಥಿತಿ ಯಾವುದು ಹೌದು ಅದು ಅಲ್ಲ , ಯಾವುದು ಅಲ್ಲ ಅದು ಹೌದು ಎನ್ನುವ ಮಾತಿನಂತಿದೆ. ಪಕ್ಷಕ್ಕಿಂತ ಕ್ಷೇತ್ರದ ಅಭಿವೃದ್ದಿ ಮುಖ್ಯ ಎನ್ನುತ್ತಿದ್ದಾರೆ.

    ಯಾವುದೇ ಪಕ್ಷಗಳಿಂದ ಅಧಿಕೃತ ಆಹ್ವಾನ ಬಂದಿಲ್ಲ ಕ್ಷೇತ್ರ ಬದಲಿಸುವುದಿಲ್ಲ ಎನ್ನುತ್ತಿರುವ ಶಾಸಕ ಕರಡಿ ಸಂಗಣ್ಣ ಕಾಂಗ್ರೆಸ್ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ.  ಕಳೆದ ಕೆಲವು ದಿನಗಳಿಂದ ಕರಡಿ ಸಂಗಣ್ಣ ಕಾಂಗ್ರೆಸ್ ಸೇರುತ್ತಾರೆ ಎನ್ನುವ ಮಾತು ಜಿಲ್ಲೆಯಲ್ಲಿ ಕೇಳಿಬರುತ್ತಿದೆ. ಅದಕ್ಕೆ ಪೂರಕ ಎನ್ನುವಂತೆ ಕಾಂಗ್ರೆಸ್‌ನ ನಾಯಕರೂ ಸಹ ಕರಡಿ ಸಂಗಣ್ಣ ಕಾಂಗ್ರೆಸ್ ಗೆ ಬಂದರೆ ಸ್ವಾಗತವಿದೆ ಎನ್ನುತ್ತಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಯಾವೊಬ್ಬ ಕಾಂಗ್ರೆಸ್ ನಾಯಕರೂ ಕರಡಿ ಸಂಗಣ್ಣ ಕಾಂಗ್ರೆಸ್ ಗೆ ಬರುವುದನ್ನು ವಿರೋಧಿಸಿಲ್ಲ. ಕನಕಗಿರಿಯಲ್ಲಿ ಶಿವರಾಜ್ ತಂಗಡಗಿ ಕಾಂಗ್ರೆಸ್ ಸೇರುವುದನ್ನು ಮುಕುಂದರಾವ್ ಭವಾನಿಮಠ ಹಾಗೂ ಅವರ ಕೆಲ ಬೆಂಬಲಿಗರು ವಿರೋಧಿಸುತ್ತಿದ್ದಾರೆ ಆದರೆ ಕೊಪ್ಪಳದಲ್ಲಿ ಆ ರೀತಿಯ ಯಾವ ವಿರೋಧವೂ ಕಂಡು ಬರುತ್ತಿಲ್ಲ.
    ರಾಜ್ಯ ಕಾಂಗ್ರೆಸ್‌ನ್ನು ಗೆಲ್ಲಿಸುವ ಹೊಣೆ ಹೊತ್ತಿರುವ ಎಸ್.ಎಂ.ಕೃಷ್ಣ ಹಾಗೂ ಟೀಮ್ ಗೆಲ್ಲುವ ಕುದುರೆಗಳ ಹುಡುಕಾಟದಲ್ಲಿದೆ. ಮೊದಲಿನಿಂದಲೂ ಎಸ್.ಎಂ.ಕೃಷ್ಣ ಹಾಗು ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಕರಡಿ ಸಂಗಣ್ಣಗೆ ಕೊಪ್ಪಳ ಕಾಂಗ್ರೆಸ್ ಟಿಕೇಟ್ ಗ್ಯಾರಂಟಿ ಎನ್ನಲಾಗುತ್ತಿದೆ. ಅದಲ್ಲದೇ ಮಾಜಿ ಶಾಸಕ ಕೆ.ಬಸವರಾಜ್ ಹಿಟ್ನಾಳರನ್ನು ಲೋಕಸಭೆಗೆ ಸ್ಪರ್ಧಿಸಲು ಮನವೊಲಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
    ಕೆಜೆಪಿ ಡೌಟು, ಆದರೆ ಈ ಸಲ ಕಾಂಗ್ರೆಸ್‌ನಿಂದ ನಮ್ಮ ಸಾಹೇಬರು ನಿಲ್ಲೋದು ಗ್ಯಾರಂಟಿ, ನಿಂತರೆ ಕನಿಷ್ಠ ೨೦ ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ನೋಡಿ ಎನ್ನುತ್ತಿದ್ದಾರೆ ಅವರ ಆಪ್ತವಲಯದವರು. ಕೊನೆಗಳಿಗೆಯವರೆಗೆ ತಮ್ಮ ರಾಜಕೀಯ ನಡೆಯನ್ನು ಬಿಟ್ಟುಕೊಡದಿರುವುದು ಶಾಸಕ ಕರಡಿ ಸಂಗಣ್ಣನವರ ಗುಣ.
   ಹತ್ತಾರು ಸುದ್ದಿಗಳು ರೆಕ್ಕೆಪುಕ್ಕದೊಂದಿಗೆ ಹಾರುತ್ತಿವೆ. ಕೊನೆಗಳಿಗೆಯಲ್ಲಿ ಇಲ್ಲಿ ಏನು ಬೇಕಾದರೂ ಆಗಬಹುದು ಯಾಕೆಂದರೆ ರಾಜಕೀಯವೆಂದರೆ “ಯಾವುದು ಹೌದು ಅದು ಅಲ್ಲ , ಯಾವುದು ಅಲ್ಲ ಅದು ಹೌದು”

Leave a Reply

Top