fbpx

ಕುಂವೀ ಅವರ ‘ನಾನ್ಸೆನ್ಸ್’ ಮಾತು

ಹಿಂದೊಮ್ಮೆ ಕುವೆಂಪು ಕೋಗಿಲೆಯ ಹಾಡನ್ನು ಕೇಳಿ ಹೇಳಿದ್ದರು ‘‘ನೀನೇನಾದರೂ ಇದನ್ನು ಇಂಗ್ಲಿಷ್‌ನಲ್ಲಿ ಹಾಡಿದ್ದಿದ್ದರೆ ನಿನಗೆ ನೊಬೆಲ್ ಬಹುಮಾನ ಸಿಗುತ್ತಿತ್ತು’’ ಇದು ನೊಬೆಲ್ ಪ್ರಶಸ್ತಿಯ ವ್ಯಂಗ್ಯವಾಗಿತ್ತು. ಅದರಲ್ಲೊಂದು ಸತ್ಯವೂ ಇತ್ತು. ವರ್ಡ್ಸ್‌ವರ್ತ್‌ನಂತಹ ಖ್ಯಾತ ಲೇಖಕನನ್ನು ಮೀರಿಸುವ ಕಾವ್ಯಶಕ್ತಿಯಿದ್ದ ಕುವೆಂಪು ಒಂದು ವೇಳೆ ಇಂಗ್ಲಿಷ್‌ನಲ್ಲಿ ಬರೆದಿದ್ದರೆ ಅವರಿಗೆ ನೊಬೆಲ್ ಪ್ರಶಸ್ತಿ ದೊರಕುತ್ತಿತ್ತೇನೋ. ನೊಬೆಲ್ ಪ್ರಶಸ್ತಿ ಸಿಗಲಿಲ್ಲವೆಂದು ಅವರ ಬರಹಗಳು ಶ್ರೇಷ್ಠವಲ್ಲ ಎಂದೂ ಅರ್ಥವಲ್ಲ. ಅದು ತನ್ನ ಶಕ್ತಿಯನ್ನು ಅಂದೂ, ಇಂದೂ ಉಳಿಸಿಕೊಂಡಿದೆ. ಇಂದಿಗೂ ಅವರು ವಿಶ್ವ ಕವಿಯಾಗಿಯೇ ಗುರುತಿಸಿಕೊಂಡಿದ್ದಾರೆ. ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಿರುವುದು ಒಂದು ಗೌರವ ರೂಪದಲ್ಲಿ ಮಾತ್ರ. ಆ ಪ್ರಶಸ್ತಿ ಸಿಗಲಿ, ಸಿಗದೇ ಇರಲಿ ಕುವೆಂಪು ಸಾಹಿತ್ಯ ಅಜರಾಮರ. ಅವರ ಮಹಾಕಾದಂಬರಿಗಳಲ್ಲಿ ಬರುವ ಪಾತ್ರಗಳು ನಮ್ಮ ನಡುವೆ ಈಗಲೂ ಜೀವಂತವಿದೆ. ಕುವೆಂಪುವಿಗೆ ಸಿಕ್ಕಿದ ಪ್ರಶಸ್ತಿಯಿಂದ ಜ್ಞಾನ ಪೀಠದ ಗೌರವ ಹೆಚ್ಚಿತು.
ನೊಬೆಲ್ ಪ್ರಶಸ್ತಿ ಗಾಂಧಿಗೆ ಸಿಗದೇ ಇರುವ ಕುರಿತಂತೆ ಈಗಲೂ ಜಾಗತಿಕವಾಗಿ ಅಸಮಾಧಾನ ಉಳಿದುಕೊಂಡಿದೆ. ನೊಬೆಲ್ ಹಿಂದಿರುವ ಜಾಗತಿಕ ರಾಜಕಾರಣ ಗೊತ್ತಿದ್ದರೂ, ಅದು ಕೆಲವು ಮಹನೀಯರಿಗೆ ಸಿಕ್ಕಿರುವುದರಿಂದ ಅದನ್ನು ನಾವೆಲ್ಲ ಗೌರವಿಸುತ್ತಲೇ ಬಂದಿದ್ದೇವೆ. ಒಂದು ಪ್ರಶಸ್ತಿಯೇ ಒಬ್ಬನ ಪ್ರತಿಭೆಗೆ ಅಂತಿಮ ಮಾನದಂಡವಲ್ಲ. ಕುಂ. ವೀರಭದ್ರಪ್ಪ ಕನ್ನಡದಲ್ಲಿ ವಿಶಿಷ್ಟ ಭಾಷಾ ಸೊಗಡಿನೊಂದಿಗೆ ತಳ ಸಮುದಾಯದ ಬದುಕನ್ನು ಅದ್ಭುತವಾಗಿ ಕಟ್ಟಿಕೊಟ್ಟವರು. ‘ಕೆಂಡದ ಮಳೆ ಕರೆವಲ್ಲಿ ಉದಕವಾದೋರು’, ಕೊಟ್ರೇಶಿ ಇಸ್ಕೂಲಿಗೆ ಹೋದದ್ದು ಸೇರಿದಂತೆ ಭಾರೀ ಸಂಖ್ಯೆಯಲ್ಲಿ ಬರಹಗಳನ್ನು ಬರೆದವರು. ಬೃಹತ್ ಕಾದಂಬರಿಯನ್ನೂ ಕೊಟ್ಟವರು. ಇವರ ಪ್ರತಿಭೆಯ ಕುರಿತಂತೆ ಎರಡು ಮಾತಿಲ್ಲ. ಆದರೆ ಅವರು ರವಿವಾರ ಸಮಾರಂಭವೊಂದರಲ್ಲಿ ಮಾತನಾಡುತ್ತಾ ಜ್ಞಾನಪೀಠ ಪ್ರಶಸ್ತಿಯ ಕುರಿತಂತೆ ತೀರಾ ಸಡಿಲವಾಗಿ ಮಾತನಾಡಿದರು. ಇಡೀ ಜ್ಞಾನಪೀಠ ಪ್ರಶಸ್ತಿಯನ್ನೇ ನಾನ್ಸೆನ್ಸ್ ಎಂದು ಕರೆದರು. ಜೊತೆಗೆ ಅನಂತಮೂರ್ತಿ ಮತ್ತು ಕಾರ್ನಾಡ್ ಈ ಪ್ರಶಸ್ತಿಗೆ ಅಪಾತ್ರರು ಎಂದೂ ಹೇಳಿದರು. ಅನಿರೀಕ್ಷಿತವಾಗಿ ಇಂತಹದೊಂದು ಅಸಮಾಧಾನ ಅವರಿಂದ ಯಾಕೆ ಹೊರಬಿತ್ತು ಎನ್ನುವುದು ತೀರಾ ನಿಗೂಢವಾಗಿದೆ.
ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ದೊರಕಿದೆ. ಹಾಗೆಯೇ ಕೇರಳ, ಪಂಜಾಬ್, ಪಶ್ಚಿಮಬಂಗಾಳ ಸೇರಿದಂತೆ ದೇಶದ ವಿವಿಧೆಡೆ ಅಪರೂಪದ ಲೇಖಕರಿಗೆ ಈ ಪ್ರಶಸ್ತಿ ಸಂದಿದೆ. ಹಾಗೆಂದು ಈ ಪ್ರಶಸ್ತಿ ಸಿಗದವರೆಲ್ಲ ಕಳಪೆ ಬರಹಗಾರರಲ್ಲ. ಜ್ಞಾನಪೀಠ ಪ್ರಶಸ್ತಿ ಪಡೆದವರಿಗಿಂತಲೂ ಶ್ರೇಷ್ಠ ಬರಹಗಾರರು ನಮ್ಮ ನಡುವೆ ಇದ್ದಾರೆ. ಲಂಕೇಶ್, ತೇಜಸ್ವಿ ಇವರಿಗೆಲ್ಲ ಜ್ಞಾನಪೀಠ ಸಿಗಲಿಲ್ಲ ಎಂದು ಯಾರೂ ಅವರನ್ನು ಮೆಚ್ಚದೇ ಕೂತಿಲ್ಲ. ಪ್ರಶಸ್ತಿಯ ಮಿತಿ ಓದುಗರಿಗೆ ಚೆನ್ನಾಗಿ ಗೊತ್ತಿರುತ್ತದೆ. ಆದರೆ ಕುಂ. ವೀರಭದ್ರಪ್ಪ ಮಾತ್ರ ಒಂದಿಷ್ಟು ಆವೇಶದಿಂದ ‘‘ಜ್ಞಾನಪೀಠ ಎನ್ನುವುದು ನಾನ್‌ಸೆನ್ಸ್ ’’ ಎಂದು ಹೇಳಿಕೆ ನೀಡಿದ್ದಾರೆ. ಜೊತೆಗೇ ‘‘ಅನಂತಮೂರ್ತಿ, ಕಾರ್ನಾಡ್ ಅಪಾತ್ರರು’’ ಎಂದೂ ಹೇಳಿದ್ದಾರೆ. ಪ್ರಶಸ್ತಿ ನಾನ್ಸೆನ್ಸ್ ಆಗಿರುವುದರಿಂದ ಇವರು ಅಪಾತ್ರರು ಎಂಬ ಅರ್ಥವನ್ನೂ ಇದು ಕೊಡುತ್ತದೆ. ಒಟ್ಟಿನಲ್ಲಿ ಕುಂವೀ ಅವರು ಅನಂತಮೂರ್ತಿ, ಕಾರ್ನಾಡ್‌ರ ಮೇಲೆ ವೈಯಕ್ತಿಕವಾಗಿ ದಾಳಿ ಮಾಡಲು ಜ್ಞಾನಪೀಠವನ್ನು ಬಳಸಿಕೊಂಡಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಜ್ಞಾನಪೀಠ ಪ್ರಶಸ್ತಿಯೆನ್ನುವುದು ರಾಷ್ಟ್ರಮಟ್ಟದಿಂದ ನೀಡುವಂತಹದು. ಆ ಪ್ರಶಸ್ತಿಗೆ ಎಂಟು ಬಾರಿ ನಮ್ಮ ಸಾಹಿತಿಗಳು ಭಾಜನರಾಗಿದ್ದಾರೆ ಎನ್ನುವುದು ಹೆಮ್ಮೆ ಪಡುವಂತಹ ವಿಷಯ. ಹಾಗೆಂದು ಅವರಷ್ಟೇ ಸಾಹಿತಿಗಳಲ್ಲ. ಉಳಿದ ಸಾಹಿತಿಗಳನ್ನು ನಮ್ಮ ನಾಡು ಗೌರವಿಸುತ್ತಾ ಬಂದಿದೆ. ಅವರನ್ನು ಓದುತ್ತಲೂ ಬಂದಿದೆ. ಕುಂವೀ ಅವರಿಗೆ ಜ್ಞಾನಪೀಠ ಸಿಗಲಿಲ್ಲ ಎಂದು ಯಾರೂ ಅವರನ್ನು ನಿರ್ಲಕ್ಷಿಸಲಿಲ್ಲ. ಹೀಗಿರುವಾಗ, ಅವರು ಅನಗತ್ಯವಾಗಿ ಅನಂತಮೂರ್ತಿ ಮತ್ತು ಕಾರ್ನಾಡ್ ವಿರುದ್ಧ ಸಡಿಲ ಮಾತನಾಡಬೇಕಿತ್ತೆ? ಎನ್ನುವುದು ಪ್ರಶ್ನೆ.
ಅನಂತಮೂರ್ತಿಯವರು ಅಂತಾರಾಷ್ಟ್ರೀಯ ಮಟ್ಟದ ಚಿಂತಕರು. ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳಾಗಿಯೂ ದುಡಿದವರು. ಅವರ ಪ್ರತಿಭೆಗೆ ಸಂಸ್ಕಾರವೆನ್ನುವ ಒಂದು ಪುಟ್ಟ ಕಾದಂಬರಿಯೇ ಸಾಕು. ಹಾಗೆಯೇ ಗಿರೀಶ್ ಕಾರ್ನಾಡ್ ತಮ್ಮ ನಾಟಕಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡವರು. ಅವರನ್ನು ಅಪಾತ್ರರು, ಅನರ್ಹರು ಎಂದು ಇನ್ನೋರ್ವ ಹಿರಿಯ ಸಾಹಿತಿ ಸಾರ್ವಜನಿಕವಾಗಿ ತೆಗಳುವುದು ಕನ್ನಡಕ್ಕೆ ಮುಜುಗರ ತರುವ ವಿಷಯ. ಎಲ್ಲಕ್ಕಿಂತ ಮುಖ್ಯವಾಗಿ ಇಂದು ಗಾಂಧಿಯನ್ನಿಟ್ಟುಕೊಂಡು ಸಂಘಪರಿವಾರದ ವಿರುದ್ಧ ಸದಾ ಜಗಳಕ್ಕೆ ನಿಲ್ಲುತ್ತಾ ರಾಜಕಾರಣಿಗಳ ಕೆಂಗಣ್ಣಿಗೆ ಪಾತ್ರರಾದವರು ಅನಂತಮೂರ್ತಿ. ತನ್ನ ನಾಟಕಗಳ ಮೂಲಕ ಈ ದೇಶದ ಜಾತ್ಯತೀತ ವೌಲ್ಯಗಳನ್ನು, ಪುರಾಣ ಪರಂಪರೆಯನ್ನು ಎತ್ತಿ ಹಿಡಿದವರು ಕಾರ್ನಾಡ್. ಜೀವಪರವಾದ ಚಿಂತನೆಗಳಿಗೆ ಧಕ್ಕೆ ಬಂದಾಗ ಇಬ್ಬರೂ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಸಾಹಿತಿಗಳು ಪ್ರತಿಭಟನೆ ನಡೆಸಲೇಬೇಕು ಎಂದೇನಿಲ್ಲ. ಆದರೆ ಅಂತಹ ಯಾವುದೇ ಇತಿಹಾಸ ಕುಂವೀ ಅವರಿಗಿಲ್ಲ. ಇದೀಗ ಕುಂವೀ ಅವರ ಟೀಕೆಯನ್ನು ನಗದೀಕರಿಸಿಕೊಳ್ಳುತ್ತಿರುವುದು ಸಂಘಪರಿವಾರದ ಕೆಲವು ರಾಜಕೀಯ ತರಲೆಗಳು ಮತ್ತು ಅವರ ಪತ್ರಿಕೆಗಳು. ಜ್ಞಾನಪೀಠವನ್ನು ತೆಗಳಿದ್ದಕ್ಕೆ ಮುಂದಿನ ದಿನಗಳಲ್ಲಿ ಕುಂವೀ ಅವರಿಗೆ ಬಲಪಂಥೀಯರ ಸರಸ್ವತಿ ಸಮ್ಮಾನ್ ಸಿಕ್ಕಿದರೂ ಅಚ್ಚರಿಯೇನಿಲ್ಲ ಬಿಡಿ. ಅಥವಾ ಸರಸ್ವತಿ ಸಮ್ಮಾನ್ ಪ್ರಶಸ್ತಿಗಾಗಿಯೇ ಕುಂವೀ ಇಂತಹದೊಂದು ಪ್ರಹಸನವನ್ನು ಸಾರ್ವಜನಿಕವಾಗಿ ನಡೆಸಿದರೇ ಎಂದು ಓದುಗರು ಅನುಮಾನಪಡುವಂತಾಗಿದೆ.
ಈ ನಾಡಿಗೆ ಲಂಕೇಶ್, ತೇಜಸ್ವಿ, ಚಿತ್ತಾಲ, ದೇವನೂರು ಮೊದಲಾದವರು ಕೊಟ್ಟ ಕೊಡುಗೆ ಅಪರಿಮಿತವಾದುದು. ಹಾಗೆಯೇ ಅನಂತಮೂರ್ತಿ, ಕಾರ್ನಾಡರು ತಮ್ಮ ತಮ್ಮ ಕ್ಷೇತ್ರಗಳ ಮೂಲಕ ಕೊಡುಗೆ ನೀಡಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಆಯ್ಕೆಯ ಸಂದರ್ಭದಲ್ಲಿ ಅವರಿಗೆ ಬೇಕಾದ ಮಾನದಂಡಗಳಿರಬಹುದು. ಕನ್ನಡಕ್ಕೆ ಈ ಪ್ರಶಸ್ತಿ ಸಂದಿತಲ್ಲ ಎಂದು ಸಂತೋಷ ಪಡುವುದು ಬಿಟ್ಟು, ನಾನ್ಸೆನ್ಸ್, ಅಪಾತ್ರರು ಎಂದೆಲ್ಲ ಬೊಬ್ಬಿಡುವುದು ರಾಜಕಾರಣಿಗಳಿಗೆ ಮಾತ್ರ ಶೋಭೆ ತರುವಂತ ಹದ್ದು. ಕುಂವೀ ಅವರು ರಾಜಕೀಯಕ್ಕೆ ಕಾಲಿಡುವ ಉದ್ದೇಶದಿಂದ ಇಂತಹದೊಂದು ರಂಪ ಮಾಡಿ ದ್ದಾರೆ ಎಂದಾದಲ್ಲಿ ಅದಕ್ಕೆ ಸಾಹಿತ್ಯ ವಲಯದ ಯಾವ ಆಕ್ಷೇಪವೂ ಇರುವುದಿಲ್ಲ. ಆದರೆ ಅದಲ್ಲದೆ ಇದ್ದರೆ ಕುಂವೀಯಂತಹ ಹಿರಿಯ ಲೇಖಕರು ಇಂತಹ ಸ್ಥಿತಿಗಿಳಿದುದಕ್ಕೆ ಮರುಕ ಪಡಬೇಕಾಗುತ್ತದೆ.
                                                                                                      ವಾರ್ತಾಭಾರತಿ ಸಂಪಾದಕೀಯ
Please follow and like us:
error

Leave a Reply

error: Content is protected !!