ಸದೃಢ ಸಮಾಜಕ್ಕೆ ಸಂಘಟನೆ ಅವಶ್ಯಕ : ಹಿಟ್ನಾಳ

ಕೊಪ್ಪಳ.ಫೆ.೨೬: ಕೆಳಮಟ್ಟದಲ್ಲಿರುವ ಸಮಾಜಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಸಮಾಜದ ಐಕ್ಯ ಸಂಘಟನೆ ಅತವಶ್ಯಕ್ಕೆ ಅಂದಾಗ ಮಾತ್ರ ಸಮಾಜ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಹಾಗೂ ರಾಜಕೀಯವಾಗಿ ಮುಂದೆ ಬರಲು ಸಾಧ್ಯವೆಂದು ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ ಹೇಳಿದರು. 
ಅವರಿಂದು ಇಲ್ಲಿನ ಗಣೇಶ ನಗರದಲ್ಲಿ ಸವಿತಾ ಸಮಾಜದವತಿಯಿಂದ ನೂತನವಾಗಿ ನಿರ್ಮಿಸಿರುವ ಲಕ್ಷ್ಮಿ ವೆಂಕಟೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಸಮಾರಂಭವನ್ನು ಸವಿತಾ ಸಮಾಜ ವಿವಿದೊದ್ಧೇಶ ಸಹಕಾರಿ ಸಂಘದ ಸಂಸ್ಥಾಪಕಾಧ್ಯಕ್ಷರಾದ ದಿ.ಗವಿಯಪ್ಪ ವೇದಿಕೆಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಮುಂದುವರೆದು ಮಾತನಾಡುತ್ತಾ, ಸಮಾಜವು ಕೀಳರಿಮೆ ಮದ್ಯೆಯೂ ತನ್ನ ಸ್ವಾಭಿಮಾನದ ಪ್ರತಿಬಿಂಬವಾಗಿ ಇಂದು ನೂತನ ದೇವಸ್ಥಾನದ ನಿರ್ಮಾಣ ಮಾಡುವ ಮೂಲಕ ಸಾಧನೆ ಮೆರೆದಿದೆ. ಸ್ವಾಭಿಮಾನಕ್ಕೆ ಮಿಗಲಾದದ್ದು ಮತ್ತೊಂದಿಲ್ಲ. ಸಮಾಜದ ಈ ಪ್ರಾಮಾಣಿಕ ಕರ್ತವ್ಯನಿಷ್ಠೆ ಹೀಗೆ ಮುಂದುವರೆದು ಇತರೆ ಸಮಾಜಗಳಿಗೆ ಮಾದರಿಯಾಗಲಿ ಎಂದು ಕರೆ ನೀಡಿದರು. 
ಸಮಾಜವು ತನ್ನ ಸಹಕಾರ ಮನೋಭಾವದಿಂದ ಇತರರಿಗೆ ದಾರಿದೀಪವಾಗಿದ್ದು, ಮುಂದಿನ ದಿನಗಳಲ್ಲಿ ಸಮಾಜ ಸರ್ಕಾರದ ವಿವಿಧ ಸೌಲಭ್ಯ ಮತ್ತು ಯೋಜನೆಗಳನ್ನು ಪಡೆಯಲು ಹಾಗೂ ಸಮಾಜದ ಯುವಜನತೆ ಮುಂದಾಗಬೇಕು. ಕಡ್ಡಾಯವಾಗಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಮಾಜ ಮೇಲಪಂಕ್ತಿಗೆ ಬರಲು ಶ್ರಮಿಸಬೇಕೆಂದು ಅವರಿಲ್ಲಿ ಕರೆ ನೀಡಿದರು. 
ಸಮಾಜದ ಕಾರ್ಯ ದೇವರ ಕಾರ್ಯವಾದರೇ, ದೇವರ ಕಾರ್ಯ ಸಮಾಜಕ್ಕೆ ದೊಡ್ಡ ಸಾಧನೆ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ದಿ.ಗವಿಯಪ್ಪನವರು ಕಳೆದ ಒಂದೂವರೆ ದಶಕಗಳಿಂದ ಸಮಾಜಕ್ಕೆ ತಮ್ಮ ಸೇವೆಯನ್ನು ಮುಡುಪಾಗಿಟ್ಟಿದ್ದರು. ಅವರ ಕನಸು ಇಂದು ಸಕಾರಗೊಂಡಿರುವುದೇ ಹೆಮ್ಮೆಯ ಸಂಗತಿ ಎಂದು ಅವರು ಗವಿಯಪ್ಪನವರ ಸಾಧನೆಗಳ ನೆನಪುಗಳ ಕುರಿತು ಮೆಲಕು ಹಾಕಿದರು. 
ಯಲಬುರ್ಗಾ ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಮಾತನಾಡಿ, ಸಮಾಜಗಳ ಅಭಿವೃದ್ಧಿಗೆ ಇಚ್ಛಾಶಕ್ತಿ ಕೊರತೆ ಎಲ್ಲೆಡೆ ಎದ್ದುಕಾಣುತ್ತಿರುವ ಇಂತಹ ಸಂದರ್ಭದಲ್ಲಿ ಇಂತಹ ಚಿಕ್ಕ ಸಮಾಜ ಸ್ವಾಭಿಮಾನದಿಂದ ಸಮಾಜದ ಎಲ್ಲಾ ಸಮುದಾಯಗಳ ಸಹಕಾರದೊಂದಿಗೆ ಸಮಾಜದ ಮುಖ್ಯ ವಾಹನಿಗೆ ಬರುತ್ತಿರುವುದು ಆದರ್ಶನೀಯ. ಇದಕ್ಕೆ ಜನಪ್ರತಿನಿಧಿಗಳ, ಮೇಲಪಂಕ್ತಿ ಸಮಾಜಗಳ ಸಹಕಾರ ಅತ್ಯವಶ್ಯಕವಾಗಿದೆ. ಅತ್ಯಂತ ಹಿಂದುಳಿದ ಈ ಸಮಾಜಕ್ಕೆ ಇನ್ನೂ ಹೆಚ್ಚಿನ ಸಹಕಾರ ದೊರಕಲಿ ಎಂದು ಆಶಿಸಿದರು. 
ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ಹೆಚ್.ಎಸ್.ಪಾಟೀಲ್, ಪ್ರಧಾನ ಪುರೋಹಿತರು ಡಾ.ಧೀರೇಂದ್ರಾಚಾರ್ಯ ಬೆಳ್ಳಟ್ಟಿ ಸೇರಿದಂತೆ ಮತ್ತಿತರರು ಮಾತನಾಡಿದರು. ಸವಿತಾ ಸಮಾಜದ ವಿವಿದೊದ್ದೇಶ ಸಹಾಕಾರಿ ಸಂಘದ ಅಧ್ಯಕ್ಷ ಸಿದ್ದಪ್ಪ ಸೂಗೂರು ಸಮಾರಂಭದ ಅಧ್ಯಕ್ಷತೆವಹಿಸಿದರು. 
ವೇದಿಕೆ ಮೇಲೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ಪಕ್ಷದ ಮುಖಂಡ ಕೆ.ಎಂ.ಸೈಯ್ಯದ್, ನಗರಸಭೆ ಸದಸ್ಯ ಪ್ರಾಣೇಶ ಮಾದಿನೂರು, ಮಾಜಿ ನಗರಸಭೆ ಸದಸ್ಯ ಜಾಕೀರ್‌ಹುಸೇನ್ ಕಿಲ್ಲೇದಾರ, ಗವಿರಾಜ ಕರಡಿ, ಸವಿತಾ ಸಮಾಜದ ರಾಜ್ಯಮಟ್ಟದ ಮುಖಂಡರುಗಳಾದ ಧನರಾಜ, ಚಂದ್ರು, ಕೃಷ್ಣಮೂರ್ತಿ, ವಾಣಿಜ್ಯೋದ್ಯಮಿ ಶ್ರೀನಿವಾಸ ಗುಪ್ತಾ, ಹೊಸಪೇಟೆ ನಗರಸಭೆ ಸದಸ್ಯ ರೂಪೇಶ್,  ನರಸಪ್ಪ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು. ಶ್ರೀಮತಿ ಮಲ್ಲಿಕಾ ಹಾಗೂ ಕು.ಪ್ರತಿಭಾ ಬಿಕ್ಷಾವತಿಮಠ ಪ್ರಾರಂಭದಲ್ಲಿ ಪ್ರಾರ್ಥಿಸಿದರೆ, ಸವಿತಾ ಸಮಾಜದ ತಾಲೂಕಾಧ್ಯಕ್ಷ ಚಂದ್ರಶೇಖರ ಜಿ. ಸ್ವಾಗತಿಸಿದರು. ವರದಿಗಾರ ವೈ.ಬಿ.ಜೂಡಿ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು. 
Please follow and like us:
error