You are here
Home > Koppal News > ಹುಬ್ಬಳ್ಳಿ-ಚೆನ್ನೈ ರೈಲು ಕೊನೆಗೂ ಸಾಕಾರ

ಹುಬ್ಬಳ್ಳಿ-ಚೆನ್ನೈ ರೈಲು ಕೊನೆಗೂ ಸಾಕಾರ

ಹೊಸಪೇಟೆ: ಈ ಭಾಗದ ರೈಲ್ವೇ ಪ್ರಯಾಣಿಕರ ಬಹುದಿನಗಳ ಬೇಡಿಕೆಯಾದ ಹುಬ್ಬಳ್ಳಿ-ಚೆನ್ನೈ ರೈಲು ಕೊನೆಗೂ ಸಾಕಾರಗೊಂಡಿದೆ. ಇದೇ ದಿ.೬ರಿಂದ ಈ ರೈಲು ಸಂಚರಿಸಲಿದೆ ಎಂದು ರಾಷ್ಟ್ರೀಯ ರೈಲ್ವೇ ಬಳಕೆದಾರರ ಪರಿಷತ್ ಸದಸ್ಯ ಬಾಬು ಲಾಲ್ ಜಿ. ಜೈನ್ ತಿಳಿಸಿದರು.
ಇಂದು ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸುದ್ಧಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈ ರೈಲುಗಾಡಿ  ಪ್ರತಿ ಸೋಮವಾರ ಹಾಗೂ ಬುಧವಾರ ಹುಬ್ಬಳ್ಳಿಯಿಂದ ರಾತ್ರಿ ೮-೨೦ಕ್ಕೆ ಬಿಟ್ಟು ಗದಗ, ಕೊಪ್ಪಳ ಮಾರ್ಗವಾಗಿ ನಗರಕ್ಕೆ ೧೧-೩೦ಕ್ಕೆ ಬಂದು ಬಳ್ಳಾರಿ ಗುಂತಕಲ್, ರೇಣುಗುಂಟಾ ಮಾರ್ಗವಾಗಿ ಮರುದಿನ ಬೆಳಿಗ್ಗೆ ೧೧ಕ್ಕೆ ಚೆನ್ನೈ ಸೆಂಟ್ರಲ್ ರೈಲುನಿಲ್ದಾಣ ಸೇರಲಿದೆ. ಚೆನ್ನೈಗೆ ಸ್ಲೀಪರ್ ಕೋಚ್ ಇದ್ದು, ಹೊಸಪೇಟೆಯಿಂದ ೩೭೦ರೂ ದರ ನಿಗದಿ ಪಡಿಸಲಾಗಿದೆ. ಈ ರೈಲು ಸಂಚಾರದಿಂದ ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಪ್ರಯಾಣಿಕರಿಗೆ ಮಾತ್ರವಲ್ಲ, ಉತ್ತರ ಕರ್ನಾಟಕದ ಗದಗ, ಹುಬ್ಬಳ್ಳಿ, ಧಾರವಾಡ, ಬಿಜಾಪುರ, ಬಾಗಲಕೋಟೆ, ಬೆಳಗಾವಿ ಹಾಗೂ ಗೋವಾದಿಂದ ಚೆನ್ನೈಗೆ ಹೋಗುವ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.
ಹುಬ್ಬಳ್ಳಿಯಿಂದ ದಾವಣಗೆರೆ ಮಾರ್ಗವಾಗಿ ಚೆನ್ನೈಗೆ ಹೋಗುವ ರೈಲು ಬೆಂಗಳೂರು ಮೂಲಕವೇ ಹೋಗಬೇಕಾಗಿರುವುದರಿಂದ ೮೩೭ಕಿ.ಮೀ. ಆಗುತ್ತದೆ. ಈ ರೈಲು ಮಾರ್ಗವು ೭೧೦ ಕಿ.ಮೀ. ಮಾತ್ರವಿದ್ದು, ೧೨೦ ಕಿ.ಮೀ. ಅಂತರ ಕಡಿಮೆಯಾಗುತ್ತದೆ ಜೊತೆಗೆ ಸಮಯ, ಹಣದ ಉಳಿತಾಯ ಕೂಡಾ ಆಗಲಿದೆ ಎಂದರು.  ಹುಬ್ಬಳ್ಳಿಯಿಂದ ಚೆನ್ನೈ ಸೇರುವ ರೈಲು ಸಂಖ್ಯೆ ೦೭೩೨೩ ಚೆನ್ನೈ ಸೆಂಟ್ರಲ್‌ನಿಂದ ಮಧ್ಯಾಹ್ನ ೧-೧೫ಕ್ಕೆ ಹೊರಟು ಅದೇ ಮಾರ್ಗದ ಮೂಲಕ ರಾತ್ರಿ ೨ಕ್ಕೆ ಹೊಸಪೇಟೆ ತಲುಪಿ ಬೆಳಿಗ್ಗೆ ೫ಕ್ಕೆ ಹುಬ್ಬಳ್ಳಿ ಸೇರಲಿದೆ ಎಂದು ವಿವರ ನೀಡಿದರು. ವಿಜಯನಗರ ರೈಲ್ವೇ ಅಭಿವೃದ್ಧಿ ಹೋರಾಟ ಕ್ರಿಯಾಸಮಿತಿ ಅಧ್ಯಕ್ಷ ವೈ. ಯಮುನೇಶ್ ಮಾತನಾಡಿ, ರಾಷ್ಟ್ರೀಯ ರೈಲ್ವೇ ಬಳಕೆದಾರರ ಪರಿಷತ್ ಸದಸ್ಯ ಬಾಬುಲಾಲ್ ಜಿ. ಜೈನ್ ವಿಶೇಷ ಪರಿಶ್ರಮದಿಂದ ಸಂಸದ ಕರಡಿ ಸಂಗಣ್ಣ, ಬಿ.ಶ್ರೀರಾಮುಲು ಇವರ ಮುತುವರ್ಜಿಯಿಂದ ಈ ರೈಲು ಸಂಚಾರಕ್ಕೆ ಕಾರಣರಾಗಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಭೂಪಾಳ್ ರಾಘವೇಂದ್ರಶೆಟ್ಟಿ, ಅಶೋಕ ಜೀರೆ, ತಮಿಳು ಸಂಘದ ಅಧ್ಯಕ್ಷ ಅಳಗಿರಿ ಸ್ವಾಮಿ, ಪ.ಯ.ಗಣೇಶ್, ಕೊಟ್ರೇಶ ಶೆಟ್ಟರ್, ಮಹೇಶ್ ಮತ್ತಿತರರು ಹಾಜರಿದ್ದರು. 

Leave a Reply

Top