ಶೀಘ್ರ ಲಿಪಿಗಾರರ ಹುದ್ದೆ ಅರ್ಜಿ ಆಹ್ವಾನ.

ಕೊಪ್ಪಳ, ಸೆ.೨೮ (ಕ ವಾ) ಕೊಪ್ಪಳ ಜಿಲ್ಲಾ ನ್ಯಾಯಾಲಯ ಘಟಕದ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ೧೨ ಶೀಘ್ರ ಲಿಪಿಗಾರರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
      ಖಾಲಿ ಇರುವ ಒಟ್ಟು ೧೨ ಶೀಘ್ರಲಿಪಿಗಾರರ ಹುದ್ದೆಗಳಲ್ಲಿ ಹೈದ್ರಾಬಾದ್-ಕರ್ನಾಟಕ ಸ್ಥಳೀಯ ವೃಂದಕ್ಕೆ ೦೯ ಹುದ್ದೆಗಳನ್ನು ಹಾಗೂ ಉಳಿಕೆ ಮೂಲ ವೃಂದಕ್ಕೆ ೦೩ ಹುದ್ದೆಗಳನ್ನು ವರ್ಗೀಕರಣಗೊಳಿಸಲಾಗಿದೆ. ಅರ್ಜಿ ಸಲ್ಲಿಸಲಿಚ್ಛಿಸುವವರು ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ನಡೆಸುವ ಕನ್ನಡ ಮತ್ತು ಆಂಗ್ಲ ಭಾಷೆಯ ಹಿರಿಯ ದರ್ಜೆ ಶೀಘ್ರಲಿಪಿ ಮತ್ತು ಬೆರಳಚ್ಚು ವಿಷಯಗಳಲ್ಲಿ ತೇರ್ಗಡೆ ಹೊಂದಿರಬೇಕು ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಕರ್ನಾಟಕ ತಾಂತ್ರಿಕ ಶಿಕ್ಷಣ ಮಂಡಳಿಯು ನಡೆಸುವ ಸೆಕ್ರೆಟರಿಯಲ್ ಪ್ರಾಕ್ಟೀಸ್ ಪಠ್ಯಕ್ರಮದ ಡಿಪ್ಲೋಮಾ ಪದವಿಯೊಂದಿಗೆ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳ ಶೀಘ್ರಲಿಪಿ ಹಾಗೂ ಬೆರಳಚ್ಚು ವಿಷಯಗಳನ್ನು ಐಚ್ಛಿಕ ವಿಷಯವಾಗಿ ಅಭ್ಯಸಿಸಿರಬೇಕು. ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಠ ೧೮ ವರ್ಷ ವಯಸ್ಸನ್ನು ಪೂರೈಸಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ೩೫ ವರ್ಷ. ೨ಎ, ೨ಬಿ, ೩ಎ, ೩ಬಿ ವರ್ಗದವರಿಗೆ ೩೮ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-೦೧ ರ ಅಭ್ಯರ್ಥಿಗಳಿಗೆ ೪೦ ವರ್ಷಗಳ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ. 
     ನಿಗದಿಪಡಿಸಿದ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅರ್ಜಿಯೊಂದಿಗೆ ಜನ್ಮ ದಿನಾಂಕವನ್ನು ನಮೂದಿಸಿರುವ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣ ಪತ್ರ ಅಥವಾ ವರ್ಗಾವಣೆ ಪತ್ರ, ಶೈಕ್ಷಣಿಕ ವಿದ್ಯಾರ್ಹತೆಯ ಅಂಕಪಟ್ಟಿ, ನಡತೆ ಪ್ರಮಾಣ ಪತ್ರ,  ಜಾತಿ ಹಾಗೂ ಇತರೆ ಮೀಸಲಾತಿ ಪ್ರಮಾಣ ಪತ್ರ, ಅನುಚ್ಛೇಧ ೩೭೧ (ಜೆ) ಅಡಿ ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ಸೇರಿದ ಅಭ್ಯರ್ಥಿಗಳು ಅರ್ಹತಾ ಪ್ರಮಾಣ ಪತ್ರ ಮತ್ತು ಸರ್ಕಾರಿ ಸೇವೆಯಲ್ಲಿರುವ ನೌಕರರು ತಮ್ಮ ವೃಂದ ನಿಯಂತ್ರಣ ಪ್ರಾಧಿಕಾರ ಅಥವಾ ಕಛೇರಿ ಮುಖ್ಯಸ್ಥರಿಂದ ನೀಡಲಾದ ಸ್ವಗ್ರಾಮ ಪ್ರಮಾಣ ಪತ್ರ ಸೇರಿದಂತೆ ಇತರೆ ಪ್ರಮಾಣ ಪತ್ರಗಳನ್ನು ಲಗತ್ತಿಸಿ, ೫ ರೂ.ಗಳ ಅಂಚೆ ಸ್ಟ್ಯಾಂಪ್ ಹೊಂದಿರುವ ಸ್ವ-ವಿಳಾಸದ ಲಕೋಟೆಯೊಂದಿಗೆ  ಅಕ್ಟೋಬರ್ ೧೯ ರ ಸಂಜೆ ೫.೪೫ ಗಂಟೆಯೊಳಗಾಗಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೊಪ್ಪಳ ಇವರಿಗೆ ಸಲ್ಲಿಸಬಹುದಾಗಿದೆ. 
     ಶೀಘ್ರ ಲಿಪಿಗಾರರ ಹುದ್ದೆಯ ಅರ್ಹತಾ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಒಂದು ನಿಮಿಷಕ್ಕೆ ೧೨೦ ಶಬ್ದಗಳಂತೆ ೫ ನಿಮಿಷಗಳ ಉಕ್ತ ಲೇಖನವನ್ನು ಕನ್ನಡ ಮತ್ತು ಆಂಗ್ಲ ಬಾಷೆಯಲ್ಲಿ ನೀಡಲಾಗುವುದು. ಮತ್ತು ಅದನ್ನು ಲಿಪ್ಯಂತರಗೊಳಿಸಿ, ಬೆರಳಚ್ಚು ಮಾಡಲು ೪೫ ನಿಮಿಷಗಳ ಕಾಲಾವಕಾಶ ನೀಡಲಾಗುವುದು. ಅಲ್ಲದೆ, ಕರ್ನಾಟಕ ಅಧೀನ ನ್ಯಾಯಾಲಯಗಳ ನಿಯಮಗಳು ೨೦೦೭ರ ಅನ್ವಯ ನೇರನೇಮಕಾತಿಯ ಮೂಲಕ ಕಾಲಕಾಲಕ್ಕೆ ಚಾಲ್ತಿಯಲ್ಲಿರುವ ನಿಯಮಾನುಸಾರ ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್
www.ecourts.gov.in/india/karnataka/koppal/recruitment ಗೆ ಭೇಟಿ ನೀಡಬಹುದಾಗಿದೆ.

Leave a Reply