fbpx

ದೇಶಾಭಿಮಾನ ಕಲಿಸುವ ಶಾಲೆಗಳು ಬೇಕು – ಕುಂವೀ

ಕೊಪ್ಪಳ : ನಮಗೆ ಮದ್ಯರಾತ್ರಿ ಸ್ವಾತಂತ್ರ್ಯ ಬಂದಿದ್ದರಿಂದ ಇನ್ನೂ ದೇಶದ ಅನೇಕ ಕಡೆ ಕತ್ತಲಿದೆ. ನಮ್ಮ ಸ್ವಾತಂತ್ರ್ಯಕ್ಕಾಗಿ ಹಲವಾರು ಮಹನೀಯರು ಹೋರಾಡಿದರು ಅವರಲ್ಲಿ ನೇತಾಜಿಯವರು ಅಗ್ರಗಣ್ಯರು. ಸಕಲ ಸಂಪತ್ತಿದ್ದರೂ ಎಲ್ಲವನ್ನೂ ತೊರೆದು ದೇಶಪ್ರೇಮಕ್ಕಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸುಭಾಸ್ ಚಂದ್ರ ಭೋಸ್‌ರ ಜನ್ಮದಿನಾಚರಣೆಯನ್ನು ಎಲ್ಲಾ ಶಾಲೆಗಳಲ್ಲಿ ಆಚರಿಸುತ್ತಿಲ್ಲ ಎನ್ನುವುದು ಖೇಧಕರ ಸಂಗತಿ. ನಮ್ಮ ನಾಯಕರು ತಮ್ಮ ನಂತರದ ಪೀಳಿಗೆಗಳಲ್ಲಿ ನಾಯಕತ್ವದ ಗುಣ ಕಲಿಸುತ್ತಿಲ್ಲ,  ಶಾಲೆಗಳಲ್ಲಿ ಆ ಕೆಲಸ ನಡೆಯಬೇಕು ಸರಸ್ವತಿ ವಿದ್ಯಾಮಂದಿರ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಪ್ರಶಂಸನೀಯ ಎಂದು  ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.  ಅವರು ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ನಡೆದ ನೇತಾಜಿ ಸುಬಾಸ್ ಚಂದ್ರ ಭೋಸ್ ರ ೧೧೮ನೇ ಜನ್ಮದಿನೋತ್ಸವ ಕಾರ‍್ಯಕ್ರಮವನ್ನು ನೇತಾಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಇಂದಿನ ಶಾಲೆಗಲ್ಲಿ ದೇಶಾಭಿಮಾನ ಬೆಳೆಸುವ, ಸದ್ಗುಣಗಳನ್ನು ಮತ್ತು ನೈತಿಕ ಗುಣಗಳನ್ನು ಹೆಚ್ಚಿಸುವ ಕೆಲಸವಾಗಬೇಕಿದೆ. ಪಠ್ಯದ ಹೊರತಾಗಿಯೂ ಮಕ್ಕಳಲ್ಲಿ ಈ ಗುಣಗಳನ್ನು ಬೆಳೆಸುವ ಶಿಕ್ಷಣ ತರಬೇತಿ ನೀಡಬೇಕಿದೆ. ಇಂದು ನೇತಾಜಿಯವರ ಜನ್ಮದಿನಾಚರಣೆ ಆಚರಿಸುವುದರ ಮೂಲಕ ದೇಶಾಭಿಮಾನ ಬೆಳೆಸುವ ಕೆಲಸವನ್ನು ಸರಸ್ವತಿ ವಿದ್ಯಾಮಂದಿರ ಮಾಡುತ್ತಿದೆ. ಇಂದಿನ ವಾತಾವರಣದಲ್ಲಿ ಮಕ್ಕಳನ್ನು ಮುಕ್ತವಾಗಿ  ಮಾತನಾಡುವುದಕ್ಕೆ ಬಿಡಬೇಕು ಅವರಲ್ಲಿ ಕಲ್ಪನಾಶಕ್ತಿಯನ್ನು ಉತ್ತೇಜಿಸುವ ಹೊಸ ಕನಸುಗಳ ನಿರ್ಮಾಣ ಮಾಡುವ ಶಕ್ತಿಯನ್ನು ತುಂಬಬೇಕು ಎಂದರು.   ಕಾರ‍್ಯಕ್ರಮದಲ್ಲಿ ಶಾಲೆಯ ವೆಬ್ ಸೈಟ್ ನ್ನು ಲೋಕಾರ್ಪಣೆ ಮಾಡಲಾಯಿತು. ಲೋಕಾರ್ಪಣೆ ಮಾಡಿ ಮಾತನಾಡಿದ ಬಿಜೆಪಿಯ ಯುವ ಮುಖಂಡ ಅಮರೇಶ ಕರಡಿ ಹಲವಾರು ವರ್ಷಗಳಿಂದ ಸರಸ್ವತಿ ವಿದ್ಯಾಮಂದಿರದ ಕಾರ‍್ಯಕ್ರಮಗಳಲ್ಲಿ ಭಾಗವಹಿಸುತ್ತಾ ಬಂದಿದ್ದೇನೆ. ನಿರಂತರವಾಗಿ ಚಟುವಟಿಕೆಯಲ್ಲಿರುವ ಶಾಲೆ ವರ್ಷದಿಂದ ವರ್ಷಕ್ಕೆ ಪ್ರಗತಿಯತ್ತ ಸಾಗಿದೆ. ಮುಂದಿನ ದಿನಗಳಲ್ಲಿ ಶಾಲೆಯ ಅಭಿವೃದ್ದಿಗೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸುವುದಾಗಿ ಹೇಳಿದರು.  ಕಾರ‍್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೆ.ಎಂ. ಸಯ್ಯದ್ ಮಕ್ಕಳನ್ನು ಆಸ್ತಿಗಳನ್ನಾಗಿ ಮಾಡಲು ಕರೆ ನೀಡಿದರು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜೀವ ತೆತ್ತ ನೇತಾಜಿಯವರ ಜನ್ಮದಿನಾಚರಣೆ ಮಾಡುವ ಮೂಲಕ ಸರಸ್ವತಿ ವಿದ್ಯಾಮಂದಿರ ಶಾಲೆಯು ಮಕ್ಕಳಲ್ಲಿ ದೇಶಾಭಿಮಾನ ಮತ್ತು ದೇಶಪ್ರೇಮವನ್ನು ಬೆಳೆಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಕಾರ‍್ಯ ಎಂದು ಹೇಳಿದರು.
ವೇದಿಕೆಯ ಮೇಲೆ ನಗರಸಭೆ ಸದಸ್ಯರಾದ ಶರಣಪ್ಪ ಚಂದನಕಟ್ಟಿ, ಮಲ್ಲಪ್ಪ ಕವಲೂರ,ವಿಜಯಕುಮಾರ ಕವಲೂರ ಹಾಗೂ ಸಂಸ್ಥೆಯ ಕಾರ್ಯದರ್ಶಿ ಆರ್.ಎಚ್.ಅತ್ತನೂರ ಉಪಸ್ಥಿತರಿದ್ದರು. ಸ್ವಾಗತವನ್ನು ಕಾವ್ಯಾ ಸಬರದ ಕೋರಿದರು. ಪ್ರಾರ್ಥನೆಯನ್ನು ಶಾಲೆಯ ಶಿಕ್ಷಕಿಯರು ನೆರವೇರಿಸಿದರು. ಕಾರ‍್ಯಕ್ರ ನಿರೂಪಣೆಯನ್ನು ಆಶಾ ಅತ್ತನೂರ ಮತ್ತು ಶ್ರೀನಿವಾಸ ಬೂದಿಹಾಳ ಹಾಗೂ ವಂದನಾರ್ಪಣೆಯನ್ನು ಸಂಗೀತಾ ಹೊಳಗುಂದಿ ನೆರವೇರಿಸಿದರು. ಶಾಲೆಯ ವತಿಯಿಂದ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪನವರಿಗೆ, ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಅಮರೇಶ ಕರಡಿಯವರಿಗೆ ಆತ್ಮೀಯ ಸನ್ಮಾನ ಮಾಡಲಾಯಿತು. ಕಾರ‍್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಪಾಲಕರು ಪಾಲ್ಗೊಂಡಿದ್ದರು. 
Please follow and like us:
error

Leave a Reply

error: Content is protected !!