ಶಾಸಕ ಸಂಪಂಗಿಗೆ ಮೂರುವರೆ ವರ್ಷ ಜೈಲು ಶಿಕ್ಷೆ

ಲಂಚ ಸ್ವೀಕಾರ:
ಬೆಂಗಳೂರು, ಜೂ.2: ಲಂಚ ಸ್ವೀಕಾರ ಪ್ರಕರಣಕ್ಕೆ ಸಂಬಂಧಿಸಿ ಕೆಜಿಎಫ್‌ನ ಬಿಜೆಪಿ ಶಾಸಕ ವೈ.ಸಂಪಂಗಿಯನ್ನು ತಪ್ಪಿತಸ್ಥ ಎಂದು ಲೋಕಾಯುಕ್ತ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ಅವರಿಗೆ ಮೂರುವರೆ ವರ್ಷ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.
ಜಮೀನು ವಿವಾದದ ಪ್ರಕರಣ ಇತ್ಯರ್ಥಕ್ಕೆ ಸಂಬಂಧಿಸಿ ಉದ್ಯಮಿ ಹುಸೈನ್ ಮೊಯಿನ್ ಫಾರೂಕ್‌ರಿಂದ ಲಂಚ ಪಡೆಯುತ್ತಿದ್ದ ಸಂದರ್ಭ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಶಾಸಕ ಸಂಪಂಗಿಯನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದರು. ಇದರ ವಿಚಾರಣೆಯನ್ನು ಮುಗಿಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ ತೀರ್ಪನ್ನು ಶನಿವಾರಕ್ಕೆ ಕಾಯ್ದಿರಿಸಿತ್ತು.
ಇಂದು ತೀರ್ಪು ಪ್ರಕಟಿಸಿದ ಲೋಕಾಯುಕ್ತ ವಿಶೇಷ ನ್ಯಾಯಮೂರ್ತಿ ಎನ್.ಕೆ.ಸುದೀಂದ್ರ ರಾವ್, ಲಂಚ ಸ್ವೀಕಾರ ಪ್ರಕರಣದಲ್ಲಿ ಸಂಪಂಗಿ ತಪ್ಪಿತಸ್ಥ ಎಂದು ತೀರ್ಪು ನೀಡಿದರು ಹಾಗೂ ಸಂಪಂಗಿಗೆ ಒಂದು ಲಕ್ಷ ರೂ. ದಂಡ ಹಾಗೂ ಮೂರುವರೆ ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದರು.
ನ್ಯಾಯಾಧೀಶರು ತೀರ್ಪು ಘೋಷಿಸುತ್ತಿದ್ದಂತೆಯೇ ನ್ಯಾಯಾಲಯದಲ್ಲೇ ಇದ್ದ ಶಾಸಕ ಸಂಪಂಗಿ ಬಿಕ್ಕಿ, ಬಿಕ್ಕಿ ಅತ್ತರು. ಆ ಸಂದರ್ಭ ಅವರನ್ನು ಅವರ ತಾಯಿ ಸಮಾಧಾನಿಸಿದರು.
ಈ ಪ್ರಕರಣದ ಎರಡನೆ ಆರೋಪಿ ಮುಸ್ತಾಫ ಪಾಷನನ್ನು ನ್ಯಾಯಾಲಯ ಈ ಪ್ರಕರಣದಿಂದ ಖುಲಾಸೆಗೊಳಿಸಿದೆ.
ಬಳಿಕ ಸಂಪಂಗಿಯನ್ನು ವಶಕ್ಕೆ ತೆಗೆದುಕೊಂಡಿರುವ ಲೋಕಾಯುಕ್ತ ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಿದ್ದಾರೆ.
ಏನಿದು ಪ್ರಕರಣ: 2009ರಲ್ಲಿ ಉದ್ಯಮಿ ಹುಸೈನ್ ಮೊಯಿನ್ ಫಾರೂಕ್ ವಿರುದ್ಧ ಜಮೀನು ವಿವಾದ ಸಂಬಂಧ ಕೆಜಿಎಫ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದ ಇತ್ಯರ್ಥಕ್ಕೆ ಸಂಪಂಗಿ ಫಾರೂಕ್‌ನಿಂದ 5ಲಕ್ಷ ರೂಪಾಯಿ ಲಂಚ ಕೇಳಿದ್ದರು ಎನ್ನಲಾಗಿತ್ತು. ಈ ಬಗ್ಗೆ ಫಾರೂಕ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು, ಇದರಂತೆ 50 ಸಾವಿರ ನಗದು ಮತ್ತು 4.50 ಲಕ್ಷ ರೂ.ಗಳ ಚೆಕ್ ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಶಾಸಕರ ಭವನದಲ್ಲೇ ಸಂಪಂಗಿಯನ್ನು ಬಂಧಿಸಿದ್ದರು.
ಬಳಿಕ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಆದರೆ, ಅವರು ಅನಾರೋಗ್ಯದ ನೆಪದಲ್ಲಿ ಜಯದೇವ, ನಿಮಾನ್ಸ್ ಆಸ್ಪತ್ರೆಗೆ ಸಂಪಂಗಿ ದಾಖಲಾಗಿದ್ದರು. ಆಸ್ಪತ್ರೆಯಲ್ಲೇ ಇದ್ದುಕೊಂಡೇ 2009 ಫೆ.3ರಂದು ಲೋಕಾಯುಕ್ತ ವಿಶೇಷ ನ್ಯಾಯಾಲಯದಿಂದ ಷರತ್ತು ಬದ್ಧ ಜಾಮೀನು ಪಡೆದುಕೊಂಡಿದ್ದರು.
ಈ ಪ್ರಕರಣದ ವಿಚಾರಣೆ ಮೇ 22ಕ್ಕೆ ಪೂರ್ಣಗೊಂಡಿತ್ತು. ಇದರ ತೀರ್ಪನ್ನು ಜೂ.2ಕ್ಕೆ ಕಾಯ್ದಿರಿಸಲಾಗಿತ್ತು.
Please follow and like us:
error