ಸಾಮಾಜಿಕ-ಆರ್ಥಿಕ ಸಮಾನತೆ ಇಲ್ಲದೆ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ – ಬಿ.ಪೀರಬಾಷ

ಹೊಸಪೇಟೆ: ಸಾಮಾಜಿಕ ಹಾಗೂ ಆರ್ಥಿಕ  ಸಮಾನತೆ ಇಲ್ಲದ  ಯಾವುದೇ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ ಎಂದು ಸಾಹಿತಿ ಬಿ.ಪೀರಬಾಷ ಹೇಳಿದರು.
ನಗರದಲ್ಲಿ ಆಕಾಶವಾಣಿ ಕೇಂದ್ರದಲ್ಲಿ ಏರ್ಪಡಿಸಿದ್ದ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ  ಅವರ ೧೨೪ ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಕಂದಾಚಾರ, ಜಾತಿ, ಅಸಮಾನತೆ, ಬ್ರಿಟಿಷರಿಗಿಂತ ಕ್ರೂರ. ಬ್ರಿಟಿಷರು ಭಾರತಕ್ಕೆ ಬರದೇ ಇದ್ದರೆ ಅಂಬೇಡ್ಕರ್ ಈ ಎತ್ತರಕ್ಕೆ ಏರುತ್ತಿರಲಿಲ್ಲ. ಅಂಬೇಡ್ಕರರು ಜಗತ್ತಿನ ಶ್ರೇಷ್ಠ ಚಿಂತಕರಾಗಿದ್ದರು. ಭಾರತದಲ್ಲಿ ಬುದ್ಧಿಜೀವಿಗಳ, ಚಿಂತಕರ ಪರಂಪರೆ ದೊಡ್ಡ ಸಂಖ್ಯೆಯಲ್ಲಿದೆ. ಅದು ಬುದ್ಧನಿಂದ ಆರಂಭಗೊಂಡು ಬಸವಣ್ಣ, ಗಾಂಧೀಜಿಯೊಡನೆ ಮುಂದುವರೆದು ಅಂಬೇಡ್ಕರರವರೆಗೆ ಬೆಳೆದಿದೆ. ಅಂಬೇಡ್ಕರ ಸಮಾನತೆ-ಸಹೋದರತ್ವದ ಧ್ವನಿಯಾಗಿದ್ದರು. ಪ್ರಜಾಪ್ರಭುತ್ವದಂತಹ ಮೌಲ್ಯ ಪ್ರತಿಷ್ಠಾಪಿಸಿದರು. ಅವರು ಕೇವಲ ದಲಿತರ ಪರವಾಗಿ ಮಾತ್ರ ಇದ್ದರು ಎಂದುಕೊಂಡರೆ ಅದು ದೊಡ್ಡ ತಪ್ಪು. ಇಂದಿಗೂ ಹಳ್ಳಿಗಳಲ್ಲಿ ಅಂಬೇಡ್ಕರರನ್ನು ಗೌರವಿಸುವವರನ್ನು ಅವರು ಮೇಲ್ಜಾತಿಗಳ ವಿರೋಧಿಗಳೆಂಬಂತೆ ಬಿಂಬಿಸುವ ಕೆಟ್ಟ ಮನಸ್ಥಿತಿ ಇದೆ. ಸಮಾನತೆಯನ್ನು ಸಹಿಸದ ಶಕ್ತಿಗಳು ಇಂದಿಗೂ ಅಲ್ಲಲ್ಲಿ ಅಂಬೇಡ್ಕರ್‌ರ ಮೂರ್ತಿಗಳನ್ನು ವಿರೂಪಗೊಳಿಸುವ, ಅವಮಾನಿಸುವ ಮೂಲಕ ತಮ್ಮ ಅಸಹನೆ ಹೊರಹಾಕುತ್ತಿರುವದು ನಮ್ಮ ಕಾಲದ ದುರಂತವಾಗಿದೆ ಎಂದರು. ತುಳಿಕ್ಕೊಳಗಾದ ಸಮುದಾಯಗಳಲ್ಲಿ ಅದುಮಿ ಹಿಡಿದ ಸ್ಪ್ರಿಂಗಿನಂತಹ ಶಕ್ತಿ ಇರುತ್ತದೆ. ದಲಿತರು ಆ ಶಕ್ತಿ ಬಳಸಿಕೊಂಡು ಪುಟಿದೇಳಬೇಕು ಎಂದರು. ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಕೆ.ವೆಂಕಟೇಶ ಮಾತನಾಡಿ, ಅಂಬೇಡ್ಕರರು ಈ ದೇಶದ ಎಲ್ಲ ೧೩೦ ಕೋಟಿ ಜನರಿಗಾಗಿ ಸಂವಿಧಾನ ಬರೆದಿದ್ದಾರೆ. ಭಾರತ ಅಷ್ಟೇ ಅಲ್ಲ ಇಡೀ ಜಗತ್ತಿಗೆ ಅವರು ಮಾದರಿಯಾಗಿದ್ದಾರೆ.ಸಂವಿಧಾನದ ಮೂಲಕ ಸಮಾನತೆ ಸಾಧಿಸುವ ಸದವಕಾಶ ಒದಗಿಸಿಕೊಟ್ಟಿದ್ದಾರೆ ಎಂದರು. ಆಕಾಶವಾಣಿಯ  ನಿರ್ದೇಶಕ ಕೆ.ಅರುಣಪ್ರಭಾಕರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಎಸ್‌ಎಸ್‌ಎಲ್‌ಸಿ ಯಲ್ಲಿ ಉತ್ತಮ ಅಂಕ ಗಳಿಸಿದ ಪ.ಜಾ./ ಪ.ಪಂ. ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮ ನಿರ್ವಾಹಕರಾದ ಡಾ.ಅನುರಾಧ ಕಟ್ಟಿ,ಅರುಣ ನಾಯಕ,ಬಿ.ಸಿದ್ದಣ್ಣ, ತಾಂತ್ರಿಕ ವಿಭಾಗದ ಟಿ.ರತ್ನವೇಲು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಆಕಾಶವಾಣಿ ಎಸ್ಸಿ/ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ವಿ.ರಾಮಾಂಜನೇಯಲು ಸ್ವಾಗತಿಸಿದರು .ಪ್ರಸಾರ ನಿರ್ವಾಹಕ ಮಂಜುನಾಥ ಡಿ.ಡೊಳ್ಳಿನ ಪ್ರಾಸ್ತಾವಿಕವಾಗಿ ಮಾತನಾಡಿದರು.ಎಸ್.ಕೆ.ಶಾಂತಲಾ ನಿರೂಪಿಸಿದರು.

Leave a Reply