You are here
Home > Koppal News > ತೆಲಂಗಾಣ ರಾಜ್ಯ ಒಪ್ಪಿಗೆ : ಸಿಪಿಐಎಂಎಲ್ ಸ್ವಾಗತ

ತೆಲಂಗಾಣ ರಾಜ್ಯ ಒಪ್ಪಿಗೆ : ಸಿಪಿಐಎಂಎಲ್ ಸ್ವಾಗತ

೨೫೦ ವರ್ಷಗಳ ಕಾಲ ನಿಜಾಮರ ಹಾಗೂ ಜಾಗೀರುದಾರರ ಕೆಟ್ಟ ಆಡಳಿತದಿಂದ ಶೋಷಣೆಗೆ ಒಳಪಟ್ಟ ತೆಲಂಗಾಣ, ಸ್ವಾತಂತ್ರ್ಯ ನಂತರ ಆಂಧ್ರದ ಬಂಡವಾಳ ಶಾಹಿಗಳ ಕಪಿ ಮುಷ್ಟಿಯಿಂದ ಹೊರಬರಲು ೬೦ ವರ್ಷಗಳಿಂದ ಮಾಡುತ್ತಿರುವ ಹೋರಾಟಕ್ಕೆ, ತೆಲಂಗಾಣ ರಾಜ್ಯಕ್ಕೆ ಒಪ್ಪಿಗೆ ಸಿಕ್ಕಿರುವುದು ಜನರ ವಿಜಯವಾಗಿದೆ ಎಂದು ಸಿಪಿಐಎಂಎಲ್ ಲಿಬರೇಷನ್ ಪಕ್ಷದ ಹೈದ್ರಾಬಾದ್ ಕರ್ನಾಟಕ ಪ್ರಾಂತ ಕಾರ್ಯದರ್ಶಿ ಭಾರದ್ವಾಜ್ ಪ್ರಕಟಣೆಯಲ್ಲಿ ಸಂತೋಷ ವ್ಯಕ್ತಪಡಿಸಿದ್ದಾರೆ. 
ಭಾಷಾವಾರು ರಾಜ್ಯಗಳು ಏರ್ಪಾಟಾದ ನಂತರ ಆ ರಾಜ್ಯಗಳ ಒಳಗಿನ ಮುಂದುವರಿದ ಪ್ರದೇಶದ ಬಂಡವಾಳ ಶಾಹಿಗಳು ಹಿಂದುಳಿದ ಪ್ರದೇಶಗಳ ಭೂಮಿ, ಉದ್ಯೋಗಗಳು, ಖನಿಜ ಸಂಪತ್ತುಗಳನ್ನು ಲೂಟಿ ಮಾಡಿ ಹಿಂದುಳಿದ ಪ್ರಾಂತ್ಯಗಳನ್ನು ಮತ್ತಷ್ಟು ಹಿಂದಕ್ಕೆ ದಬ್ಬಿದ್ದಾರೆ. ತೆಲಂಗಾಣ ಪ್ರದೇಶವನ್ನು ೧೯೫೯ರಲ್ಲಿ ೩೭೧ಡಿ ತಿದ್ದುಪಡಿಗೆ ಒಳಪಡಿಸಿದರೂ, ಅಲ್ಲಿಯ ಜನರಿಗೆ ಕಾಯ್ದೆಯ ರಕ್ಷಣೆ ಸಿಗದೇ ಬಂಡವಾಳ ಶಾಹಿಗಳು ಹಾಗೂ ಮುಂದುವರಿದ ಪ್ರದೇಶದ ಜನರು ತೆಲಂಗಾಣವನ್ನು ಲೂಟಿ ಮಾಡಿದ್ದಾರೆ.
ಇಲ್ಲಿಯವರೆಗೆ ಆಂಧ್ರವನ್ನಾಳಿದ ಸರ್ಕಾರಗಳು ತೆಲಂಗಾಣದ ಜನರಿಗೆ ರಕ್ಷಣೆ ಕೊಡದೇ ಲೂಟಿ ಕೋರರ ಬೆಂಬಕ್ಕೆ ನಿಂತಿದ್ದವು. ಜನರು ಅನೇಕ ಕಷ್ಟ ನಷ್ಟಗಳನ್ನು ಸಹಿಸಿಕೊಂಡು ಸಾವಿರಾರು ಜನರ ಪ್ರಾಣ ತ್ಯಾಗದಿಂದ ಯುಪಿಎ ಸಮನ್ವಯ ಮಂಡಳಿ ಬೇರೆ ದಾರಿಯಿಲ್ಲದೆ ತೆಲಂಗಾಣ ರಾಜ್ಯಕ್ಕೆ ಹಸಿರು ನಿಶಾನೆ ತೋರಿಸಿದೆ.
ಕರ್ನಾಟಕದಲ್ಲಿ ಕಾಂಗ್ರೇಸ್ ಸರ್ಕಾರವಿದ್ದು, ಕೇಂದ್ರದ ಯುಪಿಎ ಸರ್ಕಾರದ ಮೇಲೆ ಒತ್ತಡ ಹೇರಿ ಹೈದ್ರಾಬಾದ್  ಕರ್ನಾಟಕ ಪ್ರದೇಶದ ಹಕ್ಕಾದ ೩೭೧ಜೆ ಕಲಂ ಕಾರ್ಯರೂಪಕ್ಕೆ ತರಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿಜಾಮ್ ಕರ್ನಾಟಕ ಪ್ರದೇಶದ ಜನರನ್ನು ಮಲತಾಯಿ ದೋರಣೆಯಿಂದ ನೋಡಿದರೆ, ಈ ಪ್ರದೇಶದಲ್ಲಿ ಕೂಡ ಹೋರಾಟ ಉಗ್ರ ರೂಪ ಪಡೆಯುತ್ತದೆ ಎಂದು ಭಾರದ್ವಾಜ್ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.  

Leave a Reply

Top