ಉದ್ಯೋಗಖಾತ್ರಿಯಡಿ ಬೇಡಿಕೆಗನುಗುಣವಾಗಿ ಕೆಲಸ ನೀಡಿ- ಸಂಸದ ಕರಡಿ ಸಂಗಣ್ಣ.

ಕೊಪ್ಪಳ ಜ. ೧೧ (ಕ ವಾ) ಜಿಲ್ಲೆಯಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ವಿಫಲವಾದ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ತಲೆದೋರಿದೆ.  ಉದ್ಯೋಗಖಾತ್ರಿ ಯೋಜನೆಯಡಿ ಕೆಲಸಕ್ಕಾಗಿ ಬೇಡಿಕೆ ಸಲ್ಲಿಸುವ ಕೂಲಿ ಕಾರ್ಮಿಕರಿಗೆ ಕೂಡಲೆ ಕೆಲಸ ನೀಡಬೇಕು.  ಅಲ್ಲದೆ ಕೂಲಿ ಹಣ ತ್ವರಿತವಾಗಿ ಪಾವತಿಯಾಗಬೇಕು ಎಂದು ಸಂಸದ ಕರಡಿ ಸಂಗಣ್ಣ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
       ಕೇಂದ್ರ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆಗಾಗಿ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
        ಜಿಲ್ಲೆಯಲ್ಲಿ ಸದ್ಯ ಬರ ಪರಿಸ್ಥಿತಿ ಇದೆ.  ಉದ್ಯೋಗಕ್ಕಾಗಿ ಕೂಲಿ ಕಾರ್ಮಿಕರು ಗುಳೇ ಹೋಗುವ ಪರಿಸ್ಥಿತಿ ಇದೆ.  ಉದ್ಯೋಗಖಾತ್ರಿ ಯೋಜನೆಯಡಿ ಅವರಿಗೆ ಸ್ಥಳೀಯವಾಗಿಯೇ ಉದ್ಯೋಗ ಕೊಟ್ಟು, ಸಮಯಕ್ಕೆ ಸರಿಯಾಗಿ ಕೂಲಿ ಹಣ ನೀಡಿದಲ್ಲಿ, ಗುಳೇ ಹೋಗುವುದನ್ನು ತಪ್ಪಿಸಬಹುದಾಗಿದೆ.  ಉದ್ಯೋಗಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ಈವರೆಗೆ ೬. ೬೯ ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದ್ದು, ೩೦. ೫೭ ಕೋಟಿ ರೂ. ಅನುದಾನ ಖರ್ಚಾಗಿದೆ.  ಗಂಗಾವತಿ ತಾಲೂಕಿನಲ್ಲಿ ೨. ೬೭ ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದ್ದು, ಕೊಪ್ಪಳ- ೧. ೨೪ ಲಕ್ಷ, ಕುಷ್ಟಗಿ- ೧. ೭೫ ಲಕ್ಷ ಹಾಗೂ ಯಲಬುರ್ಗಾ ತಾಲೂಕಿನಲ್ಲಿ ೧. ೦೨ ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ.  ಉದ್ಯೋಗಖಾತ್ರಿ ಯೋಜನೆಯಡಿ ಕೆಲಸಕ್ಕಾಗಿ ಬೇಡಿಕೆ ಸಲ್ಲಿಸುವ ಕೂಲಿ ಕಾರ್ಮಿಕರಿಗೆ ಕೂಡಲೆ ಕೆಲಸ ನೀಡಬೇಕು.  ಅಲ್ಲದೆ ಕೂಲಿ ಹಣ ತ್ವರಿತವಾಗಿ ಪಾವತಿಯಾಗುವಂತೆ ನೋಡಿಕೊಳ್ಳಬೇಕು ಎಂದು ಸಂಸದ ಕರಡಿ ಸಂಗಣ್ಣ ಅವರು ಅಧಿಕಾರಿಗಳಿಗೆ ತಿಳಿಸಿದರು.  ಇದಕ್ಕೆ ದನಿಗೂಡಿಸಿದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು, ಖಾತ್ರಿ ಯೋಜನೆಯಡಿ ವಿವಿಧ ಇಲಾಖೆಗಳಿಗೆ ಕನವರ್ಜೆನ್ಸ್ ಮೂಲಕ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಿ, ಮಾನವ ದಿನಗಳನ್ನು ಸೃಜಿಸಲು ಅವಕಾಶ ಕಲ್ಪಿಸಲಾಗಿದ್ದರೂ, ಅಧಿಕಾರಿಗಳು ಆಸಕ್ತಿಯಿಂದ ಕಾರ್ಯನಿರ್ವಹಿಸುತ್ತಿಲ್ಲವಾದ್ದರಿಂದ, ಗುರಿ ಸಾಧನೆಗೆ ಹಿನ್ನಡೆಯಾಗಿದೆ ಎಂದರು.
ಗೈರಾದ ಅಧಿಕಾರಿಗಳಿಗೆ ನೋಟಿಸ್ : ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಗೆ ೨೦ ಕ್ಕೂ ಹೆಚ್ಚು ಅಧಿಕಾರಿಗಳು ಗೈರು ಹಾಜರಾಗಿದ್ದರು.  ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದ ಕರಡಿ ಸಂಗಣ್ಣ ಅವರು,  ಸಭೆಗೆ ಗೈರಾದ ಅಧಿಕಾರಿಗಳಿಗೆ ಷೋಕಾಸ್ ನೋಟಿಸ್ ಜಾರಿಗೊಳಿಸಿ, ಅವರಿಂದ ಸೂಕ್ತ ವಿವರಣೆ ಪಡೆಯುವಂತೆ ಸೂಚನೆ ನೀಡಿದರು.
ಮೇವಿನ ಪರಿಸ್ಥಿತಿ ಬಗ್ಗೆ ನಿಗಾ ವಹಿಸಿ : ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇರುವುದರಿಂದ, ಈಗಿನಿಂದಲೇ ಮೇವು ಸಂಗ್ರಹಕ್ಕೆ ಮೇವು ನಿಧಿ ಸ್ಥಾಪಿಸಿ, ಮುಂದಿನ ದಿನಗಳಲ್ಲಿ ರೈತರಿಗೆ ಮೇವು ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು.  ಇಲ್ಲದಿದ್ದಲ್ಲಿ, ಬೇಸಿಗೆಯ ಕಾಲದಲ್ಲಿ ಮೇವಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಸಂಸದ ಕರಡಿ ಸಂಗಣ್ಣ ತಿಳಿಸಿದರು.  ಇದಕ್ಕೆ ಉತ್ತರಿಸಿದ ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಸಾಲಿ ಅವರು, ಸದ್ಯ ಜಿಲ್ಲೆಯಲ್ಲಿ ೧೩ ವಾರಕ್ಕೆ ಆಗುವಷ್ಟು ಮೇವು ರೈತರ ಬಳಿಯಲ್ಲಿದೆ,  ಮೇವಿನ ಪರಿಸ್ಥಿತಿ ಬಗ್ಗೆ ನಿಗಾ ವಹಿಸಲಾಗಿದೆ ಎಂದರು.  ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮಾತನಾಡಿ, ಜಿಲ್ಲೆಯ ೧೧ ಹೋಬಳಿಗಳಲ್ಲಿ ಮುಂದಿನ ದಿನಗಳಲ್ಲಿ ಮೇವಿನ ಅಭಾವ ತಲೆದೋರುವ ಸಾಧ್ಯತೆಗಳಿದ್ದು, ಈಗಾಗಲೆ ೮ ಕಡೆಗಳಲ್ಲಿ ಮೇವು ಬ್ಯಾಂಕ್ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಮೇವು ಖರೀದಿಗಾಗಿ ಟೆಂಡರ್ ಕರೆಯಲಾಗಿದೆ ಎಂದರು. 
ಸರ್ಕಾರಿ ಹಣ ಪೋಲಾಗುವುದು ತಡೆಗಟ್ಟಿ : ಕಳೆದ ಸೆಪ್ಟಂಬರ್‌ನಲ್ಲಿ ಜಿಲ್ಲೆಯ ಹಲವೆಡೆ ಗೋಶಾಲೆಗಳನ್ನು ತೆರೆದು, ಜಾನುವಾರುಗಳಿಗೆ ಉಚಿತ ಮೇವು ಪೂರೈಕೆ ಮಾಡಲಾಗುತ್ತಿತ್ತು.  ನಂತರದ ದಿನಗಳಲ್ಲಿ ಮಳೆಯಾದ ಕಾರಣ, ಗೋಶಾಲೆಗಳಲ್ಲಿ ಜಾನುವಾರುಗಳ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ಗೋಶಾಲೆಗಳು ಸ್ಥಗಿತಗೊಂಡಿದ್ದವು.   ಗೋಶಾಲೆಗಳಲ್ಲಿನ ಉಪಯುಕ್ತ ಸಾಮಗ್ರಿಗಳನ್ನು ಸಂರಕ್ಷಿಸಿಡುವ ಕಾರ್ಯವನ್ನು ಯಾವುದೇ ತಹಸಿಲ್ದಾರರು ಕೈಗೊಂಡಿಲ್ಲ.  ಶೆಡ್ ಸೇರಿದಂತೆ ಮತ್ತಿತರ ಉಪಯುಕ್ತ ಸಾಮಗ್ರಿಗಳು ಅನ್ಯರ ಪಾಲಾಗುತ್ತಿವೆ.  ಮುಂದಿನ ದಿನಗಳಲ್ಲಿ ಗೋಶಾಲೆಗಳನ್ನು ಪ್ರಾರಂಭ ಮಾಡುವ ಸಾಧ್ಯತೆಗಳಿರುವುದರಿಂದ, ಪುನಃ ಮೂಲಭೂತಸೌಕರ್ಯಗಳಿಗೆ ಸರ್ಕಾರಿ ಹಣ ವ್ಯಯ ಮಾಡಲಾಗುತ್ತದೆ.  ಇದರ ಬದಲಿಗೆ ಹಳೆಯ ಗೋಶಾಲೆಗಳಲ್ಲಿನ
ಸಾಮಗ್ರಿಗಳನ್ನು ಸಂರಕ್ಷಿಸಿಡುವ ಕಾರ್ಯ ಆಗಬೇಕು ಎಂದು ಸಂಸದರು ಜಿಲ್ಲಾಧಿಕಾರಿಗಳಿಗೆ
ತಿಳಿಸಿದರು.
ಆಹಾರ ಗುಣಮಟ್ಟ ವರದಿ ಬೇಗ ತರಿಸಿಕೊಳ್ಳಿ : ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆ ಮಾಡಲಾಗುವ ಆಹಾರ ಸಾಮಗ್ರಿಗಳ ಗುಣಮಟ್ಟ ಪರಿಶೀಲಿಸಲು ಪ್ರತಿ ಬಾರಿ ಕಲಬುರಗಿಯಲ್ಲಿನ ವಿಭಾಗೀಯ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತದೆ.  ಆದರೆ ಅಲ್ಲಿನ ವರದಿ ಬರುವುದರ ಒಳಗಾಗಿ ಇಲ್ಲಿ ಆಹಾರವನ್ನು ಮಕ್ಕಳಿಗೆ ಪೂರೈಸಿ ಖಾಲಿ ಮಾಡಿಬಿಡಲಾಗುತ್ತದೆ.  ಇದರಿಂದ ಗುಣಮಟ್ಟ ಪರಿಶೀಲನೆಯ ಉದ್ದೇಶ ಈಡೇರುವುದಿಲ್ಲ.  ಆದ್ದರಿಂದ, ಆಹಾರ ಗುಣಮಟ್ಟ ಪರಿಶೀಲನಾ ವರದಿಯನ್ನು ತ್ವರಿತವಾಗಿ ಖುದ್ದು ಭೇಟಿ ನೀಡಿ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಉಪಕಾರ್ಯದರ್ಶಿ ಎನ್.ಕೆ. ತೊರವಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಸದಸ್ಯರುಗಳಾದ ಶೋಭಾ ನಗರಿ, ಸತ್ಯನಾರಾಯಣ ದೇಶಪಾಂಡೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error