ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ೫. ೯೪ ಕೋಟಿ ರೂ. ಅನುದಾನ ಬಿಡುಗಡೆ- ಸಂಗಣ್ಣ ಕರಡಿ

  ಕೊಪ್ಪಳ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ ೫. ೯೪ ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿದೆ ಎಂದು ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಕೇಂದ್ರೀಯ ವಿದ್ಯಾಲಯ : ಕೊಪ್ಪಳದಲ್ಲಿ ಅತ್ಯಂತ ಅವಶ್ಯಕವಾಗಿದ್ದ ಕೇಂದ್ರೀಯ ವಿದ್ಯಾಲಯಕ್ಕಾಗಿ ಬಹದ್ದೂರಬಂಡಿ ಗ್ರಾಮದ ಬಳಿ ಒಟ್ಟು ೧೦ ಎಕರೆ ಜಮೀನು ಭೂಸ್ವಾಧೀನಕ್ಕಾಗಿ ಸ್ಥಳ ಗುರುತಿಸಲಾಗಿದ್ದು, ಇದಕ್ಕಾಗಿ ಸರ್ಕಾರ ೫೫ ಲಕ್ಷ ರೂ.ಗಳ ಅನುದಾನ ಬಿಡುಗಡೆ ಮಾಡಿದೆ.  
ಹುಲಿಕೆರೆ : ಕೊಪ್ಪಳ ಜನರ ಬಹುದಿನಗಳ ಬೇಡಿಕೆಯಾಗಿದ್ದ ಹುಲಿಕೆರೆ ಅಭಿವೃದ್ಧಿಗಾಗಿ ಸಲ್ಲಿಸಲಾಗಿದ್ದ ಮನವಿಗೆ ಸರ್ಕಾರ ಸ್ಪಂದಿಸಿದ್ದು, ಹುಲಿಕೆರೆ ಅಭಿವೃದ್ಧಿ ಕಾಮಗಾರಿಗಳಾದ ದೋಣಿಗಳ ಮಂಜೂರಾತಿ, ವಾಯುವಿಹಾರದ ಗಾರ್ಡನ್ ಮತ್ತು ಫುಟ್‌ಪಾತ್ ನಿರ್ಮಾಣ ಕಾಮಗಾರಿಗಾಗಿ ಸರ್ಕಾರ ೦೧ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.  ಅದೇ ರೀತಿ ಕೊಪ್ಪಳ ನಗರ ಸೌಂದರ್ಯ ಹೆಚ್ಚಿಸಲು ಹಾಗೂ ನಗರದಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡುವ ಸಲುವಾಗಿ ವಿವಿಧ ಬಡಾವಣೆಗಳಲ್ಲಿ ಉದ್ಯಾನವನ ನಿರ್ಮಾಣ ಮಾಡಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಸರ್ಕಾರ ೨ ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿದೆ.
ಜಿಲ್ಲಾ ಕ್ರೀಡಾಂಗಣ: ಕೊಪ್ಪಳದಲ್ಲಿ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ಜಿಲ್ಲಾ ಕ್ರೀಡಾಂಗಣವನ್ನು ಉತ್ತಮ ರೀತಿಯಲ್ಲಿ ಸಜ್ಜುಗೊಳಿಸುವ ಸಲುವಾಗಿ ವಿವಿಧ ಸೌಲಭ್ಯಗಳನ್ನು ಒದಗಿಸಲು ಯೋಜನೆ ರೂಪಿಸಲಾಗಿದೆ.  ಅದರಂತೆ ಕೊಪ್ಪಳ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಈಜುಕೊಳ, ಮಹಿಳೆಯರ ವಿಶ್ರಾಂತಿ ಕೊಠಡಿ, ಪುರುಷರ ವಿಶ್ರಾಂತಿ ಕೊಠಡಿ, ಗ್ಯಾಲರಿ ಬ್ಯಾಲೆನ್ಸಿಂಗ್ ಟ್ಯಾಂಕ್, ಶುದ್ಧೀಕರಣ ಟ್ಯಾಂಕ್ ಅಲ್ಲದೆ ವಿದ್ಯುತ್ ಉಪಕರಣ, ಟ್ರಾನ್ಸ್‌ಫಾರ್ಮರ್ ನಿರ್ಮಾಣ, ಜನರೇಟರ್ ಮತ್ತು ಪಂಪಿಂಗ್ ಮಶಿನರಿ, ವಾಟರ್ ಲೈಟಿಂಗ್ ಇತ್ಯಾದಿ ಕಾಮಗಾರಿಗಳನ್ನು ೧. ೭೦ ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲು ಮಂಜೂರಾತಿ ನೀಡಲಾಗಿದ್ದು, ಇದರಲ್ಲಿ ಮೊದಲನೆ ಕಂತಾಗಿ ೮೫ ಲಕ್ಷ ರೂ.ಗಳ ಅನುದಾನವನ್ನು ಸದ್ಯ ಬಿಡುಗಡೆ ಮಾಡಲಾಗಿದೆ.  ಕ್ರೀಡಾಂಗಣದಲ್ಲಿ ವಿವಿಧ ಕ್ರೀಡಾ ಮೂಲಭೂತ ಸೌಕರ್ಯಗಳನ್ನು ಕೈಗೊಳ್ಳಲು ಎರಡನೆ ಕಂತಿನ ಅನುದಾನ ರೂ. ೭೫ ಲಕ್ಷ ಗಳ ಅನುದಾನವನ್ನೂ ಸಹ ಸರ್ಕಾರ ಬಿಡುಗಡೆ ಮಾಡಿದೆ.
ಸುವರ್ಣ ಗ್ರಾಮ : ಸುವರ್ಣ ಗ್ರಾಮೋದಯ ಯೋಜನೆಯಡಿ ೦೪ ನೇ ಹಂತದಲ್ಲಿ ಹೆಚ್ಚುವರಿಯಾಗಿ ಆಯ್ಕೆಯಾದ ಕೊಪ್ಪಳ ತಾಲೂಕಿನ ಮೈನಳ್ಳಿ, ಮೋರನಾಳ, ಹಟ್ಟಿ, ಬಸಾಪುರ, ಕಾಸನಕಂಡಿ, ಕುಣಿಕೇರಿ, ಹಾಲವರ್ತಿ, ಹಂದ್ರಾಳ, ವದಗನಾಳ, ಹಲಗೇರಿ, ಯತ್ನಟ್ಟಿ ಮತ್ತು ಕರ್ಕಿಹಳ್ಳಿ ಸೇರಿದಂತೆ ಒಟ್ಟು ೧೨ ಗ್ರಾಮಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಬಾಕಿ ಮೊತ್ತ ೭೯ ಲಕ್ಷ ರೂ.ಗಳ ಅನುದಾನವನ್ನು ಸರ್ಕಾರ ಸದ್ಯ ಬಿಡುಗಡೆ ಮಾಡಿದೆ.
  ಕೊಪ್ಪಳ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಇನ್ನೂ ಹೆಚ್ಚು, ಹೆಚ್ಚು ಅನುದಾನವನ್ನು ಕೊಪ್ಪಳ ಕ್ಷೇತ್ರಕ್ಕೆ ಬಿಡುಗಡೆ ಮಾಡಿಸಲು ಶ್ರಮಿಸುವ ಮೂಲಕ ಕ್ಷೇತ್ರದ ಜನರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.  ಕ್ಷೇತ್ರದ ಅಭಿವೃದ್ಧಿಗಾಗಿ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಸಹಕರಿಸಿದ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ, ಸಂಸದ ಶಿವರಾಮಗೌಡ ಸೇರಿದಂತೆ ಎಲ್ಲಾ ಶಾಸಕರು, ಉನ್ನತ ಮಟ್ಟದ ಅಧಿಕಾರಿಗಳಿಗೆ ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. 
Please follow and like us:
error

Related posts

Leave a Comment