ಛತ್ರಪತಿ ಶಿವಾಜಿ ಮತ್ತು ಸರ್ವಜ್ಞರು ಮಹಾನ್ ಸಾಧಕರು – ಸಂಗಣ್ಣ ಕರಡಿ

ಸ್ವರಾಜ್ಯ ಕಲ್ಪನೆಯ ರೂವಾರಿಯಾದ ಛತ್ರಪತಿ ಶಿವಾಜಿ ಹಾಗೂ ಜ್ಞಾನದ ಕಣಜ ಕವಿ ಸರ್ವಜ್ಞರು ಇಬ್ಬರೂ ಮಹಾನ್ ಸಾಧಕರು ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಬಣ್ಣಿಸಿದರು.

  ನಗರದ ಸಾಹಿತ್ಯ ಭವನದಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ಛತ್ರಪತಿ ಶಿವಾಜಿ ಹಾಗೂ ಕವಿ ಸರ್ವಜ್ಞರ ಜಯಂತಿ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ಛತ್ರಪತಿ ಶಿವಾಜಿ ಮಹಾರಾಜರು ಅಂದಿನ ದಿನಮಾನದ ಶ್ರೇಷ್ಠ ರಾಜಕೀಯ ಚತುರನಾಗಿದ್ದರಲ್ಲದೆ, ಉತ್ತಮ ಆಡಳಿತಗಾರರೂ ಆಗಿದ್ದರು.  ಚಿಕ್ಕಂದಿನಿಂದಲೇ ಸಾಹಸ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿದ್ದ ಶಿವಾಜಿ, ಗುಲಾಮಗಿರಿಯನ್ನು ದ್ವೇಷಿಸಿ, ಸ್ವಾಭಿಮಾನಿಯಾಗಿ ಬದುಕುವ ಮಹತ್ವವನ್ನು ಸಾರಿದ್ದರು.  ಸರ್ವಧರ್ಮ ಪ್ರೇಮಿಯಾಗಿದ್ದ ಶಿವಾಜಿ, ಮಹಿಳೆಯರಿಗೆ ಗೌರವ ನೀಡುವ ವ್ಯಕ್ತಿತ್ವ ಹೊಂದಿದ್ದರು.  ಸ್ವರಾಜ್ಯ ಕಲ್ಪನೆಯ ರೂವಾರಿಯಾಗಿದ್ದ ಶಿವಾಜಿಗೆ, ಆತನ ತಾಯಿಯೇ ಉತ್ತಮ ವ್ಯಕ್ತಿತ್ವ ರೂಪಿಸುವ ಶಕ್ತಿಯಾಗಿದ್ದಳು.  ತನ್ನ ಹೋರಾಟ ಪ್ರವೃತ್ತಿಯಿಂದಲೇ ಸಾಮ್ರಾಜ್ಯ ಕಟ್ಟಿದ ಶಿವಾಜಿ, ಮೂಲಭೂತ ಹಕ್ಕನ್ನು ಹೋರಾಟದಿಂದಲೇ ಪಡೆಯುವುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದರು.  ’ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಬಲ್ಲದ ವಿಷಯವಿಲ್ಲ’ ಎಂಬ ನುಡಿ, ಸರ್ವಜ್ಞರ ಜ್ಞಾನಕ್ಕೆ ಹಿಡಿದ ಕನ್ನಡಿಯಾಗಿದೆ.  ಸರಳ ಭಾಷೆಯಲ್ಲಿ, ಬದುಕಿನ ಸತ್ಯವನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ಕವಿ ಸರ್ವಜ್ಞರು.  ಇಂತಹ ಮಹನೀಯರ ಚರಿತ್ರೆಯನ್ನು ವಿದ್ಯಾರ್ಥಿಗಳು ಅರಿತುಕೊಳ್ಳುವುದಲ್ಲದೆ, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಂಸದ ಸಂಗಣ್ಣ ಕರಡಿ ಅವರು ಹೇಳಿದರು.
  ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಪತನದ ನಂತರ, ತೀವ್ರಗೊಂಡಿದ್ದ ಅರಾಜಕತೆಯನ್ನು ಶಿವಾಜಿಯು ಹತ್ತಿಕ್ಕುವ ಮೂಲಕ ಶಾಂತಿ ನೆಲೆಸಲು ಯತ್ನಿಸಿದರು.  ಅಪ್ರತಿಮ ದೇಶಭಕ್ತನಾಗಿದ್ದ ಶಿವಾಜಿ, ಧರ್ಮ, ಸಂಸ್ಕೃತಿಯ ರಕ್ಷಕರಾಗಿದ್ದರು.  ತ್ರಿಪದಿಗಳ ಮೂಲಕ ಸಮಾಜಕ್ಕೆ ಜ್ಞಾನ ಮತ್ತು ವಾಸ್ತವಿಕ ಅಂಶಗಳನ್ನು ಆಡುಭಾಷೆಯ ಮೂಲಕ ಸಂದೇಶ ನೀಡಿದ ಸರ್ವಜ್ಞರು ಮಹಾನ್ ಸಾಧಕರು.  ಸರ್ವಜ್ಞರ ಆಶಯದಂತೆ ಎಲ್ಲರೂ ಶಿಕ್ಷಣವನ್ನು ಪಡೆದು, ಜಿಲ್ಲೆಯನ್ನು ಶೈಕ್ಷಣಿಕ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ತೊಡೆದು ಹಾಕಲು ಶ್ರಮಿಸೋಣ ಎಂದರು.  ಅಲ್ಲದೆ ಕೊಪ್ಪಳ ನಗರದಲ್ಲಿ ಶಿವಾಜಿ ಪುತ್ಥಳಿ ಸ್ಥಾಪನೆ ಹಾಗೂ ಮರಾಠ ಸಮುದಾಯ ಭವನ ನಿರ್ಮಿಸಬೇಕು ಎನ್ನುವ ಮರಾಠ ಸಮಾಜ ಬಾಂಧವರ ಮನವಿಗೆ ಸ್ಪಂದಿಸಿ, ಬೇಡಿಕೆ ಈಡೇರಿಸಲು ಪ್ರಾಮಾಣಿಕವಾಗಿ ಯತ್ನಿಸುವ ಭರವಸೆ ನೀಡಿದರು.
  ಛತ್ರಪತಿ ಶಿವಾಜಿ ಮಹಾರಾಜರ ಕುರಿತು ವಿಶೇಷ ಉಪನ್ಯಾಸ ನೀಡಿದ ಕೊಪ್ಪಳದ ಎಂ.ಎಂ. ಕಂಬಾಳಿಮಠ ಅವರು, ಶಿವಾಜಿಯು ಧಾರ್ಮಿಕ ಸಮಾನತೆ, ಮೂಲಭೂತ ಹಕ್ಕುಗಳನ್ನು ಗೌರವಿಸುವಂತೆ ಮಾಡಿದ್ದರು.  ಜಗತ್ತಿನಲ್ಲಿಯೇ ಮೊದಲ ಬಾರಿಗೆ ಎಲ್ಲ ಬಗೆಯ ಯುದ್ಧ ತಂತ್ರಗಳನ್ನು ಅಳವಡಿಸಿಕೊಂಡ ಶ್ರೇಷ್ಠ ರಣಕಲಿ ಶಿವಾಜಿ ಮಹಾರಾಜರು.  ಶಿವಾಜಿಯು ರಾಷ್ಟ್ರದ ಪ್ರತಿಯೊಬ್ಬ ಯುವಕರಿಗೂ ದೇಶಪ್ರೇಮ ಬಿಂಬಿಸುವ ಪ್ರತೀಕ.  ವ್ಯಕ್ತಿತ್ವ ರೂಪಿಸಿಕೊಳ್ಳಲು ಶಿವಾಜಿಯೇ ಮಾದರಿ.  ಆತನ ಆಡಳಿತದಲ್ಲಿ ಕಂದಾಯ ಹಾಗೂ ತೆರಿಗೆ ನೀತಿ ಬಹಳಷ್ಟು ಸರಳ ಹಾಗೂ ಜನಸ್ನೇಹಿಯಾಗಿತ್ತು ಎಂದರು.
  ತ್ರಿಪದಿ ಕವಿ ಸರ್ವಜ್ಞರ ಕುರಿತು ವಿಶೇಷ ಉಪನ್ಯಾಸ ನೀಡಿದ ಡಾ. ಸುಮತಿ ಹಿರೇಮಠ ಅವರು, ಯಾವ ವಿಶ್ವವಿದ್ಯಾಲಯಗಳೂ ಇಲ್ಲದ ಆ ಕಾಲದಲ್ಲಿ ತ್ರಿಪದಿಗಳ ಮೂಲಕ ಸರ್ವರಿಗೂ ಸರ್ವ ಬಗೆಯ ಜ್ಞಾನವನ್ನು ಸರ್ವಜ್ಞರು ಉಣಬಡಿಸಿದರು.  ಸಾಮಾಜಿಕ ಸವಾಲುಗಳಿಗೆ ಸಾಹಿತ್ಯ ಮೂಲಕ ಉತ್ತರ ಕೊಟ್ಟರು.  ೧೬ನೇ ಶತನಾನದಲ್ಲಿ, ಜನರ ಆಡು ಮಾತಿನಲ್ಲಿ ಸರ್ವಜ್ಞರ ವಚನಗಳು ನಲಿದಾಡುತ್ತಿದ್ದವು. ಸಾಮಾಜಿಕ ಪ್ರಜ್ಞೆಯನ್ನು ಬಡಿದೆಬ್ಬಿಸುವ ಸಾಮರ್ಥ್ಯ ಸರ್ವಜ್ಞರ ವಚನಗಳಲ್ಲಿದೆ.  ಸಾಹಿತ್ಯದ ಅಪೂರ್ವ ಸಾಧನೆ ಹಾಗೂ ಸಮಾಜಕ್ಕೆ ಸರ್ವಜ್ಞರ ಕೊಡುಗೆ ಅಪಾರವಾಗಿದೆ ಎಂದರು.
  ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಗಣ್ಯರಾದ ರಾಮಣ್ಣ ಹದ್ದಿನ, ಬಾಳಪ್ಪ ಬಾರಕೇರ, ನಾಗರಾಜ ಬಡಿಗೇರ, ನಿರ್ಮಲ, ಮಾರುತಿ ನಿಕ್ಕಂ ಸೇರಿದಂತೆ ಹಲವರು ಭಾಗವಹಿಸಿದ್ದರು.  ಕೊಟ್ರಪ್ಪ ಚೋರನೂರ ಸ್ವಾಗತಿಸಿ, ವಂದಿಸಿದರು.  ಸಿ.ವಿ. ಜಡಿಯವರ್ ನಿರೂಪಿಸಿದರು. ಸದಾಶಿವ ಪಾಟೀಲ ಪ್ರಾರ್ಥಿಸಿದರು.  
  ಶಿವಾಜಿ ಮತ್ತು ಸರ್ವಜ್ಞರ ಜಯಂತಿ ಅಂಗವಾಗಿ ಉಭಯ ಮಹನೀಯರ ಭಾವಚಿತ್ರದೊಂದಿಗಿನ ಮೆರವಣಿಗೆ ಸಾಹಿತ್ಯ ಭವನದಿಂದ ಅಶೋಕ ವೃತ್ತ, ಜವಾಹರ ರಸ್ತೆ, ಗಡಿಯಾರ ಕಂಭ ಮಾರ್ಗವಾಗಿ ತುಳಜಾಭವಾನಿ ದೇವಸ್ಥಾನದವರೆಗೆ ನೆರವೇರಿತು.  ಹಲವು ಜಾನಪದ ಮತ್ತು ಸಾಂಸ್ಕೃತಿಕ ಕಲಾತಂಡಗಳು ಮೆರವಣಿಗೆಯನ್ನು ಆಕರ್ಷಕಗೊಳಿಸಿದವು.
Please follow and like us:
error