ಜಂಟಿ ಅಧಿವೇಶನ : ವಿಧಾನ ಪರಿಷತ್ತಿನಲ್ಲಿ ಅಗಲಿದ ಗಣ್ಯರಿಗೆ ಶೃದ್ಧಾಂಜಲಿ

ಬೆಂಗಳೂರು,  :  ಜಂಟಿ ಅಧಿವೇಶನದ ಮೊದಲನೇ ದಿನವಾದ ಇಂದು  ವಿಧಾನ ಪರಿಷತ್ತಿನ ಪ್ರಾರಂಭದಲ್ಲಿ ಕರ್ನಾಟಕ ರಾಜ್ಯದ ಮಾಜಿ ರಾಜ್ಯಪಾಲರಾದ ರಾಮೇಶ್ವರ ಠಾಕೂರ್, ಕೇಂದ್ರದ ಮಾಜಿ ಸಚಿವರಾದ ಸರೋಜಿನಿ ಮಹಿಷಿ, ರಾಜ್ಯದ ಮಾಜಿ ಸಚಿವರಾದ ಆರ್. ಹೆಚ್. ಪಾಟೀಲ್ ಮತ್ತು ಖ್ಯಾತ ವ್ಯಂಗ್ಯಚಿತ್ರಕಾರರಾದ ಆರ್. ಕೆ. ಲಕ್ಷ್ಮಣ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಲಾಯಿತು.
ರಾಜ್ಯದ ರಾಜ್ಯಪಾಲರಾಗಿದ್ದ ರಾಮೇಶ್ವರ್ ಠಾಕೂರ್ ಅವರ ನಿಧನದಿಂದಾಗಿ ರಾಷ್ಟ್ರದ ಒಬ್ಬ ಹಿರಿಯ ಸರಳ ಹಾಗೂ ಸಜ್ಜನ ರಾಜಕಾರಣಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಕಳೆದುಕೊಂಡಂತಾಗಿದೆ.  ಹಾಗೆಯೇ ಸರೋಜಿನಿ ಮಹಿಷಿ ಅವರು ಉತ್ತಮ ಲೇಖಕಿ ಹಾಗೂ ಕಾನೂನು ತಜ್ಞೆಯಾಗಿದ್ದು, ಮಹಿಳಾ ಮೀಸಲಾತಿ ಹಾಗೂ ಸಾರ್ವಜನಿಕ ಹಾಗೂ ಖಾಸಗಿ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕೆಂದು ಹೋರಾಡಿದ   ಮುತ್ಸದ್ದಿ ರಾಜಕಾರಣಿಯಾಗಿದ್ದರು.   ದಿವಂಗತ ಆರ್. ಎಸ್. ಪಾಟೀಲ್ ಅವರು ವೃತ್ತಿಯಲ್ಲಿ ಕೃಷಿಕರಾಗಿದ್ದುಕೊಂಡು ರಾಜಕೀಯ ಪ್ರವೇಶಮಾಡಿ ದೇವರಾಜ ಅರಸು ಅವರ ಸಂಪುಟದಲ್ಲಿ ನೀರಾವರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.  ಆರ್. ಕೆ. ಲಕ್ಷ್ಮಣ್ ಅವರು ಭಾರತೀಯ ವ್ಯಂಗ್ಯಚಿತ್ರ ಕ್ಷೇತ್ರದ ಶೇಕ್ಸ್‍ಪಿಯರ್ ಎಂದೇ ಪ್ರಸಿದ್ಧರಾಗಿದ್ದರು.  ಕನ್ನಡದ ಕೊರವಂಜಿ ಪತ್ರಿಕೆಯ ಮೂಲಕ ವ್ಯಂಗ್ಯಚಿತ್ರ ಆರಂಭಿಸಿದ ಅವರು ಒಬ್ಬ ಸೃಜನಶೀಲ ಚಿತ್ರಕಾರ ಹಾಗೂ ಲೇಖಕರಾಗಿದ್ದರೆಂದು ಸಭಾಪತಿ ಶ್ರೀ ಡಿ.ಹೆಚ್. ಶಂಕರಮೂರ್ತಿ ಅವರು   ಸಂತಾಪ ಸೂಚಿಸಿದರು.
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಸಭಾನಾಯಕ   ಎಸ್. ಆರ್. ಪಾಟೀಲ್, ವಿರೋಧ ಪಕ್ಷದ ನಾಯಕ   ಕೆ.ಎಸ್. ಈಶ್ವರಪ್ಪ ಅವರು ಸಂತಾಪ ಸೂಚಿಸಿದರು.   ಮೃತರ ಗೌರವಾರ್ಥ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.  ವಿಧಾನ ಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣದ ಪ್ರತಿಯನ್ನು ಕಾರ್ಯದರ್ಶಿ ಶ್ರೀಶ್ ಅವರು ವಿಧಾನ ಪರಿಷತ್ತಿನಲ್ಲಿ ಮಂಡಿಸಿದರು.
Please follow and like us:
error