fbpx

ವಾರಂಟಿ ಅವಧಿಯಲ್ಲಿ ವಾಹನದ ಬಿಡಿಭಾಗಕ್ಕೆ ಹಣ ವಸೂಲಿ ಸೇವಾ ನ್ಯೂನತೆ

 ವಾರಂಟಿ ಅವಧಿಯಲ್ಲಿ ವಾಹನದ ಬಿಡಿ ಭಾಗವನ್ನು ಉಚಿತವಾಗಿ ಬದಲಾಯಿಸದೆ, ಹಣ ಪಡೆದು, ಪೂರೈಕೆ ಮಾಡಿದ್ದು ಸೇವಾ ನ್ಯೂನತೆ ಎಂದು ಪರಿಗಣಿಸಿ ಕೊಪ್ಪಳ ಜಿಲ್ಲಾ ಗ್ರಾಹಕರ ವೇದಿಕೆ ತೀರ್ಪು ನೀಡಿದೆ.
  ಗಂಗಾವತಿ ತಾಲೂಕು ಲಕ್ಷ್ಮಿ ಕ್ಯಾಂಪ್‌ನ ಪಂಚಾಕ್ಷರಯ್ಯ ಎಂಬುವವರು ಗಂಗಾವತಿಯ ಭೂಮಿಕಾ ಮೋಟಾರ‍್ಸ್ ಅವರಿಂದ ಮಹೇಂದ್ರ ದ್ವಿ-ಚಕ್ರ ವಾಹನವನ್ನು ಕಳೆದ ೨೦೧೨ ರ ಏಪ್ರಿಲ್ ೦೨ ರಂದು ಖರೀದಿಸಿದ್ದರು.  ನಂತರ ವಾಹನದಲ್ಲಿ ತೊಂದರೆ ಕಾಣಿಸಿಕೊಂಡಿದ್ದರಿಂದ ದುರಸ್ತಿಗೆ ಬಿಟ್ಟಾಗ ವಾಹನದ ಫ್ಯೂಯಲ್ ಪಂಪ್ ಕೆಟ್ಟು ಹೋಗಿದ್ದನ್ನು ಬದಲಾಯಿಸಿ, ಹೊಸ ಪಂಪ್ ಅನ್ನು ಅಳವಡಿಸಿ ೧೫೫೦ ರೂ. ಬಿಲ್ ಪಡೆದುಕೊಂಡಿದ್ದರು.  ವಾರಂಟಿ ಅವಧಿಯಲ್ಲಿದ್ದರೂ ಹಣ ಪಡೆದು ಬಿಡಿಭಾಗ ಪೂರೈಸಿದ್ದಕ್ಕೆ ಆಕ್ಷೇಪಿಸಿ, ಬಿಲ್ ಮೊತ್ತ ಹಿಂದಕ್ಕೆ ನೀಡುವಂತೆ ಕಂಪನಿಗೆ ದೂರು ಸಲ್ಲಿಸಿದಾಗ, ಹಣ ವಾಪಸ್ ನೀಡುವುದಾಗಿ ತಿಳಿಸಿದರು.  ಆದರೆ ಹಲವು ದಿನಗಳಾದರೂ, ಬಿಲ್ ಮೊತ್ತ ವಾಪಸ್ ನೀಡದೇ ಇದ್ದ ಕಾರಣ, ಪಂಚಾಕ್ಷರಯ್ಯ ಅವರು ಬಿಲ್ ಮೊತ್ತ ವಾಪಸ್ ನೀಡದೆ ಕಂಪನಿಯು ಸೇವಾ ನ್ಯೂನತೆ ಎಸಗಿದೆ. ಇದಕ್ಕಾಗಿ ಬಿಲ್ ಮೊತ್ತವೂ ಸೇರಿದಂತೆ ಮಾನಸಿಕ ಮತ್ತು ದೈಹಿಕ ಹಿಂಸೆಗೆ ಪರಿಹಾರವಾಗಿ ೨೦ ಸಾವಿರ, ಸೇವಾ ನ್ಯೂನತೆಗೆ ೨೦ ಸಾವಿರ, ವ್ಯಾಪಾರದ ಅನುಚಿತ ವರ್ತನೆಗೆ ೨೦ ಸಾವಿರ, ಪ್ರಕರಣದ ವೆಚ್ಚಕ್ಕೆ ೫ ಸಾವಿರ ಸೇರಿದಂತೆ ಒಟ್ಟು ೬೬೫೦೦ ಗಳನ್ನು ಕೊಡಿಸುವಂತೆ ಗ್ರಾಹಕರ ವೇದಿಕೆಯ ಮೊರೆ ಹೋಗಿದ್ದರು.  ಈ ಕುರಿತಂತೆ ಗ್ರಾಹಕರ ವೇದಿಕೆ ಸಮನ್ಸ್ ಜಾರಿಗೊಳಿಸಿದರೂ, ಭೂಮಿಕಾ ಮೋಟಾರ‍್ಸ್ ನವರು ವೇದಿಕೆಯ ಮುಂದೆ ಹಾಜರಾಗಿರಲಿಲ್ಲ.
  ಪ್ರಕರಣದ ವಿಚಾರಣೆ ನಡೆಸಿದ ವೇದಿಕೆ ಅಧ್ಯಕ್ಷ ಕೆ.ವಿ. ಕೃಷ್ಣಮೂರ್ತಿ ಹಾಗೂ ಸದಸ್ಯ ಆರ್. ಬಂಡಾಚಾರ್ ಅವರು, ವಾಹನವು ವಾರಂಟಿ ಅವಧಿಯೊಳಗೆ ದುರಸ್ತಿಗೆ ಬಂದಿದ್ದರೂ, ಬಿಡಿ ಭಾಗವನ್ನು ಉಚಿತವಾಗಿ ಬದಲಾಯಿಸದೇ, ೧೫೫೦ ರೂ. ಬಿಲ್ ಪಡೆದಿರುವುದು ಸೇವಾ ನ್ಯೂನತೆ ಎಂಬುದಾಗಿ ಪರಿಗಣಿಸಿ, ಬಿಲ್ ಮೊತ್ತ ೧೫೫೦, ಸೇವಾ ನ್ಯೂನತೆಗೆ ಪರಿಹಾರವಾಗಿ ರೂ. ೩೦೦೦, ಪ್ರಕರಣದ ಖರ್ಚು ರೂ. ೨೦೦೦ ಮತ್ತು ಪ್ರಯಾಣದ ವೆಚ್ಚ ರೂ. ೧೦೦೦ ಸೇರಿದಂತೆ ಒಟ್ಟು ೭೫೫೦ ರೂ. ಗಳನ್ನು ಮೂರು ತಿಂಗಳ ಒಳಗಾಗಿ ಪಾವತಿಸುವಂತೆ ಆದೇಶಿಸಿದ್ದಾರೆ.
Please follow and like us:
error

Leave a Reply

error: Content is protected !!