You are here
Home > Koppal News > ಅಮರ್ ದೀಪ್ ಪಿ.ಎಸ್ – ಕವಿತೆಗಳು

ಅಮರ್ ದೀಪ್ ಪಿ.ಎಸ್ – ಕವಿತೆಗಳು

ಎದೆ ಕುಲುಮೆಯಾದರೇ
ಮುಖ ಅಡವಿಟ್ಟುಕೊಂಡ
ಭಾವನೆಗಳ ಮೂಟೆ
ಅರ್ಥ ನೀಡ ಹೊರಟ 
ಅಕ್ಷರಗಳ ಬಿಸಿ
ಕವನವಾಗಿ ರುಚಿಸುವುದು
ಖಾಲಿ ಪುಟದ ತಟ್ಟೆಯಲಿ 
ಸುಮ್ಮನೆ ಹಾಯಾದ ಓದಿನಲ್ಲಿ …
*****

ವಿಧೇಯಕವಾಗಿದೆ;
ಇನ್ನು ಕಂಡಲ್ಲಿ, ರಸ್ತೆ ಬದಿ
ಉಗುಳು, ಉಚ್ಚೆ
ಕಸ ಚೆಲ್ಲುವಂತಿಲ್ಲ.
ಕೇಕೆ ಹಾಕುತ್ತಿವೆ;
ಊರ ಹೊರಗಿನ ಬಯಲು
ಸ್ವಚ್ಚ ಕಾಣದ ಶೌಚ,
ಕುಪ್ಪೆ ಕಸ ಹೊತ್ತ ಗಟಾರ, ತಿಪ್ಪೆ
ಅವಕ್ಕಿನ್ನು ಹೊರೆ ಕಮ್ಮಿ.
ಬೊಬ್ಬೆಯಿಡುತ್ತಿವೆ;
ನಾಯಿ, ಹಂದಿ ಸೊಳ್ಳೆ
ಸಂತತಿ ತಮ್ಮ
ಉಪವಾಸದ ದಿನಗಳ ನೆನೆದು…..
ಹಿಂದೆ ತಮ್ಮ ಬಂಧು
ಸತ್ತು ನಾರುತ್ತಿದ್ದರೂ
ಎತ್ತುವವರಿಲ್ಲದೇ
ಬೀದಿ ಮನೆಗಳು
ಸಾಂಭ್ರಾಣಿ ತುಂಬಿ
ಬಾಗಿಲಿಕ್ಕಿಕೊಂಡ ಬಗೆ ಬಗೆದು …
ಹೊಟ್ಟೆ ಮೇಲೊಡೆವ 
ಯೋಜನೆ ಖಂಡಿಸಿ
ಬೀದಿ ಬೀದಿಗುಂಟ
ಬಂಧುಗಳ ಸೆಳೆದು
ಪ್ರತಿಭಟನೆಗಿಳಿದಿವೆಯೆಲ್ಲಾ 
ಬೌ, ಗುರ್, ಗುಯ್ ಎಂದು
“ವಿಧಾನಸೌಧ ಚಲೋ ” ಇಂದು …..
******
ಬಳೆ ಸಾಲು ಸದ್ದು
ಹೆಂಗಸಾಗುವ ಮುನ್ನ
ಹೆಣ್ಣಿಗಿರುವ
ಚೂರು ಆಸೆ
ಮತ್ತು 
ಬವಣೆಯರಿಯದ
ಎಳೆ ಮನಸಿನ 
ಮುಗ್ಧ ಕೌತುಕ …. 
*****
ಅವಳ ಒಲವನೂರಿಂದ
ನನ್ನ ಉರಿವೆದೆಗೆ
ಒಲುಮೆಯಿಂದಲೇ ಬಾಗಿ ನಿಂತ
ಪ್ರೀತಿ ಸೇತುವೆ … ನಡುವೆ
ಬಂದೆಯೇತಕೆ ಜೀವ ಜಲವೇ
ದೂರದಿಂದಲೇ ಬಣ್ಣದ ಬೆರಳಾಡಿಸಿದ ಡೊಂಕವೇ
ಕೊಂಚ ಮಂಕಾಗು ಕಾಮನಬಿಲ್ಲೇ
ತಪ್ಪಿದರೆ ಅವಳು ಭೋರ್ಗರೆದಾಳು …. ಮಳೆಯಂತೆ …… 
*****
ಮುಳುಗುವಾಗಿನ
ತಂಪು ಸಂಜೆ
ಗಳಿಸಿ ಹೊರಟ ದಣಿದ
ಜೀವಗಳ ಉಪ್ಪುಗಂಜಿ
ಬೀಳ್ಕೊಟ್ಟ ಕಪ್ಪು
ಮೋಡಗಳ ಸಾಲು
ಎತ್ತುಗಳ ಕತ್ತಿನ ಭಾರ
ಇಳಿಸಿದ ಬಂಡಿಯ ಹೆಗಲು
ಬೆವರಿಳಿಸಿದ ದೇಹಕೆ
ರುಚಿ ನೀಡಿದ ಬುತ್ತಿಯ ಬಟ್ಟಲು
ಎಲ್ಲಕ್ಕೂ ಸಂತೈಸಿದೆ, ತಿಳಿಹೇಳಿದೆ
ಕೆಂಪು ರಂಗು ತಾನು ಮತ್ತೆ ಬರುವ,ಇರುವ ಹಿತ್ತಲು …..
******
ಸುದ್ದಿ;
ನೌಕರರ
ಚುನಾವಣೆ
ರಾಜಕಾರಣವನ್ನೂ 
ಮೀರಿಸುತ್ತಿವೆ
ಕಾರಣ ;
“ಮಾದರಿ”
ಸರ(ಅಧಿ)ಕಾರ.
******
ಮೂರ್ತಿ ಒಕ್ಕಲೆಬ್ಬಿಸಿದ್ದ ಗುಡಿಯೊಳಗೆ
ಗರ್ಭ ಫಲಿತವಾದ ಪ್ರಕ್ರಿಯೆ
ಪುರಾಣ ಪಠಣಗೈವ ಹಜಾರೆಯೊಳು
ಪಟಪಟಿಸಿ ಗರಿ ಒಗೆವ ಪುಂಡ ಕೈಗಳು
ಮಡಿವಂತ ಮಂದಿ ಕರೆದರು;
ಗುಡಿ ಪಾಳು ಬಿದ್ದಿದೆ,
ಹೈಕಳು ಹಾಳಾಗಿ ಹೋಗಿವೆ ….. 
ಕುಡುಕ ರಾಮನ ಗಾಯನ ತೊದಲಿಗೆ 
ಸಿಡುಕ ಬಸ್ಯಾನ ಬಡಬಡಿಕೆಗೆ
ಸಾವಿನವರೆಗೂ ಸ್ನಾನ ಕಾಣದ
ಕೆರಕಪ್ಪನ ಗಬ್ಬು ಹಾಸಿಗೆಗೆ
ಮೂಕವಾಗಿತ್ತು ದೇಗುಲ
ಬೆಳಗಾಗೆದ್ದು ಕೇಳದ ಭಕ್ತಿ ಗೀತೆಗೆ
ಬೀದಿ ನಲ್ಲಿ ಬದಿ ಪಿಸುಗುಡುವ ಹೆಂಗಸರ ಮಾತಿಗೆ …. 
ಇದ್ದಕ್ಕಿದ್ದಂತೆ ಓಣಿಯ ಜನಕ್ಕೆ
ಜ್ಞಾನೋದಯವಾದಂತೆ…….
ನೋಡ ನೋಡುತ್ತಲೇ
ಕುಡುಕ, ಸಿಡುಕ, ಕೆರಕನ ಗದರಿ
ಚೆದುರಿ, ಚೆಂದನೆಯ
“ಲಿಂಗ” ವೊಂದನ್ನಿಟ್ಟು ಪ್ರತಿಷ್ಠಾನ ವೆಂದರು ……
ದೇಗುಲವೀಗ ಅಲ್ಲಿ ಸಂತೃಪ್ತ
ಕತ್ತಲಲ್ಲಿ ಬೀಗದ ಹಿಂದಿನ ದೇವರು
ಒತ್ತಾರೆ ಎದ್ದು ತೊಯ್ದ ಬೆನ್ನಿನ
ಜಾರಿ ಬಿದ್ದ ಜಡೆಯ ಹೊತ್ತು
ಬರುವ ಭಕ್ತಿ ನೀರೆಯರ ಕಂಡು
ವಿಭೂತಿಧಾರಿಗಳ ಭಯಭೀತಿ ದಂಡು ……..
******
ಸುಖದ ಸೆರಗನ್ನು
ಬೆರಳಂಚಿನಲ್ಲೇ
ಹಿಡಿದು
ಸಂಭ್ರಮಿಸುವ
ಬದುಕು
ದುಃಖದ
ಕ್ಷಣಗಳ
ಮೂಟೆಯನ್ನು
ನೆರಿಗೆಯೊಳಗೆ
ಬಚ್ಚಿಟ್ಟುಕೊಂಡಿದೆ.
****** 
ಅಮರ್ ದೀಪ್ ಪಿ.ಎಸ್
ಕೊಪ್ಪಳ

Leave a Reply

Top