ಕನ್ನಡ ಶಾಲೆ ಮುಚ್ಚುವುದಿಲ್ಲ

ಬೆಂಗಳೂರು, ಡಿ.16: ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚುವ ಇರಾದೆ ಸರಕಾರಕ್ಕಿಲ್ಲ. ಈಗಾಗಲೇ ಇದನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ತಾನು ಅದನ್ನೇ ಪುನರುಚ್ಚರಿಸುತ್ತೇನೆ. ಈ ವಿಚಾರ ಹೈಕೋರ್ಟ್‌ನಲ್ಲಿ ಇರು ವುದರಿಂದ ಅದರ ತೀರ್ಮಾನಕ್ಕೆ ಸರಕಾರ ಬದ್ಧ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಎಸ್.ಆರ್. ಪಾಟೀಲ್‌ರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶಿಕ್ಷಣ ತಮ್ಮ ಸರಕಾರದ ಆದ್ಯತಾ ವಲಯ. ರಾಜ್ಯದಲ್ಲಿ 50 ಸಾವಿರ ಸರಕಾರಿ ಶಾಲೆಗಳಿದ್ದು, ಅವುಗಳಲ್ಲಿ ಶೇ.80 ರಷ್ಟು ಮಕ್ಕಳು ಕಲಿಯುತ್ತಿದ್ದಾರೆ. ಹಾಗಾಗಿ ಗುಣಮಟ್ಟದ ಶಿಕ್ಷಣ ನೀಡುವ ಮತ್ತು ಮೂಲಭೂತ ಸೌಕರ್ಯ ಗಳನ್ನು ಒದಗಿಸುವ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು. 2011-12ನೆ ಸಾಲಿನಲ್ಲಿ ಒಟ್ಟು 555 ಶಾಲೆಗಳು 5 ಕ್ಕಿಂತ ಕಡಿಮೆ ದಾಖಲಾತಿ ಹೊಂದಿರುವ ಪ್ರಾಥಮಿಕ ಶಾಲೆಗಳಿವೆ.
ಅದರಲ್ಲಿ 9 ಹಿರಿಯ ಪ್ರಾಥಮಿಕ ಹಾಗೂ 546 ಕಿರಿಯ ಪ್ರಾಥಮಿಕ ಶಾಲೆಗಳಿವೆ. ಗುಣಾತ್ಮಕ ಶಿಕ್ಷಣ ನೀಡುವ ಮತ್ತು ಸಂಪನ್ಮೂಲಗಳ ಸಮರ್ಪಕ ಬಳಕೆಯ ದೃಷ್ಟಿಯಿಂದ ಈ ಶಾಲೆಗಳನ್ನು 3 ಕಿ.ಮಿ. ವ್ಯಾಪ್ತಿಯ ಸರಕಾರಿ ಶಾಲೆಗಳ ವಿಲೀನಗೊಳಿಸಲಾಗುವುದು. ವಿಲೀನಗೊಳಿಸಿದ ಶಾಲೆಗಳಿಗೆ ಹೋಗಲು ಪ್ರತಿ ವಿದ್ಯಾರ್ಥಿಗೆ ಮಾಸಿಕ 300 ರೂ. ಸಾರಿಗೆ ಭತ್ತೆ ನೀಡಲಾಗುತ್ತಿದೆ. ಅಲ್ಲದೇ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.
Please follow and like us:
error