ಅನ್ನಭಾಗ್ಯ ಮೇ.೦೧ ರಿಂದ ಬಿಪಿಎಲ್ ಪಡಿತರದಾರರಿಗೆ ಉಚಿತ ಅಕ್ಕಿ-ಗೋಧಿ.

ಕೊಪ್ಪಳ ಏ. ೨೯ (ಕರ್ನಾಟಕ ವಾರ್ತೆ): ಅನ್ನಭಾಗ್ಯ ಯೋಜನೆಯಡಿ ಎಲ್ಲ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ ಉಚಿತವಾಗಿ ಅಕ್ಕಿ-ಗೋಧಿ ವಿತರಿಸುವ ಯೋಜನೆ ಮೇ. ೦೧ ರಿಂದ ಜಾರಿಗೆ ಬರಲಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ತಿಳಿಸಿದ್ದಾರೆ. ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯನ್ನು ೨೦೧೩ನೇ ಜುಲೈ ೧೦ ನೇ ತಾರೀಖಿನಿಂದ ಜಾರಿಗೆ ತಂದು ಅಂತ್ಯೋದಯ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಬಡ ಕುಟುಂಬಗಳಿಗೆ ಅತೀ ಕಡಿಮೆ ದರ ಅಂದರೆ ೧/- ರೂಪಾಯಿಗೆ ಒಂದು ಕೆ.ಜಿ ಅಕ್ಕಿ, ಗೋಧಿಯನ್ನು ಗರಿಷ್ಟ ೩೦ ಕೆ.ಜಿ ವರೆಗೆ ಆಹಾರಧಾನ್ಯ ವಿತರಿಸಲಾಗುತಿತ್ತು.  ಇದೀಗ ರಾಜ್ಯ ಸರ್ಕಾರವು ೨೦೧೫-೧೬ ನೇ ವರ್ಷದ ಆಯವ್ಯಯದಲ್ಲಿ ಘೋಷಿಸಿರುವಂತೆ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ ಪಡಿತರ ಚೀಟಿಯಲ್ಲಿರುವ ಸದಸ್ಯರ ಸಂಖ್ಯೆಗನುಗುಣವಾಗಿ ಯಾವುದೇ ಪರಿಮಿತಿ ಇಲ್ಲದೆ ಪ್ರತಿಯೊಬ್ಬ ಸದಸ್ಯನಿಗೆ ಉಚಿತವಾಗಿ ೫ ಕೆ.ಜಿ ಆಹಾರಧಾನ್ಯ (ಅಕ್ಕಿ ೩ ಕೆ.ಜಿ + ಗೋಧಿ ೨ ಕೆ.ಜಿ) ಗಳನ್ನು ನೀಡುವ ಯೋಜನೆ ಕೊಪ್ಪಳ ಜಿಲ್ಲೆಯಲ್ಲಿ ಮೇ. ೦೧ ರಿಂದ ಜಾರಿಗೆ ಬರಲಿದೆ.  ಅಲ್ಲದೆ ಪ್ರತಿ ಪಡಿತರ ಕಾರ್ಡಿಗೆ  ರೂ: ೨/- ದರದಲ್ಲಿ ಅಯೋಡಿನ್‌ಯುಕ್ತ ಉಪ್ಪು, ಹಾಗೂ ರೂ: ೨೫/- ರಂತೆ ೧ ಲೀಟರ್ ತಾಳೆ ಎಣ್ಣೆಯನ್ನು ವಿತರಿಸುವ ಯೋಜನೆಯೂ ಸಹ ಮೇ. ೦೧ ರಿಂದಲೇ ಜಾರಿಗೆ ಬರಲಿದೆ.
      ಎಪಿಎಲ್ ಪಡಿತರ ಚೀಟಿದಾರರಿಗೆ, ರಿಯಾಯಿತಿ ದರದಲ್ಲಿ ಆಹಾರಧಾನ್ಯ ನೀಡುವ ಯೋಜನೆ ಜೂನ್ ತಿಂಗಳಿನಿಂದ ಜಾರಿಗೆ ಬರಲಿದ್ದು, ಪ್ರತಿ ಕೆ.ಜಿ ಅಕ್ಕಿಗೆ ರೂ: ೧೫/- ರಂತೆ ಮತ್ತು ಗೋಧಿಗೆ ರೂ: ೧೦/- ರಂತೆ, ಏಕ ಸದಸ್ಯ ಪಡಿತರ ಚೀಟಿದಾರರಿಗೆ ೫ ಕೆ.ಜಿ ( ೩ ಕೆ.ಜಿ ಅಕ್ಕಿ ಮತ್ತು ೨ ಕೆ.ಜಿ ಗೋಧಿ) ಒಬ್ಬರಿಗಿಂತ ಹೆಚ್ಚಿನ ಸದಸ್ಯರಿಗೆ ಎಪಿಎಲ್ ಕಾರ್ಡುದಾರರಿಗೆ ೫ ಕೆ.ಜಿ ಅಕ್ಕಿ ಹಾಗೂ ೫ ಕೆ.ಜಿ ಗೋಧಿ ಆಹಾರಧಾನ್ಯವನ್ನು ೨೦೧೫ ರ ಜೂನ್ ತಿಂಗಳಿನಿಂದ ವಿತರಿಸಲಾಗುವುದು. ಜಿಲ್ಲೆಯ ಎಲ್ಲ ಪಡಿತರ ಚೀಟಿ ಫಲಾನುಭವಿಗಳು ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯ ಸದುಪಯೋಗಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

Leave a Reply