ಬಾಲ್ಯವಿವಾಹ ಹಾಗೂ ಬಾಲಕಾರ್ಮಿಕ ಪದ್ಧತಿ ತಡೆಗೆ ಸರ್ಕಾರ ಬದ್ಧ – ಪಿ.ಟಿ. ಪರಮೇಶ್ವರ ನಾಯ್ಕ

ರಾಜ್ಯದಲ್ಲಿ ಇನ್ನೂ ಅಸ್ತಿತ್ವದಲ್ಲಿರುವ ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ರಾಜ್ಯ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರು ಹೇಳಿದರು.
  ಮಕ್ಕಳ ಹಕ್ಕುಗಳ ಒಡಂಬಡಿಕೆಯ ೨೫ನೇ ವರ್ಷಾಚರಣೆ ಅಂಗವಾಗಿ ಯುನಿಸೆಫ್, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಪೊಲೀಸ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಸಹಿ ಆಂದೋಲನ ಹಾಗೂ ಬಾಲಿಕಾ ಸಂಘಗಳ ಸಮಾವೇಶದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
 ರಾಜ್ಯದಲ್ಲಿ ಬೇರೂರಿರುವ ಬಾಲಕಾರ್ಮಿಕ ಪದ್ಧತಿ ಮತ್ತು ಬಾಲ್ಯ ವಿವಾಹ ಪಿಡುಗನ್ನು ನಿರ್ಮೂಲನೆಗೊಳಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇದರ ನಿರ್ಮೂಲನೆಗೆ  ಸರ್ಕಾರ ಬದ್ದವಾಗಿದೆ.  ಎಲ್ಲ ಮಕ್ಕಳು ತಮಗೆ ಕಾನೂನಿನಡಿ ಲಭ್ಯವಿರುವ ಹಕ್ಕುಗಳನ್ನು ಅನುಭವಿಸುವಂತಾಗಬೇಕು. ಬಾಲ ಕಾರ್ಮಿಕ ಪದ್ದತಿಯ ತಡೆಗಾಗಿ ಸಹಾಯವಾಣಿ ೧೦೯೮ ಅನ್ನು ಈಗಾಗಲೆ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ. ಬಾಲ ಕಾರ್ಮಿಕರ ಪುನರ್ವಸತಿಯನ್ನು ಜಿಲ್ಲಾ ಮಟ್ಟದಲ್ಲಿ ಬಾಲಕಾರ್ಮಿಕ ಪುನರ್ವಸತಿ ಯೋಜನೆಯ ಮೂಲಕ ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದರು. 
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಕಾಂತ ಬಬಲಾದಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳ ಹಕ್ಕುಗಳ ಒಡಂಬಡಿಕೆ ಜಾರಿಯಾಗಿ ೨೫ ವರ್ಷ ಕಳೆದಿದೆ. ಮಕ್ಕಳ ಮೇಲಿನ ಲೈಂಗಿಕ ಪ್ರಕರಣಗಳು ಕಂಡುಬಂದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನೆರವು ಪಡೆಯಬಹುದು. ಮಕ್ಕಳ ರಕ್ಷಣೆಗಾಗಿ ಎಲ್ಲರೂ ಸಂಘಟಿತರಾಗಬೇಕೆಂದು ಕರೆ ನೀಡಿದರು.
ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಮಾತನಾಡಿ, ೧೮ ವರ್ಷದೊಳಗಿನ ಮಕ್ಕಳನ್ನು ಬಾಲಕಾರ್ಮಿಕರಾಗಿ ನೇಮಿಸಿಕೊಳ್ಳಬಾರದು. ಬಾಲ್ಯ ವಿವಾಹವನ್ನು ಸಮಾಜದಿಂದ ಕಿತ್ತೊಗೆಯಲು ಎಲ್ಲರ ಸಹಕಾರ ಅಗತ್ಯ. ಜಿಲ್ಲಾಡಳಿತವು ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಉದಪುಡಿ ಮಾತನಾಡಿ, ಮಕ್ಕಳ ಹಕ್ಕುಗಳ ಉಲ್ಲಂಘನೆ ಸಮಾಜದ ಅಭಿವೃದ್ದಿಗೆ ಮಾರಕ. ಎಲ್ಲ ಮಕ್ಕಳು ಸಂತೋಷದಿಂದ ಬಾಲ್ಯವನ್ನು ಅನುಭವಿಸುವಂತಾಗಬೇಕು ಎಂದರು.
ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಜಿಲ್ಲಾ ಪಂಚಾಯತ್ ಅದ್ಯಕ್ಷ ಅಮರೇಶ ಕುಳಗಿ, ಜಿಲ್ಲಾ ಪಂಚಾಯತ್‌ನ ಸದಸ್ಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ವಸಂತಪ್ರೇಮಾ, ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರೋ. ಶೋಭಾದೇವಿ ಅವರು ಲಿಂಗತ್ವದ ಬಗ್ಗೆ,  ಶಿವರಾಮ್ – ಬಾಲಿಕಾ ಸಂಘದ ಬಗ್ಗೆ, ಸೋಮಶೇಖರ-ಮಕ್ಕಳ ಹಕ್ಕುಗಳು ಹಾಗೂ ಬಾಲನ್ಯಾಯ ಕಾಯ್ದೆಯ ಬಗ್ಗೆ, ಹರೀಶ್ ಜೋಗಿ- ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆಯ ಬಗ್ಗೆ ಉಪನ್ಯಾಸ ನೀಡಿದರು.  ಕೊಪ್ಪಳ ತಾಲ್ಲೂಕಿನ ವಿವಿಧ ಗ್ರಾಮದ ಬಾಲಿಕ ಸಂಘದ ಸದಸ್ಯರು, ಭಾಂದವಿ ಮತ್ತು ಶಿಕ್ಷಣ ಕೇಂದ್ರದ ಮಕ್ಕಳು, ಅಂಗನವಾಡಿ ಕಾರ್ಯಕರ್ತೆಯರು, ಚೈಲ್ಡ್‌ಲೈನ್ ಸಿಬ್ಬಂದಿ, ಡಿಸಿಪಿಓನ ಸಿಬ್ಬಂದಿ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು, ಎಸ್‌ಜೆಪಿಯುನ ಸದಸ್ಯರು ಹಾಗೂ ಇತರೇ ಇಲಾಖೆಯ ಸಿಬ್ಬಂದಿಯವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Leave a Reply