ಹುಸಿ ದೇಶಭಕ್ತರ ಹುನ್ನಾರ ವಿಫಲಗೊಳಿಸಬೇಕಿದೆ- ರಾಜಾಬಕ್ಷಿ

ಕೊಪ್ಪಳ : ದೇಶಭಕ್ತಿಯ ಹೆಸರಿನಲ್ಲಿ ಮುಗ್ದ ಜನರನ್ನು ದಾರಿತಪ್ಪಿಸುತ್ತಿರುವವರ ಹುನ್ನಾರವನ್ನು ವಿಫಲಗೊಳಿಸಬೇಕು. ಆ ಮೂಲಕ ನಿಜವಾದ ಸ್ವಾತಂತ್ರ್ಯ ಹೋರಾಟಗಾರರಿಗೆ , ಹುತಾತ್ಮರಿಗೆ ಗೌರವ ನೀಡಬೇಕು. ಕೆಲ ಸಂಘಟನೆಗಳು ಪ್ರೇಮಿಗಳ ದಿನಾಚರಣೆಯಂದು ಭಗತ್ ಸಿಂಗ್ ಹುತಾತ್ಮದಿನ ಎಂದು ಸುಳ್ಳು ಹೇಳುವ ಮೂಲಕ ದಿನಾಚರಣೆಯನ್ನು ಆಚರಿಸಲು ಕರೆ ನೀಡಿದ್ದವು. ನಿಜವಾಗಿ ದೇಶಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಿಗೆ ಅವರು ಗೌರವ ಸಲ್ಲಿಸಲು ಬಯಸಿದ್ದರೆ ಇಂದು ಗೌರವ ಸಲ್ಲಿಸಬೇಕಿತ್ತು. ಆದರೆ ಆ ಹುಸಿ,ಡೊಂಗಿ ದೇಶಭಕ್ತರು  ಇಂದು ನಾಪತ್ತೆಯಾಗಿದ್ದಾರೆ ಎಂದು ಪಿಯುಸಿಎಸ್ ನ ಸಂಘಟಕ ರಾಜಾಬಕ್ಷಿ.ಎಚ್.ವಿ. ಹೇಳಿದರು. ಅವರು ಹುತಾತ್ಮ ದಿನಾಚರಣೆಯ ಅಂಗವಾಗಿ ಪಿಯುಸಿಎಲ್, ಪ್ರಗತಿಪರ ಸಂಘಟನೆಗಳು,ಕೋಮು ಸೌಹಾರ್ಧ ವೇದಿಕೆ ಇನ್ನಿತರ ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ’”ಆಜಾದಿ ಮಾರ್ಚ”ಕಾರ‍್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಇಂದು ನಮ್ಮ ದೇಶದೊಳಗೆ ಆಜಾದಿ ಬೇಕಾಗಿದೆ ಅಸ್ಪೃಶ್ಯತೆಯಿಂದ, ಕೋಮವಾದದಿಂದ ಮತ್ತು ಭಯೋತ್ಪಾದನೆಯಿಂದ, ಹುಸಿ ದೇಶಭಕ್ತರಿಂದ. ಈ ನಿಟ್ಟಿನಲ್ಲಿ ಇಂದು  ದೇಶಪ್ರೇಮಿಗಳ ಸಂಘಟನೆಯಿಂದ ಕ್ಯಾಂಡಲ್ ಮಾರ್ಚ ಹಮ್ಮಿಕೊಳ್ಳಲಾಗಿದೆ ಎಂದರು. ಇದಕ್ಕೂ ಮೊದಲು ಸಾಹಿತ್ಯ ಭವನದಿಂದ ಅಶೋಕ ಸರ್ಕಲ್ ತನ  ಕ್ಯಾಂಡಲ್ ಮಾರ್ಚ ಕಾರ‍್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಮಕ್ಕಳು,ವಿದ್ಯಾರ್ಥಿಗಳು, ಶಿಕ್ಷಕರು, ಹೋರಾಟಗಾರರು ಭಾಗವಹಿಸಿದ್ದರು. ಭಗತ್ ಸಿಂಗ್, ರಾಜಗುರು, ಸುಖ್ದೇವ್ ರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾರ‍್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಪತ್ರಕರ್ತ, ಪಿಯುಸಿಎಲ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿರಾಜ್ ಬಿಸರಳ್ಳಿ –  ಸುಳ್ಳು ದೇಶಪ್ರೇಮ, ಹುಸಿ ದೇಶಭಕ್ತಿಯ ನಾಟಕವಾಡುತ್ತಿರುವ ಸಂಘಟನೆಗಳು ಸುಳ್ಳು ಇತಿಹಾಸ ಸೃಷ್ಟಿ ಮಾಡುತ್ತಿವೆ. ನಿಜವಾದ ಇತಿಹಾಸದ ಅರಿವು ಇಲ್ಲದಿರುವುದರಿಂದ ಸತ್ಯವನ್ನು ಹೇಳುವುದು ಕಷ್ಟಕರವಾಗಿರುವ ಪರಿಸ್ಥಿತಿಯಲ್ಲಿ ನಾವು ಬದುಕುತ್ತಿದ್ದೆವೆ. ನಿಜವಾದ ದೇಶಭಕ್ತರನ್ನು, ಹೋರಾಟಗಾರರನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕೆಂಪು ಕರಪತ್ರ ಎಂದೇ ಖ್ಯಾತವಾಗಿರುವ ಭಗತ್ ಸಿಂಗ್ ರ ಪತ್ರವನ್ನು ಓದಲಾಯಿತು. ಈ ಸಂದರ್ಭದಲ್ಲಿ ಮಾನ್ವಿ ಪಾಷಾ, ಮಂಜುನಾಥ ಗೊಂಡಬಾಳ, ಶಿವಾನಂದ ಹೊದ್ಲೂರ, ಡಬ್ಲೂಪಿಐನ ಆದಿಲ್ ಪಟೇಲ್, ಅಲೀಮುದ್ದೀನ್, ರವಿ ಕುರಗೊಡ, ಯೂಸುಪ್, ಕೊಪ್ಪಳ ಮುಸ್ಲಿಂ ಯೂಥ್ ಕಮೀಟಿ ಸದಸ್ಯರು,ಡಿಎಸ್‌ಎಸ್ ನ ರವಿ ದೊಡ್ಡಮನಿ, ಬಸವರಾಜ ಮಾಲಗಿತ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ‍್ಯಕ್ರಮಕ್ಕೆ ಆರ್.ಎಚ್.ಅತ್ತನೂರ ಸ್ವಾಗತಿಸಿದರೆ ಮಂಜುನಾಥ ಗೊಂಡಬಾಳ ವಂದನಾರ್ಪಣೆ ಮಾಡಿದರು.
Please follow and like us:
error