fbpx

ಅಕಾಲಿಕ ಮಳೆ : ತೋಟಗಾರಿಕೆ ರೈತರಿಗೆ ಸಲಹೆಗಳು

  ಇತ್ತೀಚೆಗೆ ಸುರಿದ ಅಕಾಲಿಕ ಮಳೆ ಹಾಗೂ ಶಿವರಾತ್ರಿ ಕಳೆದರೂ ಶುಷ್ಕ ಹವೆ ಹಾಗೂ ತಂಪಾದ ಹವೆಯಿಂದಾಗಿ ತೋಟಗಾರಿಕೆ ಬೆಳೆಗಳಲ್ಲಿ ಹೂವು/ಹೀಚು ಉದುರುವುದು, ಬೂದಿರೋಗ, ಬೂಜು ತುಪ್ಪಟ ರೋಗ ಹಾಗೂ ಚಿಬ್ಬು ರೋಗದಂತಹ ಹಾನಿಕಾರಕ ರೋಗಗಳಲ್ಲದೇ ರಸಹೀರುವ ಕೀಟಗಳ ಹಾವಳಿ   ಕಂಡುಬಂದಿದ್ದು, ಇದರ ನಿರ್ವಹಣೆಗೆ ತೋಟಗಾರಿಕೆ ಇಲಾಖೆ ರೈತರಿಗೆ ಸಲಹೆಗಳನ್ನು ನೀಡಿದೆ.
ಅಕಾಲಿಕ ಮಳೆಯಿಂದ ಮಾವು, ದ್ರಾಕ್ಷಿ, ಪಪ್ಪಾಯ ಹಾಗೂ ತರಕಾರಿ ಬೆಳೆಗಳಲ್ಲಿ ಬೂದಿರೋಗ ಮತ್ತು ರಸಹೀರುವ ಕೀಟಗಳು ನಿಯಂತ್ರಣ ಮೀರಿ ವ್ಯಾಪಿಸಿವೆ.  ಬಾಳೆಯಲ್ಲಿ ಎಲೆಚುಕ್ಕೆ ರೋಗ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ದಾಳಿಂಬೆಯಲ್ಲಿ ನುಸಿಯ ಜೊತೆಗೆ ದುಂಡಾಣು ರೋಗ ಮತ್ತು ಚಿಬ್ಬು ರೋಗವೂ ಕಾಣಿಸಿಕೊಂಡಿದೆ.
ಇತ್ತೀಚೆಗೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕ್ಷೇತ್ರಗಳಿಗೆ ಭೇಟಿ ನೀಡಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮತ್ತು ತಾಂತ್ರಿಕ ವಿಭಾಗದ ಅಧಿಕಾರಿಗಳು ರೈತರಿಗೆ ಉಪಯುಕ್ತ ಮಾಹಿತಿ ನೀಡುತ್ತಿದ್ದಾರೆ.
ಬೂದಿರೋಗ : ಎಲೆ, ದೇಟು, ಕಾಯಿಗಳ ಮೇಲೆ ಪೌಡರಿನಂತಹ ಹುಡಿ ಕಂಡುಬರುತ್ತದೆ. ಹೂಗಳು ಒಣಗಿ ಉದುರುತ್ತವೆ. ಮಾವು, ಕಲ್ಲಂಗಡಿ, ಮೆಣಸಿನಕಾಯಿ, ಪಪ್ಪಾಯ ಬೆಳೆಗಳಲ್ಲಿ ಈ ರೋಗದ ತೀವ್ರತೆ ಹೆಚ್ಚಾಗಿರುತ್ತದೆ. ಹತೋಟಿಗಾಗಿ: ಬೇಲೆಟಾನ್ ೧ ಗ್ರಾಂ. ಅಥವಾ ಹೆಕ್ಸಾಕೋನಾಜೋಲ್ ೧ ಮಿಲಿ, ಕ್ಯಾರಾಥೇನ್ ಅಥವಾ ಸಿಸ್ಥೆನ್ ಒಂದು ಗ್ರಾಂ. ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ರೋಗದ ಪರಿಣಾಮಕಾರಿ ಹತೋಟಿಗಾಗಿ ೧೦-೧೨ ದಿನಗಳಿಗೊಮ್ಮೆ ಬೇರೆ ಬೇರೆ ರಸಾಯನಿಕಗಳನ್ನು ಉಪಯೋಗಿಸಿ ಸಿಂಪರಣೆ  ಕೈಗೊಳ್ಳಬೇಕು. 
ಬೂದು ತುಪ್ಪಟ ರೋಗ : ತರಕಾರಿ, ದ್ರಾಕ್ಷಿಗಳಲ್ಲಿ ಈ ರೋಗದ ಹಾವಳಿ ಹೆಚ್ಚಾಗಿ ಕಂಡುಬರುತ್ತದೆ. ಎಲೆ ಮೇಲೆ ಹಳದಿ ಬಣ್ಣ ಕಂಡು ಬಂದು ಕೆಳಗಿನ ಭಾಗದಲ್ಲಿ ಹತ್ತಿಯಂತೆ ಶಿಲೀಂದ್ರದ ಬೆಳವಣಿಗೆ ಕಂಡು ಬರುತ್ತದೆ.   ಮುಂಜಾಗ್ರತಾ ಕ್ರಮವಾಗಿ ಅಲಿಯೇಟ- ೧ ಗ್ರಾಂ. ಒಂದು ಲೀಟರ್ ಬೆರೆಸಿ ನೀರಿಗೆ ಸಿಂಪಡಿಸಬೇಕು. ರೋಗದ ತೀವ್ರತೆ ಹೆಚ್ಚಾದಾಗ ಮೆಟಲಾಕ್ಸಿಲ್ ಎಮ್. ಜೆಡ್-೨ ಗ್ರಾಂ. ಅಥವಾ ಅಮೀಸ್ಟಾರ್-೧ ಗ್ರಾಂ. ಅಥವಾ ೩ ಗ್ರಾಂ. ಸೆಕ್ಟಿನ್ ಎನ್ನುವ ಶಿಲೀಂದ್ರ ನಾಶಕಗಳನ್ನು ಪ್ರತಿ ಬಾರಿಯೂ ಬದಲಾಯಿಸಿ ಸಿಂಪರಣೆ ಮಾಡಬೇಕು.  
ಚಿಬ್ಬು ರೋಗ: ಎಲೆ, ದೇಟು, ಕಾಂಡದ ಮೇಲೆ ಸಣ್ಣ ಚುಕ್ಕೆ ಕಂಡು ಬಂದು ನಂತರದ ದಿನಗಳಲ್ಲಿ ಈ ಚುಕ್ಕೆಗಳು ಒಂದನ್ನೊಂದು ಕೂಡಿಕೊಂಡು ಆಕಾರ ಇಲ್ಲದ ಕಂದು ಮಚ್ಚೆಗಳಾಗಿ ಮಾರ್ಪಡುತ್ತವೆ. ರೋಗದ ತೀವ್ರತೆ ಹೆಚ್ಚಾದಾಗ ಎಲೆಗಳ ಮೇಲೆ ರಂಧ್ರಗಳು ಕಾಣುತ್ತವೆ. ಮುಂಜಾಗ್ರತಾ ಕ್ರಮವಾಗಿ ಬಾವಿಸ್ಟಿನ್ ೧ ಗ್ರಾಂ. ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.  ರೋಗದ ತೀವ್ರತೆ ಹೆಚ್ಚಾದಲ್ಲಿ ರೋಕೋ ೧ ಗ್ರಾಂ. ಅಥವಾ ಕವಚ ೨ ಗ್ರಾಂ. ಒಂದು ಲೀ. ನೀರಿಗೆ ಬೆರೆಸಿ ಸಿಂಪಡಸಬೇಕು. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಅನೇಕ ಹೊಸ ಶಿಲೀಂದ್ರ ನಾಶಕಗಳು ಲಭ್ಯವಿದ್ದು, ತಜ್ಞರನ್ನು ಸಂಪರ್ಕಿಸಿ ಹತೋಟಿ ಕ್ರಮವನ್ನು ಕೈಗೊಳ್ಳಬೇಕು.  ಕುಂಬಳ ಜಾತಿ ಬಳ್ಳಿಗಳಿಗೆ ಅದರಲ್ಲೂ ಕಲ್ಲಂಗಡಿ ಬೆಳೆಗೆ ಗಂಧಕ ಮತ್ತು ಅದರ ಉತ್ಪನ್ನಗಳನ್ನು ಬಳಸಬಾರದು.
ದಾಳಿಂಬೆ:  ದಾಳಿಂಬೆಯಲ್ಲಿ ದುಂಡಾಣು ರೋಗದ ಹತೋಟಿಗಾಗಿ ಸಿ.ಓ.ಸಿ. ೩ ಗ್ರಾಂ. ಜೊತೆಗೆ ಸ್ಟ್ರೆಪ್ಟ್ರೋಸೈಕ್ಲಿನ್ ೦.೫೦ ಗ್ರಾಂ. ಒಂದು ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು. ೨-೩ ತಿಂಗಳಿಗೊಮ್ಮೆ ಬ್ಲೀಚಿಂಗ್ ಪೌಡರ್ ಒಣಗಿದ ಎಲೆ ಕಸ ಕಡ್ಡಿಗಳ ಮೇಲೆ ಉದುರಿಸಿ ನೀರು ಹಾಯಿಸಬಹುದು.
ಬಾಳೆ: ಬಾಳೆಯಲ್ಲಿ ಸಿಗಾಟೋಕ ರೋಗದ ಹತೋಟಿಗಾಗಿ ಬಾವಿಸ್ಟಿನ್ ಅಥವಾ ಟಿಲ್ಟ ಬಳಸಬಹುದು.
  ಇದೇ ಸಮಯದಲ್ಲಿ ರಸ ಹೀರುವ ಕೀಟಗಳ ಹಾವಳಿಯೂ ಕಂಡು ಬಂದಿರುತ್ತದೆ.  ಮಾವಿನಲ್ಲಿ ಜಿಗಿ ಹುಳು, ತರಕಾರಿಗಳಲ್ಲಿ ಥ್ರಿಪ್ಸ್ ನುಸಿ, ಜಾಸಿಡ್ ನೊಣ, ಬಿಳಿ ನೊಣ ಮತ್ತು ಪಪ್ಪಾಯದಲ್ಲಿ ಕರಿ ಹೇನು ಕೀಟಗಳ ಹಾವಳಿ ಹೆಚ್ಚಾಗಿದ್ದು, ಈ ಕೀಟಗಳು ರಸ ಹೀರಿ ದ್ಯುತಿ ಸಂಶ್ಲೇಷಣೆಗೆ ಅಡ್ಡಿ ಪಡಿಸುವುದಲ್ಲದೇ ಅನೇಕ ಹಾನಿಕಾರಕ ನಂಜಾಣುಗಳಿಗೆ ವಾಹಕಗಳಾಗಿವೆ. ಈ ನಂಜಾಣುಗಳನ್ನು ನಿಯಂತ್ರಿಸುವ ಯಾವ ಔಷಧಿಯು ಲಭ್ಯವಿಲ್ಲ. ಆದ್ದರಿಂದ ರಸ ಹೀರುವ ಕೀಟಗಳ ಹತೋಟಿಯೊಂದೇ ಮಾರ್ಗೋಪಾಯವಾಗಿದೆ.  ಈ ಕೀಟಗಳ ಹತೋಟಿಯನ್ನು ಕೆಲವು ಅಂತರ್ವ್ಯಾಪಿ ಕೀಟ ನಾಶಕಗಳಾದ ರೋಗರ್, ಕಾನ್ಫಿಡಾರ್, ಅಕ್ಟರಾ, ಪ್ರೈಡ್ ಮತ್ತು ಅಸಿಫೇಟ್ ಪುಡಿಯಂತಹ ರಾಸಾಯನಿಕಗಳಿಂದ ಸಮರ್ಪಕವಾಗಿ ಹತೋಟಿ ಮಾಡಬಹುದು. ಇದಲ್ಲದೇ ತರಕಾರಿ ಬೆಳೆಗಳಲ್ಲಿ ಕೇವಲ ಬೇವಿನ ಕಷಾಯದಿಂದ ತಯಾರಿಸಿದ ದ್ರಾವಣದಿಂದಲೂ ಈ ಕೀಟಗಳನ್ನು ನಿಯಂತ್ರಿಸಬಹುದು.
        ತರಕಾರಿ ಬೆಳೆಗಳಲ್ಲಿ ಹಾನಿಕಾರಕ ಕೀಟ ನಾಶಕಗಳಾದ ಮೊನೊಕ್ರೋಟೊಪಾಸ್ ನಂತಹ ಕೆಂಪು ಚಿಹ್ನೆ ಇರುವ ರಾಸಾಯನಿಕಗಳನ್ನು ಬಳಸಕೂಡದು.  ಹೆಚ್ಚಾಗಿ ಮೋಹಕ ಬಲೆಗಳನ್ನು, ದೀಪಾಕರ್ಷಕ ಬಲೆಗಳನ್ನು ಬಳಸಿ ಕೀಟಗಳ ನಿಯಂತ್ರಣ ಮಾಡಬಹುದು. ಇದಲ್ಲದೇ ಹಳದಿ ಅಂಟು ಕಾರ್ಡು, ನೀಲಿ ಅಂಟು ಕಾರ್ಡು ಮತ್ತು ಟ್ರೈಕೋ ಕಾರ್ಡ್ ನಂತಹ ಭೌತಿಕ ಕೀಟ ನಿಯಂತ್ರಣ ಸಾಧನಗಳಿಂದ ಸಮಗ್ರವಾಗಿ ಹತೋಟಿ ಕ್ರಮಗಳನ್ನು ಕೈಗೊಳ್ಳಬೇಕು.
  ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕುಗಳ ಅಧಿಕಾರಿಗಳನ್ನು ಅಥವಾ ಹಾರ್ಟಿಕ್ಲಿನಿಕ್, ಕೊಪ್ಪಳ ಇವರನ್ನು ಸಂಪರ್ಕಿಸುವಂತೆ ತೋಟಗಾರಿಕೆ ಇಲಾಖೆ ಪ್ರಕಟಣೆ ತಿಳಿಸಿದೆ. 
Please follow and like us:
error

Leave a Reply

error: Content is protected !!