ಪ್ರತಿ ವರ್ಷ ಸರ್ಕಾರದಿಂದ ಇಟಗಿ ಉತ್ಸವ- ಲಕ್ಷ್ಮಣ ಸವದಿ

ಇಟಗಿ (ಮಹಾದೇವ ದಂಡನಾಯಕ ವೇದಿಕೆ)  ):  ಪ್ರತಿ ವರ್ಷ ಸರ್ಕಾರದ ವತಿಯಿಂದಲೇ ಇಟಗಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸರ್ಕಾರ ಸಕಲ ಸಹಕಾರ ನೀಡಲಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಲಕ್ಷ್ಮಣ ಎಸ್ ಸವದಿ ಅವರು ಹೇಳಿದರು.
  ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಕೊಪ್ಪಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಯಲಬುರ್ಗಾ ತಾಲೂಕು ಇಟಗಿಯಲ್ಲಿ ಎರಡು ದಿನಗಳ ಕಾಲ ಆಚರಿಸಲಾಗುವ ಇಟಗಿ ಉತ್ಸವದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ಪ್ರತಿ ವರ್ಷ ಸರ್ಕಾರದ ವತಿಯಿಂದಲೇ ಇಟಗಿ ಉತ್ಸವವನ್ನು ಆಚರಿಸಬೇಕು ಎನ್ನುವುದು ಈ ಭಾಗದ ಜನರ ಹಾಗೂ ಜನಪ್ರತಿನಿಧಿಗಳ ಆಶೋತ್ತರವಾಗಿದೆ.  ಸರ್ಕಾರ ಅವರ ಆಶೋತ್ತರಗಳಿಗೆ ಮನ್ನಣೆ ನೀಡಿ, ಪ್ರತಿ ವರ್ಷ ಸರ್ಕಾರದಿಂದಲೇ ಇಟಗಿ ಉತ್ಸವವನ್ನು ಅದ್ಧೂರಿಯಿಂದ ನಡೆಸಲು ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ.  ನಮ್ಮ ಕಲೆ, ಸಂಸ್ಕೃತಿ, ಸಾಮಾಜಿಕ ಪರಂಪರೆಯನ್ನು ಸಮಾಜಕ್ಕೆ ಪರಿಚಯಿಸುವ ಉದ್ದೇಶದಿಂದ ಉತ್ಸವಗಳನ್ನು ಆಚರಿಸಲಾಗುತ್ತಿದೆ.  ಕನ್ನಡ ನಾಡು, ಸುಸಂಸ್ಕೃತ, ಭವ್ಯ ಪರಂಪರೆಯ ಕಲೆಯ ಬೀಡು, ಕಲಾ ಪರಂಪರೆಯ ತೇರನ್ನು ಎಳೆಯಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು.  ಕರ್ನಾಟಕದ ಚರಿತ್ರೆಯಲ್ಲಿ ಕಲ್ಯಾಣ ಚಾಲುಕ್ಯರ ಆಳ್ವಿಕೆ, ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಮಹತ್ವಪೂರ್ಣವಾಗಿದೆ.  ಆರನೆ ವಿಕ್ರಮಾದಿತ್ಯನ ಆಳ್ವಿಕೆಯ ಅವಧಿಯಲ್ಲಿ ಇಟಗಿಯಲ್ಲಿ ಕ್ರಿ.ಶ. ೧೧೧೨ ರಲ್ಲಿ ದೇವಾಲಯಗಳ ಚಕ್ರವರ್ತಿ ಎನಿಸಿಕೊಂಡ ಮಹದೇವಾ ದೇವಾಲಯವನ್ನು ನಿರ್ಮಿಸಲಾಗಿದೆ.  ಇಟಗಿ ಉತ್ಸವ ನಮ್ಮ ನಾಡಿನ ಉದ್ದಗಲಕ್ಕೂ ಸಾಂಸ್ಕೃತಿಕ ಸಿರಿವೈಭವದ ಅನುಭವವನ್ನು ಮೂಡಿಸಲಿದೆ.  ದಿನನಿತ್ಯದ ನೋವು, ನಲಿವು, ದುಡಿಮೆಗಳ ನಡುವೆ ಜನತೆಗೆ ಒಂದಿಷ್ಟು ಸಂತಸ ನೀಡಲಿ ಎಂಬುದು ಸರ್ಕಾರದ ಆಶಯವಾಗಿದೆ.  ಇಟಗಿಯ ದೇವಾಲಯದ ಸೊಬಗು ಯಾತ್ರಿಕರನ್ನು ಸೆಳೆಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಲಕ್ಷ್ಮಣ ಎಸ್ ಸವದಿ ಅವರು ಬಣ್ಣಿಸಿದರು.
  ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಮಾತನಾಡಿ, ಇಟಗಿ ಉತ್ಸವವನ್ನು ಸರ್ಕಾರಿ ಉತ್ಸವವನ್ನಾಗಿ ಆಚರಿಸಬೇಕು ಎನ್ನುವ ಈ ಭಾಗದ ಜನರ ಬಹುದಿನಗಳ ಕನಸು ನನಸಾಗಿದೆ.  ಉತ್ಸವಗಳಿಂದ ಜನ ಜೀವನದಲ್ಲಿ ಉತ್ಸುಕತೆ ಬರುತ್ತದೆ.  ಸಾಂಸ್ಕೃತಿಕ ನೆಲೆಗಟ್ಟು ಗಟ್ಟಿಗೊಳ್ಳುತ್ತದೆ.  ದೇವಾಲಯಗಳ ಚಕ್ರವರ್ತಿ ಮಹಾದೇವ ದೇವಾಲಯವನ್ನು ನಾವು ಉಳಿಸಿ, ಸಂರಕ್ಷಿಸಿಕೊಂಡು ಮುಂದಿನ ಪೀಳಿಗೆಗೆ ಉಳಿಸಬೇಕಾಗಿದೆ.  ತಂತ್ರಜ್ಞಾನ ಮುಂದುವರೆದ ನಂತರ ಯುವಪೀಳಿಗೆ ಸಂಸ್ಕೃತಿ, ಪರಂಪರೆಗಳಿಗೆ ಹೆಚ್ಚು ಆದ್ಯತೆ ನೀಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಸಂಗಣ್ಣ ಕರಡಿ ಅವರು, ಉತ್ಸವಗಳು ಹಿಂದಿನ ಜನ ಜೀವನ, ಕಲೆ, ಸಂಸ್ಕೃತಿ, ಭವ್ಯ ಪರಂಪರೆಯನ್ನು ನೆನಪಿಸಲು ಪೂರಕವಾಗಿವೆ ಎಂದು ನುಡಿದರು.
  ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಮಾತನಾಡಿ, ಕೊಪ್ಪಳ ಜಿಲ್ಲೆ ಮೊದಲಿನಿಂದಲೂ ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ಪ್ರದೇಶವಾಗಿದೆ.  ಇಟಗಿಯ ಜನತೆ ಪ್ರಗತಿಪರ ವಿಚಾರವುಳ್ಳವರಾಗಿದ್ದು, ಸರ್ಕಾರದ ವತಿಯಿಂದ ಆಚರಿಸಲಾಗುತ್ತಿರುವ ಇಟಗಿ ಉತ್ಸವ, ಕಷ್ಟಗಳನ್ನು ಎದುರಿಸುವ ಜೀವಗಳಿಗೆ ಒಂದಿಷ್ಟು ಸಂತಸ ಮೂಡಿಸಲಿದೆ.  ಸ್ಥಳೀಯ ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಸೂಕ್ತ ವೇದಿಕೆಯಾಗಲಿದೆ ಎಂದರು.
  ಸಮಾರಂಭದಲ್ಲಿ ಗದುಗಿನ ತೋಂಟದಾರ್ಯ ಸಂಸ್ಥಾನ ಮಠದ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಮತ್ತು ಶ್ರೀ ಕಲ್ಲಯ್ಯಜ್ಜನವರು ದಿವ್ಯ ಸಾನಿಧ್ಯ ವಹಿಸಿದ್ದರು.  ಯಲಬುರ್ಗಾ ಶಾಸಕ ಈಶಣ್ಣ ಗುಳಗಣ್ಣವರ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಶಾಸಕರುಗಳಾದ ಅಮರೇಗೌಡ ಪಾಟೀಲ ಬಯ್ಯಾಪುರ, ಹಾಲಪ್ಪ ಆಚಾರ್ (ವಿಧಾನಪರಿಷತ್), ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಉಮಾ ಶಿವಪ್ಪ ಮುತ್ತಾಳ, ಈರಪ್ಪ ಕುಡಗುಂಟಿ, ತಾ.ಪಂ. ಅಧ್ಯಕ್ಷೆ ನೀಲಮ್ಮ ಕೊಟ್ರಪ್ಪ ಜವಳಿ, ತಾ.ಪಂ. ಉಪಾಧ್ಯಕ್ಷ ಹೊಳೆಗೌಡ ಮುದೇಗೌಡ್ರ, ಸದಸ್ಯ ರಾಜಶೇಖರ ಹೊಂಬಳ, ಗ್ರಾ.ಪಂ. ಅಧ್ಯಕ್ಷ ಗವಿಸಿದ್ದಪ್ಪ ಗುಳಗಣ್ಣವರ, ಉಪಾಧ್ಯಕ್ಷ ದೇವಪ್ಪ ಗಾಳೆಪ್ಪ ಹರಿಜನ, ಅಪರ ಜಿಲ್ಲಾಧಿಕಾರಿ ಬಿ.ಪಿ. ಅಡ್ನೂರ್, ಸಹಾಯಕ ಆಯುಕ್ತ ಶರಣಬಸಪ್ಪ ಮುಂತಾದ ಗಣ್ಯಾತಿಗಣ್ಯರು ಭಾಗವಹಿಸಿದ್ದರು.
  ಪ್ರಾರಂಭದಲ್ಲಿ ಗಣ್ಯರಾದ ನವೀನ್ ಗುಳಗಣ್ಣವರ್ ಸ್ವಾಗತಿಸಿದರು, ಸದಾಶಿವ ಪಾಟೀಲ್ ಮತ್ತು ತಂಡದವರು ನಾಡಗೀತೆ ಮತ್ತು ರೈತಗೀತೆ ಹಾಡಿದರು, ಸಿ.ವಿ. ಜಡಿಯವರ್ ಅವರು ಕಾರ್ಯಕ್ರಮ ನಿರೂಪಿಸಿದರು.  
  ಇದಕ್ಕೂ ಮುನ್ನ ಇಟಗಿಯ ದೇವಸ್ಥಾನದಿಂದ ಮುಖ್ಯ ದ್ವಾರದವರೆಗೆ ಸುಮಾರು ೧೯ ವಿವಿಧ ಕಲಾ ತಂಡಗಳ ಸಾಗಿದ ಭವ್ಯ ಮೆರವಣಿಗೆಗೆ ಶಾಸಕ (ವಿಧಾನಪರಿಷತ್) ಹಾಲಪ್ಪ ಆಚಾರ್ ಅವರು ಚಾಲನೆ ನೀಡಿದರು.  ವೈವಿಧ್ಯಮಯ ಕಲಾ ತಂಡಗಳ ಜನಪದ ಕಲಾವಾಹಿನಿ ನೊಡುಗರ ಮನ ಸೂರೆಗೊಂಡಿತು.
Please follow and like us:
error