ರಾಜ್ಯದ ನೀರಾವರಿ ಯೋಜನೆಗಳಿಗೆ ೭೮೦೦ ಕೋಟಿ ರೂ. ಅನುದಾನ


ಕೊಪ್ಪಳ ಜು. : ರಾಜ್ಯ ಸರ್ಕಾರ ಮುಂದಿನ ೧೦ ವರ್ಷಗಳ ಅವಧಿಯನ್ನು ನೀರಾವರಿ ದಶಕವೆಂದು ಘೋಷಿಸಿದ್ದು, ಕೃಷ್ಣ ನೀರಾವರಿ ಯೋಜನೆಗಳು, ದಕ್ಷಿಣ ಕರ್ನಾಟಕದ ನೀರಾವರಿ ಯೋಜನೆಗಳು ಹಾಗೂ ಬಯಲು ಸೀಮೆಯ ಪ್ರದೇಶಗಳಿಗೆ ನೀರು ಒದಗಿಸುವ ಯೋಜನೆಗಳಿಗೆ ಆದ್ಯತೆ ನೀಡುವ ಸಲುವಾಗಿ ೭೮೦೦ ಕೋಟಿ ರೂ.ಗಳ ಅನುದಾನವನ್ನು ಪ್ರಸಕ್ತ ವರ್ಷ ಒದಗಿಸಿದೆ ಎಂದು ರಾಜ್ಯ ಜಲಸಂಪನ್ಮೂಲ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಕೊಪ್ಪಳ ತಾಲೂಕು ಕವಲೂರು ಗ್ರಾಮದ ಬಳಿ ಸಿಂಗಟಾಲೂರು ಏತನೀರಾವರಿ ಯೋಜನೆಯ ಕೊಪ್ಪಳ ಭಾಗದಲ್ಲಿ ಬರುವ ಮುಂಡರಗಿ ಶಾಖಾ ಕಾಲುವೆಯ ಕಾಮಗಾರಿಗೆ ಅಡಿಗಲ್ಲು ನೆರವೇರಿಸುವ ಸಮಾರಂಭ ಉದ್ಘಾಟಿಸಿ ಸೋಮವಾರ ಅವರು ಮಾತನಾಡುತ್ತಿದ್ದರು.
ರಾಜ್ಯದ ನೀರಾವರಿ ಯೋಜನೆಗಳಿಗೆ ಸರ್ಕಾರ ಆದ್ಯತೆ ನೀಡಿದ್ದು, ರೈತರ ಜಮೀನಿಗೆ ನೀರುಣಿಸುವ ಯೋಜನೆಗಳನ್ನು ತ್ವರಿತವಾಗಿ ಕೈಗೆತ್ತಿಕೊಂಡು, ರೈತರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಬರಪೀಡಿತ ಪ್ರದೇಶವಾಗಿರುವ ಕೊಪ್ಪಳ ಭಾಗದ ಸುಮಾರು ೩೬ ಗ್ರಾಮಗಳ ೪೦೦೦೦ ಕ್ಕೂ ಹೆಚ್ಚು ಎಕರೆ ಜಮೀನಿಗೆ ನೀರಾವರಿ ಒದಗಿಸಲು ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ ಸಾಧ್ಯವಾಗಲಿದೆ. ದಶಕಗಳ ಕಾಲ ನೆನೆಗುದಿಗೆ ಬಿದ್ದಿದ್ದ ಏತ ನೀರಾವರಿ ಯೋಜನೆಗೆ ಕೊನೆಗೂ ಚಾಲನೆ ದೊರೆತಿರುವುದು ಜನಪರ ಹೋರಾಟಕ್ಕೆ ಸಂದ ಜಯವಾಗಿದೆ. ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಈಗಾಗಲೆ ಕೈಗೊಳ್ಳಲಾಗಿದ್ದು, ಪಂಪ್‌ಗಳು, ಸೇರಿದಂತೆ ಎಲ್ಲ ರೀತಿಯ ಉಪಕರಣಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಲ್ಲದೆ ಜಾಕ್‌ವೆಲ್ ನಿರ್ಮಾಣ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಗುವುದು. ಮುಂಡರಗಿ ಶಾಖಾ ಕಾಲುವೆಗಳ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಮುಂದಿನ ವರ್ಷ ಜುಲೈ ವೇಳೆಗೆ ಕಾಲುವೆಗೆ ನೀರು ಹರಿಸುವ ಗುರಿ ಹೊಂದಲಾಗಿದೆ. ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ರೈತರಿಗೆ ಪರಿಹಾರ ನೀಡುವ ಕುರಿತಂತೆ ಅಧಿಕಾರುಗಳು ಹಾಗೂ ರೈತರೊಂದಿಗೆ ಸಮಾಲೋಚಿಸಲು ಒಂದು ವಾರದ ಒಳಗಾಗಿ ಸಭೆ ಏರ್ಪಡಿಸಲಾಗುವುದು. ರೈತರಿಗೆ ಹೆಚ್ಚು ಅನುಕೂಲವಾಗುವಂತಹ ರೀತಿಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಸಮಗ್ರವಾದ ವರದಿಯನ್ನು ತಯಾರಿಸಿ ಶೀಘ್ರ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವರದಿಯನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ನೀರಾವರಿ ವ್ಯವಸ್ಥೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡುವುದು ಅಗತ್ಯವಾಗಿದ್ದು, ಈ ಭಾಗದ ರೈತರಲ್ಲೂ ನೀರಾವರಿ ಪದ್ಧತಿಯ ಬಗ್ಗೆ ಜಾಗೃತಿ ಮೂಡುತ್ತಿರುವುದು ಸ್ವಾಗತಾರ್ಹ. ಆಹಾರದಲ್ಲಿ ಸ್ವಾವಲಂಬನೆ ಹೊಂದುವ ದೇಶ ಸ್ವಾಭಿಮಾನಿ ದೇಶವಾಗಿ ಹೊರಹೊಮ್ಮಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುವುದು ಅಗತ್ಯ. ತುಂಗ ಮೇಲ್ದಂಡೆ ನೀರಾವರಿ ಯೋಜನೆಗೆ ಇದ್ದಂತಹ ತಾಂತ್ರಿಕ ತೊಂದರೆಯನ್ನು ನಿವಾರಿಸಲಾಗಿದ್ದು, ಯೋಜನೆ ಕಾರ್ಯಗತಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದಾಗಿ ೩೦೦೦೦ ಎಕರೆ ಜಮೀನನ್ನು ನೀರಾವರಿ ವ್ಯಾಪ್ತಿಗೆ ಒಳಪಡಿಸಲಾಗಿದೆ. ನಿಗದಿತ ಸಮಯದಲ್ಲಿ ಯೋಜನೆಯನ್ನು ಪೂರ್ಣಗೊಳಿಸಲು ಗುರಿ ಹೊಂದಲಾಗಿದ್ದು, ರೈತರು ನೀರಿನ ಸದ್ಬಳಕೆ ಮಾಡಿಕೊಂಡು ಯೋಗ್ಯ ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗಬೇಕು, ಭೂಮಿ ಸವಳು ಆಗದ ರೀತಿಯಲ್ಲಿ ಎಚ್ಚರಿಕೆಯಿಂದ ನೀರಿನ ಬಳಕೆ ಮಾಡಿಕೊಳ್ಳುವ ಬಗ್ಗೆ ಜಾಗೃತರಾಗಬೇಕು ಎಂದು ರಾಜ್ಯ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರು ರೈತರಲ್ಲಿ ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಅವರು ಮಾತನಾಡಿ, ರಾಜ್ಯ ಸರ್ಕಾರ ನೀರಾವರಿ ಯೋಜನೆಗಳಿಗೆ ಪ್ರಥಮಾದ್ಯತೆ ನೀಡಿದ್ದು, ರೈತರು ಕಡಿಮೆ ನೀರು ಉಪಯೋಗಿಸಿ ಹೆಚ್ಚು ಇಳುವರಿ ಪಡೆಯುವಂತಾಗಬೇಕು. ಇದಕ್ಕಾಗಿ ಮಣ್ಣು ಪರೀಕ್ಷೆ, ಸೂಕ್ತ ಬೀಜೋತ್ಪಾದನೆ, ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಮುಂದಾಗಬೇಕು. ಸದ್ಯ ಕೊಪ್ಪಳ ಕ್ಷೇತ್ರದಲ್ಲಿ ೧೦೪ ಕಿ.ಮೀ. ರಸ್ತೆ ಅಭಿವೃದ್ಧಿಗೊಳಿಸುವ ಯೋಜನೆ ರೂಪಿಸಿ ಈಗಾಗಲೆ ೩೦ ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ. ರಾಜ್ಯ ಸರ್ಕಾರ ೩ ವರ್ಷಗಳಲ್ಲಿ ೧೩೦೦೦ ಕಿ.ಮೀ. ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದು, ಇನ್ನೆರಡು ವರ್ಷಗಳಲ್ಲಿ ೧೫೦೦೦ ಕಿ.ಮೀ. ರಸ್ತೆ ಅಭಿವೃದ್ಧಿಗೊಳಿಸುವ ಗುರಿ ಹೊಂದಿದೆ. ೧೯೨ ಕೋಟಿ ರೂ. ವೆಚ್ಚದಲ್ಲಿ ಮುದಗಲ್-ತಾವರಗೇರಾ-ಗಂಗಾವತಿ ರಾಜ್ಯ ಹೆದ್ದಾರಿಯನ್ನು ಬರುವ ಸೆಪ್ಟಂಬರ್ ಒಳಗಾಗಿ ಅಭಿವೃದ್ಧಿಪಡಿಸಲು ಕಾಲಮಿತಿ ಹಾಕಿಕೊಳ್ಳಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಅವರು ಹೇಳಿದರು. ಇದಕ್ಕೂ ಮುನ್ನ ಸಚಿವರು ನಬಾರ್ಡ್ ಯೋಜನೆಯಡಿ ಮಂಜೂರಾದ ಕವಲೂರು-ಮುರ್‍ಲಾಪುರ ರಸ್ತೆಯಲ್ಲಿ ಸೇತುವೆ ನಿರ್ಮಾಣ ಹಾಗೂ ಕಲ್ಮಲಾ-ಶಿಗ್ಗಾಂವ ರಾಜ್ಯ ಹೆದ್ದಾರಿಯ ೨೩ ಕಿ.ಮೀ. ರಸ್ತೆ ಸುಧಾರಣೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.
ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಗಣ್ಣ ಕರಡಿ ಅವರು ಮಾತನಾಡಿ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಮಗಾರಿ ಚಾಲನೆಗೆ ದಶಕಗಳ ಹೋರಾಟದ ಇತಿಹಾಸವಿದೆ. ಈ ಯೋಜನೆಯ ಜಾರಿಯಿಂದ ನದಿಗೆ ನೀರು ವ್ಯರ್ಥವಾಗಿ ಹರಿದುಹೋಗುವುದನ್ನು ತಡೆದು, ಪ್ರತಿ ವರ್ಷ ಬರದ ಭೀತಿಗೊಳಗಾಗುತ್ತಿದ್ದ ಈ ಭಾಗದ ರೈತರ ಬಾಳು ಹಸನಾಗುವಂತಾಗಿದೆ. ಇದಕ್ಕೆ ಶ್ರಮಿಸಿದ ಎಲ್ಲಾ ಜನಪ್ರತಿನಿಧಿಗಳಿಗೆ, ರೈತರಿಗೆ ಅಭಿನಂದನೆ ಸಲ್ಲಿಸಬೇಕಾದ್ದ ಎಲ್ಲರ ಕರ್ತವ್ಯ. ಈ ಯೋಜನೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಲು ಅನುದಾನದ ತೊಂದರೆಯಾಗದ ರೀತಿಯಲ್ಲಿ ಶ್ರಮಿಸುವುದಾಗಿ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವಸತಿ ಸಚಿವ ವಿ. ಸೋಮಣ್ಣ, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು, ಜಿ.ಪಂ. ಅಧ್ಯಕ್ಷೆ ಜ್ಯೋತಿ ಬಿಲ್ಗಾರ್, ಸಂಸದ ಶಿವರಾಮಗೌಡ, ಶಾಸಕರುಗಳಾದ ಅಮರೇಗೌಡ ಪಾಟೀಲ ಬಯ್ಯಾಪುರ, ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ, ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಕಾಡಾ ಅಧ್ಯಕ್ಷ ಬಸನಗೌಡ ಬ್ಯಾಗವಾಟ್, ನವೀನ್ ಗುಳಗಣ್ಣವರ್ ಮುಂತಾದ ಗಣ್ಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ರಾಜ್ಯದಲ್ಲಿ ಸೂರು ರಹಿತರಿಗಾಗಿ ೮ ಲಕ್ಷ ಮನೆಗಳ ನಿರ್ಮಾಣ : ವಸತಿ ಸಚಿವ ವಿ. ಸೋಮಣ್ಣ
ಕೊಪ್ಪಳ ಜು. : ರಾಜ್ಯ ಸರ್ಕಾರ ಬಡವರಿಗೆ, ಸೂರು ರಹಿತರಿಗೆ ಮನೆಗಳನ್ನು ನಿರ್ಮಿಸಿ ಕೊಡಲು ಮಹತ್ವದ ನಿರ್ಧಾರ ಕೈಗೊಂಡಿದ್ದು, ರಾಜ್ಯದಲ್ಲಿ ಈ ವರ್ಷ ೮ ಲಕ್ಷ ಮನೆಗಳನ್ನು ನಿರ್ಮಿಸಿ ಕೊಡಲು ಅಗತ್ಯ ಕ್ರಮ ಕೈಗೊಂಡಿದೆ ಎಂದು ರಾಜ್ಯ ವಸತಿ ಸಚಿವ ವಿ. ಸೋಮಣ್ಣ ಅವರು ಹೇಳಿದ್ದಾರೆ.
ಕೊಪ್ಪಳ ತಾಲೂಕು ಹೂವಿನಾಳ ಗ್ರಾಮ ಬಳಿ ಗುನ್ನಳ್ಳಿ ಹಾಗೂ ಹೊರತಟ್ನಾಳ ಮತ್ತು ಹೂವಿನಾಳ ಗ್ರಾಮದಲ್ಲಿನ ಆಶ್ರಯ ಬಡಾವಣೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಸೋಮವಾರ ಅವರು ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಈ ವರ್ಷ ೮ ಲಕ್ಷ ಮನೆಗಳನ್ನು ನಿರ್ಮಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರದ ಇಂದಿರಾ ವಸತಿ ಯೋಜನೆಯ ೦೧ ಲಕ್ಷ ಮನೆಗಳಾದರೆ, ಉಳಿದ ೭ ಲಕ್ಷ ಮನೆಗಳನ್ನು ರಾಜ್ಯ ಸರ್ಕಾರದ ವತಿಯಿಂದ ನಿರ್ಮಿಸಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ೪ ಸಾವಿರ ಮನೆಗಳಂತೆ ಹಂಚಿಕೆ ಮಾಡಲಾಗುವುದು. ಆದರೆ ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಈ ಬಾರಿ ೬೦೦೦ ಮನೆಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಬಡವರಿಗೆ ಮನೆ ನಿರ್ಮಿಸಿಕೊಳ್ಳಲು ಪ್ರತಿ ಮನೆಗೆ ೦೧ ಲಕ್ಷ ರೂ.ಗಳನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ೫೦೦೦೦ ರೂ.ಗಳನ್ನು ಸರ್ಕಾರ ಫಲಾನುಭವಿಗಳಿಗೆ ಸಹಾಯಧನವನ್ನಾಗಿ ನೀಡಿದರೆ, ಉಳಿದ ೫೦೦೦೦ ರೂ.ಗಳನ್ನು ಕೇವಲ ಶೇ. ೩ ರ ಬಡ್ಡಿದರದಲ್ಲಿ ಸಾಲವನ್ನಾಗಿ ನೀಡಲಿದೆ. ನೆರೆ ಹಾವಳಿಯಿಂದ ಸಂತ್ರಸ್ಥರಾದವರಿಗಾಗಿ ರಾಜ್ಯದಲ್ಲಿ ೫೯೦೦೦ ಆಸರೆ ಮನೆಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದ್ದು, ಈಗಾಗಲೆ ೩೪೦೦೦ ಮನೆಗಳನ್ನು ಫಲಾನುಭವಿಗಳಿಗೆ ವಿತರಿಸಲು ಕ್ರಮ ಜರುಗಿಸಲಾಗಿದೆ. ಗುನ್ನಳ್ಳಿ, ಹೊರತಟ್ನಾಳ ಗ್ರಾಮದ ವ್ಯಾಪ್ತಿಯಲ್ಲಿ ವಾಜಪೇಯಿ ನಗರ ನಿವೇಶನ ಯೋಜನೆಯಡಿ ೨೧. ೩೨ ಎಕರೆ ಜಮೀನು ಗುರುತಿಸಿ, ಪ್ರತಿ ಎಕರೆಗೆ ೬ ಲಕ್ಷ ರೂ.ಗಳಂತೆ ೧. ೩೦ ಕೋಟಿ ರೂ. ಮೊತ್ತದಲ್ಲಿ ಜಮೀನು ಖರೀದಿಸಲಾಗಿದೆ. ಅದೇ ರೀತಿ ಹೂವಿನಾಳ ಬಳಿ ಕೃಷಿ ಮಾರುಕಟ್ಟೆ ಸಮಿತಿಯಲ್ಲಿ ಕಾರ್ಯ ನಿರ್ವಹಿಸುವ ಹಮಾಲರಿಗೆ ನಿವೇಶನ ಒದಗಿಸಲು ೨೦. ೨೭ ಎಕರೆ ಜಮೀನನ್ನು ಪ್ರತಿ ಎಕರೆಗೆ ೭ ಲಕ್ಷ ರೂ.ಗಳಂತೆ ಒಟ್ಟು ೧. ೪೩ ಕೋಟಿ ರೂ. ಮೊತ್ತದಲ್ಲಿ ಜಮೀನು ಖರೀದಿಸಲಾಗಿದೆ. ಬಡವರು ಯಾವುದೇ ಕಾರಣಕ್ಕೂ ಮನೆ ಅಥವಾ ನಿವೇಶನಗಳನ್ನು ಬೇರೆಯವರಿಗೆ ಮಾರುವುದಾಗಲಿ, ಅಥವಾ ಪರಭಾರೆ ಮಾಡುವುದಾಗಲಿ ಮಾಡಬಾರದು ಎಂದು ವಸತಿ ಸಚಿವ ವಿ. ಸೋಮಣ್ಣ ಅವರು ಮನವಿ ಮಾಡಿಕೊಂಡರು.
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಗಣ್ಣ ಕರಡಿ ಅವರು ಮಾತನಾಡಿ, ಸರ್ಕಾರ ಬಡವರಿಗೆ, ದೀನ ದಲಿತರ ಕ್ಷೇಮಾಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಕೊಪ್ಪಳ ಭಾಗದ ರೈತರ ಜಮೀನಿಗೆ ನೀರುಣಿಸಲು ಕ್ರಮ ಜರುಗಿಸಿದೆ. ಸೂರು ರಹಿತ ಬಡ ಕುಟುಂಬಗಳನ್ನು ಗುರುತಿಸಿ, ಅವರಿಗೆ ಸೂಕ್ತ ಮನೆಗಳನ್ನು ನಿರ್ಮಿಸುವ ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಸಮಾರಂಭದಲ್ಲಿ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್, ಶಾಸಕ (ವಿಧಾನಪರಿಷತ್) ಹಾಲಪ್ಪ ಆಚಾರ್, ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ನಗರಸಭೆ ಅಧ್ಯಕ್ಷ ಸುರೇಶ್ ದೇಸಾಯಿ, ಉಪಾಧ್ಯಕ್ಷ ಅಮ್ಜದ್ ಪಟೇಲ್, ಜಿ.ಪಂ. ಸದಸ್ಯರುಗಳಾದ ವನಿತಾ ಗಡಾದ್, ನಾಗನಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕಳಕಪ್ಪ ಜಾಧವ್, ಗಣ್ಯರಾದ ನವೀನ್ ಗುಳಗಣ್ಣವರ್ ಮುಂತಾದವರು ಭಾಗವಹಿಸಿದ್ದರು.

Please follow and like us:
error