ಜಿಲ್ಲೆಯ ಎಲ್ಲಾ ಪ್ರವಾಸಿ ಸ್ಥಳಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿ ಜಿ.ಎಲ್.ಪ್ರವೀಣಕುಮಾರ್.

ಕೊಪ್ಪಳ, ಅ.೨೧ (ಕ ವಾ) ಪೌರಾಣಿಕ, ಐತಿಹಾಸಿಕ, ನೈಸರ್ಗಿಕವಾಗಿ ಸಾಕಷ್ಟು ಸ್ಥಳಗಳನ್ನು ಹೊಂದಿರುವ ಕೊಪ್ಪಳ ಜಿಲ್ಲೆಯ ಎಲ್ಲಾ ಪ್ರವಾಸಿ ಸ್ಥಳಗಳಿಗೆ ಸೂಕ್ತ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಪ್ರಭಾರಿ ಜಿಲ್ಲಾಧಿಕಾರಿ ಜಿ.ಎಲ್.ಪ್ರವೀಣಕುಮಾರ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಕೊಪ್ಪಳ ಜಿಲ್ಲೆಯ ಪ್ರವಾಸಿ ಸ್ಥಳಗಳ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಕುರಿತು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಮೇಲ್ವಿಚಾರಣೆ ಹಾಗೂ ಉಸ್ತುವಾರಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಕೊಪ್ಪಳ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿಯಡಿ ಲೋಕೋಪಯೋಗಿ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಸೆಪ್ಟಂಬರ್ ೨೦೧೫ ರ ಅಂತ್ಯಕ್ಕೆ ಒಟ್ಟು ೧೧ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತದಲ್ಲಿರುವ ಗಂಗಾವತಿ ತಾಲೂಕಿನ ಸಂಗಾಪೂರ-ಮಲ್ಲಾಪೂರ ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ, ಚಿಕ್ಕರಾಂಪೂರ-ಸಾಣಾಪುರ ರಸ್ತೆ ಡಾಂಬರೀಕರಣ, ಗಂಗಾವತಿ-ಆನೆಗೊಂದಿ-ಮುನಿರಾಬಾದ್, ಪಂಪಾಸರೋವರದ ವರೆಗೆ ಕೂಡು ರಸ್ತೆ ಅಭಿವೃದ್ಧಿಪಡಿಸುವುದು, ಕೊಪ್ಪಳ ನಗರದ ಕೋಟೆಗೆ ಕೂಡು ರಸ್ತೆ ಸೇರಿದಂತೆ ಯಲಬುರ್ಗಾ ತಾಲೂಕನ ಬಳಗೇರಿ ಗ್ರಾಮದಲ್ಲಿ ಚಾಲುಕ್ಯರ ಪುರಾತನ ಬಳ್ಳೇಶ್ವರ ದೇವಸ್ಥಾನಕ್ಕೆ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ಪ್ರಾರಂಭವಾಗದೇ ಇರುವ ಒಟ್ಟು ೦೫ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಕೈಗೊಂಡು ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
     ಮುಕ್ತಾಯ ಹಂತದಲ್ಲಿರುವ ನಗರದ ಶ್ರೀ ಗವಿಸಿದ್ಧೇಶ್ವರ ಸಂಸ್ಥಾನ ಮಠದ ಯಾತ್ರಿ ನಿವಾಸ ಕಟ್ಟಡ ಕಾಮಗಾರಿ, ಯಲಬುರ್ಗಾ ತಾಲೂಕಿನ ಇಟಗಿ ಗ್ರಾಮದ ಯಾತ್ರಿ ನಿವಾಸ ಕಟ್ಟಡ, ತಳಕಲ್ ಗ್ರಾಮದ ಹಜರತ್ ಹುಸೇನ್ ಷಾವಲಿ ಮೌಲ ದರ್ಗಾದ ಯಾತ್ರಿ ನಿವಾಸ, ಕಲ್ಲೂರ ಗ್ರಾಮದ ಶ್ರೀ ಕಲ್ಲಿನಾಥೇಶ್ವರ ದೇವಸ್ಥಾನದ ಯಾತ್ರಿನಿವಾಸ, ಕುಷ್ಟಗಿ ತಾಲೂಕಿನ ಹುಲಿಗೆಮ್ಮ ದೇವಿ ದೇವಸ್ಥಾನದ ಯಾತ್ರಿ ನಿವಾಸ ಕಟ್ಟಡ, ಹನುಮಸಾಗರದ ಶ್ರೀ ವೆಂಕಟೇಶ್ವರ ದೇವಸ್ಥಾನದ ಯಾತ್ರಿ ನಿವಾಸ, ಶಿರಗುಂಪಿ ಗ್ರಾಮದ ಶ್ರೀ ಭಾರತಿ ಮುಖ್ಯ ಪ್ರಾಣೇಶ್ವರ ದೇವಸ್ಥಾನದ ಯಾತ್ರಿ ನಿವಾಸ, ಕೊಪ್ಪಳ ಮಳೇಮಲ್ಲೇಶ್ವರ ದೇವಸ್ಥಾನದ ಬಳಿಯಿರುವ ಯಾತ್ರಿ ನಿವಾಸ ನಿರ್ಮಾಣ ಕಾಮಗಾರಿಗಳನ್ನು  ಶೀಘ್ರದಲ್ಲಿಯೇ ಪೂರ್ಣಗೊಳಿಸುವಂತೆ ಸೂಚನೆ ನೀಡಿದ ಅವರು, ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದ ಮಲ್ಲಯ್ಯನ ಗುಡಿ ಹತ್ತಿರ ಡಾರ್ಮಿಟರಿ ನಿರ್ಮಾಣ ಕಾಮಗಾರಿಗೆ ಸೂಕ್ತ ನಿವೇಶನ ಕೊರತೆ ಇರುವುದರಿಂದ ಸ್ಥಳ ಪರಿಶೀಲನೆ ಕೈಗೊಳ್ಳುವಂತೆ ಹಾಗೂ ಕಳೆದ ೨೦೧೨-೧೩ ನೇ ಸಾಲಿನಲ್ಲಿ ೩.೦೦ ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಂಡು ಪ್ರಗತಿಯಲ್ಲಿರುವ ಕೊಪ್ಪಳ ನಗರದಲ್ಲಿರುವ ಐತಿಹಾಸಿಕ ಕೋಟೆಯ ಅಭಿವೃದ್ಧಿ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
     ಜಿಲ್ಲಾ ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ವರ್ಗದ ಜಿಲ್ಲಾಧಿಕಾರಿ ಬಿ.ಕಲ್ಲೇಶ್ ಮಾತನಾಡಿ,  ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕರಿಗೆ ಪ್ರವಾಸಿ ಟ್ಯಾಕ್ಸಿ ನೀಡುವ ಯೋ

ಜನೆಗೆ ೨೦೧೩-೧೪ನೇ ಸಾಲಿನಲ್ಲಿ ಒಟ್ಟು ೩೩ ಅರ್ಜಿಗಳು ಬಂದಿದ್ದು, ಅಂತಿಮವಾಗಿ ಒಟ್ಟು ೩೦ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ೦೩ ಅಭ್ಯರ್ಥಿಗಳನ್ನು ಕಾಯ್ದಿರಿಸಲಾಗಿದೆ. ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕರಿಂದ ಒಟ್ಟು ೨೦ ಅರ್ಜಿಗಳು ಬಂದಿದ್ದು, ಅಂತಿಮವಾಗಿ ೧೫ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ೦೫ ಅಭ್ಯರ್ಥಿಗಳನ್ನು ಕಾಯ್ದಿರಿಸಲಾಗಿದೆ. ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ವರ್ಗದ ನಿರುದ್ಯೋಗಿ ಯುವಕರಿಂದ ಒಟ್ಟು ೫೧ ಅರ್ಜಿಗಳು ಬಂದಿದ್ದು, ಅಂತಿಮವಾಗಿ ಒಟ್ಟು ೪೮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರವಾಸಿ ಟ್ಯಾಕ್ಸಿ ನೀಡುವ ಯೋಜನೆಗೆ ೨೦೧೪-೧೫ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯವರಿಂದ ಒಟ್ಟು ೩೦ ಅರ್ಜಿಗಳು ಬಂದಿದ್ದು, ಅಂತಿಮವಾಗಿ ಒಟ್ಟು ೧೩ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕರಿಂದ ಒಟ್ಟು ೦೪ ಅರ್ಜಿಗಳು ಬಂದಿದ್ದು, ಅಂತಿಮವಾಗಿ ೦೩ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎನ್.ಕೆ. ತೊರವಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಪ್ರಭುಲಿಂಗ, ಕೊಪ್ಪಳ ವಿಭಾಗದ ಲೋಕೋಪಯೋಗಿ ಮತ್ತು ಒಳ ಬಂದರು ಇಲಾಖೆ, ನಿರ್ಮಿತಿ ಕೇಂದ್ರ, ಕರ್ನಾಟಕ ರೂರಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಡ್‌ನ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error