You are here
Home > Koppal News > ‘ಆಳ್ವಾಸ್ ನುಡಿಸಿರಿ’ಗೆ ಸಂಭ್ರಮದ ತೆರೆ

‘ಆಳ್ವಾಸ್ ನುಡಿಸಿರಿ’ಗೆ ಸಂಭ್ರಮದ ತೆರೆ

ಮೂಡಬಿದ್ರೆ (ರತ್ನಾಕರವರ್ಣಿ ವೇದಿಕೆ), ನ.  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಇಲ್ಲಿನ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದ ಪಂಡಿತ್ ಭೀಮ್‌ಸೇನ್ ಜೋಷಿ ಸಭಾಂಗಣದ ರತ್ನಾಕರ ವರ್ಣಿ ವೇದಿಕೆಯಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿದ್ದ ‘ಆಳ್ವಾಸ್ ನುಡಿಸಿರಿ’ಗೆ ರವಿವಾರ ರಾತ್ರಿ ಸಂಭ್ರಮದ ತೆರೆ ಬಿತ್ತು.
ನಾಡಿನ ನಾನಾ ಭಾಗದಿಂದ ಆಗಮಿಸಿದ ಕನ್ನಡ ಮತ್ತು ಸಾಹಿತ್ಯಾಭಿಮಾನಿಗಳು ಈ ಸಂಭ್ರಮಕ್ಕೆ ಸಾಕ್ಷಿಯಾದರು. ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವರ ಸಾರಥ್ಯದಲ್ಲಿ ವರ್ಷಂಪ್ರತಿ ನಡೆಯುವ ‘ಆಳ್ವಾಸ್ ನುಡಿಸಿರಿ’ ದೇಶ ವಿದೇಶದ ಗಮನ ಸೆಳೆಯುತ್ತಿದ್ದು, ಈ ಬಾರಿ ‘ಕನ್ನಡ ಮನಸ್ಸು: ಸಂಘರ್ಷ ಮತ್ತು ಸಾಮರಸ್ಯ’ ಎಂಬ ಪರಿಕಲ್ಪನೆಯೊಂದಿಗೆ ನಡೆದ ನುಡಿಸಿರಿ ಪ್ರಸಕ್ತ ಸಾಹಿತ್ಯದೊಳಗಿನ ರಾಜಕೀಯ, ದ್ವೇಷ, ರಾಗದ ಕುರಿತ ಚರ್ಚೆಗೆ ಹೊಸ ನಾಂದಿ ಹಾಡಿತು.
ಹಿರಿಯ ಸಂಶೋಧಕ ನಾಡೋಜ ಎಂ.ಎಂ. ಕಲಬುರ್ಗಿರವರ ಅಧ್ಯಕ್ಷತೆಯಲ್ಲಿ ಖ್ಯಾತ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪರಿಂದ ಶುಕ್ರವಾರ ಪೂರ್ವಾಹ್ನ ಉದ್ಘಾಟಿಸಲ್ಪಟ್ಟ ‘ನುಡಿಸಿರಿ’ಯಲ್ಲಿ ಜಿಲ್ಲೆಯ ಕೆಲವು ರಾಜಕಾರಣಿಗಳು ಕೆಲಹೊತ್ತು ಕಾಣಿಸಿಕೊಂಡರು. ಉಳಿದಂತೆ ರತ್ನಾಕರವರ್ಣಿ ವೇದಿಕೆ, ಕು.ಶಿ.ಹರಿದಾಸ ಭಟ್ಟ ವೇದಿಕೆ, ಕೆ.ವಿ. ಸುಬ್ಬಣ್ಣ ಬಯಲು ರಂಗಮಂದಿರ, ಉಡುಪಿ ಕೆ.ಆನಂದ ಗಾಣಿಗ ವೇದಿಕೆಯಲ್ಲಿ ಮೂರು ದಿನವೂ ಸಾಹಿತ್ಯ, ಕಲೆಯ ರಸದೌತಣವನ್ನು ಲಕ್ಷಾಂತರ ಮಂದಿ ಸವಿದರು.
ವಿವಿಧ ವಿಷಯಕ್ಕೆ ಸಂಬಂಧಿಸಿ ವಿಚಾರಗೋಷ್ಠಿ, ವಿಶೇಷ ಉಪನ್ಯಾಸ, ಕಥಾ, ಕವಿ ಸಮಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸ್ಸನ್ನು ಹೊಸ ದಿಕ್ಕಿನತ್ತ ಕೊಂಡೊಯ್ದವು. ಪುಟಾಣಿಯಿಂದ ಹಿಡಿದು ಹಿರಿತಲೆಯ ಕಲಾವಿದರ, ಕಥೆಗಾರರ, ಕವಿಗಳ, ಲೇಖಕರ, ಸಾಹಿತಿಗಳ ಆಶಯ, ಅಭಿಮತ, ಮನಸ್ಸುಗಳ ಮುಖಾಮುಖಿ, ವಿವಿಧ ರೀತಿಯ ನೃತ್ಯ, ಯಕ್ಷಗಾನ, ಸಂಗೀತ, ವಚನ, ಹಾಸ್ಯ, ನಾಟಕ ಎಲ್ಲವೂ ‘ನುಡಿಸಿರಿ’ಗೆ ಹೊಸ ಕಳೆಯನ್ನು ಮೂಡಿಸಿತು. ಜ್ಞಾನ ಸಾಹಿತ್ಯದ ಜತೆ ‘ಪಾಕ’ ಸಾಹಿತ್ಯವೂ ‘ನುಡಿಸಿರಿ’ ಹಿರಿಮೆಯನ್ನು ಹೆಚ್ಚಿಸಿತು. ‘ನುಡಿಸಿರಿ’ ಎಂಬುದು ಕೇವಲ ಸಾಹಿತ್ಯ ಸಮ್ಮೇಳನವಲ್ಲ. ನಮ್ಮದೇ ಮನೆಯ ಕಾರ್ಯಕ್ರಮ ಎಂಬ ಭಾವನೆಯನ್ನು ಪ್ರತಿಯೊಬ್ಬ ರಲ್ಲಿ ಮೂಡಿಸುವಲ್ಲಿ ಕೂಡ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ, ಶಿಕ್ಷಕ, ಸಿಬ್ಬಂದಿ ವರ್ಗದ ಶ್ರಮ ಮಾತ್ರವಲ್ಲ ಸ್ಥಳೀಯ ಸ್ವಯಂ ಸೇವಕರ ಪ್ರಯತ್ನ ಶ್ಲಾಘನಾರ್ಹ.
ಸುಮಾರು 25 ಕಲಾತಂಡಗಳ ವೈಭವ, ವಿಶಿಷ್ಟ ಪೇಟ, ನುಡಿಸಿರಿ ನಾನಾ ಘಟಕದ ಸದಸ್ಯರ ಸೇವೆ, ನೂರಾರು ಪುಸ್ತಕ ಮಳಿಗೆಗಳು, ತಮ್ಮ ಇಷ್ಟದ ಸಾಹಿತಿಗಳನ್ನು ಕಣ್ಣಾರೆ ಕಂಡು ಮಾತನಾಡುವ ಅವಕಾಶಗಳು ನುಡಿಸಿರಿ ಎಂಬ ‘ಕನ್ನಡ ನಾಡು -ನುಡಿಯ ರಾಷ್ಟ್ರೀಯ ಸಮ್ಮೇಳನ’ಕ್ಕೆ ಹೊಸ ಕಳೆ ತಂದುಕೊಟ್ಟಿತು.
ಉದ್ಘಾಟನೆಯ ದಿನದಂದು ನಿರೀಕ್ಷೆಯಷ್ಟು ಕನ್ನಡಿಗರ, ಸಾಹಿತ್ಯಾಭಿಮಾನಿಗಳ ಸಂಖ್ಯೆ ಕಂಡು ಬರಲಿಲ್ಲ. ಆದರೆ, ಶನಿವಾರ ಮಧ್ಯಾಹ್ನದ ಬಳಿಕ ಈ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ರವಿವಾರ ಮಾತ್ರ ಪ್ರೇಕ್ಷಕರ ಸಂಖ್ಯೆ ನಿಯಂತ್ರಣಕ್ಕೂ ಬಾರದಂತಾಯಿತು. ಆದರೆ, ಇದುವರೆಗಿನ 7 ಸಮ್ಮೇಳನಕ್ಕೆ ಹೋಲಿಸಿದರೆ, ಈ ಬಾರಿಯ ಸಮ್ಮೇಳನಕ್ಕೆ ಬಂದ ಜನರ ಸಂಖ್ಯೆ ಹೆಚ್ಚೇನೂ ಅಲ್ಲ. ಅಂದಹಾಗೆ, ಇಂದು ರಜಾದಿನವಾದ ಕಾರಣ ಸಾಹಿತ್ಯ ಪ್ರೇಮಿಗಳು ಕುಟುಂಬಸ್ಥರಾಗಿ ಆಗಮಿಸಿ ಸಾಹಿತ್ಯ ನೋಟಗಳಿಗೆ ಕಣ್ಣಾದರು.
ಬ್ರಿಟಿಷ್ ದಾಸ್ಯದಿಂದ ನಾವಿನ್ನೂ ಹೊರಬಂದಿಲ್ಲ: ಕಂಬಾರ
ಮೂಡಬಿದ್ರೆ (ರತ್ನಾಕರವರ್ಣಿ ವೇದಿಕೆ), ನ.13: ದೇಶಕ್ಕೆ ಸ್ವಾತಂತ್ರ ಲಭಿಸಿ 64 ವರ್ಷ ಸಂದರೂ ಕೂಡ ನಾವಿನ್ನೂ ಬ್ರಿಟಿಷರ ದಾಸ್ಯದಿಂದ ಹೊರಬಂದಿಲ್ಲ. ನಮ್ಮ ಬಗ್ಗೆ, ನಮ್ಮ ಸಂಸ್ಕೃತಿಯ ಬಗ್ಗೆ ಸ್ವತಃ ನಾವೇ ಕೀಳರಿಮೆಯಿಂದ ತೊಳಲಾ ಡುತ್ತಲೇ ಪರಾವಲಂಬಿಗಳಾಗಿ ಬಿಟ್ಟಿದ್ದೇವೆ ಎಂದು ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಕವಿ ಡಾ.ಚಂದ್ರಶೇಖರ ಕಂಬಾರ ಹೇಳಿದರು.
ಅವರು ರವಿವಾರ ಆಳ್ವಾಸ್ ನುಡಿಸಿರಿಯಲ್ಲಿ ವಿಶೇಷ ಗೌರವ ಸ್ವೀಕರಿಸಿದ ಬಳಿಕ ಸಮಾರೋಪ ಭಾಷಣ ಮಾಡುತ್ತಿದ್ದರು.
ಎರಡು ಸಂಸ್ಕೃತಿಗಳು ಸೇರಿದಾಗ ಬಲಾಢ್ಯ ಸಂಸ್ಕೃತಿಯು ದುರ್ಬಲ ಸಂಸ್ಕೃತಿಯ ಮೇಲೆ ಸವಾರಿ ಮಾಡುತ್ತದೆ ಎಂಬ ಮಾತಿದೆ. ಭಾರತಕ್ಕೆ ಗ್ರೀಕ್ ಮತ್ತು ಮುಸ್ಲಿಮರು ಬಂದು ಆಳಿದರೂ ಕೂಡ ನಮ್ಮ ಸಂಸ್ಕೃತಿಯ ಮೇಲೆ ಯಾವುದೇ ರೀತಿಯ ಹೊಡೆತ ಬೀಳಲಿಲ್ಲ. ಆದರೆ, ಯಾವಾಗ ಬ್ರಿಟಿಷರು ನಮ್ಮ ದೇಶಕ್ಕೆ ಕಾಲಿಟ್ಟರೇ ನಮ್ಮ ಸಂಸ್ಕೃತಿಯ ಅಧಃಪತನ ಕೂಡ ಆರಂಭಗೊಂಡಿತು. ನಮ್ಮಲ್ಲಿನ ಜಾತಿ ಪದ್ಧತಿ, ಸತಿಸಹಗಮನ ಪದ್ಧತಿ, ವಿಧವಾ ವಿವಾಹದ ಬಗ್ಗೆ ಧಗೆ ಹೊತ್ತಿಸಿದರು. ನಮ್ಮ ಸಂಸ್ಕೃತಿಯ ಬಗ್ಗೆ ನಾವೇ ಕೀಳರಿಮೆ ಹುಟ್ಟುವಂತೆ ಮಾಡಿದರು. ವಿದ್ಯೆ ಅಂದರೆ, ಇಂಗ್ಲಿಷ್ ಎಂಬ ಭಾವನೆ ಮೂಡಿಸಿದರು ಎಂದ ಕಂಬಾರ, ಇಂದು ಎಲ್ಲವೂ ಇಂಗ್ಲಿಷ್‌ಮಯವಾಗಿದೆ. ಬೇಲೂರು, ಹಳೆಬೀಡುಗಳ ಕೆತ್ತನೆಗೆ ಶಿಲ್ಪ ಎನ್ನುತ್ತೇವೆ. ಆದರೆ, ಕಟ್ಟಡ ನಿರ್ಮಾಣಗಾರರನ್ನು ಎಂಜಿನಿಯರ್ ಅನ್ನುತ್ತೇವೆ. ಇದು ನಮ್ಮ ವೈಶಿಷ್ಟತೆ. ಇಂತಹವುಗಳ ವೌಲ್ಯಗಳನ್ನು ಬ್ರಿಟಿಷರು ನಾಶಪಡಿಸಿದರು ಎಂದರು.
ಬ್ರಿಟಿಷರು ದೇವರ ಮತ್ತು ಕುಟುಂಬದ ಜತೆಗಿನ ಜನರ ಸಂಬಂಧವನ್ನೂ ದೂರ ಮಾಡಿದರು. ಅಷ್ಟೇ ಅಲ್ಲ, ಭೂಮಿ ಮತ್ತು ಮನುಷ್ಯರ ಸಂಬಂಧವನ್ನೂ ನಾಶಮಾಡಿದರು. ಅದಕ್ಕೆ ಪೂರಕವಾಗಿ ಇಂದು ನಮ್ಮನ್ನು ಆಳುವವರು ಫಲವತ್ತಾದ ಭೂಮಿಗಳನ್ನು ಮಾರಾಟ ಮಾಡಲು ಸಹಕರಿಸುತ್ತಾರೆ ಎಂದು ಕಂಬಾರ ವಿಷಾದಿಸಿದರು.
ನಾಡೋಜ ಕೆ.ಎಸ್.ನಿಸಾರ್ ಅಹ್ಮದ್, ಪ್ರೊ.ಚಂದ್ರ ಶೇಖರ ಪಾಟೀಲ, ಎಂ.ವಿ.ಕಾಮತ್, ಡಾ.ಸಿ.ಎನ್. ರಾಮಚಂದ್ರನ್, ಚಿದಂಬರ ರಾವ್ ಜಂಬೆ, ಚಿತ್ರನಟ ಶ್ರೀನಾಥ್, ಡಾ.ಬಿ.ಟಿ.ಲಲಿತಾ ನಾಯಕ್, ಬಿ.ಕೆ.ಸುಮಿತ್ರಾ, ಪಾಂಡವಪುರ ಅಂಕೇಗೌಡ, ಮಾಚಾರ್ ಗೋಪಾಲ ನಾಯ್ಕ ಅವರಿಗೆ ತಲಾ 10 ಸಾವಿರ ರೂ. ನಗದು, ಶಾಲು, ಹಾರ, ಹಣ್ಣು ಹಂಪಲು, ಸನ್ಮಾನ ಪತ್ರ ಮತ್ತು ಕಿರೀಟ ಸ್ಮರಣಿಕೆಯನ್ನಿತ್ತು ‘ಆಳ್ವಾಸ್ ನುಡಿಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಶೇಷ ಗೌರವಕ್ಕೆ ಪಾತ್ರರಾದ ಡಾ.ಚಂದ್ರಶೇಖರ ಕಂಬಾರ ಅವರಿಗೆ 10 ಸಾವಿರ ರೂ. ನಗದು, ಶಾಲು, ಹಾರ, ಸನ್ಮಾನ ಪತ್ರ, ಸ್ಮರಣಿಗೆ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ನಾಡೋಜ ಎಂ.ಎಂ.ಕಲಬುರ್ಗಿ, ಶಾಸಕ ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಜಯಶ್ರೀ ಅಮರನಾಥ ಶೆಟ್ಟಿ ಉಪಸ್ಥಿತರಿದ್ದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ ಪ್ರಾಸ್ತಾವಿಕ ಭಾಷಣದೊಂದಿಗೆ ಸ್ವಾಗತಿಸಿದರು. ವೇಣುಗೋಪಾಲ ಶೆಟ್ಟಿ ವಂದಿಸಿದರು. ಡಾ.ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು

Leave a Reply

Top