ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲ; ಸ್ವಾತಂತ್ರ್ಯ ಉದ್ಯಾನದಲ್ಲಿ ನಿರಶನ

ಬೆಂಗಳೂರು: ಪ್ರಬಲ ಲೋಕಪಾಲ ಮಸೂದೆಗೆ ಆಗ್ರಹಿಸಿ ಮುಂಬೈನ ಎಂಎಂಆರ್‌ಡಿ ಮೈದಾನದಲ್ಲಿ ಮಂಗಳವಾರದಿಂದ (ಡಿ.27) ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಅಣ್ಣಾ ಹಜಾರೆ ಹೋರಾಟವನ್ನು ಬೆಂಬಲಿಸಿ, `ಭ್ರಷ್ಟಾಚಾರ ವಿರುದ್ಧ ಭಾರತ ಸಂಘಟನೆ`ಯು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ತೀರ್ಮಾನಿಸಿದೆ.
ಮಂಗಳವಾರದಿಂದ (ಡಿ.27) ಗುರುವಾರದ ತನಕ ಉಪವಾಸ ಸತ್ಯಗ್ರಹ ಹಾಗೂ ಶುಕ್ರವಾರ (ಡಿ.30) ರಂದು ಜೈಲ್ ಭರೋ ಆಂದೋಲನ ಹಮ್ಮಿಕೊಂಡಿದೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, `ಕೇಂದ್ರ ಸರ್ಕಾರ ಪ್ರಬಲ ಲೋಕಪಾಲ ಮಸೂದೆ ಜಾರಿ ಮಾಡುವುದಾಗಿ ಹೇಳಿ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿದೆ. ಕೇಂದ್ರ ಸರ್ಕಾರ ಸಿದ್ದಪಡಿಸರುವ ಮಸೂದೆಯ ಮೇಲೆ ನಂಬಿಕೆ ಇಲ್ಲ` ಎಂದು ಅಸಮಧಾನ ವ್ಯಕ್ತಪಡಿಸಿದರು.
`ಪ್ರಬಲ ಮಸೂದೆ ಮಂಡನೆಯಾದರೆ ಸಂಸತ್‌ನಲ್ಲಿರುವ ಭ್ರಷ್ಟರೇ ಮೊದಲು ಜೈಲಿಗೆ ಹೋಗುತ್ತಾರೆ. ಮಸೂದೆ ಮಂಡನೆಯಾಗುವವರೆಗೆ ಹೋರಾಟ ನಡೆಸಲಾಗುತ್ತದೆ. 
ವೇದಿಕೆಯ ಸದಸ್ಯ ಪೃಥ್ವಿರೆಡ್ಡಿ, `ಜೈಲ್ ಭರೋ ಚಳವಳಿಯಲ್ಲಿ ಪಾಲ್ಗೊಳ್ಳಲು ಸುಮಾರು 10 ಸಾವಿರ ಮಂದಿ ಈಗಾಗಲೇ ಹೆಸರು ನೋಂದಾಯಿಸಿದ್ದಾರೆ. ವೇದಿಕೆಯ ಸದಸ್ಯರು ಹಣ ವಸೂಲಿ ಮಾಡಲು ಮುಂದಾಗಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ. ಯಾವುದೇ ರೀತಿಯ ಹಣ ವಸೂಲಿಯಲ್ಲಿ ಕಾರ್ಯಕರ್ತರು ತೊಡಗಿಲ್ಲ` ಎಂದು ಸ್ಪಷ್ಟಪಡಿಸಿದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, `ರಾಜ್ಯದ ಹಲವು ಜಿಲ್ಲೆಗಳಿಂದ ರೈತ ಸಂಘಟನೆಗಳು, ಹಾಗೂ ರೈತರು ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿದ್ದಾರೆ` ಎಂದರು
Please follow and like us:
error