ರಾಜ್ಯಾದ್ಯಂತ ಜಿಲ್ಲಾಧಿಕಾರಿ ಕಛೇರಿಗಳ ಎದುರು ಮಾರ್ಚ್ ೧೫, ೨೦೧೨ರಂದು ಯುವಜನರ ಪ್ರತಿಭಟನೆ

ಬಜೆಟ್‌ನಲ್ಲಿ ಉದ್ಯೋಗ ಸೃಷ್ಠಿ ಮತ್ತು ನಿರುದ್ಯೋಗ ಭತ್ಯೆಗಾಗಿ ಡಿ.ವೈ.ಎಫ್.ಐ. ಹಕ್ಕೊತ್ತಾಯ :
ರಾಜ್ಯ ಸರ್ಕಾರಕ್ಕೆ ಯುವಜನತೆಯ ಮೇಲೆ ನೈಜ ಕಾಳಜಿ ಇದ್ದಲ್ಲಿ ಈ ಭಾರಿಯ ಬಜೆಟ್‌ನ ಮುಖಾಂತರ ಖಾಲಿ ಇರುವ ೧,೮೦,೦೦೦ ಸರ್ಕಾರಿ ಹುದ್ದೆಗಳು ಹಾಗೂ ೨೦,೦೦೦ ಅಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಬೇಕು. ಸರ್ಕಾರಿ ಇಲಾಖೆಗಳಲ್ಲಿನ ಬಹುತೇಕ ಗೂಪ್ ಡಿ ನೌಕರರು, ಸ್ವಚ್ಚತಾಗಾರರು, ಸೆಕ್ಯೂರಿಟಿ ನೌಕರರು ಸೇರಿದಂತೆ ಸೇವಾ ವಲಯದ ನೌಕರರನ್ನು ಸಂಪೂರ್ಣವಾಗಿ ಹೊರ ಗುತ್ತಿಗೆಯಿಂದ ನೇಮಿಸಿಕೊಳ್ಳಲಾಗುತ್ತಿದೆ. ಇದನ್ನು ತಡೆಗಟ್ಟಿ ಮೀಸಲಾತಿ ಅನುಸಾರ ಎಲ್ಲರನ್ನೂ ಖಾಯಂಗೊಳಿಸಬೇಕು. ಎಲ್ಲಾ ಇಲಾಖೆಗಳಲ್ಲಿರುವ ಕಂಪ್ಯೂಟರ್ ಆಪರೇಟರ್‌ಗಳು (ಡಿಟಿಪಿ-ಆನ್‌ಲೈನ್) ಇನ್ನಿತರೆ ವಿಭಾಗಗಳಲ್ಲಿರುವ ಗುತ್ತಿಗೆ-ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು. ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿರುವ ೩೮೦೦೦೦ ಶಿಕ್ಷಕ ಹುದ್ದೆಗಳನ್ನು ತಕ್ಷಣವೇ ತುಂಬಬೇಕು. 
ರಾಜ್ಯದಲ್ಲಿರುವ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ಬೋಧಕ-ಬೋಧಕೇತರ ಹುದ್ದೆಗಳು ಶೇಕಡಾ ೪೮ರಷ್ಟು ಖಾಲಿ ಇವೆ. ರಾಜ್ಯಾದ್ಯಂತ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಶೇಕಡಾ ೩೨ರಷ್ಟು ಹುದ್ದೆಗಳು ಖಾಲಿ ಇವೆ. ರಾಜ್ಯಾದ್ಯಂತ ಸರ್ಕಾರಿ ಕಾಲೇಜುಗಳಲ್ಲಿ ೩೦೦೦ ಅತಿಥಿ ಉಪನ್ಯಾಸಕರು ವರ್ಷಕ್ಕೊಮ್ಮೆಯೂ ಸಂಬಳವಿಲ್ಲದೆ ದುಡಿಯುತ್ತಿದ್ದಾರೆ. ಅದೇ ರೀತಿಯಲ್ಲಿ ಐಇಡಿ ಶಿಕ್ಷಕರು, ಕಂಪ್ಯೂಟರ್ ತರಬೇತಿ ಶಿಕ್ಷಕರು, ಭೂಮಾಪಕರು, ಆರೋಗ್ಯ ಇಲಾಖೆಯಲ್ಲಿನ ಶುಶ್ರೂಷಕಿಯರು, ೧೦೮ ಆಂಬ್ಯೂಲೆನ್ಸ್‌ನ ಆರೋಗ್ಯ ಸಹಾಯಕರು, ವಿದ್ಯುತ್ ಇಲಾಖೆಯಲ್ಲಿನ ಗುತ್ತಿಗೆ- ದಿನಗೂಲಿ ನೌಕರರು, ಅಂಗನವಾಡಿ, ಬಿಸಿಯೂಟ, ಗ್ರಾಮ ಪಂಚಾಯ್ತಿ ನೌಕರರು, ಹಮಾಲಿಗಳು, ಮಹಾನಗರ-ನಗರ, ಪುರಸಭೆಗಳ ವ್ಯಾಪ್ತಿಯಲ್ಲಿನ ಸಫಾಯಿ -ಕರ್ಮಚಾರಿಗಳು ಹೀಗೆ ಬೆಳೆಯುವ ಪಟ್ಟಿಯಲ್ಲಿ ಕನಿಷ್ಠ ವೇತನವಿಲ್ಲದೆ ಅಭದ್ರತೆಯಲ್ಲಿ ಲಕ್ಷಾಂತರ ಯುವಜನರು ದುಡಿಯುತ್ತಿದ್ದಾರೆ ಇಲ್ಲವೆ ಗುತ್ತಿಗೆ-ಹೊರಗುತ್ತಿಗೆ ಮುಖಾಂತರ ನಿಷ್ಕೃಷ್ಠವಾಗಿ ದುಡಿಸಿಕೊಳ್ಳಲಾಗುತ್ತಿದೆ. ಹೀಗೆ ಒಟ್ಟಾರೆ ಶೇಕಡಾ ೮೬ರಷ್ಟು ಅಸಂಘಟಿತ ವಲಯದಲ್ಲಿ ದುಡಿಯುವ ಯುವಜನತೆಗೆ ಕನಿಷ್ಠ ವೇತನವಿಲ್ಲ. 
ಇನ್ನು ಸರ್ಕಾರ ಮತ್ತು ಸರ್ಕಾರೇತರ ಮೂಲಭೂತ ಸೌಕರ್ಯಗಳ ನಿರ್ಮಾಣ ಮತ್ತು ಕಟ್ಟಡ ನಿರ್ಮಾಣಗಳಲ್ಲಿ ಅತಿದೊಡ್ಡ ಪ್ರಮಾಣದ ಯಂತ್ರೋಪಕರಣಗಳ ಬಳಕೆಯಿಂದಾಗಿ ನಿರುದ್ಯೋಗ ಹೆಚ್ಚಳ. ಕೃಷಿ ರಂಗದಲ್ಲೂ ಯಂತ್ರಗಳ ಯಥೇಚ್ಛದಿಂದಾಗಿ ಉದ್ಯೋಗ ನಾಶ. ಈ ಎಲ್ಲಾ ಕಾರಣಗಳಿಂದಾಗಿ ರಾಜ್ಯದ್ಲಲಿ ೧,೬೦,೦೦೦ ನಿರುದ್ಯೋಗಿಗಳಿದ್ದಾರೆ. ಹೀಗಾಗಿ ಪ್ರತಿದಿನ ನಿರುದ್ಯೋಗ-ಬಡತನದ ಬೇಗೆಯಲ್ಲಿ ಬೆಂದು ಕುಟುಂಬ ಸಮೇತ (ಎಳೆಯ ಕಂದಮ್ಮಗಳ ಜೊತೆಯಲ್ಲಿ) ಆತ್ಮಹತ್ಯೆಯ ಹಾದಿ ಹಿಡಿಯುತ್ತಿರುವುದನ್ನು ನೋಡುತ್ತಿದ್ದೇವೆ. 
ಇಂತಹ ಜ್ವಲಂತ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿರುವ ಯುವಜನತೆಯನ್ನು ರಕ್ಷಿಸಲು ಆಳುವ ಸರ್ಕಾರಗಳು ಉದ್ಯೋಗ ಸೃಷ್ಟಿಸುವಂತಹ ದೂರದೃಷ್ಠಿ ಯೋಜನೆಗಳನ್ನು ತರಬೇಕಿತ್ತು. ಸರ್ಕಾರಿ ಶಾಲಾ-ಕಾಲೇಜುಗಳು, ಸರ್ಕಾರಿ ಆಸ್ಪತ್ರೆಗಳು ಮತ್ತು ಜನಕಲ್ಯಾಣ ಸಂಸ್ಥೆಗಳನ್ನು ಅಗತ್ಯಕ್ಕೆ ತಕ್ಕಂತೆ ಹೆಚ್ಚಿಸಬೇಕಿತ್ತು. ಉದ್ಯೋಗ ಸೃಷ್ಟಿಸುವಂತಹ ರೀತಿಯಲ್ಲಿ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಉದ್ದಿಮೆಗಳನ್ನು ಮತ್ತು ಮದ್ಯಮ-ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ ದೊರಕಿಸಿಕೊಡಬೇಕಿತ್ತು. 
ಇಂತಹ ಯುವಜನ ಪರ ನೀತಿಯನ್ನು ಬಿಜೆಪಿ ಸರ್ಕಾರ ಅನುಸರಿಸದೆ, ಯುವಜನ ವಿರೊಧಿ ನೀತಿಯನ್ನು ಅನುಸರಿಸಿ ಕಳೆದ ತನ್ನ ಕಳೆದ ೩ ಬಜೆಟ್‌ಗಳ ಮೂಲಕ ಯುವಜನತೆಯನ್ನು ಶೋಷಿಸುತ್ತಿದೆ. ಉದಾ.: ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಮುಚ್ಚುವುದು. (ರಾಜ್ಯ ಸರ್ಕಾರದಡಿಯಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮತ್ತು ತೆಂಗು ನಾರು ಅಭಿವೃದ್ಧಿ ಮಂಡಳಿ………… ಮುಂತಾದವು ಅವಸಾನದ ಅಂಚಿನಲ್ಲಿರುವುದು) ಉದ್ಯೋಗ ನೀಡುವಂತಹ ಗುಡಿ ಕೈಗಾರಿಕೆಗಳಿಗೆ ಆಧ್ಯತೆ ನೀಡದಿರುವುದು. ಜೊತೆಗೆ ೨೦೧೦ರ ವಿಶ್ವ ಬಂಡವಾಳ ಹೂಡಿಕೆ ಸಮಾವೇಶಕ್ಕೆ ಕೋಟಿಗಟ್ಟಲೆ ಹಣ ಖರ್ಚು ಮಾಡಿದ್ದ ರಾಜ್ಯ ಸರ್ಕಾರ, ೩೮೯ ಕಂಪನಿಗಳ ಒಡಂಬಡಿಕೆಗಳಿಗೆ ಸಹಿ ಹಾಕಿತ್ತು. ಇವುಗಳಲ್ಲಿ ಕೇವಲ ೩೧ ಮಾತ್ರ ಕಾರ್ಯ ರೂಪಕ್ಕೆ ಬರುತ್ತಿವೆ ಎಂದು ರಾಜ್ಯ ಸರ್ಕಾರವೇ ಹೇಳಿಕೊಂಡಿದೆ. ಸಾವಿರಾರು ಎಕರೆ ಕೃಷಿಭೂಮಿಯನ್ನು ವಶಪಡಿಸಿಕೊಂಡಿರುವ ಈ ೩೧ ಉದ್ಯಮಗಳು ಉದ್ಯೋಗ ಸೃಷ್ಟಿಸುವುದಿಲ್ಲ. ಬದಲಿಗೆ ಸಾವಿರಾರು ಎಕರೆಯಲ್ಲಿ ಲಕ್ಷಾಂತರ ಜನತೆಯ ಬದುಕಿಗೆ ಆಸರೆಯಾಗಿದ್ದ ಕೃಷಿಯಾಧಾರಿತ ಭೂಮಿಯನ್ನು ಕಿತ್ತುಕೊಂಡಿದ್ದರ ಪರಿಣಾಮ ಇಡಿ-ಇಡಿಯಾಗಿ ಜನತೆ ಹೊರದಬ್ಬಲ್ಪಟ್ಟಿದ್ದಾರೆ. ಭೂಮಿ ಕಳೆದುಕೊಂಡವರಿಗೆ ಈ ಉಧ್ಯಮಗಳಲ್ಲಿ ಉದ್ಯೋಗ ಸೃಷ್ಠಿಸುವ ಪ್ರಶ್ನೆಯೇ ಇಲ್ಲ? ಏಕೆಂದರೆ, ಅತ್ಯಂತ ಆಧುನಿಕ ಯಂತ್ರೋಪಕರಣಗಳನ್ನು ಬಳಸುವ ಮೂಲಕ ಅತ್ಯಂತ ಉನ್ನತ ಕೌಶಲ್ಯಭರಿತ ಕೆಲವೇ .೨.
/ ೨ /
ಬೆರಳೇಣಿಕೆಯಷ್ಟು ಜನತೆಗೆ ಉದ್ಯೋಗ ದೊರಕುತ್ತಿದೆ. ಇನ್ನೊಂದೆಡೆ ಬಿಜೆಪಿ ರಾಜ್ಯ ಸರ್ಕಾರ ಮುಗಿಬಿದ್ದು ಹೊಟೆಲ್‌ಗಳ ಮತ್ತು ಪ್ರವಾಸಿ ತಾಣಗಳ ಖಾಸಗಿ ಉದ್ಯಮಗಳಿಗೆ ಆಧ್ಯತೆ ನೀಡಿ, ಐಶಾರಾಮಿ ಜೀವನ ನಡೆಸುವವರಿಗೆ ಮಾತ್ರ ಉತ್ತೇಜನ ನೀಡುತ್ತಿದೆ. ಇದಕ್ಕಾಗಿಯೇ ಹಲವಾರು ರೀತಿಯ ಸಮಿತಿಗಳನ್ನು ರಚಿಸಿ, ರೈತರ ಭೂಮಿಯನ್ನು ವಶಪಡಿಸಿಕೊಳ್ಳಲು ಸಂಚುಗಳನ್ನು ರೂಪಿಸುತ್ತಿದೆ. ಹೀಗಾಗಿಯೇ ಜೂನ್, ೦೨, ೨೦೧೨ರಲ್ಲಿ ಮೊತ್ತೊಮ್ಮೆ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಮುಂದಾಗುತ್ತಿರುವುದು. ಇಂತಹ ಉದ್ಯೋಗ ನಾಶದ ಯೋಜನೆಯ ಮುಂದೆ ಯುವಜನ ಪರ ಬಜೆಟ್ ನಮ್ಮದು ಎಂದು ಹೇಳುವ ಮುಖಾಂತರ ವಾಸ್ತವವಾಗಿ ರಾಜ್ಯ ಸರ್ಕಾರ ಯುವಜನತೆಯನ್ನು ವಂಚಿಸುತ್ತಿದೆ. ಈ ರೀತಿಯ ನಯವಂಚಕ ಉದ್ಯೋಗ ನಾಶ, ವಿರಾಟ ಸ್ವರೂಪದ ಭಷ್ಟಾಚಾರ, ಧಾರ್ಮಿಕ ಭಷ್ಟಾಚಾರಗಳಿಂದಾಗಿ ಅಗತ್ಯವಿರುವಷ್ಟು ಸಂಪನ್ಮೂಲಗಳನ್ನು ಪ್ರಸಕ್ತ ವರ್ಷದ ಬಜೆಟ್‌ಗೆ ಶೇಖರಣೆ ಮಾಡಲಾಗದೆ ಅತ್ಯಂತ ಸಣ್ಣ ಪ್ರಮಾಣದ ಬಜೆಟ್ ರಾಜ್ಯ ಸರ್ಕಾರದ್ದಾಗಿದೆ. 
ಇಂತಹ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಸರ್ಕಾರಕ್ಕೆ ಯುವಜನತೆಯ ಮೇಲೆ ನೈಜ ಕಾಳಜಿ ಇದ್ದಲ್ಲಿ ಈ ಕೆಳಕಂಡಂತಹ ಹಕ್ಕೊತ್ತಾಯಗಳ ಈಡೇರಿಕೆಗೆ ಪೂರಕವಾಗಿ ಉದ್ಯೋಗ ಸೃಷ್ಠಿಗಾಗಿ ಮತ್ತು  ಉದ್ಯೋಗ ಸಿಗುವವರೆಗೂ ನಿರುದ್ಯೋಗ ಭತ್ಯೆ ನೀಡುವಂತಹ ಯುಜನಪರ ಬಜೆಟ್ ಮಂಡಿಸಬೇಕು. ಆಗ ಮಾತ್ರ ಯುವಜನ ಪರ ಬಜೆಟ್ ಎಂದು ಸಾಬೀತಾಗುತ್ತದೆ. ಹೀಗಾಗಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಡಿವೈಎಫ್‌ಐ ಯುವಜನ ಸಂಘಟನೆ ಈ ಕೆಳಕಂಡ ಹಕ್ಕೊತ್ತಾಯಗಳ ಈಡೇರಿಕೆಗಾಗಿ ಮಾಚ್, ೧೫, ೨೦೧೨ರಂದು ಜಿಲ್ಲಾಧಿಕಾರಿ ಕಛೇರಿಗಳೆದುರು ಪ್ರತಿಭಟನೆ ಹಮ್ಮಿಕೊಂಡಿದೆ. 
ಹಕ್ಕೊತ್ತಾಯಗಳು :
೧. ಖಾಲಿ ಇರುವ ೧,೮೦,೦೦೦ ಸರ್ಕಾರಿ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು 
೨. ೫,೦೦೦ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗಾಗಿ ಹಾಗೂ ಖಾಸಗಿ ವಲಯದಲ್ಲಿ ಮೀಸಲಾತಿಯನ್ನು ಜಾರಿಗೊಳಿಸಬೇಕು
೩. ಉದ್ಯೋಗ ನೇಮಕಾತಿ ಮೇಲಿನ ನಿರ್ಬಂದ ಹಿಂತೆಗೆಯಬೇಕು
೪. ಸರ್ಕಾರಿ / ಖಾಸಗಿ ವಲಯದಲ್ಲಿ ಹೊರಗುತ್ತಿಗೆ ರದ್ದಾಗಬೇಕು
೫. ನಿರುದ್ಯೋಗಿ ಯುವಜನರಿಗೆ ಉದ್ಯೋಗ ಸಿಗುವವರೆಗೆ ನಿರುದ್ಯೋಗ ಭತ್ಯೆ ನೀಡಬೇಕು 
೬. ಸರ್ಕಾರಿ / ಖಾಸಗಿ ವಲಯದಲ್ಲಿ ನಿವೃತ್ತರ ನೇಮಕಾತಿ ನಿಲ್ಲಬೇಕು
೭. ಸರ್ಕಾರಿ ಸೇವಾ ವಲಯಗಳನ್ನು (ಶಾಲಾ ಕಾಲೇಜುಗಳು, ಆಸ್ಪತ್ರೆಗಳು, ಸಮಾಜ ಕಲ್ಯಾಣ…..) ವಿಸ್ತರಿಸಬೇಕು 
೮. ಲೋಕಾಯುಕ್ತ ವರದಿಯನ್ನು ಅನುಷ್ಠಾನಕ್ಕೆ ತರಬೇಕು, ಭಷ್ಟಾಚಾರ ಎಸಗುವವರಿಗೆ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು
೯. ಭ್ರಷ್ಟಾಚಾರದ ಮೂಲ ಗಂಗೋತ್ರಿಯಾದ ಖಾಸಗಿಕರಣದ ನೀತಿಗಳನ್ನು ಕೈಬಿಡಬೇಕು.
೧೦. ಶಿಕ್ಷಣ ವ್ಯಾಪಾರೀಕರಣ ತಡೆಗಟ್ಟಿ, ಎಲ್ಲಾ ಬಡವರಿಗೂ ಉಚಿತವಾದ ಸಮಾನ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ಇದಕ್ಕಾಗಿ ರಾಜ್ಯ ಸರ್ಕಾರ ಶೇಕಡಾ ೩೦% ರಷ್ಟು ಹಣವನ್ನು ಬೆಜೆಟ್‌ನಲ್ಲಿ ಮೀಸಲಿಡಬೇಕು.
೧೧. ಯುವತಿಯರ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಜಾರಿಗೊಳಿಸಬೇಕು
೧೨. ಸ್ಥಳೀಯ ಸಂಪನ್ಮೂಲಗಳನ್ನು ಆಧರಿಸಿ, ಕೇಂದ್ರ ಸರ್ಕಾರದ ನೆರವಿನೊಂದಿಗೆ ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸಬೇಕು, ಗಣಿ, ಉಕ್ಕು, ವಿದ್ಯುತ್, ರೈಲ್ವೆ, ಇಂಧನ ಮುಂತಾದ ಕ್ಷೇತ್ರಗಳಿಗೆ ಆಧ್ಯತೆ ನೀಡಬೇಕು.
೧೩. ಸ್ವಯಂ ಉದ್ಯೋಗಕ್ಕಾಗಿ ಸಬ್ಸಿಡಿ ಸಹಿತ, ಜಾಮೀನು ರಹಿತ ಸಾಲ ನೀಡಬೇಕು
೧೪. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭಷ್ಟಾಚಾರ ತಡೆಗಟ್ಟಿ ಸಮರ್ಪಕ ಜಾರಿಗೆ ಮುಂದಾಗಬೇಕು
೧೫. ಉದ್ಯೋಗ ಅರ್ಜಿ ಶುಲ್ಕಗಳನ್ನು ರದ್ದುಗೊಳಿಸಬೇಕು, ಆನ್‌ಲೈನ್ ಉದ್ಯೋಗ ಅರ್ಜಿಗಳನ್ನು ಕಡ್ಡಾಯಗೊಳಿಸಬಾರದು
೧೬. ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ನಗರ ಉದ್ಯೋಗ ಖಾತ್ರಿ ಯೋಜನೆಯನು ಜಾರಿಗೆ ತರಬೇಕು
೧೭. ಹೆಚ್.ಎಂ.ಟಿ. ಮತ್ತು ಮೈಸೂರು ಲ್ಯಾಂಪ್ಸ್, ಕೋಲಾರ ಗೋಲ್ಡ್ ಮೈನ್ಸ್ ಮುಂತಾದ ಸಾರ್ವಜನಿಕ ಉದ್ದಿಮೆಗಳ ಪುನಃಶ್ಚೇತನಕ್ಕೆ ಸರ್ಕಾರವೇ ಮುಂದಾಗಬೇಕು.
೧೮. ಅಸಂಘಟಿತ ವಲಯದ ಕಾರ್ಮಿಕರಿಗೆ ಗ್ರಾಮಾಂತರದಲ್ಲಿ ಕನಿಷ್ಠ ರೂ. ೬,೦೦೦/- ನಗರ ಪ್ರದೇಶದಲ್ಲಿ 
ರೂ. ೧೦,೦೦೦/- ಕನಿಷ್ಠ ವೇತನ ನಿಗಧಿಗೊಳಿಸಬೇಕು.
೧೯. ಬಡವರಿಗೆ / ವಸತಿ – ನಿವೇಶನ,  ಪಡಿತರ ಚೀಟಿ, ಕುಡಿಯುವ ನೀರು, ಒಳಚರಂಡಿ, ವಿದ್ಯುತ್ ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.
೨೦. ತಾಲ್ಲೂಕು ವಲಯಕ್ಕೊಂದು ಕ್ರೀಡಾ, ಸಾಂಸ್ಕೃತಿಕ ಕೇಂದ್ರಗಳನ್ನು ಸ್ಥಾಪಿಸಬೇಕು. ಎಲ್ಲಾ ಯುವಕ-ಯುವತಿಯರಿಗೆ ಅವಕಾಶ ನೀಡಿ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು.
 (ಬಿ. ರಾಜಶೇಖರಮೂರ್ತಿ)
   ರಾಜ್ಯ ಕಾರ್ಯದರ್ಶಿ

Leave a Reply