ರಸಗೊಬ್ಬರ ಮಾರಾಟಗಾರರ ನೊಂದಣಿಗೆ ಸೂಚನೆ

ಕೊಪ್ಪಳ ಡಿ.  ಜಿಲ್ಲೆಯ ಎಲ್ಲಾ ಸಗಟು ಮತ್ತು ಚಿಲ್ಲರೆ ರಸಗೊಬ್ಬರ ಮಾರಾಟಗಾರರು ಎಂ.ಎಫ್.ಎಮ್.ಎಸ್. ಯೋಜನೆಯಡಿ ಕಡ್ಡಾಯವಾಗಿ ನೋಂದಣಿ ಮಾಡಿಸುವಂತೆ ಜಂಟಿಕೃಷಿ ನಿರ್ದೇಶಕರು ಸೂಚನೆ ನೀಡಿದ್ದಾರೆ.

  ಕೇಂದ್ರ ಸರ್ಕಾರವು ರಸಗೊಬ್ಬರ ಪೂರೈಕೆಯ ಸಮರ್ಪಕ ಉಸ್ತುವಾರಿಗಾಗಿ ಮೊಬೈಲ್ ಫರ್ಟಿಲೈಜರ್ ಮಾನಿಟರಿಂಗ್ ಸಿಸ್ಟಮ್ (ಎಂ.ಎಫ್.ಎಮ್.ಎಸ್.) ಯೋಜನೆಯನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಿದೆ.  ಪ್ರಥಮ ಹಂತದಲ್ಲಿ ಈ ಯೋಜನೆಯು ೨೦೧೨ ರ ಜನವರಿ ೦೧ ರಿಂದ ಜಾರಿಗೊಳಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದ್ದು, ಅದರನ್ವಯ ಖಾಸಗಿ ಮತ್ತು ಸಹಕಾರ ಸಂಸ್ಥೆಗಳನ್ನೊಳಗೊಂಡಂತೆ ಎಲ್ಲಾ ಸಗಟು ಮತ್ತು ಚಿಲ್ಲರೆ ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ಎಂ.ಎಫ್.ಎಮ್.ಎಸ್. ನಡಿ ನೋಂದಣಿ ಮಾಡಿಸಿಕೊಳ್ಳಬೇಕು.  ಈಗಾಗಲೆ ಎಲ್ಲಾ ಜಿಲ್ಲೆಗಳಲ್ಲಿ ಸಂಬಂಧಪಟ್ಟ ರಸಗೊಬ್ಬರ ತಯಾರಕರು ತರಬೇತಿ ನಡೆಸಿ ಯೋಜನೆಯ ಬಗ್ಗೆ ವಿವರ ನೀಡಿರುತ್ತಾರೆ.  ಈಗ ನೋಂದಣಿಯು ಪ್ರಗತಿಯಲ್ಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಎಲ್ಲಾ ಖಾಸಗಿ ಮತ್ತು ಸಹಕಾರಿ ರಸಗೊಬ್ಬರ ಮಾರಾಟಗಾರರು ಕೃಷಿ ಇಲಾಖೆ ನೀಡಿರುವ ರಸಗೊಬ್ಬರ ಮಾರಾಟ ಪರವಾನಗಿ ವಿವರಗಳನ್ನು ನೀಡಿ ಸಂಬಂಧಪಟ್ಟ ಜಿಲ್ಲಾ ರಸಗೊಬ್ಬರ ತಯಾರಕರ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಿ ಎಂ.ಎಫ್.ಎಮ್.ಎಸ್. ಅಡಿ ನೋಂದಾಯಿಸಿಕೊಳ್ಳಬೇಕು.  ನೋಂದಣಿ ಮಾಡಿಸದೆ ಇರುವ ರಸಗೊಬ್ಬರ ಮಾರಾಟಗಾರರಿಗೆ ತಯಾರಕರಿಂದ ೨೦೧೨ ರ ಜನವರಿ ೦೧ ರಿಂದ ರಸಗೊಬ್ಬರ ಪೂರೈಕೆಗೆ ಅವಕಾಶವಿರುವುದಿಲ್ಲ.  ಅಲ್ಲದೆ ರಸಗೊಬ್ಬರ ಮಾರಾಟ ಪರವಾನಗಿಯನ್ನು ಸಹ ನವೀಕರಿಸಲಾಗುವುದಿಲ್ಲ.  ಹೆಚ್ಚಿನ ವಿವರಗಳನ್ನು ಆಯಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಜಂಟಿಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಜಂಟಿಕೃಷಿ ನಿರ್ದೇಶಕ ಬಾಲರೆಡ್ಡಿ ಅವರು ತಿಳಿಸಿದ್ದಾರೆ.
Please follow and like us:
error