fbpx

ಗ್ರಾಹಕ ಜಾಗೃತನಾದಾಗ ಮಾತ್ರ ನ್ಯಾಯ ಪಡೆಯಲು ಸಾಧ್ಯ- ಡಾ. ಸುರೇಶ್ ಇಟ್ನಾಳ್

ಕೊಪ್ಪಳ ಮಾ. ೧೯  : ಗ್ರಾಹಕ ಹಿತರಕ್ಷಣೆಗಾಗಿ ಕಾಯ್ದೆ ಕಾನೂನುಗಳು ಜಾರಿಯಲ್ಲಿದ್ದು, ಇವುಗಳ ಬಗ್ಗೆ ಪ್ರತಿಯೊಬ್ಬ ಗ್ರಾಹಕ ಅರಿವು ಹೊಂದಿದಾಗ ಮಾತ್ರ ಶೋಷಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅಭಿಪ್ರಾಯಪಟ್ಟರು.
  ಜಿಲ್ಲಾಡಳಿತ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ನಾಗರಿಕ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಗುರುವಾರದಂದು ಏರ್ಪಡಿಸಲಾದ ವಿಶ್ವ ಗ್ರಾಹಕರ ದಿನಾಚರಣೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ಅಮೆರಿಕಾ ಅಧ್ಯಕ್ಷರಾಗಿದ್ದ ಜಾನ್ ಎಫ್ ಕೆನಡಿ ಅವರು ೧೯೬೨ ರ ಮಾರ್ಚ್ ೧೫ ರಂದು ಮೊಟ್ಟ ಮೊದಲ ಬಾರಿಗೆ ಅಮೆರಿಕಾ ಸಂಸತ್ತಿನಲ್ಲಿ ಗ್ರಾಹಕರ ಹಕ್ಕುಗಳ ರಕ್ಷಣೆ ಕುರಿತಂತೆ ವಿಷಯ ಮಂಡಿಸಿದ್ದರು.  ಇದರ ನೆನಪಿಗಾಗಿ ಪ್ರತಿ ವರ್ಷ ಮಾರ್ಚ್ ತಿಂಗಳಿನಲ್ಲಿ ವಿಶ್ವ ಗ್ರಾಹಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.  ವಿಶ್ವದಲ್ಲಿ ಮನುಷ್ಯನಿಗೆ ಬರುವ ಪ್ರಮುಖ ೦೬ ರೋಗಗಳ ಪೈಕಿ ರಕ್ತದ ಒತ್ತಡ, ಮಧುಮೇಹ, ಕೊಲೆಸ್ಟ್ರಾಲ್ ಹೆಚ್ಚಾಗುವಿಕೆ ಹಾಗೂ ತೂಕದಲ್ಲಿ ಉಂಟಾಗುವ ವ್ಯತ್ಯಾಸ ಸೇರಿದಂತೆ ೦೪ ರೋಗಗಳು ಒಳ್ಳೆಯ ಆಹಾರ ಸೇವಿಸದ ಕಾರಣದಿಂದಲೇ ಬರುವುದರಿಂದ, ಇದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು  ಈ ಬಾರಿಯ ದಿನಾಚರಣೆಗೆ ’ಆರೋಗ್ಯಕರ ಆಹಾರದ ಹಕ್ಕು’ ಎಂಬ ಘೋಷವಾಕ್ಯವನ್ನು ನೀಡಲಾಗಿದೆ.  ಆಧುನಿಕ ಬದುಕಿನ ಜೀವನ ಶೈಲಿ ಹಾಗೂ ಹೆಚ್ಚಿನ ಮಾನಸಿಕ ಒತ್ತಡಗಳಿಂದಾಗಿ ಮನುಷ್ಯ ರೋಗಗಳಿಗೆ ತುತ್ತಾಗುತ್ತಿದ್ದಾನೆ. ನಾವು ಸೇವಿಸುವ ಆಹಾರದ ಬಗ್ಗೆ ಎಲ್ಲರೂ ಎಚ್ಚರಿಕೆಯನ್ನು ವಹಿಸಬೇಕಾಗಿದ್ದು, ಆಹಾರ ಉತ್ಪನ್ನಗಳನ್ನು ಖರೀದಿಸುವಾಗ ಉತ್ತಮ ಗುಣಮಟ್ಟಕ್ಕೆ ಆದ್ಯತೆ ನೀಡಿದಲ್ಲಿ ಮಾತ್ರ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯ.  ಗ್ರಾಹಕನ ಹಿತರಕ್ಷಣೆಗಾಗಿ   ಕಾಯ್ದೆಗಳು ಜಾರಿಯಲ್ಲಿವೆ.  ಆದರೆ ಜನಸಾಮಾನ್ಯರಲ್ಲಿ ಅರಿವಿನ ಕೊರತೆ ಇದೆ.  ಪ್ರತಿಯೊಬ್ಬ ಗ್ರಾಹಕರೂ ಇದರ ಅರಿವು ಹೊಂದಿದಾಗ ಮಾತ್ರ ವಂಚನೆಗೆ ಒಳಗಾಗುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಹೇಳಿದರು.
  ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಬಿ. ಪಾನಗಂಟಿ ಅವರು ಮಾತನಾಡಿ, ಗ್ರಾಹಕರನ್ನು ಜಾಗೃತಗೊಳಿಸಲು ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಹಲವಾರು ಕಾರ್ಯಕ್ರಮಗಳು ಜಾರಿಗೆ ಬಂದಿದ್ದರೂ, ಇದು ನಿರೀಕ್ಷಿತ ಮಟ್ಟದಲ್ಲಿ ಜನರನ್ನು ತಲುಪಲು ಸಾಧ್ಯವಾಗಿಲ್ಲ.  ಹೆಜ್ಜೆ ಹೆಜ್ಜೆಗೂ ಗ್ರಾಹಕರು ಶೋಷಣೆಗೆ, ವಂಚನೆಗೆ ಒಳಗಾಗುತ್ತಿದ್ದಾರೆ.  ಗ್ರಾಹಕರು ಅಸಂಘಟಿತ ವಲಯದವರಾಗಿರುವುದರಿಂದ, ಶೋಷಣೆಯ ವಿರುದ್ಧ ಧ್ವನಿ ಎತ್ತುವ ಸಂಖ್ಯೆಯೂ ವಿರಳವಾಗಿದೆ.  ಗ್ರಾಹಕರನ್ನು ಜಾಗೃತಗೊಳಿಸಲು ಸಾಮಾಜಿಕ ಸಂಘಟನೆ, ಸಂಘ ಸಂಸ್ಥೆಗಳು ಕೈ ಜೋಡಿಸಬೇಕು ಎಂದರು.
  ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಮಾತನಾಡಿ, ಹುಟ್ಟಿನಿಂದ, ಸಾವಿನವರೆಗೂ ಪ್ರತಿ ವ್ಯಕ್ತಿಯೂ ಗ್ರಾಹಕನಾಗುತ್ತಾನೆ.  ಯಾವುದೇ ಸಾಮಗ್ರಿ ಖರೀದಿಸುವಾಗ ಅದರ ತೂಕ, ದರ ಮತ್ತು ಸಾಮಗ್ರಿಯಲ್ಲಿನ ಅಂಶಗಳ ಬಗ್ಗೆ ತಿಳಿದುಕೊಳ್ಳುವುದು ಎಲ್ಲ ಗ್ರಾಹಕರ ಹಕ್ಕಾಗಿದೆ.  ಗ್ರಾಹಕರು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು.  ಶೋಷಣೆಗೆ ಒಳಗಾಗುವ ಗ್ರಾಹಕರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ಸಲ್ಲಿಸಲು ಯಾವುದೇ ಭಯ ಅಥವಾ ಮುಜುಗರಪಡುವ ಅಗತ್ಯವಿಲ್ಲ ಎಂದರು.
  ವಕೀಲೆ ಸಾವಿತ್ರಿ ಮುಜುಂದಾರ್ ಮಾತನಾಡಿ, ಗ್ರಾಹಕರ ಹಕ್ಕುಗಳ ಬಗ್ಗೆ ಈಗಾಗಲೆ ಶಾಲಾ, ಕಾಲೇಜು ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.  ಸಾರ್ವಜನಿಕರು ಬೋಗಸ್ ಕಂಪನಿಗಳ ಅಥವಾ ಜಾಹೀರಾತುಗಳ ಆಸೆ, ಆಮಿಷಗಳಿಗೆ ಒಳಗಾಗಿ ವಂಚನೆಗೆ ಒಳಗಾಗುತ್ತಿರುವುದು ಕಂಡುಬರುತ್ತಿದೆ.  ಈ ನಿಟ್ಟಿನಲ್ಲಿ ಸಾರ್ವಜನಿಕರು ಎಚ್ಚರ ವಹಿಸಬೇಕು.  ರೈತರಿಗೆ ಮಾಹಿತಿಯ ಕೊರತೆಯ ಕಾರಣದಿಂದ ಬಿತ್ತನೆ ಬೀಜ, ಗೊಬ್ಬರ ಇತ್ಯಾದಿ ಕೃಷಿ ಸಾಮಗ್ರಿಗಳನ್ನು ಖರೀದಿಸುವಾಗ ವಂಚನೆಗೆ ಒಳಗಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.  ರೈತರು ಮದ್ಯವರ್ತಿಗಳ ಹಾವಳಿಗೆ ಒಳಗಾಗದೆ, ಸ್ವಯಂ ವಿಚಾರ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
  ವಕೀಲರಾದ ಗೌರಮ್ಮ ಎಲ್. ದೇಸಾಯಿ ಅವರು ಗ್ರಾಹಕರ ಹಕ್ಕುಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.  ನಾಗರಿಕ ವೇದಿಕೆ ಉಪಾಧ್ಯಕ್ಷ ಸಿದ್ದಪ್ಪ ಹಂಚಿನಾಳ ಕಾರ್ಯಕ್ರಮ ಕುರಿತು ಮಾತನಾಡಿದರು.  ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕರಾದ ಅಮೃತಾ ಚವ್ಹಾಣ, ವರ್ತಕರ ಸಂಘದ ಅಧ್ಯಕ್ಷ ರಾಜೇಂದ್ರ ಜೈನ್, ತಹಸಿಲ್ದಾರ್ ಪುಟ್ಟರಾಮಯ್ಯ ಮುಂತಾದವರು ಉಪಸ್ಥಿತರಿದ್ದರು.  ಆಹಾರ ಇಲಾಖೆ ಉಪನಿರ್ದೇಶಕ ವೈ.ಹೆಚ್. ಲಂಬು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಸರೋಜ ಪ್ರಾರ್ಥಿಸಿದರು, ವೈ.ಬಿ. ಜೂಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.  ಕಾರ್ಯಕ್ರಮದ ಅಂಗವಾಗಿ ಸಾಹಿತ್ಯ ಭವನದಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆ ವತಿಯಿಂದ ವಿವಿಧ ತೂಕ ಮತ್ತು ಅಳತೆ, ಕಲಬೆರಕೆ ವಸ್ತುಗಳ ಪತ್ತೆ ಕುರಿತ ಪ್ರಾತ್ಯಕ್ಷಿಕೆ ಏರ್ಪಡಿಸಿದ್ದರು.
Please follow and like us:
error

Leave a Reply

error: Content is protected !!