You are here
Home > Koppal News > ಶಿಕ್ಷಣದ ಅವ್ಯವಸ್ಥೆಗೆ ಸರಕಾರವೇ ಜವಾಬ್ದಾರಿ: ಕಲಬುರ್ಗಿ

ಶಿಕ್ಷಣದ ಅವ್ಯವಸ್ಥೆಗೆ ಸರಕಾರವೇ ಜವಾಬ್ದಾರಿ: ಕಲಬುರ್ಗಿ

koppal 
ಬೆಂಗಳೂರು,: ಪ್ರಾಥಮಿಕ ಶಿಕ್ಷಣದ ಅವ್ಯವಸ್ಥೆಗೆ ಸರಕಾರವೇ ನೇರ ಜವಾಬ್ದಾರಿ ಎಂದು ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ, ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅಭಿಪ್ರಾಯ ಪಟ್ಟಿದ್ದಾರೆ.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೃಪತುಂಗ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಕಳೆದ ವರ್ಷ 500 ಸರಕಾರಿ ಶಾಲೆಗಳು ಮುಚ್ಚಲ್ಪಟ್ಟಿದ್ದರೆ ಈ ಬಾರಿ 2000 ಶಾಲೆಗಳು ಮುಚ್ಚಲ್ಪಡಲಿವೆಯೆಂಬ ಮಾಹಿತಿ ಇದೆ. ಶಿಕ್ಷಣ ವ್ಯವಸ್ಥೆಯಲ್ಲಿನ ಭೇದಭಾವ, ತಪ್ಪು ಭಾಷಾ ನೀತಿ, ಗ್ರಾಮೀಣ ಶಾಲೆಗಳಲ್ಲಿ ಮೂಲ ಸೌಕರ್ಯದ ಕೊರತೆ, ಶಿಕ್ಷಕರ ಅನರ್ಹತೆ-ಬೇಜವಾಬ್ದಾರಿತನಗಳಿಂದ ಅವ್ಯ ವಸ್ಥೆ ಏರ್ಪಟ್ಟಿದ್ದು ಈ ದಿಕ್ಕಿನಲ್ಲಿ ಸುಧಾರಣೆ ಆಗಬೇಕಿದೆ ಎಂದರು.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದಕ್ಕಿರುವ ಸಂದರ್ಭದಲ್ಲಿ ಉತ್ತಮ ಕ್ರಿಯಾಯೋಜನೆ ಸಿದ್ಧಪಡಿಸುವುದರ ಜತೆಗೆ ಕೆಲವು ಸಮರ್ಥ ವಿದ್ವಾಂಸರನ್ನು ರೂಪಿಸಬೇಕಿದೆ. ಅಂತಹ ಜ್ಞಾನಿಗಳ ಸೃಷ್ಟಿಗೆ ಹೊಸ ಶಿಕ್ಷಣ ಕೋರ್ಸ್ ಆರಂಭಿಸಬೇಕು. ಆಗ ಮಾತ್ರ ಶಾಸ್ತ್ರೀಯ ಭಾಷಾ ಮರ್ಯಾದೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿಯಲು ಸಾಧ್ಯ ಎಂದರು.
ಸತ್ಯ ಶೋಧನೆ ಸಂಶೋಧನೆಯ ಮೂಲ ಆಶಯ. ಈ ಸತ್ಯಕ್ಕೆ ಬದ್ಧನಾಗಿದ್ದಕ್ಕೆ ಅನೇಕ ನೋವು, ಹಿಂಸೆ ಅನುಭವಿಸಿದ್ದೇನೆ. ಆದರೆ ಕಾಲ ಕೆಳಗಿನ ಬೆಂಕಿಗಿಂತ ಕಣ್ಣ ಮುಂದಿನ ಬೆಳಕೇ ನನಗೆ ಮುಖ್ಯವಾಗಿದೆ. ಸಂಶೋಧನೆಯು ಪೂರ್ಣವಿರಾಮ ಕಾಣದ ಮುಂದುವರಿದ ಅಲ್ಪವಿರಾಮ. ನನ್ನ ಶೋಧಗಳು ಭೂತ ಮತ್ತು ವರ್ತಮಾನದ ನಡುವಿನ ಸಂಭಾಷಣೆಯಂತೆ. ಈ ಕಾರ್ಯದಲ್ಲಿ ನನಗೆ ಸಾರ್ಥಕ ಭಾವ ಮೂಡಿದೆ ಎಂದು ವಿನಮ್ರವಾಗಿ ನುಡಿದರು.
ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ಶಿಕ್ಷಣ, ಸಂಸ್ಕೃತಿ, ಕಲೆಗೆ ಹೆಚ್ಚಿನ ಅನುದಾನ ನೀಡಿರುವುದು ಸ್ವಾಗತಾರ್ಹ. ಇದಕ್ಕೆ ಪ್ರತಿಯಾಗಿ ಗುಣಮಟ್ಟದ ಫಲಿತಾಂಶ ನೀಡದಿರುವುದು ದುರದೃಷ್ಟಕರ. ಸರಕಾರ ಜನಪ್ರಿಯತೆಗಾಗಿ ಅಧಿಕ ಹಣ ನೀಡುತ್ತಿದೆಯೆಂಬ ಅನುಮಾನವಿದ್ದು, ಕೆಲಸಕ್ಕೆ ತಕ್ಕ ಹಣ ನೀಡುವ ವ್ಯವಸ್ಥೆ ಜಾರಿಗೆ ಬರಬೇಕು ಎಂದ ಅವರು, ಸಚಿವರು ಈಗಾಗಲೇ ತಪ್ಪು ಮಾಡಿ ಕೆಲವು ಪ್ರಕರಣಗಳಲ್ಲಿ ಸಿಕ್ಕಿಕೊಂಡಿದ್ದಾರೆ. ತಪ್ಪು ಮರುಕಳಿಸದಂತೆ ನಡೆದುಕೊಳ್ಳಲಿ ಎಂದು ಆರ್.ಅಶೋಕ್‌ರಿಗೆ ಕಿವಿಮಾತು ಹೇಳಿದರು.
ರಾಜ್ಯದಲ್ಲಿ ಪ್ರಶಸ್ತಿ ಪ್ರಾಧಿಕಾರ, ಅಕಾಡಮಿ, ಪೀಠಗಳು ಅಗತ್ಯಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿದ್ದು ಜಯಂತಿ-ಪುಣ್ಯತಿಥಿಗಳ ಹೆಸರಿನಲ್ಲಿ ರಜಾ ದಿನಗಳೂ ಬೆಳೆದಿರುವುದು ಸರಿಯಲ್ಲ. ಅಂತೆಯೇ ರಾಜ್ಯದ ವಿಶ್ವವಿದ್ಯಾಲಯವೊಂದು 12 ಮಂದಿಗೆ ಗೌರವ ಡಾಕ್ಟರೇಟ್ ನೀಡಲು ಮಾಡಿದ ಶಿಫಾರಸಿಗೆ ರಾಜ್ಯಪಾಲರು ಸಮ್ಮತಿಸಿರುವುದು ಬೇಸರದ ಸಂಗತಿ ಎಂದು ಕಲಬುರ್ಗಿ ಅಸಮಾಧಾನ ವ್ಯಕ್ತಪಡಿಸಿದರು.
ನೃಪತುಂಗದ ಹೆಸರು ಕೇಳಿದರೆ ರೋಮಾಂಚನ ಗೊಳ್ಳುವ ನನಗೆ ನೃಪತುಂಗ ಸಾಹಿತ್ಯ ಪ್ರಶಸ್ತಿ ಲಭಿಸಿ ರುವುದು ಸಂತಸದ ವಿಚಾರ. ಶ್ರಮಿಕ ಸಂಸ್ಕೃತಿಯ ಸಾರಿಗೆ ಸಂಸ್ಥೆ ಮತ್ತು ಕನ್ನಡದ ಸಮುದಾಯವನ್ನು ಸಂಕೇತಿಸುವ ಈ ಪ್ರಶಸ್ತಿಯನ್ನು ಹಳ್ಳಿಯ ಸಮುದಾಯ ಕುಟುಂಬದ ತಾನು ಪ್ರೀತಿಯಿಂದ ಸ್ವೀಕರಿಸುತ್ತಿರುವುದಾಗಿ ಅವರು ಹೇಳಿದರು.
ನೃಪತುಂಗ ಪ್ರಶಸ್ತಿ ಮೊತ್ತ 7.5 ಲಕ್ಷ ರೂ.ಗೆ ಏರಿಕೆ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಸ್ಥಾಪಿಸಿರುವ ದತ್ತಿ ಪ್ರಶಸ್ತಿ ನೃಪತುಂಗ ಸಾಹಿತ್ಯ ಪ್ರಶಸ್ತಿಯ ಮೊತ್ತವನ್ನು ಮುಂದಿನ ವರ್ಷದಿಂದ 7 ಲಕ್ಷ 50 ಸಾವಿರದ ಒಂದು ರೂ.ಗೆಏರಿಸಲಾಗುವುದು ಎಂದು ಗೃಹ ಸಚಿವ ಆರ್.ಅಶೋಕ್ ಘೋಷಿಸಿದರು.
ನೃತುಂಗ ಪ್ರಶಸ್ತಿಯು ಜ್ಞಾನಪೀಠ ಪ್ರಶಸ್ತಿಗಿಂತಲೂ ಮಿಗಿಲಾಗಿರಬೇಕೆಂಬ ಆಶಯದಿಂದ ಐದು ಲಕ್ಷದ ಒಂದು ರೂಪಾಯಿ ನೀಡಲಾಗುತ್ತಿತ್ತು. ಇದೀಗ ಜ್ಞಾನಪೀಠ ಪ್ರಶಸ್ತಿಯ ಮೊತ್ತ 7.5 ಲಕ್ಷ ರೂ.ಗೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ವರ್ಷ ದಿಂದ ಏಳು ಲಕ್ಷದ ಐವತ್ತು ಸಾವಿರದ ಒಂದು ರೂ. ನೀಡಲಾಗುವುದು ಎಂದು ಅವರು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಆರ್.ಕೆ. ನಲ್ಲೂರು ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕತಿ ಇಲಾಖೆ ಆಯುಕ್ತ ಮನು ಬಳಿಗಾರ್ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಆರ್.ಶ್ರೀನಿವಾಸ್ ಮಾತನಾಡಿದರು. ಕಸಾಪ ಖಜಾಂಚಿ ಪುಂಡಲೀಕ ಹಾಲಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಎಂಟು ಮಂದಿ ಯುವ ಸಾಹಿತಿಗಳಿಗೆ ಅರಳು ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Leave a Reply

Top