ಉದ್ಯೋಗ ಖಾತ್ರಿಯಲ್ಲಿ ಕೆಲಸ ಪಡೆಯಲು ಕೃಷ್ಣ ಉದಪುಡಿ ಮನವಿ.

ಕೊಪ್ಪಳ, ಜು.೦೨ – ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ಕೊಪ್ಪಳ ಜಿಲ್ಲೆಯ ಗ್ರಾಮಗಳಲ್ಲಿ ಆಯೋಜಿಸಲಾಗುತ್ತಿರುವ ರೋಜಗಾರ್ ದಿನಾಚರಣೆಯಲ್ಲಿ ಕೂಲಿ ಕಾರ್ಮಿಕರು ಪಾಲ್ಗೊಂಡು ಉದ್ಯೋಗ ಖಾತ್ರಿಯಲ್ಲಿ ಕೆಲಸ ಪಡೆಯುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಮನವಿ ಮಾಡಿದ್ದಾರೆ. ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಾರಿಗೆ ತಂದಿದೆ.  ಪ್ರತಿ ಕುಟುಂಬಕ್ಕೆ ವಾರ್ಷಿಕ ೧೦೦ ದಿನಗಳ ಉದ್ಯೋಗ ನೀಡಿ, ಗ್ರಾಮೀಣ ಬಡ ಜನರಿಗೆ ಉದ್ಯೋಗ ನೀಡುವುದರ ಮೂಲಕ ಆಧಾರವಾಗಿ ನೈಸರ್ಗಿಕವಾಗಿ ಸಂಪನ್ಮೂಲ ಬಲಪಡಿಸುವುದು, ವಲಸೆ ತಡೆಗಟ್ಟುವುದು, ಆರ್ಥಿಕ ಭದ್ರತೆ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಅದರಂತೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ಪ್ರತಿ ತಿಂಗಳು ರೋಜಗಾರ್ ದಿವಸವನ್ನು ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಆಯೋಜಿಸಲಾಗುತ್ತಿದೆ. ಯೋಜನೆಯಲ್ಲಿ ನೊಂದಾಯಿತ ಉದ್ಯೋಗ ಚೀಟಿ ಪಡೆದ ಕೂಲಿಕಾರರು, ದುರ್ಬಲ ವರ್ಗದ ಜನರು ದಿನಾಚರಣೆಯಲ್ಲಿ ಭಾಗವಹಿಸಿ, ಕೆಲಸ ಮಾಡುವ ಕುರಿತು ಬೇಡಿಕೆಯನ್ನು ನೀಡಿ, ಉದ್ಯೋಗ ಪಡೆದು ಆರ್ಥಿಕ ಸ್ವಾವಲಂಬಿಗಳಾಗಲು ಅವಕಾಶವಿದ್ದು, ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು.
     ಜಿಲ್ಲೆಯಲ್ಲಿ ಈಗಾಗಲೇ ೨೦೧೫-೧೬ನೇ ಸಾಲಿನ ಎಲ್ಲಾ ಗ್ರಾಮ ಪಂಚಾಯತ್‌ಗಳ ಕೂಲಿ ಆಯ-ವ್ಯಯ ಮಂಜೂರು ಮಾಡಲಾಗಿದೆ. ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ವೈಯಕ್ತಿಕ ಮುತುವರ್ಜಿ ವಹಿಸಿ, ರೋಜಗಾರ್ ದಿವಸವನ್ನು ಸರಿಯಾಗಿ ಆಯೋಜಿಸಿ ಹಾಗೂ ಐ.ಪಿ.ಪಿ.ಇ ಹೊಂದಿರುವ ಕೊಪ್ಪಳ, ಯಲಬುರ್ಗಾ, ಕುಷ್ಟಗಿ ತಾಲೂಕುಗಳ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕಡ್ಡಾಯವಾಗಿ ರೋಜಗಾರ್ ದಿನಾಚರಣೆಯನ್ನು ಆಯೋಜಿಸಬೇಕು. ಮತ್ತು ದಿನಾಚರಣೆಗೆ ಗ್ರಾಮ ಪಂಚಾಯತ್‌ಗಳಲ್ಲಿ ನೊಂದಾಯಿಸಿರುವ ಹಾಗೂ ಉದ್ಯೋಗ ಚೀಟಿ ಹೊಂದಿರುವ ಎಲ್ಲಾ ಕೂಲಿಕಾರರನ್ನು ಆಹ್ವಾನಿಸಬೇಕು ಎಂದು ಪಿಡಿಓ ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿಲಾಗಿದೆ.  ರೋಜಗಾರ್ ದಿನಾಚರಣೆಯ ಸಂದರ್ಭದಲ್ಲಿ ಪಂಚಾಯಿತಿಯ ಪ್ರಸಕ್ತ ಸಾಲಿನ ಅನುಮೋದನೆಗೊಂಡಿರುವ ಆಯವ್ಯಯದ ಬಗ್ಗೆ ಚರ್ಚಿಸಬೇಕು. ಮಂಜೂರಾದ ಕಾಮಗಾರಿಗಳ ಪಟ್ಟಿಯನ್ನು ಪರಿಶೀಲಿಸಿ, ಕಾಮಗಾರಿಗಳ ಪಟ್ಟಿಯನ್ನು ಮಾಡಿ, ಆದ್ಯತೆಗನುಗುಣವಾಗಿ ಅನುಷ್ಟಾನಗೊಳಿಸುವುದು. ಕೂಲಿಕಾರರಿಂದ ಬೇಡಿಕೆಯನ್ನು ಪಡೆದು ಅಂದಿನ ದಿನಾಂಕದಂದೆ ರಸೀದಿಯನ್ನು ನೀಡಿ, ಉದ್ಯೋಗಕ್ಕೆ ಬರುವಂತೆ ಕ್ರಮವಹಿಸುವುದು. ಕೂಲಿ ಹಣ ಸಂದಾಯ ಸಮಸ್ಯೆಗಳ ಬಗ್ಗೆ ಚರ್ಚಿಸುವುದು ಮತ್ತು ನಿರ್ಧರಿಸುವುದು ಹಾಗೂ ವಿವಿಧ ಕೂಲಿ ಸಂದಾಯ ಏಜನ್ಸಿಗಳಾದ ಬ್ಯಾಂಕ್‌ಗಳಲ್ಲಿ ಕೂಲಿ ಹಣ ಸಂದಾಯ ಬಾಕಿ ಇರುವುದನ್ನು ಇತ್ಯರ್ಥಪಡಿಸುವುದು. ಅಲ್ಲದೇ ದಿನಾಚರಣೆ ಆಚರಿಸುವ ಸಂದರ್ಭದಲ್ಲಿ ಪ್ರಸ್ತಾಪವಾಗುವ ಎಲ್ಲಾ ಸಮಸ್ಯೆ, ವಿಷಯಗಳನ್ನು ಸ್ನೇಹ ಶೀಲತೆಯಿಂದ ಬಗೆಹರಿಸಬೇಕು.  ರೋಜಗಾರ್ ದಿನದ ಆಚರಣೆಯನ್ನು ವಾರ್ಡ್ ಮಟ್ಟದಲ್ಲಿ, ಶಾಲಾ ಕಟ್ಟಡಗಳಲ್ಲಿ ಗ್ರಾಮ ಪಂಚಾಯತ್ ಭವನ, ಭಾರತ್ ನಿರ್ಮಾಣ ರಾಜೀವ ಗಾಂಧಿ ಸೇವಾ ಕೇಂದ್ರಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಸಂಘಟಿಸಬೇಕು ಹಾಗೂ ಈ ಯೋಜನೆಯಲ್ಲಿ ಎಲ್ಲಾ ಗ್ರಾಮಸ್ಥರು ಪಾಲ್ಗೊಂಡು ಉದ್ಯೋಗ ಪಡೆದು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಗ್ರಾಮ ಪಂಚಾಯತಿ ಪಿಡಿಓಗಳಿಗೆ ಸೂಚನೆ ನೀಡಿದ್ದಾರೆ.
     ಹೆಚ್ಚಿನ ಮಾಹಿತಿಗಾಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್, ಕೊಪ್ಪಳ. ಮೊಬೈಲ್ ಸಂಖ್ಯೆ : ೯೪೮೦೮೭೧೦೦೦.
Please follow and like us:
error

Related posts

Leave a Comment