You are here
Home > Koppal News > ಜನಜಾಗೃತಿಗೆ ಯುವ ಸಂಘಟನೆಗಳ ಸದ್ಬಳಕೆ ಅಗತ್ಯ- ಡಾ. ಸುರೇಶ್ ಇಟ್ನಾಳ್

ಜನಜಾಗೃತಿಗೆ ಯುವ ಸಂಘಟನೆಗಳ ಸದ್ಬಳಕೆ ಅಗತ್ಯ- ಡಾ. ಸುರೇಶ್ ಇಟ್ನಾಳ್

  ಕೊಪ್ಪಳ ಜಿಲ್ಲೆಯಂತಹ ಹಿಂದುಳಿದ ಜಿಲ್ಲೆಗಳ ಜನರಲ್ಲಿ ಜಾಗೃತಿ ಮೂಡಿಸಲು ಯುವ ಸಂಘಟನೆಗಳ ಸದ್ಬಳಕೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಹೇಳಿದರು.
  ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ನೆಹರು ಯುವ ಕೇಂದ್ರದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಕೊಪ್ಪಳ ಜಿಲ್ಲೆ ಹಿಂದುಳಿದ ಪ್ರದೇಶವಾಗಿದ್ದು, ಸರ್ಕಾರದ ಯೋಜನೆಗಳೂ ಸೇರಿದಂತೆ ಜನ ಜಾಗೃತಿ ಮೂಡಿಸುವಂತಹ ಕಾರ್ಯ ತ್ವರಿತವಾಗಿ ಆಗಬೇಕಿದೆ.  ಜಿಲ್ಲೆಯಲ್ಲಿ ಅನೇಕ ಯುವ ಸಂಘಟನೆಗಳು, ಯುವಕ, ಯುವತಿ ಮಂಡಳಗಳು ಗ್ರಾಮೀಣ ಪ್ರದೇಶಗಳಲ್ಲೂ ಸಹ ಕಾರ್ಯ ನಿರ್ವಹಿಸುತ್ತಿವೆ.  ಇಂತಹ ಸಂಘಟನೆಗಳು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಕೊಪ್ಪಳದ ನೆಹರು ಯುವ ಕೇಂದ್ರಗಳಲ್ಲಿ ನೋಂದಣಿಯಾಗಿವೆ.  ಜಿಲ್ಲೆಯಲ್ಲಿನ ಆರೋಗ್ಯ ಸಮಸ್ಯೆಗಳು, ಮೂಢ ನಂಬಿಕೆಗಳನ್ನು ನಿವಾರಿಸುವ ನಿಟ್ಟಿನಲ್ಲಿ, ಇಂತಹ ಯುವ ಸಂಘಟನೆಗಳನ್ನು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ.  ಈ ದಿಸೆಯಲ್ಲಿ ನೆಹರು ಯುವ ಕೇಂದ್ರ ಕಾರ್ಯೋನ್ಮುಖವಾಗಬೇಕು.  ರಕ್ತದಾನದ ಮಹತ್ವ, ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ದೊರಕುವಂತೆ ಮಾಡುವುದು, ಮತದಾರರಲ್ಲಿ ಜಾಗೃತಿ ಮೂಡಿಸುವುದು ಅಲ್ಲದೆ ಸಾರ್ವಜನಿಕರ ಕರ್ತವ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಯುವಜನರ ಸಹಭಾಗಿತ್ವದಿಂದ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದರು. 
  ನೆಹರು ಯುವ ಕೇಂದ್ರದ ಕಚೇರಿಯನ್ನು ಜಿಲ್ಲಾ ಕ್ರೀಡಾಂಗಣದಲ್ಲಿರುವ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಕಟ್ಟಡಕ್ಕೆ ಸ್ಥಳಾಂತರಗೊಳಿಸಬೇಕು.  ಯುವಜನ ಮೇಳದಂತಹ ಕಾರ್ಯಕ್ರಮಗಳಲ್ಲಿ ನೆಹರು ಯುವ ಕೇಂದ್ರ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು.  ಜಿಲ್ಲೆಯ ಎಲ್ಲ ಯುವ ಸಂಘಟನೆಗಳು, ಯುವಕ, ಯುವತಿ ಮಂಡಳಗಳ ಪ್ರತಿನಿಧಿಗಳನ್ನು ಜಿಲ್ಲಾ ಮಟ್ಟಕ್ಕೆ ಕರೆಯಿಸಿ, ಅವರಿಗೆ ಸೂಕ್ತ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಬೇಕು.  ಆರೋಗ್ಯ ಇಲಾಖೆಯವರು ಪ್ರತಿ ವರ್ಷ, ಪ್ರತಿ ತಾಲೂಕಿನಲ್ಲೂ ಕನಿಷ್ಟ ಎರಡು ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳಬೇಕು ಅಲ್ಲದೆ ಆರೋಗ್ಯ ಅರಿವಿನ ಬಗ್ಗೆ ತಿಳುವಳಿಕೆ ಮೂಡಿಸುವಂತಹ ಶಿಬಿರಗಳನ್ನು ನಿಯಮಿತವಾಗಿ ಆಯೋಜಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಸಭೆಯಲ್ಲಿ ಭಾಗವಹಿಸಿದ್ದ ಲೀಡ್ ಬ್ಯಾಂಕ್ ವ್ಯವಸ್ಥಾಪಕ ರವೀಂದ್ರ ಅವರು ಮಾತನಾಡಿ, ಜಿಲ್ಲಾ ಅಥವಾ ತಾಲೂಕು ಮಟ್ಟದಲ್ಲಿ ಯುವ ಜನರಿಗಾಗಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಲ್ಲಿ, ಇದಕ್ಕೆ ಜಿಲ್ಲೆಯ ಬಹಳಷ್ಟು ಬ್ಯಾಂಕ್‌ಗಳು ಸಹಕಾರ ನೀಡಲಿವೆ ಎಂದರು.  
  ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಮಾಲತಿ ಗಾಯಕವಾಡ್ ಅವರು ಮಾತನಾಡಿ, ನೆಹರು ಯುವ ಕೇಂದ್ರದಿಂದ ಈಗಾಗಲೆ ಜಿಲ್ಲೆಯಲ್ಲಿ ಹಲವಾರು  ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದ್ದು, ಮುಂದೆಯೂ ಉತ್ತಮ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು ಎಂದರು.
  ಸಭೆಯಲ್ಲಿ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕರು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್. ಮಾದರ್, ಸರ್ಕಾರೇತರ ಸಂಸ್ಥೆಯ ಪ್ರತಿನಿಧಿಯಾಗಿ ಜಿ.ಎಸ್. ಗೋನಾಳ್, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ಉಪಯುಕ್ತ ಸಲಹೆ, ಸೂಚನೆಗಳನ್ನು ನೀಡಿದರು.

Leave a Reply

Top