ಮಾರ್ಚ್ ಮೊದಲ ವಾರದಲ್ಲಿ ಚುನಾವಣೆ ದಿನಾಂಕ ಪ್ರಕಟ

ಲೋಕಸಭೆಗೆ ಆರು ಹಂತಗಳಲ್ಲಿ ಮತದಾನ
ಹೊಸದಿಲ್ಲಿ, ಜ.13: ಈ ಬಾರಿ ಲೋಕಸಭೆ ಚುನಾವಣೆಗೆ ಐದು ಇಲ್ಲವೇ ಆರು ಹಂತಗಳಲ್ಲಿ ಮತದಾನ ನಡೆಯಲಿದೆ. ಫೆಬ್ರವರಿ ಕೊನೆಯಲ್ಲಿ ಇಲ್ಲವೇ ಮಾರ್ಚ್ ಮೊದಲ ವಾರದಲ್ಲಿ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಲಾಗು ವುದು ಎಂದು ಚುನಾವಣಾ ಆಯೋಗ ತಿಳಿಸಿದೆ.
2009ರಲ್ಲಿ ಚುನಾವಣಾ ಆಯೋಗ ಮಾಡಿದ್ದಂತೆಯೇ ಫೆಬ್ರವರಿ ಕೊನೆಯಲ್ಲಿ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯುಕ್ತ ಎಚ್.ಎಸ್.ಬ್ರಹ್ಮ ತಿಳಿಸಿದ್ದಾರೆ.
ಈ ಬಾರಿ ಚುನಾವಣಾ ಆಯೋಗ ಆರು ಹಂತಗಳ ಚುನಾವಣೆ ನಡೆಸುವ ಸಾಧ್ಯತೆಗಳಿವೆ ಎಂದು ಅವರು ಹೇಳಿದರು.
2009ರಲ್ಲಿ ನಾವು ಐದು ಹಂತಗಳ ಚುನಾವಣೆ ನಡೆಸಿದ್ದೆವು. ಈ ಬಾರಿ ಆರು ಹಂತಗಳ ಚುನಾವಣೆ ನಡೆಸುವ ಸಾಧ್ಯತೆಗಳಿವೆ. ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ಹಾಗೂ ದೇಶಾದ್ಯಂತ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಆಯೋಗ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಬ್ರಹ್ಮ ತಿಳಿಸಿದರು.
ಚುನಾವಣಾ ಆಯೋಗ ಈಗಾಗಲೇ ಪ್ರಾಥಮಿಕ ಸಿದ್ಧತೆಯನ್ನು ಆರಂಭಿಸಿದೆ. ಎಲ್ಲ ಬಗೆಯ ಕೆಲಸಕಾರ್ಯಗಳು ಪೂರ್ಣಪ್ರಮಾಣದಲ್ಲಿ ನಡೆಯುತ್ತಿವೆ ಎಂದು ಅವರು ಹೇಳಿದರು.
ರಾಜಕೀಯ ಪಕ್ಷಗಳ ಧುರೀಣರು ತಮ್ಮ ಎದುರಾಳಿಗಳ ವೈಯಕ್ತಿಕ ನಿಂದನೆ, ಟೀಕೆ ನಡೆಸುವುದರ ವಿರುದ್ಧ ಬ್ರಹ್ಮ ಎಚ್ಚರಿಕೆ ನೀಡಿದರು. ಚುನಾವಣೆಯ ಸಮಯವಿರಲಿ, ಬೇರೆ ಸಂದರ್ಭವೇ ಇರಲಿ ಕೆಲವೊಂದು ಬಗೆಯ ಟೀಕೆಗಳು ಸೂಕ್ತವಲ್ಲ. ರಾಜಕೀಯದಲ್ಲಿ ಗಂಭೀರತೆಯನ್ನು ಉಳಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಚುನಾವಣಾ ಸಮೀಕ್ಷೆಯನ್ನು ಖಂಡಿತವಾಗಿ ನಿಷೇಧಿಸಬೇಕು. ಜನಪ್ರತಿನಿಧಿಗಳನ್ನು ವಾಪಸ್ ಕರೆಸುವ ಹಕ್ಕನ್ನು ಗ್ರಾಮ ಪಂಚಾಯತ್ ಇಲ್ಲವೇ ಪುರಸಭೆಗಳಲ್ಲಿ ಜಾರಿಗೊಳಿಸಬಹುದು. ಆದರೆ ಅದಕ್ಕಿಂತ ಮೇಲಿನ ಹಂತಗಳಲ್ಲಿ ಜಾರಿಗೊಳಿಸುವ ಸಮಯವಿನ್ನೂ ಕೂಡಿ ಬಂದಿಲ್ಲ ಎಂದು ಬ್ರಹ್ಮ ಅಭಿಪ್ರಾಯಿಸಿದರು.

Leave a Reply