ಕನ್ನಡ ಉಳಿಸಿ ಬೆಳೆಸಿ ಯುವ ಜನಾಂಗಕ್ಕೆ ಕರೆ

ಹೊಸಪೇಟೆ- ಕರ್ನಾಟಕದ ಏಕೀಕರಣ ಚಳುವಳಿಗೆ ಮೂಲ ಅಸ್ತ್ರವಾಗಿದ್ದು ಕನ್ನಡ ಬಾಷೆ, ಕನ್ನಡಕ್ಕೆ ಸಮಾಜವನ್ನು ಒಗ್ಗೂಡಿಸಿ ಸಂಘಟಿಸುವ ಸಾಮರ್ಥ್ಯವಿದೆ ಎಂದು ಹಂಪಿ ಕನ್ನಡ ವಿವಿಯ ಉಪಕುಲಸಚಿವ ಡಾ|| ರವೀಂದ್ರನಾಥ್ ತಿಳಿಸಿದರು.
ಅವರು ನಗರದ ಶ್ರೀ ಮಾರ್ಕಂಡೇಶ್ವರ ಕಲ್ಯಾಣ ಮಂಟಪದಲ್ಲಿಂದು ’ವಿಜಯವಾಣಿ’ ಕನ್ನಡ ದಿನಪತ್ರಿಕೆ ಆಯೋಜಿಸಿದ್ದ ’ಕನ್ನಡ ಅಭಿಯಾನ’ ಸಂವಾದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ’ಕನ್ನಡ’ ಕೇವಲ ಭಾಷೆಯಲ್ಲ ಜೀವ ನಾಡಿಯಾಗಿ ಜೀವನಶೈಲಿಯಾಗಬೇಕು, ಕನ್ನಡಿಗರಿದ್ದರೆ ಭಾಷೆಯಿದ್ದಂತೆ, ಯುನೆಸ್ಕೊ ಇತ್ತೀಚೆಗೆ ಅಳಿವಿನಂಚಿನಲ್ಲಿರುವ ಭಾಷೆಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಕನ್ನಡವು ಇಲ್ಲದಿರುವುದು ಸಂತೋಷ ಹಾಗೂ ಸಮಾಧಾನಕರ ಸಂಗತಿಯಾಗಿದೆ, ಕನ್ನಡ ಸಶಕ್ತಗೊಳಿಸುವ ನಿಟ್ಟಿನಲ್ಲಿ ಆಡಳಿತಾರೂಢ ಸರಕಾರವು ದೃಢ ನಿರ್ಧಾರಗಳನ್ನು ತೆಗೆದುಕೊಂಡು ಪ್ರತಿಯೊಂದು ಆದೇಶ ಮತ್ತು ಕಡತಗಳು ಕನ್ನಡದಲ್ಲಿಯೇ ಇರಬೇಕು ಎನ್ನುವ ಸಂದೇಶವನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕು, ಮಾತೃಭಾಷೆಯಲ್ಲಿ ಶಿಕ್ಷಣ ಎನ್ನುವ ಬದಲಿಗೆ ಕನ್ನಡದಲ್ಲಿ ಶಿಕ್ಷಣವಾಗಿ ಸರಕಾರಿ ಶಾಲೆಗಳ ಗುಣಮಟ್ಟವನ್ನು ಅಭಿವೃದ್ಧಿಗೊಳಿಸಬೇಕು, ಬಳ್ಳಾರಿಯಲ್ಲಿರುವ ಎಲ್ಲಾ ತೆಲುಗರು ಕನ್ನಡಿಗರೇ… ರಾಜದಲ್ಲಿರುವ ಅನ್ಯ ಭಾಷಿಗರು ಕನ್ನಡಿಗರೇ ಎನ್ನುವ ಭಾವನೆ ಮೂಡಲಿ ಎನ್ನುವ ಆಶಯವನ್ನು ವ್ಯಕ್ತಪಡಿಸಿದರು.
ಮಾತೃ ಭಾಷೆಯಲ್ಲಿ ಶಿಕ್ಷಣ ಎನ್ನುವ ೨೦೧೪ರ ಸುಪ್ರೀಂ ಕೋರ್ಟ್‌ನ ತೀರ್ಪು ಕನ್ನಡ ಭಾಷೆಗೆ ಕೊಡಲಿ ಪೆಟ್ಟು ಕೊಟ್ಟಿದೆ ಎಂದು ಡಾ|| ಮೃತ್ಯುಂಜಯ ರುಮಾಲೆಯವರು ಖೇಧ ವ್ಯಕ್ತಪಡಿಸಿದರು.  ಕನ್ನಡದ ನೆಲ,ಜಲ, ಸಂಪನ್ಮೂಲಗಳು ಬೇಕು ಆದರೆ ಶಿಕ್ಷಣ ’ಭಾಷೆ’ಯ ವಿಷಯ ಬಂದಾಗ ಸುಪ್ರೀಂಕೋರ್ಟ್‌ನ ತೀರ್ಪುನ್ನು ಪಾಲಿಸುವ ಕನ್ನಡೇತರರ ಇರಾದೆ ಸರಿಯಲ್ಲ,  ೧೯೭೮ರವರೆಗೆ ತ್ರಿಭಾಷಾ ಸೂತ್ರವಿತ್ತು, ೧೯೮೨ರಲ್ಲಿ ಕನ್ನಡ ಪರ ಹೋರಾಟ ತೀವ್ರಗೊಂಡಾಗ ಸಮಗ್ರ ಕನ್ನಡಕ್ಕೆ ಒತ್ತು ಸಿಕ್ಕಿತು. ಮುಂಬೈ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ, ಮೈಸೂರು ಕರ್ನಾಟಕದಲ್ಲಿ ತನ್ನದೇ ಆದ ಶೈಕ್ಷಣಿಕ ವಾತಾವರಣದಿಂದಾಗಿ ಕನ್ನಡವನ್ನು ಆಧ್ಯ ಭಾಷೆಯಾಗಿ ಮಾರ್ಪಡಿಸುವಲ್ಲಿ ಸರಕಾರಗಳು ಸೋತಿವೆ, ಏಕೀಕರಣದ ನಂತರ  ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲಿ ಕಡ್ಡಾಯವಾಗಿಸಬೇಕು ಎನ್ನುವ ವಿಕೆ ಗೋಕಾಕರ ಸಮಿತಿಯ ವರದಿ ಅನುಷ್ಠಾನಗೊಳಿಸಲು ರಾಜ್ಯ ಸರಕಾರ ಇಂದಿಗೂ ವಿಫಲವಾಗಿವೆ,  ಸರಕಾರದ ಭಾಷಾ ನೀತಿಯನ್ನು ಪ್ರಶ್ನಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸುಪ್ರೀಂ ಕೋರ್ಟ್‌ಗೆ ಮೊರೆ ಹೋದಾಗ ಕನ್ನಡಕ್ಕೆ ಎಂತಹ ಗಂಡಾಂತರ ಸೃಷ್ಠಿಯಾಗಿದೆ ಎನ್ನುವುದನ್ನು ಮನಗಾಣಬೇಕಿತ್ತು, ಭಾಷೆಗೆ ಒದಗಿರುವ ಆತಂಕವನ್ನು ಮೆಟ್ಟಿ ನಿಲ್ಲುವ ನಿಲುವುಗಳನ್ನು  ತಾಳಬೇಕು ಈ ನಿಟ್ಟಿನಲ್ಲಿ ಮೊಬೈಲ್ ಮತ್ತು ಕಂಪ್ಯೂಟರ್‌ನಲ್ಲಿ ಕನ್ನಡವನ್ನು ಬಳಸಿಕೊಂಡು ಕನ್ನಡ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಯುವ ಪೀಳಿಗೆ ಕಾರ್ಯ ಪ್ರವೃತರಾಗಬೇಕು, ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಮಾಡುವುದರಿಂದ ಮುಂಬರುವ ದಿನಗಳಲ್ಲಿ ಕನ್ನಡವನ್ನು ಬೆಳೆಸಲು ಸಾದ್ಯವೆಂದರು.
ಭಾರತ ವಿಕಾಸ ಪರಿಷತ್‌ನ ಸದಸ್ಯೆ ಹಾಗೂ ಥಿಯೋಸಾಫಿಕಲ್ ಮಹಿಳಾ ಕಾಲೇಜಿನ ಗ್ರಂಥಪಾಲಕಿ ಸುಜಾತ ರೇವಣಸಿದ್ದಪ್ಪ ಮಾತನಾಡುತ್ತಾ ತಾಂತ್ರಿಕ ಹಾಗೂ ವೈದ್ಯಕೀಯ ಶಿಕ್ಷಣವು  ಕನ್ನಡ ಮಾಧ್ಯಮವಾದರೆ ಭಾಷೆಯನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ, ಕಂಪ್ಯೂಟರ್‌ನಲ್ಲಿ ಯೂನಿಕೋಡ್ ತಂತ್ರಾಂಶದಿಂದ ಕನ್ನಡವನ್ನು ವಿಶ್ವಮಾನ್ಯಗೊಳಿಸಿದಂತೆ ಆಡಳಿತ ರೂಢ ಸರ್ಕಾರಗಳು ಸಮಗ್ರವಾದ ಕನ್ನಡದ ಯೋಜನೆ, ಕಾನೂನು ಹಾಗೂ ಜ್ಞಾನವನ್ನು ಬೆಳೆಸಬೇಕು, ನಗರೀಕರಣದಿಂದಾಗಿ ಇಂಗ್ಲಿಷ್‌ನ ವ್ಯಾಮೋಹ ಹೆಚ್ಚಾಗಿ  ಕನ್ನಡಕ್ಕೆ ಕುತ್ತು ಒದಗಿದ್ದು ಮುಂದಿನ ದಿನಗಳಲ್ಲಿ ಭಾಷೆಯನ್ನು ಕಟ್ಟಿ ಬೆಳೆಸುವ ಗುರುತರವಾದ ಜವಾಬ್ದಾರಿ ಕನ್ನಡಿಗರ ಮೇಲಿದೆ ಎಂದರು.
ನಗರಾಭಿವೃದ್ಧಿ ಆಯುಕ್ತ ಎಲ್.ಡಿ.ಜೋಷಿ, ಸಾಯಿಮಣಿ ಪ್ರಕಾಶನದ ವೆಂಕಟೇಶ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು, ನಗರದ ಹಲವಾರು ಸಂಘ ಸಂಸ್ಥೆಗಳ ಸದಸ್ಯರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಮಾಜ ಸೇವಕರು, ಕನ್ನಡ ಪರ ಹೋರಾಟ ಸಮಿತಿಗಳ ಸದಸ್ಯರು ಹಾಗೂ ಬುದ್ದಿ ಜೀವಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು.
ಬಿ.ಎಂ.ರಾಜಶೇಖರ ನಿರೂಪಿಸಿದರು, ವಿಜಯವಾಣಿ ಪತ್ರಿಕೆಯ ಜಿಲ್ಲಾ ವರದಿಗಾರ ಕೆ.ಎಂ.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಹೊಸಪೇಟೆಯ ವರದಿಗಾರ ಬಸಾಪುರ ಬಸವರಾಜ್ ಸ್ವಾಗತಿಸಿದರು, ಥಿಯೋಸಾಫಿಕಲ್ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು, ಶರಣಬಸವ ವಠಾರ್ ಮತ್ತು ಸಂಗಡಿಗರು  ನಾಡ ಭಕ್ತಿಗೀತೆಗಳನ್ನು ಹಾಡಿದರು.
Please follow and like us:
error

Related posts

Leave a Comment