ಶ್ರೀರಾಮುಲು ಹೂಳು ರಾಜಕಾರಣದ ಪ್ರಯೋಜನವೇನು ?

ಕೊಪ್ಪಳ : ಕಳೆದ ಜುಲೈ-೮ ಮತ್ತು ೯ ರಂದು ಶ್ರೀರಾಮುಲು ತಮ್ಮ ಬಿ.ಎಸ್.ಆರ್. ಪಕ್ಷದಿಂದ ಮುನಿರಾಬಾದಿನಲ್ಲಿ ತುಂಗಭದ್ರಾ ಆಣೆಕಟ್ಟಿನಲ್ಲಿ ತುಂಬಿರುವ ಹೂಳನ್ನು ತೆಗೆಸಲು ಸರ್ಕಾರಕ್ಕೆ ಆಗ್ರಹಿಸಿ ಎರಡು ದಿನ ಧರಣಿ ಉಪವಾಸವನ್ನು ಅತ್ಯಂತ ಅದ್ದೂರಿಯಾಗಿ ಚುನಾವಣಾ ಪ್ರಚಾರದ ಕಾರ್ಯಕ್ರಮ ನಡೆಸಿದ್ದರ ಪ್ರಯೋಜನ ಏನಾಯಿತೆನ್ನುವುದನ್ನು ತುಂಗಭದ್ರಾ ಹಾಗೂ ಜಿಲ್ಲಾ ಬಚಾವೋ ಆಂದೋಲನ ಸಮಿತಿಯು ಪ್ರಶ್ನಿಸಿದೆ.
ತಡವಾಗಿಯಾದರೂ ಹೂಳಿನ ಕುರಿತಂತೆ ಸರ್ಕಾರದ ಗಮನ ಸೆಳೆಯಲು ಶ್ರೀರಾಮುಲು ನಡೆಸಿದ ಹೋರಾಟವನ್ನು ಸಮಿತಿಯು ಸ್ವಾಗತಿಸುತ್ತದೆಯಾದರೂ ಆ ಹೂಳಿಗೆ ಕಾರಣವಾದ ಕಂಪನಿಗಳ ಹೆಸರು ಹೇಳುವುದರಲ್ಲಿ ತಮ್ಮ ಆಪ್ತಮಿತ್ರ ಜನಾರ್ಧನರೆಡ್ಡಿಯವರ ಸಾಕಷ್ಟು ಮೈನಿಂಗ್ ಕಂಪನಿಗಳ ಹೆಸರು ಹೇಳದೆ ಮರೆಮಾಚಿದ್ದನ್ನು ಖಂಡಿಸುತ್ತದೆ.
ಆಲಾಶಯಕ್ಕೆ ಹೊಂದಿಕೊಂಡಿರುವ ಹಳ್ಳಗಳಿಂದ ಶೇಖರಣೆಗೊಂಡ ಹೂಳಿನ ಪ್ರಮಾಣಕ್ಕಿಂತಲೂ ಈ ಹಿಂದೆ ಹಿನ್ನೀರಿನ ಭಾಗದ ದಂಡೆಯಲ್ಲಿ ನಡೆಸಿದ ಮೈನಿಂಗ್ ಕಂಪನಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಕಾರ್ಖಾನೆಗಳ ತ್ಯಾಜ್ಯ ಮತ್ತು ಮೈನಿಂಗ್ ತ್ಯಾಜ್ಯ ಬಂದು ಸೇರಿರುವುದು ಜಗಜ್ಜಾಹೀರಾದ ಸಂಗತಿಯಾಗಿದೆ. ಇದಕ್ಕೂ ಮೊದಲು ೯೦ ರ ದಶಕದಲ್ಲಿ ಕುದುರೆಮುಖ ಅದಿರು ಯೋಜನೆಯಿಂದ ತುಂಗಾ ನದಿಗೆ ಹೂಳು ಸೇರುವುದನ್ನು ವಿರೋಧಿಸಿ ಕರ್ನಾಟಕ ವಿಮೋಚನಾ ಹೋರಾಟ ಸಮಿತಿ ಮತ್ತು ತುಂಗಾ ಉಳಿಸಿ ಆಂದೋಲನ ಸಮಿತಿಯಿಂದ ದೊಡ್ಡ ಹೋರಾಟ ನಡೆದದ್ದರಿಂದ ಅದು ಸಪ್ರೀಂಕೊರ್ಟ್ ವರೆಗೆ ಹೋಗಿ ನ್ಯಾಯಾಲಯದಿಂದ ತಡೆಹಿಡಿಯಲು ಆದೇಶವಾದಕಾರಣ ನಿಲ್ಲಿಸಲಾಯಿತು. ಆದರೆ ನಂತರ ಈ ಜನಾರ್ಧನ ರೆಡ್ಡಿಯ ಒಡೆತನಕ್ಕೆ ಸೇರಿದ ಹಾಗೂ ಸಹಭಾಗಿತ್ವದ ಅಲ್ಲದೇ, ಬೇನಾಮಿ ಹೆಸರಿನ ಎ.ಎಂ.ಸಿ, ಒ.ಎಂ.ಸಿಡೆಕ್ಕನ್ ಮೈನಿಂಗ್ ಮುಂತಾದ ಕಂಪನಿಗಳು ಜತೆಗೆ ಎಂ.ಎಸ್.ಪಿ.ಎಲ್., ಲಾಡ್ಸ್ ಸತ್ಯನಾರಾಯಣ ಮೊದಲಾದವರೆಲ್ಲರ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಮೈನಿಂಗ್ ಮಾಡಿದ್ದರಿಂದ ಅದರ ತ್ಯಾಜ್ಯವೆಲ್ಲ ಕೆಂಪುಹಳ್ಳ, ನಾರಿಹಳ್ಳಗಳ ಮೂಲಕವಾಗಿ ನೇರ ಜಲಾಶಯಕ್ಕೆ ಸೇರಿದ್ದರಿಂದ ೨೦ ಟಿ.ಎಮ್.ಸಿ., ಪ್ರಮಾಣದಲ್ಲಿದ್ದ ಹೂಳು ಒಮ್ಮೆಲೆ ೩೩ ಟಿ.ಎಮ್.ಸಿ. ಏರಿತು. ಅಲ್ಲದೆ ಈ ಮೈನಿಂಗ್‌ಗಾಗಿ ಲ್ಷಾಂತರ ಗಿಡಮರಗಳ ಮಾರಣಹೋಮ ನಡೆಸಿದ್ದರಿಂದ ಸರಾಗವಾಗಿ ತಡೆಯಿಲ್ಲದಂತೆ ಹೂಳು ಹರಿದುಬರಲು ಅವಕಾಶವಾಯಿತು.
ಈ ಸತ್ಯಸಂಗತಿಯನ್ನು ಶ್ರೀರಾಮುಲು ಮುಚ್ಚಿಟ್ಟಿದ್ದು ಯಾಕೆ? ಇದರಲ್ಲಿ ತಮ್ಮದು ಪಾಲಿರುವುದರಿಂದ ಹೂಳಿನ ಕುರಿತು ಮಾತಾಡಲು ಯಾವ ನೈತಿಕ ಹಕ್ಕಿದೆ. ಇವರು ನಡೆಸಿದ ಧರಣಿ ಉಪವಾಸವಾದರೂ ಎಂಥದ್ದು. ಎರಡು ದಿನ ಲೆಕ್ಕಕ್ಕೆ ಹೇಳಿದರೂ ಉಪವಾಸ ನಡೆದದ್ದು ಕೇವಲ ೨೪ ತಾಸು ಮಾತ್ರ ಅವರಿಗೆ ಸಾಲುಗಟ್ಟಿ ಹೂವಿನ ಹಾರ ಹಾಕುವುದನ್ನು ನೋಡಿದರೆ ಹಿಂದೆ ಮಹಾತ್ಮಾಗಾಂಧಿಜಿ ಬ್ರೀಟಿಷರ ವಿರುದ್ಧ ಉಪ್ಪಿನ ಸತ್ಯಾಗ್ರಹ ನಡೆಸಿದಾಗಲೂ ಈ ರೀತಿ ಮಾಲಾರ್ಪಣೆ ನಡೆದಿರಲಿಲ್ಲ. ಅಲ್ಲದೆ ಹೋರಾಟಗಾರರಿಗೆ ಈ ರೀತಿಯ ಮಾಲಾರ್ಪಣೆ ಮಾಡುವುದು ಹೋರಾಟಕ್ಕೆ ಅವಮಾನಿಸಿದಂತೆ. ಅದೂ ಹೋರಾಟಕ್ಕಿಂತಲೂ ಸನ್ಮಾನದ ಸಭೆ ಎನ್ನಿಸಿತು. ಅಲ್ಲಿ ಹರಿಸಿದ್ದು ಭರವಸೆಗಳ ಮಹಾಪೂರವನ್ನೇ ತಾನು ಮುಖ್ಯಮಂತ್ರಿಯಾದರೆ ಸ್ವರ್ಗವನ್ನೇ ಮನೆ ಬಾಗಿಲಿಗೆ ತುರುವುದಾಗಿ ಶ್ರೀರಾಮುಲು ಹೇಳಿದ್ದು ಮತದಾರರನ್ನು ಬೃಹ್ಮ ಲೋಕಕ್ಕೆ ಕೊಂಡೊಯ್ಯುವಂತಿತ್ತು. 
ಹಿಂದಿನ ತುಂಗಾ ಉಳಿಸಿ ಹೋರಾಟ ಸಮಿತಿಯನ್ನೇ ಮುಂದುವರೆಸಿದ ನಮ್ಮ ತುಂಗಭದ್ರಾ ಉಳಿಸಿ ಹೋರಾಟ ಸಮಿತಿ ನಂತರ ಅದಕ್ಕೆ ಜಿಲ್ಲಾ ಬಚಾವೋ ಆಂದೋಲನ ಸೇರಿಸಿ ಕಳೆದ ಹತ್ತು ವರ್ಷಗಳಿಂದ ಈ ಹೋರಾಟ ನಡೆಸಿಕೊಂಡು ಬಂದಿದ್ದನ್ನು ಮತ್ತು ಆ ಕುರಿತು ಸಮಗ್ರ ಮಾಹಿತಿ ನೀಡುವ ತುಂಗಭದ್ರೆಯ ಅಳಲು ಪುಸ್ತಕ ಪ್ರಕಟಿಸಿದ ಬಗ್ಗೆ ಎಲ್ಲಿಯೂ ಪ್ರಸ್ತಾಪಿಸಲಿಲ್ಲ ಆದುದರಿಂದ ಇದು ಕೇವಲ ರಾಜಕೀಯ ಹಿತಾಸಕ್ತಿಯ ಹೋರಾಟ ಎಂದು ತುಂ.ಜಿ.ಬ.ಆಂ. ಸಮಿತಿ ಖಂಡಿಸುತ್ತದೆ. ಎಂದು ವಿಠ್ಠಪ್ಪ ಗೋರಂಟ್ಲಿ, ಜೆ. ಭಾರದ್ವಾಜ, ಡಿ.ಎಚ್. ಪೂಜಾರ., ಮದ್ದಾನಯ್ಯ ಎಚ್., ರಘು, ಎಮ್.ಆರ್. ವೆಂಕಟೇಶ, ಮುಖಂಡರಾದ ಬಸವರಾಜ ಶೀಲವಂತರ, ತಿಪ್ಪಯ್ಯ ಹಲಗೇರಿ ಕೆ.ಬಿ. ಗೋನಾಳ, ಪಂಪಾಪತಿ ರಾಟಿ, ಬಸನಗೌಡ ಸುಳೆಕಲ್ ಮುಂತಾದವರು ಖಂಡಿಸಿದರು.

Leave a Reply