ರವಿಶಂಕರ್ ಗುರೂಜಿ ಆಶ್ರಮದಲ್ಲಿ ದೇಶದ್ರೋಹಿಗಳ ಸೃಷ್ಟಿ: ಪ್ರೊ.ಜಿಕೆ

ಬೆಂಗಳೂರು, ಎ. 14: ಸರಕಾರಿ ಶಾಲೆಗಳಲ್ಲಿ ನಕ್ಸಲರನ್ನು ಸೃಷ್ಟಿಸಲಾಗುತ್ತಿದೆ ಎನ್ನುವ ರವಿಶಂಕರ ಗುರೂಜಿ, ತಮ್ಮ ಆಶ್ರಮದಲ್ಲಿ ದೇಶದ್ರೋಹಿಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ವಿಚಾರವಾದಿ ಪ್ರೊ.ಜಿ.ಕೆ.ಗೋವಿಂದ ರಾವ್ ಆರೋಪಿಸಿದ್ದಾರೆ.
ಶನಿವಾರ ನಗರದ ನಯನ ಸಭಾಂಗಣದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರ 121ನೆ ಜನ್ಮ ದಿನದ ಅಂಗವಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ‘ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಐಕ್ಯ’ ಎಂಬ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್‌ರನ್ನು ಗುರೂಜಿ ಎಂದು ಒಪ್ಪಿಕೊಳ್ಳುವುದಾದರೆ ತನ್ನನ್ನು ಪರಮಹಂಸ ಎಂದು ಬಿಂಬಿಸಿಕೊಳ್ಳಬಹುದೇನೋ?. ಬಡವರ, ಸರಕಾರಿ ಭೂಮಿಯನ್ನು ಕೊಳ್ಳೆ ಹೊಡೆಯುವ ಇಂತಹ ನಕಲಿ ಗುರೂಜಿಗಳು ನಾಶವಾಗದಿದ್ದರೆ ಅಂಬೇಡ್ಕರ್‌ರಂತಹವರು ಹತ್ತು ಜನ್ಮವೆತ್ತಿ ಬಂದರೂ ಈ ಸಮಾಜ ಸುಧಾರಣೆ ಯಾಗುವುದಿಲ್ಲ ಎಂದು ರಾವ್ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ನಿರ್ಮಾಣ ವಾಗಿದ್ದು, ನೀರಿಲ್ಲದೆ ಜನ ಸಾಮಾನ್ಯರು ಪರಿತಪಿಸುತ್ತಿದ್ದಾರೆ. ಆದರೆ, ಮಾಜಿ ಮತ್ತು ಹಾಲಿ ಮುಖ್ಯಮಂತ್ರಿಗಳ ನಡುವೆ ಸ್ಥಾನಪಲ್ಲಟಕ್ಕಾಗಿ ದಿನನಿತ್ಯ ಶಕ್ತಿ ಪ್ರದರ್ಶನ ನಡೆಯುತ್ತಿದೆ. ನೀರಿಲ್ಲದ ರಾಜ್ಯದಲ್ಲಿ ಬಿಯರ್ ಯಥೇಚ್ಛವಾಗಿದೆ ಎಂದು ಹೇಳುವ ಸಚಿವರು ಈ ರಾಜ್ಯದಲ್ಲಿದ್ದಾರೆ. ಆದುದರಿಂದ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಳು ತಮ್ಮ ಮತಗಳನ್ನು ಹಣಕ್ಕೆ ಮಾರಿಕೊಳ್ಳದೆ ಈ ಸರಕಾರವನ್ನು ಕಿತ್ತೊಗೆಯಬೇಕು ಎಂದು ಗೋವಿಂದ ರಾವ್ ಕರೆ ನೀಡಿದರು. ಸಂಘಪರಿವಾರಕ್ಕೆ ಶಾಲೆಗಳಲ್ಲಿ ಮಕ್ಕಳ ಮನಸ್ಸನ್ನು ಹಾಳು ಮಾಡುವ ಭಗವದ್ಗೀತೆ ಹಾಗೂ ಚರಿತ್ರೆ ಬೇಕು. ಮಕ್ಕಳಿಗೆ ಶಾಲಾ ಹಂತದಲ್ಲಿ ಪೂರ್ವಾಗ್ರಹ ತುಂಬಲು ಸಂಘ ಪರಿವಾರ ಯತ್ನಿಸುತ್ತಿದೆ. ಜನರಲ್ಲಿ ಕೋಮು ಭಾವನೆಯನ್ನು ಸೃಷ್ಟಿಸಿ ಮತ್ತು ದುಡ್ಡು ಚೆಲ್ಲಿ ಚುನಾವಣೆ ಗೆಲ್ಲುವುದನ್ನು ತನ್ನ ತಂತ್ರವನ್ನಾಗಿ ಮಾಡಿಕೊಂಡಿದೆ ಎಂದು ಪರಿವಾರದ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿಂದು ತುರ್ತು ಪರಿಸ್ಥಿತಿ ಎದುರಾಗಿದ್ದು, ನಮ್ಮ ನಡುವೆ ಸ್ವಾರ್ಥಕ್ಕೋಸ್ಕರ ಉಪವಾಸ ಕೈಗೊಳ್ಳುವ ನಕಲಿ ನಾಯಕರು ಸೃಷ್ಟಿಯಾಗುತ್ತಿದ್ದಾರೆ. ಅಧಿಕಾರದ ದುರಾಸೆಯಿಂದ ದಲಿತರು ಹಾಗೂ ಮಹಿಳೆಯರು ಬಿಜೆಪಿಯಂತಹ ಕೋಮುವಾದಿ ಪಕ್ಷಕ್ಕೆ ಸೇರುವುದು ಜಗತ್ತಿನ 8ನೆ ಅದ್ಭುತ ಎಂದು ವ್ಯಂಗ್ಯವಾಡಿದ ಅವರು, ಅಂಬೇಡ್ಕರ್‌ರನ್ನು ಒಪ್ಪಿಕೊಂಡವರು ಬಿಜೆಪಿ ಸೇರಬಾರದು ಎಂದು ಸಲಹೆ ಮಾಡಿದರು.
ಉಚ್ಚ ನೀಚ ಜಾತಿಯನ್ನು ದೇವರು ಸೃಷ್ಟಿಸುತ್ತಾನೆ ಎಂದು ಜಾತಿವಾದಿಗಳು ವಾದಿಸುತ್ತಾರೆ. ದೇವರು ಏನಾದರೂ ತನಗೆ ಈ ಮಾತುಗಳನ್ನು ಹೇಳಿದರೆ ತಾನು ಅಂತಹ ಧರ್ಮವನ್ನೇ ತ್ಯಜಿಸುತ್ತೇನೆ ಎಂದು ಸವಾಲು ಹಾಕಿದ ಗೋವಿಂದರಾವ್, ಜಾತಿಯ ಸೃಷ್ಟಿ ಪುಡಾರಿ, ಪುರೋಹಿತರು, ವೌಲ್ವಿ ಹಾಗೂ ಪಾದ್ರಿಗಳ ಕಿತಾಪತಿ ಎಂದು ಮೂದಲಿಸಿದರು.
 ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶ್ವ ತೀರ್ಥ ಸ್ವಾಮೀಜಿಗಳು ಶಾಸ್ತ್ರ ಮತ್ತು ಸಂವಿಧಾನವನ್ನು ಸಮನ್ವಯಗೊಳಿಸುವ ಮಾತನ್ನಾಡುತ್ತಾರೆ. ಈ ಅಧಿಕಾರವನ್ನು ಪೇಜಾವರ ಶ್ರೀಗಳಿಗೆ ನೀಡಿದವರು ಯಾರು? ಎಂದು ಪ್ರಶ್ನಿಸಿದ ಅವರು, ಮಠದ ಧರ್ಮ ನಿಜವಾದ ಧರ್ಮ ಅಲ್ಲ. ರಾಮಕೃಷ್ಣ ಪರಮಹಂಸರ ಧರ್ಮ ನಿಜವಾದ ಮಾನವ ಧರ್ಮವಾಗಿದೆ. ಈಗಿರುವ ಬಹುತೇಕ ಸ್ವಾಮಿಗಳು ಕಾವಿಯ ಮರೆಯಲ್ಲಿರುವ ಪುಢಾರಿಗಳು ಎಂದು ದೋಷಿಸಿದರು.
ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ರಾಜಕಾರಣದ ಪಕ್ಕಾ ರೌಡಿ. ಮೋದಿಯ ಆಡಳಿತದಲ್ಲಿ ಹಿಟ್ಲರ್, ಸ್ಟಾಲಿನ್‌ರ ಕಾಲಕ್ಕಿಂತ ಹೆಚ್ಚು ಹತ್ಯೆಗಳು ನಡೆದಿವೆ. ಆದರೂ ಕೂಡ ಅವರನ್ನು ಅಭಿವೃದ್ಧಿಯ ಹರಿಕಾರ ಎಂದು ಬಿಂಬಿಸಲಾಗುತ್ತಿದೆ. ಕೇವಲ ಬೃಹತ್ ಕಟ್ಟಡಗಳು, ರಸ್ತೆಗಳನ್ನು ನಿರ್ಮಿಸಿದರೆ ಮಾತ್ರ ಅಭಿವೃದ್ಧಿ ಆಗುವುದಿಲ್ಲ. ಆ ರಾಜ್ಯದ ದಲಿತರು, ಮಹಿಳೆಯರು, ಅಲ್ಪಸಂಖ್ಯಾತರ ಏಳಿಗೆಯೇ ನಿಜವಾದ ಅಭಿವೃದ್ಧಿ ಎಂದು ಗೋವಿಂದ ರಾವ್ ಹೇಳಿದರು.  ಇದೇ ವೇಳೆ ‘ಅಸ್ಪಶತೆ, ಹುಟ್ಟು, ಇತಿಹಾಸ ಮತ್ತು ಪರಿಣಾಮ’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಪ್ರಗತಿಪರ ಚಿಂತಕ ಬಿ.ಕೆ.ಶಿವರಾಂ, ಪಟ್ಟಭದ್ರ ಹಿತಾಸಕ್ತಿಗಳು ಈಗಲೂ ಸಹ ಮಹಿಳೆಯರು, ದಲಿತರು ಹಾಗೂ ಅಲ್ಪಸಂಖ್ಯಾತರ ವಿರುದ್ಧ ಜನರಲ್ಲಿ ತಮ್ಮ ಗುಪ್ತ ಕಾರ್ಯಸೂಚಿಯನ್ನು ತುಂಬುತ್ತಿದ್ದಾರೆ ಅದು ಅಸಹನೆ ವ್ಯಕ್ತಪಡಿಸಿದರು.
ಪ್ರಾಚೀನ ಸಾಹಿತ್ಯ ಕ್ಷ್ಷೇತ್ರದಲ್ಲೂ ಜಾತಿಯ ವಾಸನೆ ಕಂಡು ಬಂದಿದ್ದು, ಮೇಲ್ವರ್ಗದವರಿಗೆ ಸಾಹಿತ್ಯ ಸೃಷ್ಟಿಸಿದರೆ ಆಚಾರ್ಯ ಎಂದು, ಮಧ್ಯಮವರ್ಗದವರಿಗೆ ಶರಣರೆಂದೂ ಕೆಳವರ್ಗದ ಸಾಹಿತ್ಯ ಸೃಷ್ಟಿಕರ್ತರನ್ನು ದಾಸ ಎಂದು ಕರೆಯಲಾಗುತ್ತಿತ್ತು ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಆಹಾರದ ಹಕ್ಕು ಪ್ರಕೃತಿಯ ಧರ್ಮ. ಗೋ ಮಾಂಸದ ವಿಷಯವಾಗಿ ಬೆಂಗಳೂರಿನಲ್ಲಿ ಸಂಭವಿಸಿದ ಹಲವು ಕೋಮು ಗಲಭೆಗಳಲ್ಲಿ ಸಮಸ್ಯೆಗೆ ಸಿಲುಕಿದವರು ಬಡ ಹಿಂದೂ ಹಾಗೂ ಮುಸ್ಲಿಂ ಕುಟುಂಬಗಳು. ಆದರೆ, ಅಲ್ಪಸಂಖ್ಯಾತ ವರ್ಗಗಳಿಗಿಂತ ಅತಿ ಹೆಚ್ಚು ಗೋ ಮಾಂಸ ತಿನ್ನುವವರು ಹಿಂದೂಗಳೇ ಆಗಿದ್ದಾರೆ ಎಂದು ಶಿವರಾಂ ಹೇಳಿದರು.
ಈ ಸಮಾಜದಲ್ಲಿ ಹುಟ್ಟುತ್ತಾ ಯಾರೂ ಶ್ರೇಷ್ಠರಲ್ಲ. ಆದುದರಿಂದ ನಾವು ಮನುಷ್ಯರಾಗಲು ಮನುಜ ಮತ, ವಿಶ್ವ ಪಥದತ್ತ ಸಾಗೋಣ ಎಂದು ಶಿವರಾಂ ಇದೇ ಸಂದರ್ಭದಲ್ಲಿ ಕರೆ ನೀಡಿದರು.
ಅಹಿಂದ ಮುಖಂಡ ಪ್ರೊ.ಎನ್.ವಿ.ನರಸಿಂಹಯ್ಯ ಮಾತನಾಡಿ, ಜಡಗೊಂಡ ಸಮಾಜಕ್ಕೆ ಬಾರುಕೋಲಿನಿಂದ ಬಿಸಿ ಮುಟ್ಟಿಸಿದವರು ಡಾ.ಬಿ.ಆರ್.ಅಂಬೇಡ್ಕರ್. ಆದರೆ ರಾಜ್ಯವನ್ನು ಆಳುತ್ತಿರುವ ಕೋಮುವಾದಿ ಪಕ್ಷ, ಅಂಬೇಡ್ಕರರನ್ನು ಅವಹೇಳನ ಮಾಡಿ ‘ದಿ ವರ್ಷಿಪ್ಪಿಂಗ್ ಆಫ್ ಫಾಲ್ಸ್ ಗಾಡ್ಸ್’ ಪುಸ್ತಕವನ್ನು ಬರೆದ ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘಪರಿವಾರದವರು ಸಂವಿಧಾನವನ್ನು ಅಂಬೇಡ್ಕರ್ ಬದಲಾಗಿ ಬಿ.ಎನ್.ರಾವ್ ಬರೆದರೆಂದು ಪುಕಾರು ಹಬ್ಬಿಸುತ್ತಿದ್ದಾರೆ ಎಂದು ಕಿಡಿಗಾರಿದ ಅವರು, ರಾಜ್ಯದಲ್ಲಿ ಜಾತಿ ಪ್ರಬಲ ಅಸ್ತ್ರವಾಗಿ ಕೆಲಸ ಮಾಡುತ್ತಿದೆ. ಶೇ.68ರಷ್ಟಿರುವ ಅಹಿಂದ ವರ್ಗಗಳಿಗೆ ಈ ಸರಕಾರದಿಂದ ಅನ್ಯಾಯ ನಡೆಯುತ್ತಿದ್ದು, ಈ ವರ್ಗಗಳ ಜನಸಂಖ್ಯೆಗೆ ಅನುಗುಣವಾಗಿ ಮಾನ್ಯತೆ ದೊರೆಯಬೇಕು ಎಂದು ಆಗ್ರಹಿಸಿದರು.
ಬ್ರಾಹ್ಮಣರ ಬುದ್ದಿ, ಬನಿಯಾಗಳ ದುಡ್ಡು, ಶೂದ್ರರ ತೋಳ್ಬಲದಿಂದ ಅಲ್ಪಸಂಖ್ಯಾತ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಅಲ್ಪಸಂಖ್ಯಾತರು ತಮ್ಮ ಬಂಧುಗಳು. ಆದುದರಿಂದ ಅಹಿಂದ ವರ್ಗಗಳು ಒಗ್ಗಟ್ಟಾಗುವ ಮೂಲಕ ಪುರೋಹಿತಶಾಹಿಗಳ ವಿರುದ್ಧ ಹೋರಾಡಬೇಕು ಎಂದು ನರಸಿಂಹಯ್ಯ ಕರೆ ನೀಡಿದರು. ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಯ ಲಕ್ಷ್ಮೀ ನಾರಾಯಣ ನಾಗವಾರ, ಸಮಾಜವಾದಿ ನಾಗರಾಜ್ ಬೇಲೂರು, ಪ್ರಾಧ್ಯಾಪಕಿ ಡಾ. ಎಂ.ವಿ.ಉಷಾದೇವಿ ಹಾಗೂ ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಅಧ್ಯಕ್ಷ ಸರ್ದಾರ್ ಅಹ್ಮದ್ ಖುರೇಶಿ ಉಪಸ್ಥಿತರಿದ್ದರು
Please follow and like us:
error