ಭಾರತ ಬೆಳಗುತ್ತಿದೆಯೋ ಇಲ್ಲಾ ಮೌಢ್ಯದಲ್ಲಿ ಕೊಳೆಯುತ್ತಿದೆಯೋ?

– ಜ.ಹೋ.ನಾರಾಯಣಸ್ವಾಮಿ
1947ರಲ್ಲಿ ಭಾರತಕ್ಕೆ ಸಂದ ಸ್ವಾತಂತ್ರ ಭೌಗೋಳಿಕವಾದದ್ದು. ಮಾನಸಿಕವಾಗಿ ಸ್ವಾತಂತ್ರ ತಂದುಕೊಳ್ಳದ ನಾವು ಇನ್ನೂ ಗುಲಾಮರಾಗಿಯೇ ಇದ್ದೇವೆ. ಶತಶತಮಾನಗಳ ಮೌಢ್ಯದ ಕಾರ್ಗತ್ತಲೆಯಲ್ಲಿ ಕೊಳೆಯುತ್ತಲೇ ಭಾರತ ಬೆಳಗುತ್ತಿದೆ ಎಂದು ಬೂಸಿ ಬಿಡುವ ಆತ್ಮವಂಚಕರಾಗಿದ್ದೇವೆ. ನಿಜ, ಕೊಂಚಮಟ್ಟಿಗೆ ಭೌತಿಕ ಪ್ರಗತಿಯನ್ನು ಸಾಧಿಸಿದ್ದೇವೆ. ಆದರೆ ನೈತಿಕವಾಗಿ ಪಾತಾಳಕ್ಕೆ ಕುಸಿದಿದ್ದೇವೆ. ಭೌತಿಕ ಪ್ರಗತಿ ನಿಸರ್ಗದ ಮುಂದೆ ಗೌಣ. ಒಮ್ಮೆ ಭೂಮಿ ಕಂಪಿಸಿದರೆ ಅದೆಲ್ಲವೂ ಕ್ಷಣಾರ್ಧದಲ್ಲಿ ನೆಲಕಚ್ಚುತ್ತದೆ. ನೈತಿಕ ಪ್ರಗತಿಯ ಜೊತೆಗೆ ನಿಸರ್ಗವೂ ಸಹ ಸಹವರ್ತಿಯಾಗಿ ವರ್ತಿಸುತ್ತದೆ ಎಂಬ ಪ್ರಾಕೃತಿಕ ಸತ್ಯವನ್ನು ಮರೆಯದಿರೋಣ.ಭಾರತದ ಭವ್ಯತೆಯನ್ನು ತಮ್ಮ ಆಳವಾದ ಅಧ್ಯಯನಶೀಲತೆಯಿಂದ ದರ್ಶಿಸಿದ ಜರ್ಮನಿಯ ಶ್ರೇಷ್ಠ ಚಿಂತಕರಾದ ಪ್ರೊ.ಮ್ಯಾಕ್ಸ್‌ಮುಲ್ಲರ್ (1823-1900) ಅವರು 1882ರಂದು ಆಕ್ಸ್‌ಫರ್ಡ್ ವಿಶ್ವ ವಿದ್ಯಾನಿಲಯ ದಲ್ಲಿ ‘ಭಾರತ ನಮಗೆ ಏನು ಕಲಿಸಬಹುದು’ ಎಂಬ ವಿಷಯ ಕುರಿತು ಮಾತನಾಡುತ್ತಾ: ‘ಅತ್ಯಂತ ಆಳವಾದ ಚಿಂತನೆಗಳಿಂದ ಪರಿಹಾರ ರೂಪದಲ್ಲಿ ಪ್ರಗತಿಗೆ ಬದುಕಿನ ಮೂಲಭೂತ ಸಮಸ್ಯೆಗಳಿಗೆ ಪ್ಲೇಟೋ ಮತ್ತು ಕಾಂಟ್ ಅವರನ್ನು ಅಧ್ಯಯನ ಮಾಡಿರುವವರ ಗಮನವನ್ನೂ ಸೆಳೆವ ಕೊಡುಗೆ ಯಾವ ದಿಗಂತದಡಿಯಲ್ಲಿ ಗರಿಗೆದರಿವೆ ಎಂದು ನನ್ನನ್ನು ಕೇಳಿದರೆ ನಾನು ಭಾರತವನ್ನು ಸೂಚಿಸುತ್ತೇನೆ.
ಯುರೋಪಿನಲ್ಲಿರುವ ನಾವು ಯಾವ ಗ್ರೀಕ್ ಮತ್ತು ರೋಮನ್ ಹಾಗೂ ಸೆಮಿಟಿಕ್ ಜನಾಂಗ, ಜ್ಯೂಗಳ ಚಿಂತನೆಯನ್ನು ಪೂರ್ಣವಾಗಿ ಒಪ್ಪಿರುವೆವೋ ಆ ನಮ್ಮ ಅಂತರಂಗದ ಜೀವನ ಪಾವನಗೊಳ್ಳಲು, ವಿಸ್ತಾರಗೊಳ್ಳಲು, ವಿಶ್ವ ವ್ಯಾಪಕ ವಾಗಲು, ವಾಸ್ತವವಾಗಿ ಹೆಚ್ಚು ಮಾನವೀಯವಾಗಲು, ಭೌತಿಕ ಪ್ರಪಂಚ ಕ್ಕಷ್ಟೇ ಅಲ್ಲ ಆಧ್ಯಾತ್ಮಿಕ ಪ್ರಪಂಚದ ದಿವ್ಯರೂಪ ಪಡೆಯಲು ಯಾವ ಸಾಹಿತ್ಯದಿಂದ ಸಾಧ್ಯ ಎಂದು ನನ್ನನ್ನು ಕೇಳಿದರೆ ನಾನು ಮತ್ತೆ ಭಾರತವನ್ನು ಸೂಚಿಸುತ್ತೇನೆ’ ಎಂದಿದ್ದಾರೆ. ಆಗ ವಿವೇಕಾನಂದರಿಗೆ ಕೇವಲ 19 ವರ್ಷ 4 ತಿಂಗಳು.
ಮ್ಯಾಕ್ಸ್ ಮುಲ್ಲರ್ ಕಂಡ ಭಾರತದದಿವ್ಯಶಕ್ತಿಯನ್ನು ವಿಶ್ವವೇದಿಕೆಯಲ್ಲಿ ಅನುರಣನಗೊಳಿಸಿದ ಕೀರ್ತಿ ವಿವೇಕಾನಂದರದು. ‘ವೇದಾಂತ ವೇ ಮುಂದಿನ ಪ್ರಪಂಚದ ಧರ್ಮ’ ಎಂದು 1893ರಲ್ಲಿ ಉದ್ಘೋಷಿಸಿದರು. ದುರಂತವೆಂದರೆ ಇದಕ್ಕೆ ಬೆನ್ನು ಮಾಡಿದ ಮತೀಯವಾದಿಗಳಿಂದ, ಮನುಕುಲದ ಐಕ್ಯತೆಯ ದಿವ್ಯ ಜ್ಯೋತಿಯಾಗ ಬೇಕಿದ್ದ ಭಾರತ 1947ರಲ್ಲಿ ಬಿರುಕು ಬಿಟ್ಟು ಭಾರತ ಹಾಗೂ ಪಾಕಿಸ್ಥಾನ ಗಳಾಗಿ ಒಡೆದು ಹೋಯ್ತು. ಅದು ಅಲ್ಲಿಗೆ ಕೊನೆಗೊಳ್ಳದೆ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಎಂಬ ಮತೀಯ ಭೂತಗಳು ಇಂದಿಗೂ ಆಂತರಿಕವಾಗಿ ದಿನನಿತ್ಯ ಕೇಕೆ ಹಾಕಿ ಕುಣಿಯುತ್ತಲೇ ಇವೆ.
ರಾಜಕೀಯ ಸ್ವಾರ್ಥ ಸಾಧನೆಗಾಗಿ ಗುಡಿ, ಚರ್ಚು, ಮಸೀದಿಗಳ ಆರ್ಭಟಗಳು ಗರ್ಭ ಗುಡಿಯ ದೈವ ವಾಣಿಯನ್ನೂ ಮರೆಮಾಡಿ ಅಬ್ಬರಿಸುತ್ತಿವೆ. ‘ಸಾರ್ವಜನಿಕವಾಗಿ ಹಿಂದೂ-ಮುಸ್ಲಿಮ್ ಎಂಬ ಪದಗಳನ್ನು ಬಳಸಬೇಡಿ’ ಎಂದ ಡಾ.ಲೋಹಿಯಾ ವಾಣಿಗೆ ಕಿವಿ ತೆರೆಯದ ಮತೀಯವಾದಿಗಳು ಹಿಂದೂವಾಗಿ, ಮುಸ್ಲಿಂ ಆಗಿ, ಕ್ರಿಶ್ಚಿಯನ್ ಇತ್ಯಾದಿಗಳಾಗಿ ನಾವು ಭಾರತೀಯರು ಎಂಬ ಭಾವನೆಯನ್ನೇ ಬತ್ತಿಸಿ ಕೊಳ್ಳುತ್ತಿದ್ದೇವೆ. ಹೀಗಾಗಿ ಶತಶತಮಾನಗಳಿಂದ ಮನುಕುಲದ ರಕ್ತವನ್ನು ಹೀರಿದ ರಾಜಶಾಹಿ ಹಾಗೂ ಪುರೋಹಿತಶಾಹಿ ಈಗಲೂ ತನ್ನ ಕ್ರೌರ್ಯದ ಕೆನ್ನಾಲಗೆಯನ್ನು ಚಾಚುತ್ತಲೇ ಇದೆ.
ಭಾರತದ ರಾಜಕಾರಣಿಗಳು ಪುರೋಹಿತ ಶಾಹಿಯ ಗುಲಾಮರಾಗಿದ್ದಾರೆ. ಇದನ್ನು ಮೊದಲೆ ಮನಗಂಡಿದ್ದ ವಿನ್ಸ್‌ಟನ್ ಚರ್ಚಿಲ್ ಭಾರತಕ್ಕೆ ಸ್ವಾತಂತ್ರ ಕೊಡುವ ಸಂದರ್ಭದಲ್ಲಿ ಅಂದಿನ ಪ್ರಧಾನಿ ಅಟ್ಲಿಗೆ ಹೇಳಿದ ‘ಸ್ವತಂತ್ರ ಭಾರತದಲ್ಲಿ ಅಧಿಕಾರ ಎನ್ನುವುದು ದಗಾ ಕೋರರ, ಠಕ್ಕರ ಹಾಗೂ ನಿರಂಕುಶ ದರೋಡೆ ಕೋರರ ಕೈಗೆ ಹೋಗುತ್ತದೆ. ಗಾಳಿಯೊಂದನ್ನು ಬಿಟ್ಟರೆ ಒಂದು ತುಂಡು ಬ್ರೆಡ್ಡಾಗಲೀ, ಸೀಸೆ ನೀರಾಗಲೀ ತೆರಿಗೆಯಿಂದ ತಪ್ಪಿಸಿಕೊಳ್ಳುವುದಿಲ್ಲ. ಅವರು ತಮ್ಮ ತಮ್ಮಿಳಗೆ ಹೊಡೆದಾಡುತ್ತಾರೆ.
ಈ ಬಹಿರಂಗ ಕಾದಾಟದಿಂದಾಗಿ ಭವ್ಯ ಭಾರತ ಕಳೆದು ಹೋಗುತ್ತದೆ; ದಶಕಗಳು ಕಳೆದಂತೆ ಈ ಮಾತುಗಳು ನಿಜವಾಗುತ್ತಿವೆ. ಭಾರತ ಬೆಳಗುವುದಿರಲಿ ‘ಭವ್ಯಭಾರತ’ ಕಮರಿ ಹೋಗುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿದೆ. ಹಾಡಹಗಲೇ ನಡೆವ ಅತ್ಯಾಚಾರಗಳು, ಭಾರತದ ಶೀಲಹರಣ ಹಾಗೂ ದೇವಮಂದಿರಗಳನ್ನೂ ಬಿಡದೆ ಭುಗಿಲೇಳುತ್ತಿರುವ ಭ್ರಷ್ಟಾಚಾರ ‘ತಾಯಿಭಾರತಿ’ ಯ ಅಂಗ ಅಂಗಗಳನ್ನು ಕಿತ್ತು ತಿನ್ನುತ್ತಿರುವುದರ ದ್ಯೋತಕವಾಗಿದೆ. ದೇವರು ಧರ್ಮದ ಹೆಸರಿನ ನರ ರಾಕ್ಷಸರ ಅಟ್ಟಹಾಸ ದಿನದಿಂದ ದಿನಕ್ಕೆ ಕೊಬ್ಬಿ ಕೆನೆಯುತ್ತಿದೆ.
ನಿಜವಾದ ಅರ್ಥದಲ್ಲಿ ಭಾರತ ಸ್ವತಂತ್ರಗೊಳ್ಳುವುದು ಮೌಢ್ಯದಿಂದ ಮುಕ್ತಿಗೊಂಡಾಗ ಮಾತ್ರ. ಭಾರತದ ಭವ್ಯತೆಯನ್ನು ಪಾಶ್ಚಾತ್ಯರು ಅರಿತುಕೊಂಡಂತೆ ಭಾರತೀಯರು ಅರಿತುಕೊಳ್ಳದೆ ಹೋದದ್ದು ದುರ್ದೈವ. ಜ್ಞಾನ ಶಾಖೆಯನ್ನು ಗುತ್ತಿಗೆ ಹಿಡಿದ ಜನ ತಾವೂ ಅರಿಯದೆ, ಅರಿಯಲು ಅನ್ಯರಿಗೆ ಅವಕಾಶ ಕೊಡದೆ ಮನುಸ್ಮೃತಿ ಮುಂತಾದುವನ್ನು ರಚಿಸಿ ಭಾರತವನ್ನು ನಿರ್ವೀರ್ಯಗೊಳಿಸಿದರು. ವಿದ್ಯೆ ವ್ಯಾಪಕವಾಗಿ ಹರಡುತ್ತಿರುವ ಈ ಕಾಲದಲ್ಲಿ ರಾಷ್ಟ್ರ ಹಿತಕ್ಕಿಂತ ಸ್ವಹಿತಾಸಕ್ತಿಪ್ರಧಾನವಾಗಿ ನವ ಪುರೋಹಿತಶಾಹಿಗಳ ಹಿಂಡು ದಂಡಿಯಾಗುತ್ತಿದೆ.
ಸ್ವಂತಿಕೆಯನ್ನು ಬದಿಗೊತ್ತಿ ವ್ಯಾಮೋಹಕ್ಕೆ ಒಳಗಾದ ಶಿಥಿಲಮನಸ್ಕರೆಂದರೆ ಭಾರತೀಯರೆ. ತಮ್ಮ ಸಂಸ್ಕೃತಿಯ ಆಳ ಅಗಲ ಎತ್ತರಗಳನ್ನು ಅರಿಯದೆ ಅನ್ಯಸಂಸ್ಕೃತಿಯ ಮೋಹ ಜಾಲಕ್ಕೆ ಮಾರು ಹೋದವರು. ಆದ ಕಾರಣವೇ ವಿವೇಕಾನಂದರು ‘‘ಜಪಾನಿನಲ್ಲಿ ನಾವು ಜ್ಞಾನದ ಸಮೀಕರಣವನ್ನು ನೋಡುತ್ತೇವೆ ನಮ್ಮಲ್ಲಿರುವಂತೆ ಅದರ ಅಜೀರ್ಣತೆಯನ್ನಲ್ಲ. ಅವರು ಐರೋಪ್ಯ ರಿಂದ ಎಲ್ಲವನ್ನೂ ತೆಗೆದುಕೊಂಡಿದ್ದಾರೆ.
ಆದರೆ ಅದೇ ಕಾಲದಲ್ಲಿ ಜಪಾನಿಯರಾಗಿಯೇ ಉಳಿದಿದ್ದಾರೆ. ಐರೋಪ್ಯರಾಗಿಲ್ಲ. ನಮ್ಮ ದೇಶ ದಲ್ಲಾದರೋ ಪಾಶ್ಚಾತ್ಯನಾಗಿ ಬಿಡಬೇಕೆಂಬ ತೀವ್ರ ಹುಚ್ಚು ಪ್ಲೇಗಿನಂತೆ ನಮ್ಮನ್ನು ಹಿಡಿದುಕೊಂಡಿದೆ. ಅಯ್ಯೋ! ದೇಶ ಇಂಥ ದುರವಸ್ಥೆಗೆ ಇಳಿದಿದೆ! ಜನರು ತಮ್ಮಲ್ಲಿರುವ ಚಿನ್ನವನ್ನೇ ಹಿತ್ತಾಳೆಯಂತೆ ನೋಡುವರು. ಪರದೇಶಿಯರ ಹಿತ್ತಾಳೆಯೇ ಚಿನ್ನ ಇವರಿಗೆ! ಆಧುನಿಕ ವಿದ್ಯಾಭ್ಯಾಸದಿಂದ ಉದ್ಭವಿಸಿದ ಯಕ್ಷಿಣಿ ಇದು’’ ಎಂದು ನೊಂದು ಕಠಿಣವಾಣಿಗಳಿಂದ ಖಂಡಿಸಿದ್ದಾರೆ.
ಅಂಥ ರೋಗಗ್ರಸ್ತ ಸಮಾಜ ನಿರ್ಮಾಣಕ್ಕೆ ಕಾರಣರಾದ ಜ್ಞಾನಶಾಖೆಯ ಗುತ್ತಿಗೆ ಹಿಡಿದಿದ್ದ ಬ್ರಾಹ್ಮಣರ ನಿಜ ಸ್ವರೂಪವನ್ನು ಕುರಿತು ವಿವೇಕಾನಂದರು‘ನೀಚರೂ ಕುತಂತ್ರಿಗಳೂ ಆದ ಪುರೋ ಹಿತರು ಎಲ್ಲಾ ವಿಧದ ಮೂಢ ನಂಬಿಕೆಗಳನ್ನು ವೇದ ಮತ್ತು ಹಿಂದೂ ಧರ್ಮದ ಸಾರ ಎಂದು ಬೋಧಿಸುತ್ತಾರೆ. ಈ ಠಕ್ಕುಗಾರರಾದ ಪುರೋಹಿತರಾಗಲೀ ಅಥವಾ ಅವರ ತಾತ ಮುತ್ತಾತಂದಿರಾಗಲೀ ಕಳೆದ ನಾನೂರು ತಲೆಮಾರುಗಳಿಂದಲೂ ವೇದದ ಒಂದು ಭಾಗವನ್ನೂ ನೋಡಿಲ್ಲ. ಮೂಢಾಚಾರಗಳನ್ನು ಅನುಸರಿಸಿ ಹೀನ ಸ್ಥಿತಿಗೆ ಬರುತ್ತಾರೆ. ಕಲಿಯುಗ ದಲ್ಲಿ ಬ್ರಾಹ್ಮಣವೇಷದಲ್ಲಿರುವ ಈ ರಾಕ್ಷಸರಿಂದ ಮುಗ್ಧ ಜನರನ್ನು ಆ ದೇವರೇ ಕಾಪಾಡಬೇಕು’ ಎಂದು ಅವರ ಗೋಮುಖ ವ್ಯಾಘ್ರದ ರಾಕ್ಷಸತನವನ್ನು ಮನದಟ್ಟು ಮಾಡಿದ್ದಾರೆ.
ಇವರು ಕಾಲ ಕಾಲಕ್ಕೆ ಹರಿಕತೆ ಪ್ರವಚನಗಳ ಮೂಲಕ ಸತ್ಯವನ್ನು ತಿರುಚುತ್ತಾ ಹೊಸ ಹೊಸ ಪೂಜೆ ಆಚರಣೆಗಳನ್ನು ಹುಟ್ಟು ಹಾಕುತ್ತಾ ಸ್ವಹಿತಾಸಕ್ತಿಗಾಗಿ ಜನರಲ್ಲಿ ಮೌಢ್ಯವನ್ನು ಬಿತ್ತುತ್ತಾ ಪೂರ್ಣಚಂದ್ರತೇಜಸ್ವಿ ಹೇಳಿ ದಂತೆ ‘ಭಾರತವನ್ನೇ ಬಾಳೆ ಎಲೆಯಾಗಿಸಿ ಕೊಂಡು’ತಿಂದು ತೇಗಿದರು. ತನ್ಮೂಲಕ ಭಾರತೀಯತೆಯನ್ನು ನೀಗಿದರು. ವೇದೋಪನಿಷತ್ತುಗಳನ್ನು, ಮನುಕುಲಕ್ಕೆ ಬೆಳಕಾಗಿ ಬಂದ ಬುದ್ಧ ಬಸವರನ್ನು ಬದಿಗೊತ್ತಿ ತಮ್ಮ ಸ್ವಾರ್ಥದ ತಿದಿಯೊತ್ತುತ್ತಾ ಒಳಗೊಳಗೆ ಕುದಿಯುತ್ತಿರುವ ಸತ್ಯ ಗೌಪ್ಯವಾಗಿ ಉಳಿದಿಲ್ಲ.
ಈ ಸ್ವಾರ್ಥವನ್ನೇ ಹೃದಯವಾಗಿಸಿ ಕೊಂಡ ನಮ್ಮ ಅರಿವಿರದ ಅನಿಷ್ಟ ನಡಿಗೆಯಿಂದಾಗಿ ಇಂದು ನಗರಗಳ ಸುತ್ತ ಮುತ್ತ ಇದ್ದ ಕೆರೆಗಳನ್ನು ಮುಚ್ಚಿ ವರ್ಷವಿಡೀ ನೀರುಣಿಸುತ್ತಿದ್ದ ಬಾವಿಗಳನ್ನು ಬತ್ತಿಸಿದ್ದೇವೆ. ಸ್ವಾತಂತ್ರ ಬಂದು 66 ಸಂವತ್ಸರಗಳು ಕಳೆದರೂ, ನದಿಗಳು ತುಂಬಿ ಹರಿದು ಸಮುದ್ರ ಸೇರುತ್ತಿದ್ದರೂ ಕನಿಷ್ಠ ಕುಡಿಯುವ ನೀರನ್ನು ಒದಗಿಸಿಕೊಳ್ಳಲಾರದ ದೈನ್ಯಸ್ಥಿತಿಗೆ ತಲುಪಿದ್ದೇವೆ. ನೀರನ್ನು ಕೊಡದಿದ್ದರೂ ತೆರಿಗೆಯ ಬರೆ ಎಳೆಯುವುದರಲ್ಲಿ ನಿಸ್ಸೀಮರಾಗಿ ದ್ದೇವೆ. ರಸಸ್ವಾದಿಗಳಾಗಬೇಕಾದ ನಾವು ಕಸದ ರಾಶಿಯ ನಡುವೆ ಕೊಳೆಯುತ್ತಿದ್ದೇವೆ.

ಒಂದು ಹಳ್ಳಿ ಒಂದು ಬಾವಿ ಎನ್ನುವ ವೈಜ್ಞಾನಿಕ ವಿಚಾರ ವನ್ನು ಹೇಳಿದ ಮಾಟ, ಮಂತ್ರ ತಂತ್ರಗಳ ವಿರುದ್ಧ ಜನ ಜಾಗೃತಿಗೊಳಿಸುತ್ತಿದ್ದ ಮಹಾರಾಷ್ಟ್ರದ ಡಾ.ನರೇಂದ್ರ ಅಚ್ಯುತ ದಾಬೋಲ್ಕರ್ ಅವರನ್ನು 20.8.2013ರಂದು ಹತ್ಯೆ ಮಾಡ ಲಾಗಿದೆ. ಮಾಟ ಮಂತ್ರ ತಂತ್ರಗಳು ನಿಜವಾಗಿ ದ್ದರೆ ದಾಬೋಲ್ಕರ್ ಅವರನ್ನು ಮಾಟಮಾಡಿ ಸಾಯಿಸಬಹುದಿತ್ತು. ಕೊಲೆ ಮಾಡಿರುವುದ ರಿಂದಲೇ ತಿಳಿಯುತ್ತದೆ ಮಾಟ ಮಂತ್ರ ತಂತ್ರಗಳು ಸುಳ್ಳು ಎನ್ನುವುದು. ದೊಡ್ಡ ಅಣೆಕಟ್ಟುಗಳು ಬೇಡ ದೇಶದ ಉದ್ದಗಲ ಕೆರೆಗಳನ್ನು ರಕ್ಷಿಸಿ, ಹೆಚ್ಚು ಹೆಚ್ಚು ಕಟ್ಟಿ ಎಂದ ಡಾ. ಲೋಹಿಯಾ ಅವರನ್ನು ಬ್ರಿಟಿಷರು ಮೂರು ಸಾರಿ ಜೈಲಿಗೆ ಹಾಕಿದ್ದರೆ, ಸ್ವತಂತ್ರ ಭಾರತ ಹದಿಮೂರು ಸಲ ಜೈಲಿಗೆ ಹಾಕಿತು.
ಈಗ ಯಾವ ಹಳ್ಳಿಯಲ್ಲಿ ಸರಿಯಾಗಿ ಕುಡಿಯುವ ನೀರು ಇಲ್ಲ. ಆದರೆ ಹಳ್ಳಿ ಹಳ್ಳಿಗಳಲ್ಲಿ ಗಲ್ಲಿಗಲ್ಲಿಗಳಲ್ಲಿ ದೇವಸ್ಥಾನಗಳ ಮೋಹ ಜಾಲವನ್ನು ಹೆಣೆಯುತ್ತಾ ಜನರನ್ನು ಮರುಳು ಮಾಡುತ್ತಿದ್ದಾರೆ.ದೇಶದುದ್ದಗಲ ಧಾರ್ಮಿಕ ಹೆಸರಿನ ಅರ್ಥರಹಿತ ಆಚರಣೆಗಳು ಮೈದುಂಬಿ ಕುಣಿಯುತ್ತಿವೆ. ಇದರಿಂದ ಯಾವ ಧರ್ಮಗಳೂ ಹೊರತಾಗಿಲ್ಲ. ಚಂದ್ರಗುತ್ತಿ, ಸವದತ್ತಿಯ ಬೆತ್ತಲು ಪೂಜೆ ಒಂದೆಡೆಯಾದರೆ ಮಡೆಸ್ನಾನದಂತ ಅನಿಷ್ಟ ಪದ್ಧತಿಗಳು ಹೆಡೆ ಎತ್ತಿ ಬಸುಗುಡುತ್ತಿವೆ. ತಿರುಪತಿಯ ಹಣ ಒಡವೆಗಳ ದಂಧೆ ಹೇಳತೀರದು.
ಗಣಿ ಲೂಟಿಯ ವಜ್ರಕಿರೀಟ ತಿಮ್ಮಪ್ಪನ ತಲೆಯ ಮೇಲೆ ಮೆರೆಯುತ್ತದೆ. ಕೇರಳದ ಪದ್ಮನಾಭ ದೇವಸ್ಥಾನದ ಚಿನ್ನದ ಹಗರಣ ನಮ್ಮ ಧಾರ್ಮಿಕ ಇತಿಹಾಸದ ಕ್ರೌರ್ಯದ ಪ್ರತೀಕವಾಗಿದೆ. ತ್ರಿವೇಣಿ ಸಂಗಮದಲ್ಲಿ, ಕಾಶಿಯ ಗಂಗಾನದಿಯಲ್ಲಿ ಸ್ನಾನ ಮಾಡಲಾಗದಂತೆ ಕಲುಷಿತಗೊಳಿಸಿ ಪುಣ್ಯದ ಅಮಲಿನಲ್ಲಿ ಮಿಂದು ಚರ್ಮರೋಗಕ್ಕೆ ತುತ್ತಾಗುತ್ತಿದ್ದೇವೆ. ‘ಹಿಂದೂ ಮತದಲ್ಲಿ ಬೆಳಕು ಎಷ್ಟಿದೆಯೋ ಅದಕ್ಕೆ ಇಮ್ಮಡಿಯಾಗಿ ಆಚಾರದಲ್ಲಿ ಕೊಳಕು ಇದೆ. ಅಯ್ಯೋ, ನಾವೆಲ್ಲರೂ ಹೇಗೆ ಪದ್ಧತಿಗೆ ಗುಲಾಮರಾಗಿಬಿಟ್ಟಿದ್ದೇವೆ!’ ಎಂದು ಹೇಳುತ್ತಾ ಕುವೆಂಪು ‘ಈಗ ನಾವು ಮತ ಎಂದು ಕರೆದುಕೊಳ್ಳುವ ಆಚಾರ ಸಮೂಹ ಬರಿಯ ಸಾಮಾಜಿಕವಾದ ಕಟ್ಟಳೆಗಳ ಕಾಟವಾಗಿದೆ.
ಒಬ್ಬರನ್ನೊಬ್ಬರು ಮುಟ್ಟದಿರುವುದು, ನೋಡದಿರುವುದು, ಒಬ್ಬರೊಡನೊಬ್ಬರು ಕುಳಿತು ಭೋಜನ ಮಾಡದಿರುವುದು, ನಾಮ ಹಾಕಿಕೊಳ್ಳುವುದು, ವಿಭೂತಿ ಹಚ್ಚಿಕೊಳ್ಳುವುದು, ಮುದ್ರೆ ಹೊಡೆದುಕೊಳ್ಳುವುದು, ಶಿಲುಬೆ ಧರಿಸಿಕೊಳ್ಳುವುದು, ಕೆಲವರನ್ನು ಸಾರ್ವಜನಿಕವಾದ ಬಾವಿ ಕೆರೆಗಳಲ್ಲಿ ನೀರು ತೆಗೆದುಕೊಳ್ಳದಂತೆ ಮಾಡುವುದು ಇತ್ಯಾದಿ ಕೆಲಸಕ್ಕೂ ಬಾರದ, ಶ್ರೇಯಸ್ಕರವೂ ಅಲ್ಲದ ನೂರಾರು ಆಚಾರ ವ್ಯವಹಾರಗಳ ಸಮಷ್ಟಿಯೇ ನಮ್ಮ ಮತದ ಹುರುಳಾಗಿ ಕುಳಿತಿದೆ. ಮಹಾವಿಭೂತಿಗಳು ಸಾರಿದ ಮತ್ತು ಸಾರುತ್ತಿರುವ ಅಮೃತ ಸಂದೇಶ ಅರಣ್ಯರೋದನವಾಗಿದೆ.
ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ, ಭಕ್ತಿಯ ಪೂಜೆಯ ಹೆಸರಿನಲ್ಲಿ ಜನರನ್ನು ಹೆದರಿಸಿ ಯಾವ ರೀತಿ ಸುಲಿಗೆ ಮಾಡುತ್ತಿದ್ದಾರೆ, ಮೋಸ ಮಾಡುತ್ತಿದ್ದಾರೆ! ನೋಡಿ. ಹಳೆ ದೇವಸ್ಥಾನಗಳು, ಹಳೆ ದೇವರುಗಳು ಸಾಲದು ಅಂತ ಅವಿವೇಕಿಗಳು ಆ ಸಂಘ ಈ ಪರಿಷತ್ತಿನವರು ಪ್ರತಿವರ್ಷ ನೂರಾರು ದೇವಸ್ಥಾನಗಳನ್ನು ಕಟ್ಟಿಸಿ ಪ್ರತಿಗಾಮಿ ಕುತ್ಸಿತ ಸಂಸ್ಕೃತಿಯನ್ನು ಬೆಳೆಸುತ್ತಿದ್ದಾರೆ. ಜೊತೆಗೆ ಹೊಸ ಹೊಸ ದೇವರುಗಳು! ಹೊಸ ದೇವರುಗಳು ಹೆಚ್ಚಿದಷ್ಟು ಅನೈಕ್ಯಕ್ಕೆ ದಾರಿ ಸವೆಸಿದಂತಾಗುತ್ತದೆ; ಪ್ರತ್ಯೇಕತಾ ಮನೋಭಾವನೆಯ ಕಂದಕವನ್ನು ಅಗಲವಾಗಿ ತೋಡಿದಂತಾಗುತ್ತದೆ.
ಅಯ್ಯಪ್ಪನ ಉದಯದ ಕಥೆಯಂತೂ ಹಾಸ್ಯಾಸ್ಪದವಾಗಿದೆ’ ಎಂದು ವಸ್ತು ಸ್ಥಿತಿಯನ್ನು ಕುರುಡನೂ ಕಾಣುವಷ್ಟು ಸ್ಪಷ್ಟವಾಗಿ ಚಿತ್ರಿಸಿದ್ದಾರೆ. ಮಕರ ಜ್ಯೋತಿ ಕೃತಕವಾಗಿ ಸೃಷ್ಟಿಸುತ್ತಿರುವುದು ನಿಜ ಎಂದು ಕೇರಳದ ಅಯ್ಯಪ್ಪ ಸ್ವಾಮಿ ನಿರ್ವಹಣಾ ಮಂಡಲಿಯವರೇ ಒಪ್ಪಿಕೊಂಡರೂ ಜನರ ವೌಢ್ಯಕ್ಕೆ ಅಂತ್ಯವೇ ಇಲ್ಲ. ಈ ಹಿನ್ನೆಲೆಯಲ್ಲಿಯೇ ವಿವೇಕಾನಂದರು ‘ಆಧುನಿಕ ಭರತ ಖಂಡದಲ್ಲಿ ಧಾರ್ಮಿಕ ಭಾವನೆ ಮಾಯವಾಗಿದೆ. ಬಾಹ್ಯ ಆಚಾರ ಮಾತ್ರ ಉಳಿದಿದೆ’ ಎಂದು ಭಾರತೀಯರ ವಿಚಾರವಿಲ್ಲದ ಆಚಾರಗಳನ್ನು ಖಂಡಿಸಿದ್ದಾರೆ.
ದೇಶದುದ್ದಗಲ ವೌಢ್ಯಗಳು ಮೈದುಂಬಿ ಕುಣಿಯುತ್ತಿದ್ದು, ಮಾನವನ ಬದುಕು ಅಂಧಕಾರದಲ್ಲಿ ಮುಳುಗಿದ್ದರೂ ನಾವು ನಾಚಿಕೆ ಇಲ್ಲದೆ ಭಾರತ ಬೆಳಗುತ್ತಿದೆ ಎಂದು ಹುಸಿ ಹೆಮ್ಮೆಯಿಂದ ಬೀಗುವ ಹುಂಬರಾಗಿದ್ದೇವೆ.ಎಲ್ಲ ಮುಖ್ಯಮಂತ್ರಿಗಳಂತೆ ಸಿದ್ದರಾಮಯ್ಯ ಕೂಡ ಈಗ ಚೀನಾ ದೇಶಕ್ಕೆ ಹೋಗಿದ್ದಾರೆ. ಉದ್ದೇಶ ಬಂಡವಾಳ ಹೂಡಿಕೆದಾರರನ್ನು ಸೆಳೆಯಲು. ಅಂದು ಬ್ರಿಟಿಷರು ವ್ಯಾಪಾರದ ನೆವದಲ್ಲಿ ಭಾರತಕ್ಕೆ ಬಂದು ಕ್ರಮೇಣ ಇಡೀ ಭಾರತವನ್ನು ವಶಪಡಿಸಿಕೊಂಡರು ಎಂಬ ಐತಿಹಾಸಿಕ ಸತ್ಯವನ್ನು ಕಡೆಗಣಿಸಿ ಇಂದು ಬಹುರಾಷ್ಟ್ರೀಯ ಕಂಪೆನಿಗಳನ್ನು ನಾವೆ ಕೆಂಪು ಹಾಸು ಹಾಸಿ ಕರೆತರುವ, ತನ್ಮೂಲಕ ದೇಶವನ್ನು ಪರೋಕ್ಷವಾಗಿ ಬಂಡವಾಳಶಾಹಿಗಳ ಬೀಡಾಗಿಸಿ ಅಸ್ವತಂತ್ರಗೊಳಿಸುವ ಅನಪೇಕ್ಷಣೀಯ ಕೃತ್ಯಗಳು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಅವ್ಯಾಹತವಾಗಿ ನಡೆಯುತ್ತಿವೆ.
ಈಗ ಸರಕಾರಗಳು ಬಂಡವಾಳಶಾಹಿಗಳ ಹಿಡಿಕತ್ತರಿಗೆ ಸಿಕ್ಕಿಹಾಕಿಕೊಂಡು ಅವರ ತಾಳಕ್ಕೆ ತಕ್ಕಂತೆ ಕುಣಿಯುವ ಅಸಹಾಯಕತೆಯನ್ನು ತಂದುಕೊಂಡಿವೆ. ಈ ರೀತಿಯ ನಡೆಯಿಂದಾಗಿ ರಾಷ್ಟ್ರೀಯ ನೀತಿ ನೆಲಕಚ್ಚಿ ಪ್ರತಿಭಾ ಪಲಾಯನ ಒಂದು ಕಡೆಯಾದರೆ ದೇಶವಿದೇಶ ಬಂಡವಾಳ ಶಾಹಿಗಳ ಪ್ರಾಬಲ್ಯ ಮತ್ತೊಂದು ಕಡೆ ರಾಷ್ಟ್ರವನ್ನು ಮುಕ್ಕಳಿಸುವ ಹುನ್ನಾರಗಳಲ್ಲವೆ.
ದೇವರು ಧರ್ಮದ ಹೆಸರಿನಲ್ಲಿ ಜ್ಯೋತಿಷಿಗಳು ಮೌಢ್ಯವನ್ನು ಬಿತ್ತುತ್ತಾ ಡೋಂಗಿ ಬಾಬಾಗಳು, ದೇವ ಮಾನವರು ತನುರುಚಿಯ ಹಗರಣಗಳಲ್ಲಿ ಸಿಲುಕಿ ಅನೈತಿಕತೆಯ ನಗ್ನ ನರ್ತನಕ್ಕೆ ಇಂಬು ಕೊಡುತ್ತಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಮಾಧ್ಯಮಗಳು ಎಲ್ಲ ಸಾಮಾಜಿಕ ವೌಲ್ಯಗಳನ್ನು ಗಾಳಿಗೆ ತೂರಿ ಸಮಷ್ಟಿ ಮನಸ್ಸುಗಳನ್ನು ಕಲೆಯ ಹೆಸರಿನಲ್ಲಿ ಕಲುಷಿತಗೊಳಿಸುವ ಕ್ರಿಯೆಯಲ್ಲಿ ನಿದ್ದೆಗೆಟ್ಟು ಹೂಂಕರಿಸುತ್ತಿವೆ. ಒಂದು ರೀತಿಯ ವೈರಾಗ್ಯ ಭಾವನೆ ಆವರಿಸುತ್ತ ಸಾಯಲಾರದಕ್ಕೆ ಬದುಕುವ ಪರಿಸ್ಥಿತಿ ಪ್ರಾಪ್ತವಾಗಿದೆ. ನಗರಗಳು ನರಕ ಸದೃಶವಾಗುತ್ತಿದ್ದರೆ ಹಳ್ಳಿಗಳು ಆತ್ಮ ಕಳೆದುಕೊಂಡು ಅನಾಥವಾಗುತ್ತಿವೆ.
ಇಷ್ಟಾದರೂ ತಾಯಿ ಭಾರತಿ ಬಂಜೆಯಲ್ಲ ಎಂಬ ಸಾರ್ವ ಕಾಲಿಕ ಸತ್ಯವನ್ನು ಮರೆಯದಿರೋಣ. ಕಾಲಕಾಲದಿಂದಲೂ ಋಷಿ ಮಹರ್ಷಿಗಳನ್ನು, ಮಹಾಕವಿಗಳನ್ನು, ವಿಜ್ಞಾನಿಗಳನ್ನು, ತತ್ವಜ್ಞಾನಿಗಳನ್ನು, ಶಿಲ್ಪಿಗಳನ್ನು, ಸಂಗೀತಗಾರ ರನ್ನು, ಸಾಹಿತಿಗಳನ್ನು, ಸಮಾಜ ಸುಧಾರಕರನ್ನು, ಶ್ರೇಷ್ಠ ಸಂತರನ್ನು, ಸಾಧಕರನ್ನು ತನ್ನ ಹೃನ್ಮಂದಿರದಲ್ಲಿ ಸಲಹುತ್ತಾ ಬಂದಿದ್ದಾಳೆ. ವಿಶ್ವಭ್ರಾತೃತ್ವದ ಸಂಸ್ಕೃತಿಯನ್ನು ಸಾರುತ್ತಿರುವ ತಾಯಿ ಭಾರತಿಯ ಹೃದಯದತ್ತ ನಮ್ಮ ದೃಷ್ಟಿ ಹರಿಯಲಿ, ಒಂದಾಗಿ ಬೆರೆಯಲಿ. ನಿಜವಾದ ಅರ್ಥದಲ್ಲಿ ಭಾರತ ಬೆಳಗಿ ವಿಶ್ವಕ್ಕೆ ಬೆಳಕಾಗುವ ದಿಶೆಗೆ ನಮ್ಮನ್ನು ನಾವು ತೊಡಗಿಸಿಕೊಳ್ಳೋಣ. Varthabharati
Please follow and like us:
error