fbpx

‘ಅಭಿವೃದ್ಧಿ’: ಬಲಿಕಂಬ ಏರಲಿರುವ ಪ್ರಜಾಪ್ರಭುತ್ವ?

– ಸುರೇಶ್ ಭಟ್, ಬಾಕ್ರಬೈಲ್

ಈಗಾಗಲೇ ನಿಚ್ಚಳವಾಗಿರುವಂತೆ ಸ್ವದೇಶಿ ಹಾಗೂ ವಿದೇಶಿ ಹೂಡಿಕೆಗೆ (ಲೂಟಿಗೆ) ಮುಕ್ತ ಅವಕಾಶ ಕಲ್ಪಿಸಿಕೊಡುವುದೇ ಮೋದಿ ಸರಕಾರದ ‘ಅಭಿವೃದ್ಧಿ’ಯ ಒಳಗುಟ್ಟು. ಉದಾಹರಣೆಗೆ ಆಧುನಿಕೀಕರಣದ ಹೆಸರಲ್ಲಿ ರೈಲ್ವೆಯಲ್ಲಿ 100% ವಿದೇಶಿ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ. ಕಾರ್ಮಿಕ ಕಾನೂನುಗಳಿಗೆ ಜನವಿರೋಧಿ ತಿದ್ದುಪಡಿಗಳನ್ನು ತಂದು ಉದ್ಯಮಿಗಳಿಗೆ ಅನುಕೂಲವಾಗುವಂತೆ ಮಾಡಲಾಗಿದೆ. ಪರಿಸರ ಸಂರಕ್ಷಣಾ ಕಾನೂನುಗಳನ್ನು ದುರ್ಬಲಗೊಳಿಸಲಾಗಿದೆ. ಮೋದಿ ಸರಕಾರ ಈಗ ತನ್ನ ಬೆಂಬಲಿಗ ಕಾರ್ಪೊರೇಟುಗಳ ‘ಅಭಿವೃದ್ಧಿ’ಗೋಸ್ಕರ ಅಪ್ರಜಾಸತ್ತಾತ್ಮಕ ಮಾರ್ಗವನ್ನು ತುಳಿಯಲಾರಂಭಿಸಿದೆ. ಅಂತಹ ಹಾದಿಯಲ್ಲಿ ಸಂವಿಧಾನ, ಸಂಸತ್ತು ಮುಂತಾದ ಪ್ರಜಾತಾಂತ್ರಿಕ ವ್ಯವಸ್ಥೆಗಳಿಗೆ ಎಳ್ಳಷ್ಟೂ ಬೆಲೆ ಇರುವುದಿಲ್ಲ್ಲ. ಇದಕ್ಕೆ ಸಂಸತ್ತನ್ನು ಉಪೇಕ್ಷಿಸಿ ಸುಗ್ರೀವಾಜ್ಞೆ ಹೊರಡಿಸಲು ಶುರುವಿಟ್ಟುಕೊಂಡಿರುವುದೆ ಸಾಕ್ಷಿ. ಸಂಸತ್ತಿನ ಪ್ರಸಕ್ತ ಅಧಿವೇಶನದಲ್ಲಿ ಮಿಕ್ಕ ವಿಧೇಯಕಗಳೊಂದಿಗೆ ವಿಮೆ ಮತ್ತು ಕಲ್ಲಿದ್ದಲು ಗಣಿಗಳಿಗೆ ಸಂಬಂಧಿಸಿದ ಎರಡು ಬಹುಮುಖ್ಯ ವಿಧೇಯಕಗಳನ್ನು ಕೂಡ ಮಂಡಿಸಲಾಗಿತ್ತು. ಲೋಕಸಭೆಯ ಅನುಮೋದನೆ ದೊರೆತ ನಂತರ ಅವನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿತ್ತು. ರಾಜ್ಯಸಭೆ ಅವುಗಳನ್ನು ಪರಿಶೀಲನೆಗಾಗಿ ಸಂಸದೀಯ ಸಮಿತಿಗೆ ಒಪ್ಪಿಸಿತ್ತು. ಸಮಿತಿಯ ವರದಿ ಸಲ್ಲಿಕೆಯಾಗಿ ಅದರ ಬಗ್ಗೆ ಚರ್ಚೆಯಾಗುವ ಮುನ್ನವೇ ಸಂಸತ್ತನ್ನು ಬರ್ಖಾಸ್ತುಗೊಳಿಸಲಾಗಿದೆ. ಆದರೆ ಮುಂದಿನ ಅಧಿವೇಶನಕ್ಕಾಗಿ ಕಾಯುವ ಪ್ರಜಾಸತ್ತಾತ್ಮಕ ಮಾರ್ಗವನ್ನು ಕೈಬಿಟ್ಟ ಮೋದಿ ಸರಕಾರ ಅತ್ಯಾತುರದಿಂದ ಸುಗ್ರೀವಾಜ್ಞೆಯ ಅಪಮಾರ್ಗವನ್ನು ಹಿಡಿದಿದೆೆ. ಮೋದಿ ಸಂಪುಟ ಡಿಸೆಂಬರ್ 24ರಂದು ಹೊರಡಿಸಿದ ಎರಡೂ ಸುಗ್ರೀವಾಜ್ಞೆಗಳಿಗೆ ಎರಡೇ ಎರಡು ದಿನಗಳೊಳಗಾಗಿ ರಾಷ್ಟ್ರಪತಿಯವರ ಅಂಕಿತವೂ ದೊರೆತಿದೆ! ಇತ್ತೀಚಿನ ವರದಿಗಳ ಪ್ರಕಾರ ಸಚಿವ ಸಂಪುಟ ಇದೀಗ (ಡಿಸೆಂಬರ್ 29, 2014) 2013ರ ಭೂಸ್ವಾಧೀನ ಕಾಯಿದೆಗೆ ತಿದ್ದುಪಡಿ ತಂದು ಅದಕ್ಕೆ ಸಂಬಂಧಿಸಿದ ಮತ್ತೊಂದು ಸುಗ್ರೀವಾಜ್ಞೆಯನ್ನೂ ಹೊರಡಿಸಿದೆ. ಈ ರೀತಿಯಾಗಿ ಇಷ್ಟೊಂದು ತರಾತುರಿಯಲ್ಲಿ ಸುಗ್ರೀವಾಜ್ಞೆಯ ಮಾರ್ಗ ಬಳಸಿರುವುದು ಕಾರ್ಪೊರೇಟ್ ಶಕ್ತಿಗಳನ್ನು ಸಂಪ್ರೀತಗೊಳಿಸುವುದಕ್ಕಾಗಿ ಎಂಬುದು ನಿಸ್ಸಂಶಯ. ಇದು ಭಾರತದ ಸಂಸತ್ತಿಗೆ ಮಾಡಿರುವ ಅಪಚಾರವಷ್ಟೆ ಅಲ್ಲ ಇಡೀ ಪ್ರಜಾತಾಂತ್ರಿಕ ವ್ಯವಸ್ಥೆಗೇ ಬಗೆದಿರುವ ದ್ರೋಹವಾಗಿದೆ. ಇದು ಮುಂಬರುವ ಕರಾಳದಿನಗಳಿಗೆ ಮುನ್ಸೂಚಕದಂತಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಇದೇ ಬೆಳಕಿನಲ್ಲಿ ಗಮನಿಸಬೇಕಾಗಿರುವ ಇನ್ನೊಂದು ಪ್ರಮುಖಾಂಶವೆಂದರೆ ಈ ಬಾರಿಯ ಅಧಿವೇಶನದ ವೇಳೆ ಲೋಕಸಭೆಯಲ್ಲಿ ಮಂಡಿಸಲಾದ 16 ವಿಧೇಯಕಗಳ ಪೈಕಿ 13ನ್ನು ಸಂಸದೀಯ ಸಮಿತಿಗಳಿಗೆ ಸಲ್ಲಿಸದೆ ನೇರವಾಗಿ ಒಪ್ಪಿಗೆ ಪಡೆಯಲಾಗಿದೆ.

ಕಾರ್ಪೊರೇಟ್ ಕಂಪೆನಿಗಳು ರಾಜಕೀಯ ಪಕ್ಷಗಳ ಚುನಾವಣಾ ಫಂಡ್‌ಗಳಿಗೆ ಉದಾರ ಧನ ಸಹಾಯ ನೀಡುವ ಪರಿಪಾಠ ಇಂದು ಹೆಮ್ಮರವಾಗಿ ಬೆಳೆದಿದೆ. ಹೀಗೆ ಋಣದಲ್ಲಿ ಬೀಳುವ ಸರಕಾರಗಳು ನಂತರ ಅವುಗಳ ಕೈಗೊಂಬೆಗಳಾಗಿ ವರ್ತಿಸದೆ ನಿರ್ವಾಹವಿಲ್ಲದಂತಾಗುತ್ತದೆ. ಅಪರಿಮಿತ ಲಾಭದ ದಾಹವಿರುವ ಈ ಕಾರ್ಪೊರೇಟುಗಳು ಸರಕಾರಗಳನ್ನೆ ತಮ್ಮ ಕಾಲಿಗೆರಗುವಂತೆ ಮಾಡಬಲ್ಲವು ಇಲ್ಲವಾದರೆ ಉರುಳಿಸಿ ತಮಗನುಕೂಲವಿರುವ ಸರಕಾರಗಳನ್ನು ಸ್ಥಾಪಿಸಬಲ್ಲವು. ಭಾರತ, ಅಮೆರಿಕ ಸೇರಿದಂತೆ ಜಗತ್ತಿನ ಬಹುತೇಕ ಪ್ರಜಾಪ್ರಭುತ್ವಗಳ ಪ್ರಸ್ತುತ ಪರಿಸ್ಥಿತಿಯೂ ಇದೇ ಆಗಿದೆ. ಭಾರತದಲ್ಲಿ ಲಾಭವೊಂದನ್ನೆ ಉದ್ದೇಶವಾಗಿಟ್ಟುಕೊಂಡ, ಸಾಮಾಜಿಕ ಕಾಳಜಿಯಿಲ್ಲದ ಕಾರ್ಪೊರೇಟುಗಳಿಗೆ ಪ್ರಜಾಪ್ರಭುತ್ವ ಮಾದರಿಗಿಂತಲೂ ಫ್ಯಾಸಿಸ್ಟ್ ಮಾದರಿಯೆ ಅತ್ಯುತ್ತಮ ಮತ್ತು ಅತ್ಯನುಕೂಲಕರವೆಂದು ಕಂಡುಬಂದುದರಲ್ಲಿ ಆಶ್ಚರ್ಯವೇನೂ ಇಲ್ಲ. ಇದು ಇತಿಹಾಸದ ಪುನರಾವರ್ತನೆ ಅಷ್ಟೆ. ಇಂಥಾ ಮಾರ್ಗವನ್ನು ಹಿಡಿದ ದೇಶಗಳು ಕೊನೆಯಲ್ಲಿ ಹೀನಾಯ ಅಂತ್ಯ ಕಂಡಿರುವುದಕ್ಕೆ ಸಾಕಷ್ಟು ನಿದರ್ಶನಗಳೂ ಅದೇ ಇತಿಹಾಸದಲ್ಲಿ ಸಿಗುತ್ತವೆಂಬುದು ಬೇರೆ ಮಾತು. ಅಂತೂ ತಮ್ಮ ‘ಅಭಿವೃದ್ಧಿ’ಗಾಗಿ ಬಿಜೆಪಿ ಯನ್ನು ಗೆಲ್ಲಿಸಿದ ಕಾರ್ಪೊರೇಟುಗಳ ಒತ್ತಡ ಇದೀಗ ಅಸಹನೀಯ ಮಟ್ಟಕ್ಕೆ ತಲಪಿರಬೇಕು. ಆದರೆ ಸದ್ಯ ನಮ್ಮ ಪ್ರಜಾಪ್ರಭುತ್ವದಲ್ಲಿ ಸಂಸ ದೀಯ ವ್ಯವಸ್ಥೆ ಇರುವುದರಿಂದ ಯಾವುದೇ ಹೊಸ ನೀತಿ ಮಾಡಬೇಕಿದ್ದರೂ ಸಂಸತ್ತಿನ ಅನುಮೋದನೆ ಬೇಕು. ಹಾಗಾಗಿ ಈ ಬಾರಿಯ ಅಧಿವೇಶನದ ವೇಳೆ ನಿರ್ದಿಷ್ಟ ವಿಧೇಯಕಗಳಿಗೆ ಸಂಸತ್ತಿನ ಅನುಮೋದನೆ ಪಡೆಯುವಲ್ಲಿ ವಿಫಲವಾದ ಮೋದಿ ಸರಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡು ಸುಗ್ರೀವಾಜ್ಞೆಗಳನ್ನು ಹೊರಡಿಸಿದೆ. ಅತ್ತ ಕಾರ್ಪೊರೇಟ್‌ಗಳ ಒತ್ತಡ ಜಾಸ್ತಿಯಾದಂತೆ ಇತ್ತ ಸಂಸತ್ತಿನ ಅನುಮೋದನೆ ಕಷ್ಟವಾದಂತೆ ಅಭಿವೃದ್ಧಿ ಮಾಡಿ ತೋರಿಸಬೇಕಾದ ಅನಿವಾರ್ಯತೆ ಇರುವ ಮೋದಿ ಸರಕಾರ ಈ ರೀತಿ ಸುಗ್ರೀವಾಜ್ಞೆಗಳನ್ನು ಹೊರಡಿಸುತ್ತ ಇದ್ದರೆ ಮುಂದೊಂದು ದಿನ ಸಂಪೂರ್ಣ ಸರ್ವಾಧಿಕಾರಕ್ಕೆ ಹೊರಳಿಕೊಳ್ಳಲು ಹೆಚ್ಚೇನೂ ಕಷ್ಟವಿಲ್ಲ. ಸಂಘ ಪರಿವಾರದ ಅಂತಿಮ ಗುರಿಯೂ ಅದೇ. ಅರ್ಥಾತ್ ಪ್ರತಿಪಕ್ಷಗಳೆ ಇಲ್ಲದ ಅಥವಾ ಅತ್ಯಂತ ಕ್ಷೀಣ ಪ್ರತಿಪಕ್ಷಗಳಿರುವ ಸಂಪೂರ್ಣ ಸರ್ವಾಧಿಕಾರಿ ವ್ಯವಸ್ಥೆ. ಆದುದರಿಂದಲೆ ಅದು ಪ್ರಸಕ್ತವಾಗಿ ರಾಷ್ಟ್ರೀಯ ಮಟ್ಟದ ಅತಿ ದೊಡ್ಡ ಪಕ್ಷವಾದ ಕಾಂಗ್ರೆಸ್ಸನ್ನು ನಿರ್ನಾಮಗೊಳಿಸಲು ಪಣ ತೊಟ್ಟಿದೆ. ಮಿಕ್ಕವೆಲ್ಲ ಸಣ್ಣಪುಟ್ಟ ನಗಣ್ಯ ಪಕ್ಷಗಳು ಮತ್ತು ಅವುಗಳಲ್ಲಿ ಹೆಚ್ಚಿನವು ಅವಕಾಶವಾದಿಗಳೆಂದು ಅದಕ್ಕೆ ಗೊತ್ತು. ‘ಕಾಂಗ್ರೆಸ್ ಮುಕ್ತ ಭಾರತ’ ಅಂದರೇನರ್ಥ?
ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಅಳವಡಿಸಿ ಕೊಂಡ ಪರಿಪೂರ್ಣ ಸಮಾಜವೊಂದರ ಆಡಳಿತದಲ್ಲಿ ನಾನಾ ಜನವರ್ಗಗಳಿಗೆ ಪ್ರಾತಿನಿಧ್ಯ ಇರಬೇಕಾಗುತ್ತದೆ. ಸಮಾಜದಲ್ಲಿರುವ ವಿವಿಧ ಸಮುದಾಯಗಳಿಗೆ ತಮ್ಮದೇ ಆದ ನಿಲವುಗಳು, ಸಿದ್ಧಾಂತಗಳು, ಹಿತಾಸಕ್ತಿಗಳು ಇರಬಹುದು. ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಇಂತಹ ಎಲ್ಲಾ ಜನವರ್ಗಗಳನ್ನು ಪ್ರತಿನಿಧಿಸುವ ಎಲ್ಲಾ ರಾಜಕೀಯ ಪಕ್ಷಗಳಿಗೆ ಅವಕಾಶವಿದೆ. ಚುನಾವಣೆಗಳಲ್ಲಿ ಆರಿಸಿ ಬರುವ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಆಡಳಿತದಲ್ಲಿ ಭಾಗವಹಿಸಿ ಸಮಾಜದ ಸಮಗ್ರ ಏಳಿಗೆಗಾಗಿ ಶ್ರಮಿಸುವರೆಂದು ನಿರೀಕ್ಷಿಸಲಾಗುತ್ತದೆ. ಇನ್ನೊಂದು ವಿಧದಲ್ಲಿ ಹೇಳುವುದಾದರೆ ಪ್ರಜಾತಾಂತ್ರಿಕ ವ್ಯವಸ್ಥೆಯೊಂದು ಸರಿಯಾದ ರೀತಿಯಲ್ಲಿ ನಡೆಯಬೇಕಿದ್ದರೆ ಸಮಾಜದ ವಿವಿಧ ಜನವರ್ಗಗಳನ್ನು ಪ್ರತಿನಿಧಿಸುವ, ಅವರ ಆಸೆ, ಆಕಾಂಕ್ಷೆಗಳನ್ನು ಬಿಂಬಿಸುವ ವಿವಿಧ ರಾಜಕೀಯ ಪಕ್ಷಗಳ ಅಸ್ತಿತ್ವ ಅತ್ಯಾವಶ್ಯಕವಾಗಿದೆ. ಕೇವಲ ಎರಡು ಪ್ರಬಲ ರಾಜಕೀಯ ಪಕ್ಷಗಳಿದ್ದಾಗಲೂ ಪ್ರಜಾಪ್ರಭುತ್ವ ಇರಬಲ್ಲುದು. ಆದರೆ ಪರ್ಯಾಯಗಳ ಆಯ್ಕೆ ಇರದಾಗ ಅದೊಂದು ಅಪರಿಪೂರ್ಣ ವ್ಯವಸ್ಥೆಯಾಗುತ್ತದೆ.
2014ರ ಮಹಾಚುನಾವಣೆಗಳು ಮತ್ತು ತದನಂತರದ ಅಸೆಂಬ್ಲಿ ಚುನಾವಣೆಗಳ ವೇಳೆ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಕಾಂಗ್ರೆಸ್ ಮುಕ್ತ ಭಾರತಕ್ಕಾಗಿ ಕರೆಕೊಡುತ್ತಿದ್ದಾರೆ. ಅಷ್ಟೆ ಅಲ್ಲ, ಆ ಹೇಳಿಕೆಯನ್ನು ಮತ್ತೆ ಮತ್ತೆ ಪುನರುಚ್ಚರಿಸುತ್ತಿದ್ದಾರೆ. ಮೇಲುನೋಟಕ್ಕೆ ಇದು ಕಾಂಗ್ರೆಸ್ ಪಕ್ಷದ ವೈಫಲ್ಯಕ್ಕಾಗಿ, ಅದರ ವ್ಯಾಪಕ ಭ್ರಷ್ಟಾಚಾರಕ್ಕಾಗಿ ಅದನ್ನು ತಿರಸ್ಕರಿಸಲು ಜನರಿಗೆ ಕೊಟ್ಟ ಕರೆಯೆಂದು ಅನಿಸಬಹುದು. ಆದರೆ ತೆರೆಮರೆಯ ವಾಸ್ತವ ಮಾತ್ರ ಭಿನ್ನವಿದೆ. ಬಿಜೆಪಿಗೆ ತನ್ನ ಮಾತೃಸಂಸ್ಥೆ ಆರೆಸ್ಸೆಸ್‌ನ ಹಿಂದೂ ರಾಷ್ಟ್ರ ಸ್ಥಾಪನೆಯ ಕನಸನ್ನು ನನಸಾಗಿಸಲು ಹೆಚ್ಚುಕಡಿಮೆ ಪ್ರತಿಪಕ್ಷವೇ ಇಲ್ಲದ ಒಂದು ಏಕಪಕ್ಷಾಡಳಿತ ವ್ಯವಸ್ಥೆ ಬೇಕಾಗಿದೆ. 1925ರಲ್ಲಿ ಜನ್ಮತಾಳಿದ ಆರೆಸ್ಸೆಸ್ ಭಾರತವನ್ನು ಹಿಂದೂ ರಾಷ್ಟ್ರವಾಗಿ ಪರಿವರ್ತಿಸಿ ಆಳುವ ಉದ್ದೇಶಕ್ಕೋಸ್ಕರವೆ ಬಿಜೆಪಿ ಎಂಬ ರಾಜಕೀಯ ಪಕ್ಷವನ್ನು ಹುಟ್ಟುಹಾಕಿದೆ. ಆರೆಸ್ಸೆಸ್‌ನ ದ್ವಿತೀಯ ಸರಸಂಘಚಾಲಕ ಗೋಳ್ವಲ್ಕರ್ ಪ್ರಕಾರ ಹಿಂದೂ ರಾಷ್ಟ್ರ ಅಂದರೆ ಹಿಂದೂಗಳಿಂದ ಆಳಲ್ಪಡುವ, ಹಿಂದೂ ಜನಾಂಗ, ಧರ್ಮ ಮತ್ತು ಭಾಷಾ ಶ್ರೇಷ್ಠತೆಯ ದೇಶ. ಆತನ ‘ಬಂಚ್ ಆಫ್ ಥಾಟ್ಸ್’ ಮತ್ತು ‘ವಿ ಆರ್ ಅವರ್ ನೇಷನ್‌ಹುಡ್ ಡಿಫೈನ್ಡ್’ ಹೊತ್ತಗೆಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಭಾರತೀಯ ಸಂಸ್ಕೃತಿಗೆ ಪರಕೀಯವಾದುದೆಂದು ಜರೆಯಲಾಗಿದೆ. ಮನುಶಾಸ್ತ್ರ ಬರೆದ ಮನುವನ್ನು ಅತ್ಯಂತ ವಿವೇಕಿ ಹಾಗೂ ಶ್ರೇಷ್ಠ ಕಾನೂನಿನ ಜನಕನೆಂದು ಕೊಂಡಾಡಲಾಗಿದೆ.
ನಮ್ಮ ಪ್ರಸಕ್ತ ಪರಿಸ್ಥಿತಿಯನ್ನು ರಾಷ್ಟ್ರ ಪರಿಕಲ್ಪನೆಯ ಆಧುನಿಕ ತಿಳುವಳಿಕೆಯ ಬೆಳಕಿನಲ್ಲಿ ನೋಡಿದಾಗ ಈ ದೇಶದಲ್ಲಿ ರಾಷ್ಟ್ರ ಕಲ್ಪನೆ ಇರುವುದು ಹಿಂದೂ ಜನಾಂಗ, ಹಿಂದೂ ಧರ್ಮ, ಹಿಂದೂ ಸಂಸ್ಕೃತಿ ಮತ್ತು ಹಿಂದೂ ಭಾಷೆಯಲ್ಲಿ ಮಾತ್ರ ಎಂಬ ತೀರ್ಮಾನಕ್ಕೆ ಬರಲೇಬೇಕಾಗುತ್ತದೆ. ಹಿಂದೂಸ್ಥಾನದಲ್ಲಿರುವುದು ಮತ್ತು ಇರಬೇಕಾದುದು ಸನಾತನ ಹಿಂದೂ ರಾಷ್ಟ್ರವಲ್ಲದೆ ಇನ್ಯಾವುದೂ ಅಲ್ಲ…. ಎನ್ನುತ್ತಾರೆ ಗೋಳ್ವಲ್ಕರ್. 1940ರಲ್ಲಿ ಮದ್ರಾಸ್‌ನಲ್ಲಿ ನಡೆದ ಉನ್ನತಮಟ್ಟದ ಆರೆಸ್ಸೆಸ್ ಕಾರ್ಯಕರ್ತರ ಸಭೆಯಲ್ಲಿ ಗೋಳ್ವಲ್ಕರ್ ಪ್ರಸ್ತುತಪಡಿಸಿದ ಆರೆಸ್ಸೆಸ್ ಘೋಷವಾಕ್ಯ ಹೀಗಿದೆ: ಒಂದು ಸಿದ್ಧಾಂತ, ಒಂದು ಧ್ವಜ, ಒಬ್ಬ ನಾಯಕ ಮತ್ತು ಏಕ ಚಾಲಕ ಅನುವರ್ತಿತ್ವ (ಓರ್ವ ನಾಯಕನಿಗೆ ವಿಧೇಯತೆ). ಈ ಘೋಷವಾಕ್ಯ ತಂತಾನೆ ಹುಟ್ಟಿಕೊಂಡಿರುವುದಲ್ಲ. ಅದಕ್ಕೆ ಪ್ರೇರಣೆ ದೊರಕಿರುವುದೇ ಸಮಕಾಲೀನ ಫ್ಯಾಸಿಸ್ಟ್ ಮತ್ತು ನಾಜಿ ಪಕ್ಷಗಳಿಂದ. ಫ್ಯಾಸಿಸ್ಟರ ಆರ್ಯ ಶ್ರೇಷ್ಠತೆಯ ಪ್ರತಿಪಾದನೆಗೂ ಆರೆಸ್ಸೆಸ್‌ನ ಹಿಂದೂ (ಬ್ರಾಹ್ಮಣ) ಶ್ರೇಷ್ಠತೆಯ ಪ್ರತಿಪಾದನೆಗೂ ಬಹಳ ಹತ್ತಿರದ ಸಾಮ್ಯಗಳಿರುವುದನ್ನು ಗಮನಿಸಬೇಕು. ಆರೆಸ್ಸೆಸ್ ಮತ್ತು ಅದರ ಅಪ್ಪಟ, ನಿಷ್ಠಾವಂತ ಪ್ರಚಾರಕರಾಗಿರುವ ಮೋದಿ, ಶಾ ಮತ್ತಿತರರೆಲ್ಲ ಸ್ವಾಭಾವಿಕವಾಗಿಯೆ ತಮ್ಮ ಆದರ್ಶಪ್ರಾಯ ಗುರು ಗೋಳ್ವಲ್ಕರ್‌ರ ಮಾತುಗಳನ್ನು ಚಾಚೂತಪ್ಪದೆ ಅನುಸರಿಸುತ್ತಿದ್ದಾರೆ ಎಂಬುದರಲ್ಲಿ ಸಂಶಯವೆ ಇಲ್ಲ. ಆದುದರಿಂದಲೆ ಜನ ಇವರ ರಮ್ಯ ಭಾಷಣಗಳು ಮತ್ತು ಇಂತಹ ಕರೆಗಳ ಬಗ್ಗೆ ಅತ್ಯಂತ ಗಂಭೀರವಾಗಿ ಯೋಚಿಸಬೇಕಿದೆ. ಪ್ರಜಾತಾಂತ್ರಿಕ ವ್ಯವಸ್ಥೆಯ ಭಾಗವಾಗಿರುವ ರಾಜಕೀಯ ಪಕ್ಷಗಳನ್ನು ನಿರ್ನಾಮಗೊಳಿಸಬೇಕೆಂಬ ಫ್ಯಾಸಿಸ್ಟ್ ಮನೋಭಾವವನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕಿದೆ. ಸಾಮಾನ್ಯವಾಗಿ ಜನ ಅವರದೇ ಆದ ಕನಸುಗಳು, ಅವರದೇ ಆದ ಆಸೆ ಆಕಾಂಕ್ಷೆಗಳು, ಆದ್ಯತೆಗಳು, ದುಡಿಮೆಗಳಲ್ಲಿ ಮುಳುಗಿರುತ್ತಾರೆ. ಅವರಲ್ಲಿ ಹೆಚ್ಚಿನವರಿಗೆ ಫ್ಯಾಸಿಸಂ, ಸರ್ವಾಧಿಕಾರ ಅಂದರೇನೆಂದು ತಿಳಿಯದು. ಆದರೆ ಅದನ್ನು ಅರ್ಥ ಮಾಡಿಸುವ ಕೆಲಸವನ್ನು ನಿಶ್ಚಿತವಾಗಿಯೂ ಮಾಧ್ಯಮಗಳು ಮಾಡಬಲ್ಲವು. ಏಕೆಂದರೆ ಮಾಧ್ಯಮಗಳನ್ನು ಪ್ರಜಾಸತ್ತೆಯ ಆಧಾರಕಂಬವೆಂದೆ ತಿಳಿಯಲಾಗಿದೆ. ಆದರೆ ನಮ್ಮ ಮಾಧ್ಯಮಗಳು ಈ ಸವಾಲನ್ನು ಸ್ವೀಕರಿಸುವ ಸ್ಥಿತಿಯಲ್ಲಿ ಇವೆಯೇ ಎಂಬುದು ಈಗಿರುವ ಮಹತ್ವದ ಪ್ರಶ್ನೆ. ಕಾರಣವೇನೆಂದರೆ ಇಂದು ಬಹುತೇಕ ಮಾಧ್ಯಮಗಳು, ಅದರಲ್ಲೂ ವಿಶೇಷವಾಗಿ ಜನರ ಮೇಲೆ ಗಾಢ ಪರಿಣಾಮ ಬೀರಬಲ್ಲ ದೃಶ್ಯಮಾಧ್ಯಮಗಳು ಅದೇ ಕಾರ್ಪೊರೇಟ್ ಕಂಪೆನಿಗಳ ಹಿಡಿತದಲ್ಲಿವೆ. ಇಂಥಾ ಪರಿಸ್ಥಿತಿಯಲ್ಲಿ ಹೆಡೆಮುರಿಗಟ್ಟಿ ವಧಾಸ್ತಂಭದ ಮುಂದೆ ಅಸಹಾಯಕವಾಗಿ ನಿಂತಿರುವ ಪ್ರಜಾತಂತ್ರವನ್ನು ಉಳಿಸುವುದೆಂತು?
Please follow and like us:
error

Leave a Reply

error: Content is protected !!