ಹುಬ್ಬಳ್ಳಿ ಚೆನ್ನೈ ರೈಲಿಗೆ ಅಭೂತ ಪೂರ್ವ ಸ್ವಾಗತ ಸಂಭ್ರಮ

ಹೊಸಪೇಟೆ: ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯದಿಂದ ನೂತನವಾಗಿ ಆರಂಭಿಸಿರುವ ಹುಬ್ಬಳ್ಳಿ-ಚೆನ್ನೈ ಸೆಂಟ್ರಲ್-ಹುಬ್ಬಳ್ಳಿ ಗಾಡಿ (ಸಂಖ್ಯೆ: ೦೭೩೨೩/೦೭೩೨೪) ಸೋಮವಾರ ಮಧ್ಯೆರಾತ್ರಿ ಆಗಮಿಸಿದ ರೈಲಿಗೆ ಸಂಘ, ಸಂಸ್ಥೆಗಳು ಸಂಭ್ರಮದಿಂದ ಸ್ವಾಗತಿಸಿ, ರೈಲಿಗೆ ಪೂಜೆ ಸಲ್ಲಿಸಿ ಸಿಹಿ ಹಂಚಿದರು. 
ಈ ರೈಲು ವಾರಕ್ಕೆರಡು ಬಾರಿ ಪ್ರತಿ ಸೋಮವಾರ ಹಾಗೂ ಬುಧವಾರ ರಾತ್ರಿ ೦೮-೨೦ಕ್ಕೆ ಹುಬ್ಬಳ್ಳಿಯಿಂದ ನಿರ್ಗಮಿಸಿ, ಗದಗ ಮಾರ್ಗವಾಗಿ ಹೊಸಪೇಟೆಗೆ ರಾತ್ರಿ ೧೧-೨೦ಕ್ಕೆ ತಲುಪಿ, ಬಳ್ಳಾರಿ-ಗುಂತಕಲ್ಲು, ರೇಣಿಗುಂಟ ಮಾರ್ಗವಾಗಿ ಮರುದಿನ ಬೆಳಿಗ್ಗೆ ೧೧-೧೫ಕ್ಕೆ ಚೆನ್ನೈ ಸೆಂಟ್ರಲ್ ತಲುಪುತ್ತದೆ. ಅದೇ ರೀತಿ ಪ್ರತಿ ಮಂಗಳವಾರ ಹಾಗೂ ಗುರುವಾರ ಚೆನ್ನೈ ಸೆಂಟ್ರಲ್‌ನಿಂದ ಮಧ್ಯಾಹ್ನ ೧-೧೫ಕ್ಕೆ ನಿರ್ಗಮಿಸಿ, ಅದೇ ಮಾರ್ಗದ ಮೂಲಕ ಹೊಸಪೇಟೆಗೆ ಮಧ್ಯ ರಾತ್ರಿ ೨ ಗಂಟೆಗೆ ಆಗಮಿಸಿ, ಹುಬ್ಬಳ್ಳಿಯನ್ನು ಬೆಳಿಗ್ಗೆ ೫ ಗಂಟೆಗೆ ತಲುಪುತ್ತದೆ. ಈ ರೈಲು ಸಂಚಾರದಿಂದ ಉತ್ತರ ಕರ್ನಾಟಕದ ಬಳ್ಳಾರಿ, ಕೊಪ್ಪಳ, ಗದಗ, ಬಾಗಲಕೋಟೆ, ವಿಜಯಪುರ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲದೇ ನೆರೆ ರಾಜ್ಯವಾದ ಗೋವಾದಿಂದ ಚೆನ್ನೈಗೆ ನೇರ ಸಂಪರ್ಕ ಕಲ್ಪಿಸಿದಂತಾಗುತ್ತದೆ. ಅಲ್ಲದೇ, ಪ್ರಸ್ತುತ ಹುಬ್ಬಳ್ಳಿಯಿಂದ ದಾವಣಗೆರೆ, ಬೆಂಗಳೂರು ಮಾರ್ಗವಾಗಿ ಚೆನ್ನೈಗೆ ೮೩೪ ಕಿ.ಮೀ. ಅಂತರವಿದ್ದರೆ, ಹುಬ್ಬಳ್ಳಿ-ಹೊಸಪೇಟೆ-ಗುಂತಕಲ್ಲು-ರೇಣಿಗುಂಟ ಮಾರ್ಗವಾಗಿ ೭೧೦ ಕಿ.ಮೀ. ಅಂತರವಿದ್ದು, ೧೨೪ ಕಿ.ಮೀ.ಗಳಷ್ಟು ಅಂತರ ಕಡಿಮೆಯಾಗುವುದರಿಂದ ಪ್ರಯಾಣಿಕರಿಗೆ ಆರ್ಥಿಕ ಮಿತವ್ಯಯ ಹಾಗೂ ಪ್ರಯಾಣದ ಅವಧಿಯೂ ಕಡಿಮೆಯಾಗುತ್ತದೆ. ಅಲ್ಲದೇ ರೇಣಿಗುಂಟ ಮಾರ್ಗವಾಗಿ ಚಲಿಸುವುದರಿಂದ ವಾರದಲ್ಲಿ ಎರಡು ಬಾರಿ ತಿರುಪತಿಗೆ ತೆರಳಲು ಹೆಚ್ಚುವರಿ ರೈಲಿನ ಸೌಲಭ್ಯ ದೊರಕಿದಂತಾಗುತ್ತದೆ. ಜೊತೆಗೆ ತಮಿಳುನಾಡಿನಿಂದ ವಿಶ್ವ ಪರಂಪರೆ ತಾಣವಾದ ಹಂಪಿಗೆ ನೇರ ಸಂಪರ್ಕ ದೊರೆತು ಪ್ರವಾಸೋದ್ಯಮ ಬೆಳವಣಿಗೆಗೆ ಅನುಕೂಲವಾಗುತ್ತದೆ. ಈ ಸಂಭ್ರಮಾಚರಣೆಯಲ್ಲಿ  ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ, ನೈಋತ್ಯ ರೈಲ್ವೆ ಸಲಹಾ ಸಮಿತಿ, ಭ್ರಷ್ಟಾಚಾರ ಮುಕ್ತ ಕರ್ನಾಟಕ, ಕರ್ನಾಟಕ ರಾಜ್ಯ ತಮಿಳು ಒಕ್ಕೂಟ, ತಮಿಳು ಕಿರಾಣಿ ವರ್ತಕರು ಹಾಗೂ ಇತರ ಸಂಘಟನೆಗಳ ಪದಾಧಿಕಾರಿಗಳಾದ ವೈ. ಯಮುನೇಶ್, ಕಾಂತಿಲಾಲ್, ಅಶೋಕ ಜೈನ್, ಪ.ಯ. ಗಣೇಶ, ಕೆ. ಮಹೇಶ, ಯು. ಅಶ್ವಥಪ್ಪ, ಶಾಮಪ್ಪ ಮಡಿವಾಳರ, ಪೂರ್ಣಚಂದ್ರ ಜಾಲಿ, ರಮೇಶ ಗೌಡ, ಹೆಚ್. ಮಹೇಶ, ಶರಣಗೌಡ, ವಿಶ್ವನಾಥ ಕೌತಾಳ್, ತಿಪ್ಪೇಸ್ವಾಮಿ, ಪೀರಾಸಾಬ್, ರಮೇಶ್ ಲಮಾಣಿ, ಡಿ. ಅಣ್ಣಾಮಲೈ, ಟಿ.ಕೆ. ಧರ್ಮಲಿಂಗಂ, ಪಿ. ಧರ್ಮಲಿಂಗಂ, ಭಾಸ್ಕರ, ಶಣ್ಮುಗಂ, ಲೋಕನಾಥನ್, ರಫೀಕ್, ವಿಲ್ಸನ್, ಪೇರ‍್ಮಿ ಹೇಮಣ್ಣ, ರೈಲ್ವೆ ನಿಲ್ದಾಣಾಧಿಕಾರಿಗಳಾದ ಉಮರ್ ಬಾನಿ, ಗಂಜಿಗಟ್ಟಿ ಮತ್ತಿತರರು ಹಾಜರಿದ್ದರು. 

Leave a Reply