fbpx

ಕಳಚುತ್ತಿರುವ ಮೋದಿ ಮುಖವಾಡ

ಲೋಕಸಭಾ ಚುನಾವಣೆ ಸಮೀಪಿಸುತ್ತಿರು ವಂತೆ ಪ್ರಧಾನಿ ಕುರ್ಚಿ ಮೇಲೆ ಕೂರುವ ದಿನ ಹತ್ತಿರದಲ್ಲಿದೆ ಎಂದು ನರೇಂದ್ರ ಮೋದಿ ಖುಷಿಯಾಗಿರಬೇಕಿತ್ತು. ಆದರೆ ಇತ್ತೀಚಿನ ಅವರ ಭಾಷಣಗಳನ್ನು ಟಿವಿಯಲ್ಲಿ ನೋಡಿದರೆ ಮುಖದಲ್ಲಿ ಉತ್ಸಾಹ ಕಾಣುತ್ತಿಲ್ಲ. ಆದರು ತಿಂಗಳಿಂದ ಓಡಾಡಿ ಒದರಾಡಿ ಸುಸ್ತಾದಂತೆ ಕಾಣುತ್ತದೆ. ವಿಚಾರ ಶೂನ್ಯ ಭಾಷಣ ಬರೀ ಹತಾಶ ಅರಚಾಟವಾಗಿ ಕಾಣುತ್ತಿದೆ. ಈ ಬಹುಧರ್ಮೀಯ, ಬಹುಭಾಷಿಕ, ಬಹು ಜನಾಂಗೀಯ ದೇಶವನ್ನು ಗೆಲ್ಲುವುದು ಸಾಧ್ಯವಿಲ್ಲ ಎಂಬ ದಟ್ಟ ನಿರಾಶೆ ಅವರ ಮಾತಿನಲ್ಲಿ ಸೂಚ್ಯವಾಗಿ ವ್ಯಕ್ತವಾಗುತ್ತಿದೆ.
ಆದರೂ ಅಂಬಾನಿಯಂಥ ಕಾರ್ಪೊರೇಟ್ ಖದೀಮರು ಬಲೂನಿಗೆ ಗಾಳಿ ತುಂಬಿದಂತೆ ಮೋದಿಗೆ ಹೆಲಿಕಾಪ್ಟರ್ ಕೊಟ್ಟು ದೇಶ ಸುತ್ತಿಸುತ್ತಿದ್ದಾರೆ. ಯಾಕೆಂದರೆ ತಮ್ಮ ನಿಷ್ಠ ಸೇವಕನೊಬ್ಬ ಭಾರತದ ಪ್ರಧಾನಿಯಾಗುವುದು ಅವರಿಗೆ ಬೇಕಾಗಿದೆ. ಮೋದಿ ಮಾತುಗಳನ್ನು ಕೇಳಿದರೆ ಎಂಟು ದಶಕಗಳ ಹಿಂದಿನ ಅಡಾಲ್ಫ್ ಹಿಟ್ಲರ್‌ನ ಭಾಷಣಗಳು ನೆನಪಿಗೆ ಬರುತ್ತವೆ. ಆತನೂ ಈತನಂತೆ ಅರಚಾಡುತ್ತಿದ್ದ. ಜನರಲ್ಲಿ ಭಾವೋದ್ವೇಗದ ಜ್ವರವೇರಿ ಸುತ್ತಿದ್ದ.
ಕೊನೆಗೆ ಜರ್ಮನಿ ಯನ್ನು ಹಾಳು ಮಾಡಿ ಮಕಾಡೆ ಮಲಗಿದ. ಫ್ಯಾಶಿಸ್ಟ್ ಸರ್ವಾಧಿಕಾರಿಗಳದು ಏನಿದ್ದರೂ ಕ್ಷಣಿಕ ಆರ್ಭಟ ಮಾತ್ರ. ಇವರ ಮುಖವಾಡ ಕಳಚಿ ಬಿದ್ದು ವಿಕೃತ ಮುಖ ಗೋಚರಿಸ ತೊಡಗಿದರೆ, ಜನ ಮುಖಕ್ಕೆ ಉಗಿದು ಇವರನ್ನು ಚರಿತ್ರೆಯ ಕಸದ ಬುಟ್ಟಿಗೆ ಹಾಕುತ್ತಾರೆ. ಮುಸಲೋನಿಯನ್ನಂತೂ ಜನರು ಓಡಾಡಿಸಿ ಹೊಡೆದರು. ಮೋದಿ ಹಿಟ್ಲರನ ಶೈಲಿಯಲ್ಲಿ ಭಾಷಣ ಮಾಡಿದರೂ ಆತನಷ್ಟು ಜಾಣನಲ್ಲ.
ಚರಿತ್ರೆ, ಅರ್ಥಶಾಸ್ತ್ರ, ರಾಜಕೀಯ ಶಾಸ್ತ್ರ, ಸಾಹಿತ್ಯ ಇತ್ಯಾದಿ ವಿಷಯಗಳ ಬಗ್ಗೆ ಮೋದಿಗೆ ಏನೂ ಗೊತ್ತಿಲ್ಲ. ಬಾಯಿಗೆ ಬಂದದ್ದನ್ನು ಒದರಿ ಈಗಾಗಲೇ ಅಪಹಾಸ್ಯಕ್ಕೀಡಾಗಿದ್ದಾರೆ. ಆದರೆ ಈತನ ಭಜನಾ ಮಂಡಲಿ ಇದೆಯಲ್ಲ ಅದು ಭಯೋತ್ಪಾದಕ ಗ್ಯಾಂಗ್ ಇದ್ದಂತೆ. ಸಾಮಾಜಿಕ ಜಾಲ ತಾಣಗಳಲ್ಲಿ ನಿತ್ಯವೂ ವಾಂತಿ ಭೇದಿ ಮಾಡಿಕೊಳ್ಳುವ ಈ ಹಂತಕ ಪಡೆ ಯಾರಾದರೂ ಮೋದಿಯನ್ನು ಟೀಕಿಸಿದರೆ ಸಾಕು ಹುಚ್ಚು ನಾಯಿಗಳಂತೆ ಕಚ್ಚಲು ಬರುತ್ತದೆ.
ತಾರ್ಕಿಕ ಚರ್ಚೆ ಇವರಿಗೆ ಅಪಥ್ಯ. ಮೋದಿಯನ್ನು ಟೀಕಿಸುವವರು ಯಾರೇ ಆಗಿರಲಿ ರಾಹುಲ್ ಗಾಂಧಿಯೇ ಆಗಿರಲಿ, ಅನಂತಮೂರ್ತಿಯೇ ಆಗಿರಲಿ-ಅವರನ್ನು ಮಾತ್ರವಲ್ಲ ಎಲ್ಲರನ್ನು ಅವರವರ ಅಮ್ಮ, ಅಕ್ಕ, ಮಕ್ಕಳನ್ನು ಬಿಡದೆ ಅವಾಚ್ಯ ಅಶ್ಲೀಲ ಭಾಷೆಯಲ್ಲಿ ಬೈಯ್ಯುವುದು ಈ ಚಡ್ಡಿಗಳ ಜಾಯಮಾನ.

ವಾರ್ತಾಭಾರತಿ ಅಂಕಣ

ಮುಸಲ್ಮಾನರು, ಕ್ರೈಸ್ತರು ಮತ್ತು ಕಮ್ಯುನಿಸ್ಟರು ನಮ್ಮ ಮೊದಲ ಶತ್ರು ಎಂದು ಈ ಚಡ್ಡಿಗಳ ಗುರು ಗೋಳ್ವಾಲ್ಕರ್ ಆರು ದಶಕಗಳ ಹಿಂದೆಯೇ ಘೋಷಿಸಿದ್ದರು. ಅಂತಲೆ ಇವರನ್ನು ನಾಶ ಮಾಡುವ ಜೊತೆಗೆ ದೇಶವನ್ನು ಮನುಧರ್ಮದ ನೇಣುಗಂಬಕ್ಕೇರಿಸಲು ನಮೋ ಗ್ಯಾಂಗ್ ಮಸಲತ್ತು ನಡೆಸಿದೆ. ಆದರೆ ಇದು ಅಂದುಕೊಂಡಷ್ಟು ಸುಲಭವಲ್ಲ. ಅಂಬಾನಿ, ಅದಾನಿಗಳ ಎಂಜಲು ಕಾಸಿದ್ದರೂ ಭಾರತದ ಜನ ಮೋದಿಯನ್ನು ಒಪ್ಪಿಕೊಳ್ಳುವುದಿಲ್ಲ. ಗುಜರಾತ್‌ನಲ್ಲೂ ಮೋದಿ ಬಣ್ಣ ಬಯಲಾಗುತ್ತಿದೆ.
ಇತ್ತೀಚೆಗೆ ಆಮ್ ಆದ್ಮಿಯ ಅರವಿಂದ ಕೇಜ್ರಿವಾಲ್ ಮೋದಿಯ ಗ್ಯಾಂಗಿಗೆ ಶನಿಯಂತೆ ಬೆನ್ನು ಹತ್ತಿ ಕಾಡುತ್ತಿದ್ದಾರೆ. ‘‘ಮೋದಿ ಚುನಾವಣಾ ಪ್ರಚಾರದ ಖರ್ಚು ಅಂಬಾನಿ ನೋಡಿಕೊಳ್ಳುತ್ತಿದ್ದಾರೆ. ಮೋದಿ ಹಾರಾಡುತ್ತಿರುವ ಹೆಲಿಕಾಪ್ಟರ್ ಅಂಬಾನಿಯದು. ಈತ ಅಂಬಾನಿ ಗುಲಾಮ’’ ಎಂದು ಛೇಡಿಸಿದ್ದಾರೆ. ಇತ್ತೀಚೆಗೆ ಗುಜರಾತ್‌ಗೆ ಹೋಗಿದ್ದ ಕೇಜ್ರಿವಾಲ್ ನೇರವಾಗಿ ಕೆಲ ಹಳ್ಳಿಗಳಿಗೆ ಭೇಟಿ ನೀಡಿ ಜನರು ಸೇರುತ್ತಿದ್ದ ಕಟ್ಟೆಯ ಮೇಲೆ ನಿಂತು ಮಾತಾಡಿದರು.
ಅಲ್ಲಿ ಸೇರಿದ ಜನರನ್ನು ನೇರವಾಗಿ ‘‘ಗುಜರಾತ್‌ನಲ್ಲಿ 24 ಗಂಟೆ ವಿದ್ಯುತ್ ಪೂರೈಸುತ್ತಿರುವುದಾಗಿ ಮೋದಿ ದೇಶದ ತುಂಬ ಹೇಳುತ್ತಾ ತಿರುಗುತ್ತಿದ್ದಾರೆ. ಇದು ನಿಜವೇ?’’ ಎಂದು ಪ್ರಶ್ನಿಸಿದರು. ಅಲ್ಲಿ ಸೇರಿದ ಜನ ‘‘ಸುಳ್ಳು ಸುಳ್ಳು’’ ಎಂದು ಕೂಗುತ್ತಿದ್ದರು. ಇಂತಹ ಕರೆಂಟಿಲ್ಲದ ಹಲವಾರು ಹಳ್ಳಿಗಳನ್ನು ಸುತ್ತಿ ಬಂದ ಕೇಜ್ರಿವಾಲ್ ಸರಕಾರಿ ದಾವಾಖಾನೆಗೆ ಹೋದರೆ ಅಲ್ಲಿ ವೈದ್ಯರೂ ಇಲ್ಲ, ನರ್ಸ್‌ಗಳು ಇಲ್ಲ, ಇದು ಇಂದಿನ ಗುಜರಾತ್‌ನ ಸ್ಥಿತಿ. ಮೋದಿ ಮಾಡಿದ ಅಭಿವೃದ್ಧಿ.
ಮೋದಿಯ ಮುಖವಾಡವನ್ನು ಕಳಚುತ್ತಿರುವ ಕೇಜ್ರಿವಾಲ್‌ರನ್ನು ಕಂಡು ದಿಗಿಲುಗೊಂಡ ಚಡ್ಡಿಗಳು ಪೊಲೀಸರನ್ನು ಬಳಸಿಕೊಂಡು ಕೇಜ್ರಿವಾಲರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು. ಇದನ್ನು ಪ್ರತಿಭಟಿಸಿ ಆಮ್ ಆದ್ಮಿಗಳು ದಿಲ್ಲಿಯಲ್ಲಿ ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಮೋದಿಯ ಗುಜರಾತ್ ಅಭಿವೃದ್ಧಿ ಬರೀ ಸುಳ್ಳಿನ ಕಂತೆ ಎಂದು ಈಗ ಎಲ್ಲರಿಗೂ ಗೊತ್ತಾಗ ತೊಡಗಿದೆ. ಆದರೆ ಅಂಬಾನಿ, ಅದಾನಿಯಂಥ ಕಾರ್ಪೊರೇಟ್ ಬಂಡವಾಳಿ ಗರಿಗೆ ಮೋದಿಯಂಥ ಚೇಲಾ ಪ್ರಧಾನಿಯಾಗುವುದು ಬೇಕಾಗಿದೆ. ಈತನ ಮೂಲಕ ದೇಶದ ಸಂಪತ್ತು ಕೊಳ್ಳೆ ಹೊಡೆಯುವುದು ಈ ಬಂಡವಾಳಿಗರ ಹುನ್ನಾರವಾಗಿದೆ.
ಒಂದೆಡೆ ಕೇಜ್ರಿವಾಲ್ ಮೋದಿಗೆ ಶನಿಯಂತೆ ಕಾಡುತ್ತಿದ್ದರೆ ಇನ್ನೊಂದೆಡೆ ಕಮ್ಯುನಿಸ್ಟರು ಮೋದಿ ಭೂತ ಬಿಡಿಸುತ್ತಿದ್ದಾರೆ. ಇತ್ತೀಚೆಗೆ ಕೇರಳದ ಕಣ್ಣೂರಿನಲ್ಲಿ ಅಪರೂಪದ ಕಾರ್ಯಕ್ರಮವೊಂದು ನಡೆಯಿತು. 2002ರಲ್ಲಿ ಗುಜರಾತ್ ಹತ್ಯಾಕಾಂಡದ ಗಲಭೆಯಲ್ಲಿ ಪರಸ್ಪರ ಶತ್ರುಗಳಂತಿದ್ದ ಇಬ್ಬರನ್ನು ಒಂದೇ ವೇದಿಕೆಗೆ ತಂದಿದ್ದರು. ಈ ದಂಗೆ ನಡೆದಾಗ ಬಜರಂಗ ದಳದ ಕಾರ್ಯಕರ್ತನೊಬ್ಬ ಕಬ್ಬಿಣದ ಸರಳು ಹಿಡಿದು ತಲೆಗೆ ಕೇಸರಿ ಪಟ್ಟಿ ಸುತ್ತಿಕೊಂಡು ಬೀದಿಯಲ್ಲಿ ನಿಂತಿದ್ದ ಚಿತ್ರ ಜಗತ್ತಿನ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಇನ್ನೊಬ್ಬ ಪ್ರಾಣ ಭಿಕ್ಷೆಗಾಗಿ ಕೈಮುಗಿದು ಯಾಚಿಸುತ್ತಿದ್ದ. ಈ ಛಾಯಾಚಿತ್ರವೂ ವಿಶ್ವದ ಗಮನ ಸೆಳೆದಿತ್ತು.
ಆ ಹತ್ಯಾಕಾಂಡದಲ್ಲಿ ಕೋಮುವಾದಿ ಹಂತಕರು ಅಲ್ಪಸಂಖ್ಯಾತರನ್ನು ಕೊಚ್ಚಿ ಹಾಕುತ್ತಿರುವಾಗ ಕುತುಬುದ್ದೀನ್ ಅನ್ಸಾರಿ ಎಂಬ ಯುವಕ ತನ್ನ ಮನೆಯ ಮಹಡಿ ಮೇಲೆ ನಿಂತು ಕೈಮುಗಿದು ಕಣ್ಣೀರು ಹಾಕುತ್ತ ಪ್ರಾಣ ಭಿಕ್ಷೆಗಾಗಿ ಮೊರೆ ಇಡುತ್ತಿದ್ದ. ಇನ್ನೊಂದೆಡೆ ಅಶೋಕ ಭಾವನ ಭಾಯಿ ಪರಮಾರ್ (ಅಶೋಕ್ ಮೋಚಿ) ಅಲ್ಪಸಂಖ್ಯಾತರನ್ನು ಕತ್ತರಿಸಲು ಖಡ್ಗ ಹಿಡಿದು ನಿಂತಿದ್ದ. ಈತ ಆಗ ಕಟ್ಟಾ ಆರೆಸ್ಸೆಸ್ ಕಾರ್ಯಕರ್ತ. ಈಗ ಕುತುಬುದ್ದೀನ್‌ನ ಆಪ್ತ ಸ್ನೇಹಿತ.
ತನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಡುತ್ತಿದ್ದಾನೆ. ಸಂಘಪರಿವಾರದ ಫ್ಯಾಶಿಸ್ಟ್ ಕೋಮುವಾದದ ವಿರುದ್ಧದ ನಿರಂತರ ವಾದ ರಾಜಿರಹಿತ ಹೋರಾಟ ನಡೆಸುತ್ತಿರುವ ಕಮ್ಯುನಿಸ್ಟ್ ಪಕ್ಷ ಕೇರಳದ ಕಣ್ಣೂರಿನಲ್ಲಿ ಇತ್ತೀಚೆಗೆ ‘ಜನಾಂಗ ಹತ್ಯಾಕಾಂಡದ ಒಂದು ದಶಕ’ ಎಂಬ ವಿಚಾರಗೋಷ್ಠಿ ಯೊಂದನ್ನು ಏರ್ಪಡಿಸಿ ಈ ಕುತುಬುದ್ದೀನ್ ಮತ್ತು ಅಶೋಕ್ ಮೋಚಿಯನ್ನು ಆಹ್ವಾನಿಸಿತ್ತು.
ಗುಜರಾತ್‌ನಲ್ಲಿ ಒಂದಾಗಿ ಕಾಣಿಸಿ ಕೊಳ್ಳದ ಇವರಿಬ್ಬರು ಕೆಂಬಾವುಟದಡಿ ಒಡಹುಟ್ಟಿದ ಸೋದರರಂತೆ ಬಿಗಿದಪ್ಪಿಕೊಂಡರು. ಅಶೋಕ ಮೋಚಿ ಪ್ರೀತಿಯ ಸಂಕೇತವಾದ ಕೆಂಪು ಗುಲಾಬಿ ಹೂವನ್ನು ಕುತುಬುದ್ದೀನ್ ಅನ್ಸಾರಿಗೆ ನೀಡಿದ. ‘‘ಹಿಂದೂ- ಮುಸ್ಲಿಮರು ಒಂದೇ’’ ಎಂದು ಘೋಷಿಸಿದ.
ಈ ಕಾರ್ಯಕ್ರಮದಲ್ಲಿ ಕುತುಬುದ್ದೀನ್ ಅನ್ಸಾರಿಯ ಪುಸ್ತಕವೊಂದು ಬಿಡುಗಡೆಯಾಯಿತು. ಇದರಲ್ಲಿ ತಾನು ಕೋಮುವಾದಿಗಳಿಂದ ಅನುಭವಿಸಿದ ಚಿತ್ರಹಿಂಸೆಯನ್ನು ಆತ ದಾಖಲಿಸಿದ್ದಾನೆ. ಈ ಪುಸ್ತಕ ಬಿಡುಗಡೆ ಮಾಡಿದ ಅಶೋಕ್ ಮೋಚಿ ‘ಮೋದಿ ಅಭಿವೃದ್ಧಿ ಬರೀ ಬೊಗಳೆ. ಇಂದಿಗೂ ನಾನು ಲಾಲ್ ದರ್ವಾಜಾ ಪ್ರದೇಶದ ಪುಟ್‌ಬಾತ್‌ನಲ್ಲಿದ್ದೇನೆ. ನನ್ನಂತೆ ಮುಸ್ಲಿಮರು, ದಲಿತರು ಕೊಳಗೇರಿಗಳಲ್ಲಿ ವಾಸಿಸುತ್ತಿದ್ದಾರೆ. ಮೇಲ್ಜಾತಿ ಹಿಂದೂಗಳು ಸ್ವರ್ಗ ಸುಖ ಅನುಭವಿಸುತ್ತಿದ್ದಾರೆ’ ಎಂದು ಹೇಳಿದ.
ಹೀಗೆ ತನ್ನ ಮುಖವಾಡ ಕಳಚಿ ಬೀಳುತ್ತಿರುವಂತೆ ನರೇಂದ್ರ ಮೋದಿ ಹುಚ್ಚು ನೆತ್ತಿಗೇರುತ್ತಿದೆ. ತಮ್ಮ ಚೇಲಾ ಪ್ರಧಾನಿ ಯಾಗದಿದ್ದರೆ ತಮ್ಮ ಗತಿ ಏನು ಎಂದು ಅಂಬಾನಿ, ಮಿತ್ತಲ್‌ಗಳಂತ ಬಂಡವಾಳಿಗರು ದಿಗಿಲುಗೊಂಡಿದ್ದಾರೆ. ಮೇ 16ರ ನಂತರ ನರೇಂದ್ರ ಮೋದಿ ಅಪ್ರಸ್ತುತರಾಗಿ ಗುಜರಾತ್ ಸೇರುತ್ತಾರೆ ಎಂಬುದು ಈಗ ಅವರಿಗೂ ಖಚಿತವಾಗಿದೆ. ಅಂತಲೆ ಭಾಗ್ವತ್‌ರು ಚಡ್ಡಿ ಹಿಡಿದುಕೊಂಡು ಓಡಾಡುತ್ತಿದ್ದಾರೆ.                           ಕೃಪೆ : ವಾರ್ತಾಭಾರತಿ

Please follow and like us:
error

Leave a Reply

error: Content is protected !!