You are here
Home > Koppal News > ಶಿವಯೋಗಿ ಸಿದ್ಧರಾಮರು ಸಮಾಜ ಮುಖಿ ಕಾಯಕ ಯೋಗಿ- ಕೆ. ರಾಘವೇಂದ್ರ ಹಿಟ್ನಾಳ್

ಶಿವಯೋಗಿ ಸಿದ್ಧರಾಮರು ಸಮಾಜ ಮುಖಿ ಕಾಯಕ ಯೋಗಿ- ಕೆ. ರಾಘವೇಂದ್ರ ಹಿಟ್ನಾಳ್

 : ಜ್ಞಾನ ದಾಸೋಹದ ಜೊತೆಗೆ ಸಮಾಜ ಮುಖಿ ಕಾಯಕ ಮಾಡುವುದರ ಮೂಲಕ ಕಾಯಕ ಯೋಗಿ ಎನಿಸಿಕೊಂಡವರು ಶಿವಯೋಗಿ ಸಿದ್ಧರಾಮರು ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಬಣ್ಣಿಸಿದರು.
 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಇದೇ ಪ್ರಥಮ ಬಾರಿಗೆ ಶಿವಯೋಗಿ ಸಿದ್ಧರಾಮೇಶ್ವರ ಅವರ ೮೪೧ ನೇ ಜಯಂತಿ ಕಾರ್ಯಕ್ರಮವನ್ನು ನಗರದ ಸಾಹಿತ್ಯ ಭವನದಲ್ಲಿ ಸರ್ಕಾರಿ ಕಾರ್ಯಕ್ರಮವನ್ನಾಗಿ ಏರ್ಪಡಿಸಲಾದ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

  ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ವಿಚಾರಧಾರೆಯನ್ನು ಹೊಂದಿದ್ದ ಶಿವಯೋಗಿ ಸಿದ್ಧರಾಮರು, ಕರ್ಮ, ಕಾಯಕ, ಭಕ್ತಿ ಸಂಗಮಗಳ ವಿಚಾರಧಾರೆಯನ್ನು ಸಕಲ ಜೀವಾತ್ಮರಿಗೆ ಉಣಬಡಿಸಿದ್ದಾರೆ.  ಸಿದ್ಧರಾಮೇಶ್ವರರು, ಶಿವಶರಣ ತತ್ವಗಳ ಬಗ್ಗೆ ಸುಮಾರು ೬೮ ಸಾವಿರ ವಚನಗಳನ್ನು ರಚಿಸಿದ ಮಹಾನ್ ಮಾನವತಾವಾದಿಗಳು, ಸಮುದಾಯಕ್ಕೆ ವಚನ ಸಾಹಿತ್ಯವನ್ನಷ್ಟೇ ಅಲ್ಲ, ಸಮುದಾಯಕ್ಕೆ ಅಗತ್ಯವಿರುವ ಕೆರೆ, ಕಟ್ಟೆಗಳನ್ನು ನಿರ್ಮಿಸಲು ಶ್ರಮಿಸುವ ಮೂಲಕ ಸಮಾಜಮುಖಿ ಕಾಯಕ ಮಾಡಿದಂತಹ ಯೋಗಿಗಳು.  ಕಲ್ಯಾಣಿಯಲ್ಲಿ ಅಲ್ಲಮಪ್ರಭುಗಳಿಂದ ಆಶೀರ್ವಚನ ಪಡೆದು, ಭಕ್ತರ ಸೇವೆಗೈಯ್ಯುತ್ತಾ ಕಾಲ ಕಳೆದ ಸಿದ್ಧರಾಮರು ಸಕಲ ಜೀವಾತ್ಮರಿಗೆ ಬಂಧುವಾಗಿ, ಅನುಭವ ಮಂಟಪದಲ್ಲಿ ಕಪಿಲ ಸಿದ್ಧ ಚನ್ನಮಲ್ಲಿಕಾರ್ಜುನ ಎಂಬ ಅಂಕಿತ ನಾಮದಿಂದ ಸಹಸ್ರಾರು ವಚನಗಳನ್ನು ರಚಿಸಿದ್ದಾರೆ ಎಂದರು.
  ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲು ಸರ್ಕಾರ ಆದೇಶ ಹೊರಡಿಸಿರುವುದು ಶ್ಲಾಘನೀಯವಾಗಿದೆ.  ಬೋವಿ ಜನಾಂಗದವರು ಶ್ರಮ ಜೀವಿಗಳಾಗಿದ್ದು, ಸಿದ್ಧರಾಮೇಶ್ವರರ ಜಯಂತಿ ಆಚರಣೆಯಲ್ಲಿ ಕೇವಲ ಕುಣಿದು, ಕುಪ್ಪಳಿ ತೆರಳಿದರಷ್ಟೇ ಸಾಲದು.  ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ, ಸಿದ್ಧರಾಮರ ಆಶಯದಂತೆ ಸಮಾಜದ ಮುಖ್ಯ ವಾಹಿನಿಗೆ ಬಂದು, ಶಿಕ್ಷಣ, ರಾಜಕೀಯ ಇನ್ನಿತರೆ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಕ್ಕೇರಬೇಕು ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಕರೆ ನೀಡಿದರು.
  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ಮಾತನಾಡಿ, ಯಾವುದೇ ಯಂತ್ರೋಪಕರಣಗಳನ್ನು ಬಳಸದೆ, ಕೈಯಿಂದ ಕಲ್ಲು ಗಣಿಗಾರಿಕೆ ಮಾಡುವಂತಹವರು ನಿರ್ಭೀತಿಯಿಂದ ತಮ್ಮ ವೃತ್ತಿಯನ್ನು ಮುಂದುವರೆಸಲು ಅನುಕೂಲವಾಗುವಂತೆ ಮಾಡಲು ಜಿಲ್ಲಾಡಳಿತ ನಿರ್ಧರಿಸಿದ್ದು, ಕೈಯಿಂದ ಕಲ್ಲು ಗಣಿಗಾರಿಕೆ ಮಾಡಬಯಸುವವರು ತಮ್ಮ ಅರ್ಜಿಯನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸಲ್ಲಿಸಿದಲ್ಲಿ, ಅನುಮತಿ ಪತ್ರಕ್ಕಾಗಿ ವಿವಿಧ ಇಲಾಖೆಗಳಿಗೆ ಅರ್ಜಿದಾರರು ಅಲೆದಾಡುವುದನ್ನು ತಪ್ಪಿಸಲು, ಕಂದಾಯ, ಗಣಿ ಮತ್ತು ಭೂವಿಜ್ಞಾನ ಮುಂತಾದ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೇ ಪರಿಶೀಲನೆ ನಡೆಸಿ, ಅವರು ಸಲ್ಲಿಸುವ ವರದಿಯ ಆಧಾರದಂತೆ ಫಲಾನುಭವಿಗಳಿಗೆ ಅನುಮತಿ ನೀಡಲಾಗುವುದು.  ಆದರೆ ಪ್ರಾಚೀನ ಶಿಲಾ ಶಾಸನಗಳಿಗೆ ಧಕ್ಕೆ ಆಗದ ರೀತಿಯಲ್ಲಿ ಅಂತಹ ಸ್ಥಳಗಳಲ್ಲಿ ಮಾತ್ರ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಲಾಗುವುದು ಎಂದು ಪ್ರಕಟಿಸಿದರು.
  ಸಮಾರಂಭದಲ್ಲಿ ಭಾಗವಹಿಸಿದ್ದ ಜಿ.ಪಂ. ಅಧ್ಯಕ್ಷ ಜನಾರ್ಧನ ಹುಲಿಗಿ ಅವರು ಮಾತನಾಡಿ, ಬೋವಿ ಸಮಾಜದವರು, ಕಲ್ಲು ಒಡೆಯುವ ವೃತ್ತಿಯನ್ನು ನಡೆಸಲು ತೀವ್ರ ತೊಂದರೆ ಅನುಭವಿಸುತ್ತಿದ್ದು, ಇತ್ತೀಚಿಗೆ ಅನೇಕ ಅತ್ಯಾಧುನಿಕ ಯಂತ್ರೋಪಕರಣಗಳು ಬಂದಿರುವುದರಿಂದ, ಕಲ್ಲು ಒಡೆಯುವ ವೃತ್ತಿ ಮುಂದುವರೆಸಲು ಆರ್ಥಿಕ ತೊಂದರೆ ಅನುಭವಿಸುತ್ತಿದ್ದಾರೆ.  ಕಲ್ಲು ಒಡೆಯುವ ವೃತ್ತಿದಾರರಿಗೆ ಉದ್ಯೋಗಖಾತ್ರಿ ಯೋಜನೆಯಡಿ ಕೂಲಿ ಹಣ ಪಾವತಿಸಲು ಹಾಗೂ ಮಾನವ ದಿನಗಳನ್ನು ಸೃಜಿಸುವಂತಹ ಕ್ರಿಯಾ ಯೋಜನೆಯನ್ನು ರೂಪಿಸಲು ಜಿಲ್ಲಾ ಪಂಚಾಯತಿ ಯೋಜಿಸಲಾಗಿದೆ.  ವಿವಿಧ ಜಯಂತಿಗಳ ಆಚರಣೆಯ ವೇಳೆ ಮೆರವಣಿಗೆಗಳನ್ನು ಏರ್ಪಡಿಸುವ ಮೂಲಕ ವೃಥಾ ಕಾಲಹರಣ ಮಾಡಲಾಗುತ್ತಿದ್ದು, ಇದರ ಬದಲಿಗೆ, ಅಂತಹ ಮಹನೀಯರ ವಿಚಾರಧಾರೆಗಳ ಬಗ್ಗೆ ಅರಿವು ಮೂಡಿಸುವಂತಹ ವಿಚಾರಸಂಕಿರಣಗಳನ್ನು ಏರ್ಪಡಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
  ಕುಷ್ಟಗಿಯ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು ಪ್ರಾಚಾರ್ಯ ಡಿ.ವಿ. ಗಡೇದ್ ಅವರು ಶಿವಯೋಗಿ ಸಿದ್ಧರಾಮೇಶ್ವರರ ಕುರಿತು ವಿಶೇಷ ಉಪನ್ಯಾಸ ನೀಡಿದರು.  ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪಿ. ಶುಭಾ ಪ್ರಾಸ್ತಾವಿಕ ಭಾಷಣ ಮಾಡಿದರು.  ನಗರಸಭೆ ಅಧ್ಯಕ್ಷೆ ಲತಾ ವೀರಣ್ಣ ಸಂಡೂರ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಸಮಾಜದ ಮುಖಂಡರಾದ ಬಸವರಾಜ ಬೋವಿ ವಣಗೇರಿ, ವೆಂಕಟೇಶ್ ಮುಂತಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.  ಸಿ.ವಿ. ಜಡಿಯವರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.  
  ಸಮಾರಂಭಕ್ಕೂ ಪೂರ್ವದಲ್ಲಿ ಶಿವಯೋಗಿ ಸಿದ್ಧರಾಮೇಶ್ವರರ ಭಾವಚಿತ್ರದೊಂದಿಗೆ ಅದ್ಧೂರಿ ಮೆರವಣಿಗೆಗೆ ನಗರದ ಶ್ರೀ ಗವಿಸಿದ್ದೇಶ್ವರ ಮಠದ ಆವರಣದಿಂದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಚಾಲನೆ ನೀಡಿದರು.  ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. 

Leave a Reply

Top