ನೀತಿ ಸಂಹಿತೆ ಪಾಲನೆ ಬಗ್ಗೆ ಸೆಕ್ಟರ್ ಅಧಿಕಾರಿಗಳು ನಿಗಾವಹಿಸಿ- ಡಿ.ಸಿ. ತುಳಸಿ ಮದ್ದಿನೇನಿ

  ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ನಿಗಾ ವಹಿಸುವುದು ಸೇರಿದಂತೆ, ಅದರ ಪಾಲನೆ, ಉಲ್ಲಂಘನೆ ಮುಂತಾದ ವಿಷಯಗಳ ಬಗ್ಗೆ ಸೆಕ್ಟರ್ ಅಧಿಕಾರಿಗಳು ನಿಸ್ಪಕ್ಷಪಾತದಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ತಿಳಿಸಿದರು.
  ಚುನಾವಣೆ ಸಂಬಂಧಿಸಿದಂತೆ ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಚುನಾವಣಾ ಸೆಕ್ಟರ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಚುನಾವಣೆಗೆ ಸಂಬಂಧಿಸಿದಂತೆ ಕ್ಷೇತ್ರ ಚುನಾವಣಾ ಅಧಿಕಾರಿಗಳ ನಂತರ, ಹೆಚ್ಚಿನ ಜವಾಬ್ದಾರಿಯನ್ನು ಸೆಕ್ಟರ್ ಅಧಿಕಾರಿಗಳಿಗೆ ವಹಿಸಿಕೊಡಲಾಗಿದೆ.  ಪ್ರತಿ ೮ ರಿಂದ ೧೦ ಮತಗಟ್ಟೆಗಳಿಗೆ ಒಬ್ಬರಂತೆ ಈಗಾಗಲೆ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಪ್ರತಿ ಸೆಕ್ಟರ್ ಅಧಿಕಾರಿಗಳೊಂದಿಗೆ ತಲಾ ಒಬ್ಬರು ಎಸ್‌ಡಿಸಿ/ಎಫ್‌ಡಿಸಿ, ವಿಡಿಯೋಗ್ರಾಫರ್ ಹಾಗೂ ಪೊಲೀಸ್ ಸಿಬ್ಬಂದಿ ಸೇರಿದಂತೆ ನಾಲ್ವರ ತಂಡ ವಿಚಕ್ಷಣ ದಳದಂತೆ ಕಾರ್ಯ ನಿರ್ವಹಿಸಲಿದೆ.  ಸೆಕ್ಟರ್ ಅಧಿಕಾರಿಗಳು ತಮಗೆ ಸಂಬಂಧಪಟ್ಟ ಮತಗಟ್ಟೆಗಳಿಗೆ ಕೂಡಲೆ ಭೇಟಿ ನೀಡಿ, ಮತಗಟ್ಟೆಗಳ ಸ್ಥಿತಿ-ಗತಿಗಳ ಬಗ್ಗೆ ಭೌತಿಕ ಪರಿಶೀಲನೆ ನಡೆಸಬೇಕು.  ಯಾವುದೇ ಮತಗಟ್ಟೆಯಿಂದ ೨೦೦ ಮೀ. ವ್ಯಾಪ್ತಿಯೊಳಗೆ ಯಾವುದೇ ರಾಜಕೀಯ ಪಕ್ಷದ ಕಚೇರಿ ಇರಲು ಅವಕಾಶ ನೀಡಬಾರದು.  ರಸ್ತೆಯ ಅಕ್ಕ ಪಕ್ಕ, ಹಾಗೂ ಪ್ರಮುಖ ವೃತ್ತದಲ್ಲಿ ಯಾವುದೇ ಪಕ್ಷದ ಪೋಸ್ಟರ್‍ಸ್, ಬಂಟಿಂಗ್ ಹಾಕಿಸಲು ಅವಕಾಶವಿಲ್ಲ.  ಆಯಾ ಮತಗಟ್ಟೆಗಳ ವ್ಯಾಪ್ತಿಯಲ್ಲಿ ನಡೆಯುವ ಚುನಾವಣೆಯ ವಿವಿಧ ರಾಜಕೀಯ ಪಕ್ಷಗಳ, ಸಭೆ, ಸಮಾರಂಭ, ಕಾರ್ಯಕ್ರಮಗಳ ಬಗ್ಗೆ ವಿಡಿಯೋ ಚಿತ್ರೀಕರಣ ಮಾಡಿಸಿ, ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಕಂಡುಬಂದಲ್ಲಿ ಲಿಖಿತ ವರದಿಯನ್ನು ದಾಖಲೆಯೊಂದಿಗೆ ಸಂಬಂಧಪಟ್ಟ ಕ್ಷೇತ್ರ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು.  ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳ ಸ್ವೀಕೃತಿಗೆ ರಾಜ್ಯ ಮಟ್ಟದಲ್ಲಿ ೧೯೫೦ ದೂರವಾಣಿ ಸಂಖ್ಯೆ ಸಹಾಯವಾಣಿಯನ್ನು ಚುನಾವಣಾ ಆಯೋಗ ಪ್ರಾರಂಭಿಸಿದೆ.  ಇದೇ ರೀತಿ ಈಗಾಗಲೆ ಜಿಲ್ಲಾ ಮಟ್ಟದಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದ್ದು, ಇದೇ ಮಾದರಿಯಲ್ಲಿ ಆಯಾ ತಾಲೂಕು ಮಟ್ಟದಲ್ಲಿಯೂ ಕಂಟ್ರೋಲ್ ರೂಂ ಸ್ಥಾಪಿಸಲು ಕ್ರಮ ಕೈಗೊಳ್ಳಾಗಿದೆ.  ಮತದಾನಕ್ಕೆ ಮೂರು ದಿನಗಳ ಮೊದಲು, ಎಲ್ಲ ಮತದಾರರಿಗೆ ಮತದಾನದ ಗುರುತಿನ ಚೀಟಿ ವಿತರಣೆ ಮಾಡಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು ಸಹ ಸೆಕ್ಟರ್ ಅಧಿಕಾರಿಗಳ ಜವಾಬ್ದಾರಿಯಾಗಿದೆ.  ಒಟ್ಟಾರೆ ಚುನಾವಣಾ ಸೆಕ್ಟರ್ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಿ, ಸುಗಮ ಚುನಾವಣೆಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ತಿಳಿಸಿದರು.
  ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ, ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಉಪವಿಭಾಗಾಧಿಕಾರಿ ಮಂಜುನಾಥ್, ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು, ಚುನಾವಣೆಗೆ ನಿಯೋಜಿತ ಸೆಕ್ಟರ್ ಅಧಿಕಾರಿಗಳು ಭಾಗವಹಿಸಿದ್ದರು.
Please follow and like us:
error