ರಾಜಕಾರಣಿಗಳು ಜೈಲಿಗೆ ಹೋಗಿ ಬಂದರೆ ಗಾಂಧಿಯಾಗುತ್ತಾರಾ!

ಹಿಂದ ನಮ್ಮೂರಿನ್ಯಾಗ ನಮ್ಮೂರು ಗೌಡ ಮನೆಯಾಗಿನ ಜಗಳದಿಂದಾಗಿ ಪೊಲೀಸ್ ಕಟ್ಟಿ ಹತ್ತಿದ್ದ, ಅದರಿಂದ ನೊಂದುಕೊಂಡ ಅವರು ನನ್ನ ಪೊಲೀಸ್ ಕಟ್ಟಿ ಹತ್ಸಿದರು ಅಂತ ಅನಕೊಂಡು ಅದ ಅಳವಂಡದಾಗ ಎದಿ ಹೊಡ್ದ ಜೀವ ಬಿಟ್ಟರು. 

   ಇನ್ನು  ಅಸಫ್ ಶಾಹಿ (ನಿಜಾಂ)ನ ಹಿಡಿತದಲ್ಲಿದ್ದ  ಹೈದ್ರಾಬಾದ  ಪ್ರಾಂತವನ್ನು ತನ್ನದೆ ಸ್ವತಂತ್ರ ದೇಶವೆಂದು ಎಂದು ಘೋಷಿಸಿಕೊಂಡು  ಸ್ವತಂತ್ರ ಭಾರತದಲ್ಲಿ ಹೈದ್ರಾಬಾದ್ ಪ್ರಾಂತ ಸೇರದೆ ಇದ್ದಾಗ ನಮ್ಮೂರಿನ ಹಿರಿಯರು ನಾವು ಸ್ವತಂತ್ರ ಭಾರತಕ್ಕೆ ಸೇರುತ್ತೇವೆ ಎಂದು ನಿಜಾಂ ವಿರುದ್ದ  ಹೋರಾಟ ಮಾಡಿ ಜೈಲು ಸೇರಿದ್ದರು. ಹೈದ್ರಾಬಾದ್ ಪ್ರಾಂತ ಸ್ವತಂತ್ರ ಭಾರತಕ್ಕೆ ಸೇರಿದ ನಂತರ ಹೋರಾಟಗಾರರಾದ ಅವರು ಜೈಲಿನಿಂದ ಹೊರಬಂದಾಗ ನಮ್ಮೂರಾಗ ಅವರನ್ನು ಮೆರವಣಿಗೆ ಮಾಡಿದ್ದರಂತೆ. 
 ಈ ಎರಡು ಘಟನೆಗಳು ಭಾರತ ಬ್ರಿಟಿಷರ ಕಪಿಮುಷ್ಠಿಯಿಂದ ಭಾರತ ಸ್ವತಂತ್ರ್ಯಗೊಂಡಾಗಿನ ಭಾರತದ ದೃಶ್ಯಗಳು. ಆದರೆ ಈಗ ಬದಲಾಗಿದೆ. ರಾಜಕಾರಣಿಗಳು ಜೈಲಿಗೆ ಹೋಗಿ ಬಂದರೆ ಅವರ ರಾಜಕೀಯ ಸ್ತರ ಹೆಚ್ಚಾಗುತ್ತದೆ. ಇದಕ್ಕೆ ಉದಾಹರಣೆ ಇತ್ತೀಚಿಗೆ ಆಂಧ್ರಪ್ರದೇಶದಲ್ಲಿ ಅಕ್ರಮ ಆಸ್ತಿಯ ಹಿನ್ನಲೆಯಲ್ಲಿ ಚಂಚಲಗುಡಾ ಜೈಲಿನಿಂದ ವೈಎಸ್ ಜಗನ್ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಅವರ ಬೆಂಬಲಿಗರು ಮತ್ತು ವೈಎಸ್ ಆರ್ ಕಾಂಗ್ರೆಸ್ ಕಾರ್ಯಕರ್ತರು ಭಾರಿ ಪ್ರಮಾಣದಲ್ಲಿ ಮೆರವಣಿಗೆ ಮತ್ತು ಪಟಾಕಿ ಸಿಡಿಸಿ ಸಂಭ್ರಮಿಸಿದರು.
   ಇದೇ ರೀತಿ ಬಹುಕೋಟಿ ಮೇವು ಹಗರಣದಲ್ಲಿ ಸಿಲುಕಿ ಅದರಲ್ಲಿ ಆರೋಪಿ ಎಂದು ಸಾಬೀತಾಗಿ ಜೈಲು ಸೇರಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ ಯಾದವ ಜಾಮೀನು ಪಡೆದಾಗಲೂ ಇಂಥದೆ ದೃಶ್ಯ ಕಂಡು ಬಂತು. ಜೈಲಿನಿಂದ ಹೊರಬಂದ ಲಾಲೂ ಯಾದವ ತಮ್ಮ ತಪ್ಪುಗಳೇನು ಎಂಬುವದಕ್ಕಿಂತ ದೇಶದಾದ್ಯಂತ ಸಂಚರಿಸಿ ಪಕ್ಷ ಸಂಘಟನೆ ಮತ್ತು ತಮ್ಮದು ತಪ್ಪಿಲ್ಲ ಎಂದು ಹೇಳಲು ಸಂಚರಿಸುವುದಾಗಿ ಹೇಳಿದ್ದಾರೆ. 
 ಇದೇ ರೀತಿ ಹಿಂದೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಕ್ರಮವಾಗಿ ಡಿ ನೋಟಿಫೈ ಮಾಡಿದ ಹಿನ್ನಲೆಯಲ್ಲಿ ಪರಪ್ಪನ ಅಗ್ರಹಾರಕ್ಕೆ ಹೋಗಿ ಹೊರಬಂದಾಗ ಅಂದು ಸಹ ಅವರ ಬೆಂಬಲಿಗರು ಮತ್ತು ಅಂದಿನ  ಬಿಜೆಪಿ ಕಾರ್ಯಕರ್ತರು ಸಹ ಪಟಾಕಿ ಸಿಡಿಸಿ ಸಂಭ್ರಮಿಸಿದರು.
  ಗಣಿ ಹಗರಣದಲ್ಲಿ ಜೈಲು ಸೇರಿರುವ ಜರ್ನಾಧನ ರೆಡ್ಡಿ ಸಹ ಜೈಲಿನಿಂದ ಬಿಡುಗಡೆಯಾಗಿ ಹೊರಬಂದಾಗಲೂ ಇದೇ ರೀತಿ ಸಂಭ್ರಮಾಚರಣೆ ಮಾಡುತ್ತಾರೆ ಎಂಬುವುದು ಶತಸಿದ್ದ. ಹಾಗಾದರೆ ಇವರು ಸಂಭ್ರಮಾಚರಣೆಯ ಹಿಂದೆ ದೇಶ ಮತ್ತು ನಾಡಿನ ಒಳಿತು ಇದೆಯೇ? ಎಂಬುವದರ ಬಗ್ಗೆ ಅವರ ಬೆಂಬಲಿಗರಾಗಲಿ ಜನತೆಯಾಗಲಿ ಹೆಚ್ಚಿನ ತಲೆಕೆಡಿಸಿಕೊಂಡಂತೆ ಇಲ್ಲ. ಅವರೆಲ್ಲರು ಜೈಲು ಸೇರಿದ್ದು  ಅವರ ವ್ಯಕ್ತಿಗತ ಬೆಳವಣಿಗೆ ( ಆರ್ಥಿಕ ಬೆಳವಣಿಗೆ)ಯಿಂದ ಎಂಬುವುದು ಎಲ್ಲರಿಗು ತಿಳಿದ ವಿಷಯವಾಗಿದೆ.  ಆದರೆ ಅವರಿಂದ ವಯಕ್ತಿಕ  ಲಾಭ ಪಡೆದವರು ಈ ರೀತಿಯ ಆಚರಣೆ ಮಾಡುತ್ತಿರುವದು ಸಹಜ ಎಂಬುವುದು ಎಲ್ಲರಿಗು ತಿಳಿದ ವಿಷಯ.
  ಇದರ ಇನ್ನೊಂದು ಮಗ್ಗಲು ನೋಡುವದಾದರೆ ಇತ್ತೀಚಿಗೆ ನಮ್ಮ ಜಿಲ್ಲೆಯಲ್ಲಿ ಕಾರ್ಖಾನೆಯಲ್ಲಿ ಕಾರ್ಮಿಕರು ವೇತನಕ್ಕಾಗಿ ಸತ್ಯಾಗ್ರಹ ಮಾಡಿದರು ಅದಕ್ಕೆ ಬಗ್ಗದಿದ್ದಾಗ ಹೋರಾಟದ ಹಂತ ಮತ್ತು ಸ್ವರೂಪ ಬದಲಾಯಿಸಿತು. ಈ ಸಂದರ್ಭದಲ್ಲಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಕೊಪ್ಪಳದ ಪ್ರಗತಿಪರ ಸಂಘಟನೆಯ ಮುಖಂಡರನ್ನು ಬಂಧಿಸಿ ವಿವಿಧ ಕೇಸುಗಳನ್ನು ಹಾಕಿ ಜೈಲಿಗೆ ತಳ್ಳಿದರು. ಈ ಸಂದರ್ಭದಲ್ಲಿ ಕಾರ್ಮಿಕರಿಗಾಗಿ ಹೋರಾಡಿದ ಮುಖಂಡರು ಜೈಲು ಸೇರಿದ ನಂತರ ಅದೇ ಕಾರ್ಮಿಕರ ಮುಖಂಡರು ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಅವರು ಒಂದಾದರು ಅವರಿಗಾಗಿ ಹೋರಾಡಿದ ಪ್ರಗತಿಪರ ಸಂಘಟನೆಯ ಮುಖಂಡರು ವ್ಯಯಕ್ತಿಕ ಬಲದಿಂದ ಜಾಮೀನು ಪಡೆದು ಹೊರಬಂದರು. ಅವರು ಈಗಲೂ ಕೋರ್ಟು ಅಲೆಯುತ್ತಿದ್ದಾರೆ ಅದಕ್ಕೂ ನಮಗೂ ಸಂಬಂಧವಿಲ್ಲವೆನ್ನುವಂತೆ ಕಾರ್ಖಾನೆಯ ಕಾರ್ಮಿಕರ ವರ್ತಿಸುತ್ತಿದ್ದಾರೆ. 
  ಈ ಘಟನೆಗಳು ಇಂದಿನ ರಾಜಕೀಯ ಮತ್ತು ಸಮಾಜಿಕ ವ್ಯವಸ್ಥೆ ಎಷ್ಟು ಅದಃಪತನಕ್ಕೆ ಇಳಿದಿದೆ ಎಂಬುವುದನ್ನು ತೋರಿಸುತ್ತದೆ. ಎಲ್ಲಿಯೂ ಸಮಾಜಿಕ ಬದ್ದತೆ ಇಲ್ಲದೆ ಇರುವದು ಕಂಡು ಬರುತ್ತಿದೆ. ಇದಕ್ಕೆ ಉದಾಹರಣೆ ಹಿಂದೆ ಕೊಪ್ಪಳ ಜಿಲ್ಲೆಯು ಹೈದ್ರಾಬಾದ ನಿಜಾಂ ಆಡಳಿತಕ್ಕೆ ಒಳಪಟ್ಟಿತ್ತು, ಆ ಸಂದರ್ಭದಲ್ಲಿ ಗಡಿಭಾಗದ ಇಲಕಲ್ ಮತ್ತು ಗಜೇಂದ್ರಗಡಗಳು ಮುಂಬೈ ಪ್ರಾಂತಕ್ಕೆ ಸೇರಿದ್ದವು ಆ ಸಂದರ್ಭದಲ್ಲಿ ಆ ಭಾಗದಿಂದ ಈ ಭಾಗಕ್ಕೆ ಯಾವದೇ ವಸ್ತುಗಳನ್ನು ತಂದರು ಮತ್ತು ಹೋದರು ಅದಕ್ಕೆ ಸುಂಕ ಕಟ್ಟಿ ತೆಗೆದುಕೊಂಡು ಹೋಗಬೇಕಾಗಿತ್ತು. ಅದೇ ಸಂದರ್ಭದಲ್ಲಿ ಇಲಕಲ್ ಸೀರೆ ನೇಯ್ಗೆಯನ್ನು ಕೊಪ್ಪಳ ಜಿಲ್ಲೆಯ ದೋಟಿಹಾಳ, ಹನುಮಸಾಗರ, ತಾವರಗೇರಿಯಲ್ಲಿಯೂ ನೇಯಿಯುತ್ತಿದ್ದರು. ಆಗ ನೇಯ್ಗೆಯ ನೂಲು ತರುವದು ಸಹ ಸುಂಕ ಕಟ್ಟಿ ತರಬೇಕಾಗಿತ್ತು. ಇಂಥ ಸಂದರ್ಭದಲ್ಲಿ ನಮ್ಮೂರಿನ ಒಬ್ಬ ನೇಕಾರ ನೂಲಿನ ಮುಟಿಗೆ ( ನೂಲಿನ ಉಂಡಿ) ಇಲಕಲ್ ನಿಂದ ಕದ್ದು ತರುತ್ತಿದ್ದ ಆ ಸಂದರ್ಭದಲ್ಲಿ ಗಡಿಯಲ್ಲಿದ್ದ ಸುಂಕ ಅಧಿಕಾರಿಗಳು ತಪಾಸಣೆ ಮಾಡಿದಾಗ ಅವನಲ್ಲಿ ಮುಟಿಗಿ ಇರುವುದು ಗೊತ್ತಾಗಿ ಆತನನ್ನು ಕುಷ್ಟಗಿ ಜೈಲಿಗೆ ಸೇರಿಸಿದ್ದರು. ಇದೇ ಸಮಯದಲ್ಲಿ ಹೈದ್ರಾಬಾದ್ ನಿಜಾಂನ ವಿರುದ್ದದ ಹೋರಾಟವು ಅಧಿಕವಾಗಿತ್ತು ಈ ಸಂದರ್ಭದಲ್ಲಿ ಹೋರಾಟಗಾರರನ್ನು ಸಹ ಇದೇ ಜೈಲಿಗೆ ಸೇರಿಸಲಾಯಿತು. ಒಂದು ಶುಭ ಸಂದರ್ಭದಲ್ಲಿ ಹೋರಾಟಗಾರರನ್ನು ಬಿಡುಗಡೆ ಮಾಡಲಾಯಿತು. ಆ ಸಂದರ್ಭದಲ್ಲಿ ಹೋರಾಟಗಾರರು ಭಾರತ ಮಾತಾಕಿ ಜೈ ಎಂದು ಹೊರಬಂದರು. ಅದೇ ಸಂದರ್ಭದಲ್ಲಿ ಮುಟಿಗಿ ಕಳ್ಳತನ ಮಾಡಿ ಜೈಲು ಸೇರಿದವನು ಸಹ ಭಾರತ ಮಾತಾಕಿ ಜೈ ಎಂದು ಹೊರಬಂದ. ಹೊರಬಂದ ತಕ್ಷಣವೆ ಆತನೂ ಸ್ವತಂತ್ರ್ಯಯೋಧನಾದ. 
  ಇಂದು ದೇಶದ ಬಹುತೇಕ ನಡೆನುಡಿಗಳು ರಾಜಕಾರಣಿ, ಸೆಲೆಬ್ರಿಟಿಗಳು, ಕ್ರಿಕೆಟ್ ಪಟುಗಳ ಸುತ್ತಲೂ ಸುತ್ತುತ್ತಿದೆ. ಮಾಧ್ಯಮಗಳು ಸಹ ಈ ಮೂರನ್ನೆ ಹೆಚ್ಚು ಬಿಂಬಿಸುತ್ತಿದ್ದು ಇಂದು ಪ್ರಗತಿಪರ ವಿಚಾರಗಳು ಮಾಧ್ಯಮಗಳಲ್ಲಿ ಚರ್ಚೆಯಗುತ್ತಿಲ್ಲ. ಇಂದು ಐಶ್ವರ್ಯ ರೈ ಮದುವೆ, ಆಕೆಯ ಮಗುವನ್ನು ತೋರಿಸುವ ಹುಮ್ಮಸ್ಸಿನಲ್ಲಿದ್ದಂತೆ ಇದೆ. ಅದೇ ರೀತಿ ಶ್ರೀಮಂತರ ಮನೆಯ ಸುತ್ತಲು ಸುತ್ತುತ್ತಿವೆ, ಗ್ರಾಮೀಣ ಪ್ರದೇಶದಲ್ಲಿ ಸಾವಿರಕ್ಕೂ ಹೆಚ್ಚು ವಧುವರರು ಸಾಮೂಹಿಕ ವಿವಾಹವಾಗುತ್ತಿದ್ದರೂ ಇದು ಮಾಧ್ಯಮಗಳಲ್ಲಿ ವರದಿಯಾಗುವುದು ಅಷ್ಟಕಷ್ಟೆ, ಇಂಥ ಮದುವೆಗಾಗಿ ಮಾಧ್ಯಮ ಪ್ರತಿನಿಧಿಗಳನ್ನು ಆಯೋಜಕರು ಕರೆದರು ಅವರಿಗೆ ಗೌರವ, ಆತಿಥ್ಯ ನೀಡಿದರೂ ಅವರು ಕಳುಹಿಸುವ ಸುದ್ದಿಗಳು ಟಿವಿಗಳಲ್ಲಿ ಎವಿ ಇಲ್ಲವೆ ಎವಿಬಿ ಬಂದರೆ ಪುಣ್ಯ. ಪೇಪರಗಳಲ್ಲಿ ಸ್ಥಳೀಯ ಪುಟದಲ್ಲಿ ಒಂದು ಸಣ್ಣ ಸುದ್ದಿ ಬಂದರೆ ಅಷ್ಟೆ ಸಾಕು ಎನ್ನುವಂಥ ಸ್ಥಿತಿ.
   ಇದೇ ಸಂದರ್ಭದಲ್ಲಿ ಸೆಲೆಬ್ರಿಟಿಗಳು ಇಲ್ಲವೆ ಅವರ ಮಕ್ಕಳ ಮದುವೆ ಇದೆ ಎಂದು ಗೊತ್ತಾದರೂ ಸಾಕು ಅವರು ಕರೆಯಬೇಕೆಂದೆನಿಲ್ಲ ಅದಕ್ಕಾಗಿ ಹಗಲು ರಾತ್ರಿ ಕಾದುಕುಳಿತು ಸ್ಕೂಪ ಐಟಂ ನೀಡುವಂತೆ ಮಾಧ್ಯಮಗಳ ಮುಖ್ಯಸ್ಥರು ವರದಿಗಾರರಿಗೆ ಹೇಳುತ್ತಾರೆ. ಇದಕ್ಕೆ ಉದಾಹರಣೆ ಚಿತ್ರ ನಟ ನಟಿಯರ ಮದುವೆಯನ್ನು ಕದ್ದುಮುಚ್ಚಿ ದೃಶ್ಯಗಳನ್ನು ತಂದು ಬಿತ್ತರಿಸುತ್ತಿರುವುದು. ಕಳೆದ ೨-೩ ವರ್ಷಗಳ ಹಿಂದೆ   ಇನ್ಫೋಸಿಸ್ ನಾರಾಯಣಮೂರ್ತಿಯ ಮಗಳು ಮದುವೆ. ಶಂಕರ ಬಿದರಿ ಮಗಳ ಮದುವೆ ಸಮಾರಂಭವು ಅರಮನೆ ಮೈದಾನದಲ್ಲಿ ನಡೆಯಿತು ಈ ಸಂದರ್ಭದಲ್ಲಿ ಮಾಧ್ಯಮದವರನ್ನು ಕರೆಯದಿದ್ದರೂ ಕೆಲವು ಟಿವಿ ವಾಹಿನಿಗಳು ದೂರದಲ್ಲಿ ನಿಂತು ಸಿಕ್ಕ ೧೦ ಸೆಕಂಡ್ ದೃಶ್ಯವನ್ನು ಇಡೀ ದಿನ ಬಿತ್ತರಿಸಿದ್ದರು. 
    ಇಲ್ಲಿರುವ ಸೂಕ್ಷ್ಮಗಳು ಜನಸಾಮನ್ಯನಿಗೆ ಅರ್ಥವಾಗುತ್ತಿವೆ ಆದರೆ ಮಾಧ್ಯಮಗಳು, ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳಿಗೆ ಅರ್ಥವಾಗುತ್ತಿಲ್ಲ. ಇಂದು ಪ್ರತಿಷ್ಠಿತರು ಏನು ಮಾಡಿದರೂ ಪ್ರಚಾರವಾಗುತ್ತಿದ್ದು ಜನಸಾಮಾನ್ಯನ ಸಾಹಸ, ಸಂಭ್ರಮ, ನೋವು ನಲಿವುಗಳು ಪ್ರಚಾರವಾಗುತ್ತಿಲ್ಲ. ಅದೇ ರೀತಿ ಇಂದಿನ ದಿನಗಳಲ್ಲಿ ಜೈಲುಗಳಲ್ಲಿ ಹೋಗಿ ಬರುವವರು ಪ್ರತಿಷ್ಠಿತರಾಗಬೇಕೆ? 
   ಒಂದು ಕಾಲವಿತ್ತು ಜೈಲಿಗೆ ಹೋಗಿ ಬಂದರೆ ಸಾಕು ಆತನನ್ನು ನೋಡುವ ದೃಷ್ಠಿ ತೀರಾ ಕೆಟ್ಟಾದಾಗಿತ್ತು. ಆತ ಅಥವಾ ಆಕೆ ಜೈಲಿನಲ್ಲಿದ್ದು ಬಂದವರು ಎಂದು ಅಕ್ಕ ಪಕ್ಕದವರು ಸಹ ಭಯದಿಂದ ನೋಡುತ್ತಿದ್ದರು. ಆದರೆ ಇಂದು ಜೈಲುಗಳೆನ್ನುವವು ರಾಜಕಾರಣಿಗಳಿಗೆ ಮಾವನ ಮನೆಗಳಾಗಿವೆ. ಹಿಂದೆ ಸ್ವತಂತ್ರ್ಯ ಹೋರಾಟಗಾರರು ಎಷ್ಟು ಸಲ ಜೈಲಿಗೆ ಹೋಗಿ ಬಂದಿದ್ದಾರೆ ಎಂಬುವದರ ಮೇಲೆ ಅವರ ಹೋರಾಟ ಕಿಚ್ಚು ಎಂಥದ್ದು ಎಂಬುವದನ್ನು ತೋರಿಸುತ್ತಿತ್ತು ಆದರೆ ಇಂದು ರಾಜಕಾರಣಿಗಳು ಜೈಲಿಗೆ ಎಷ್ಟು ಸಲ ಹೋಗಿದ್ದಾರೆ ಎಂದರೆ ಅವರು ಎಷ್ಟು ಸಾರ್ವಜನಿಕರ ಹಣವನ್ನು ಕೊಳ್ಳೆ ಹೊಡೆದಿದ್ದಾರೆ ಎಂಬುವದನ್ನು ಗೊತ್ತುಪಡಿಸುತ್ತಿದೆ. 
   ಮುಂದಿನ ದಿನಗಳಲ್ಲಿ ರಾಜಕಾರಣಿಗಳು, ಚಿತ್ರ ನಟ ಮತ್ತು ನಟಿಯರಿಗೆ ಜೈಲಿನಿಂದ ಬಂದರೆ ಮಾತ್ರ ನಿಮ್ಮ ಯೋಗ್ಯತೆ ಎಂದು ಅಳೆಯುವದಾಗಿ ಹೇಳುವ ಸ್ಥಿತಿ ಬರುತ್ತದೆಯೇ ಎಂಬಂತಾಗಿದೆ. ಈ ಬಗ್ಗೆ ದೇಶದ ಪ್ರಜ್ಞಾವಂತರು ಮತ್ತು ಬುದ್ದಿಜೀವಿಗಳು ಚಿಂತಿಸಿ ಸರಿ ದಾರಿಗೆ ತರಬೇಕಾಗಿದೆ. 
                            ಶರಣಪ್ಪ ಬಾಚಲಾಪುರ
                                 ಕೊಪ್ಪಳ

Leave a Reply