ಭಾರತೀಯ ಸಂಸ್ಕೃತಿಯಲ್ಲಿ ಬೀರಪ್ಪಗೆ ವಿಶಿಷ್ಟ ಸ್ಥಾನ ಡಾ. ಕೆ. ಎಂ. ಮೇತ್ರಿ


ಕೊಪ್ಪಳ, ಜೂ. ೦೩ : ಬೀರಪ್ಪ ಶಿವ ಸ್ವರೂಪಿಯಾಗಿದ್ದಾನೆ. ಶಿವನ ಅಪರಾವತರವೇ ಬೀರಪ್ಪ ಎಂದು ನಂಬಲಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಬೀರಪ್ಪ ವಿಶಿಷ್ಟ ಸ್ಥಾನ ಪಡೆದಿದ್ದಾನೆ. ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು ಆಗಿರುವ ಡಾ. ಕೆ.ಎಂ. ಮೇತ್ರಿಯವರು ಹೇಳಿದ್ದಾರೆ.
    ಕನಕ ಸಾಂಸ್ಕೃತಿಕ ಪರಿಷತ್ತು ಆಶ್ರಯದಲ್ಲಿ ಭಾಗ್ಯನಗರದ ನಾಗಪ್ಪ ಬಗನಾಳ ಅವರ ಮನೆಯಲ್ಲಿ ಏರ್ಪಡಿಸಿದ್ದ ಮನೆ ಮನೆಯಲ್ಲಿ ಹಾಲುಮತ ಸಂಸ್ಕೃತಿ ದರ್ಶನ ಕಾರ್ಯಕ್ರಮದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಬೀರೇಶ್ವರ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
    ಭಾರತದ ಮೂಲ ನಿವಾಸಿಗಳು ಒಂದೆಡೆಯಿಂದ ಇನ್ನೊಂದೆಡೆ ಆಹಾರಕ್ಕಾಗಿ ಸಂಚರಿಸುವಾಗ, ನೆಲೆನಿಂತ ಸ್ಥಳದಲ್ಲಿ ಅವ್ಯಕ್ತ ದೇವರಾಗಿ ಬೀರಪ್ಪನನ್ನು ಸ್ಥಾಪಿಸಿ ಪೂಜಿಸುತ್ತ ಬಂದಿದ್ದಾರೆ. ಸ್ಥಾಪಿತ ಬೀರಪ್ಪ ದೇವರನ್ನು ಅಲ್ಲಿಯೇ ಬಿಟ್ಟು ಮುಂದೆ ಹೋಗುವಾಗ ಹಿಂದೆ ಬರುವ ಮೂಲನಿವಸಿಗಳ ತಂಡಕ್ಕೆ ಆ ಪ್ರದೇಶ ಸುರಕ್ಷಿತ ಸ್ಥಳವಾಗಿ ಕಾಣುತ್ತದೆ. ಆ ತಂಡ ಅಲ್ಲಿ ಕೆಲವು ದಿನ ಬಿಡಾರ ಹೂಡಿ ಮಂದೆ ಹೋಗುತ್ತದೆ. ಹೀಗೆ ಸ್ಥಾಪಿತವಾದ ಬೀರಪ್ಪ ಶಿವ ಸ್ವರೂಪಿಯಾಗಿದ್ದಾನೆ. ಶಿವನ ಅವತಾರವೇ ಬೀರಪ್ಪ ಎಂದು ನಂಬಲಾಗಿದೆ. ಪೌರಾಣಿಕ ಹಿನ್ನೆಲೆಯಲ್ಲಿ ಬೀರಪ್ಪ ದೈವೀ ಸಂಭೂತನಾಗಿ ಕಾಣುತ್ತಾನೆ. ಆದರೆ ಅಲೆಮಾರಿ ಕುರಿಗಾರರು ಬೀರಪ್ಪನನ್ನು ವೈಜ್ಞಾನಿಕವಾಗಿ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ. ಬೀರಪ್ಪ ಪ್ರಕೃತಿಯ ಜ್ಞಾನಭಂಡಾರವೇ ಆಗಿದ್ದಾನೆ. ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಕಾಣ ಸಿಗುವ ಶಿಬಾರಗಳು ಅಲೆಮಾರಿ ಕುರಿಗಾರರ ಶಿಬಿರಗಳಾಗಿರುವುದನ್ನು ಪ್ರತಿ ನಿಧಿಸುತ್ತವೆ. ಬೀರಪ್ಪ ಮೈಲಾರನಾಗಿ, ಮಹಾರಾಷ್ಟ್ರ ಭಾಗದಲ್ಲಿ ವಿಠ್ಠಲನಾಗಿ, ಆಂದ್ರಪ್ರದೇಶ ಭಾಗದಲ್ಲಿ ಮಲ್ಲಿಕಾರ್ಜುನಾಗಿ, ವೀರಭದ್ರನಾಗಿ ಪೂಜಿಸಲ್ಪಡುತ್ತಿದ್ದಾನೆ. ಆಜ(ಕುರಿ)ಪವೇದ ಮೇಲ್ವರ್ಗದವರ ಕಡೆಗಣನೆಗೆ ಗುರಿಯನಾಗಿದೆ. ಅಜಪವೇದದ ವಕ್ತಾರ ಬೀರಪ್ಪ ನಾಗಿದ್ದಾನೆ. ಮೆಹಂಜೋದಾರ ಸಂಸ್ಕೃತಿ ಕುರುಬರ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಡೊಳ್ಳಿನ ಹಾಡುಗಳು ಇಲ್ಲದೇ ಹೋಗಿದ್ದರೆ ಬೀರಪ್ಪ ಮರೆಯಾಗಿ ಹೋಗುತ್ತಿದ್ದ ಎನ್ನುವ ಭಯ ವಿದ್ವಾಂಸರನ್ನು ಕಾಡುತ್ತಿದೆ ಎಂದು ಡಾ. ಕೆ.ಎಂ. ಮೇತ್ರಿಯವರು ಆತಂಕ ವ್ಯಕ್ತ ಪಡಿಸಿದರು.
    ಊಟಿ ಬುಡಕಟ್ಟು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಜಕ್ಕಾ ಪಾರ್ಥಸಾರಥಿ ಅವರು ಅಲೆಮಾರಿ ಕುರಿಗಾರರ ಜೀವನ ಕುರಿತು ಮಾತನಾಡಿದರು. ಹಿರಿಯ ಸಾಹಿತಿ ಎಚ್.ಎಸ್.ಪಾಟೀಲ ಅವರು ಕಾರ್ಯಕ್ರಮ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ನಿವೃತ್ತ ಬ್ಯಾಂಕ್ ಅಧಿಕಾರಿ ಎಂ.ಕೆ. ಕುರಿ ಕಾರ್ಯಕ್ರಮದ  ಉದ್ಘಾಟನೆ ನೆರವೇರಿಸಿದರು.
    ಕಾರ್ಯಕ್ರಮದಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಬಿ.ಎಫ್.ಬೀರನಾಯ್ಕರ್, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಕೊಂಕಲ್, ಜಿಲ್ಲಾ ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ನಾಗರಾಜ ಜುಮ್ಮಣ್ಣವರ, ಕೋಟೆಯ ಕರ್ನಾಟಕ ದಿನಪತ್ರಿಕೆ ಸ್ಥಾನಿಕ ಸಂಪಾದಕ ವೈ.ಬಿ.ಜೂಡಿ, ಜಿಲ್ಲಾ ಕನಕ ನೌಕರ ಸಂಘದ ಅಧ್ಯಕ್ಷ ಮಂಜುನಾಥ ಅಬ್ಬಿಗೇರಿ, ಕಾಳಿದಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಗವಿಸಿದ್ದಪ್ಪ ಹಿಟ್ನಾಳ, ಹಂಪಿ ಕ.ವಿ.ಯ ಡಾ.ದಾಕ್ಷಾಯಣಿ ಮೇತ್ರಿ, ಧನಗರಗೌಳಿ ಸಮಾಜದ ಸಿದ್ದು ಥೋರವತ್, ಗುಡದಪ್ಪ ಹಲಗೇರಿ, ಶಿವಶಂಕರ ಮುರಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
    ವೀರಕನ್ನಡಿಗ ಯುವಕ ಸಂಘದ ಅಧ್ಯಕ್ಷ ಶಿವಾನಂದ ಹೊದ್ಲೂರ ಸ್ವಾಗತಿಸಿದರು. ಕನಕ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಬಸವರಾಜ ಆಕಳವಾಡಿ ಪ್ರಾಸ್ತಾವಿಕ ಭಾಷಣ ಮಾಡಿದರು. ಉಪನ್ಯಾಸಕ ಹನುಮಂತಪ್ಪ ಅಂಡಗಿ ಅತಿಥಿಗಳ ಪರಿಚಯ ಭಾಷಣ ಮಾಡಿದರು. ಶಿಕ್ಷಕಿ ಅರುಣಾ ನರೇಂದ್ರ ಕಾರ್ಯಕ್ರಮ ನಿರೂಪಿಸಿದರು. ಮಲ್ಲಪ್ಪ ಗಟ್ಟಿ ಪ್ರಾರ್ಥಿಸಿದರು. ಶರಣಪ್ಪ ಮಣ್ಣೂರ ವಂದಿಸಿದರು.

Leave a Reply