ಮೂರೂ ಬಿಟ್ಟವರು ಊರಿಗೆ ದೊಡ್ಡವರು

ದೇಶದ ಮುಂದೆ ನಾಡು ತಲೆತಗ್ಗಿಸುವಂತಹ ಘಟನೆ ರಾಜ್ಯದ ಸದನದಲ್ಲಿ ನಡೆದಿದೆ. ನಾಡಿನ ಇಬ್ಬರು ಸಚಿವರು ಸದನದಲ್ಲೇ ತಮ್ಮ ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ, ಜನತೆಯ ಮುಂದೆ ರೆಡ್‌ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ. ಸದನದಲ್ಲಿ ಬರಗಾಲದ ಸಮಸ್ಯೆ ಚರ್ಚೆಯಾಗುತ್ತಿದ್ದರೆ, ಈ ಮಹಿಳಾ ಮತ್ತು ಕಲ್ಯಾಣ ಸಚಿವ ಹಾಗೂ ಸಹಕಾರ ಸಚಿವ ಅಶ್ಲೀಲ ಚಿತ್ರಗಳನ್ನು ಮೊಬೈಲ್‌ನಲ್ಲಿ ನೋಡುತ್ತಾ ಆಸ್ವಾದಿಸುತ್ತಿದ್ದರು. ವಿಷಾದನೀಯ ಸಂಗತಿಯೆಂದರೆ, ಸಹಕಾರ ಸಚಿವ ಲಕ್ಷ್ಮಣ್ ಸವದಿ ತನ್ನ ಕೃತ್ಯವನ್ನು ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದಾರೆ.ಉಡುಪಿಯಲ್ಲಿ ನಡೆದ ನಂಗಾನಾಚ್ ಪಾರ್ಟಿಯನ್ನು ಮುಖ್ಯಮಂತ್ರಿ ಸದಾನಂದ ಗೌಡರು ಸಮರ್ಥಿಸಿದ ಎರಡೇ ದಿನದಲ್ಲಿ ಇಂತಹದೊಂದು ಘಟನೆ ನಡೆದಿದ್ದು ನಾಡಿನ ಜನತೆಯನ್ನು ಅವಮಾನದಿಂದ ಮುಖ ಮುಚ್ಚಿಕೊಳ್ಳುವಂತೆ ಮಾಡಿದೆ. ಬಿಜೆಪಿ ಸರಕಾರ ನಮ್ಮ ನಾಡನ್ನು ಎಲ್ಲಿಗೆ ಕೊಂಡೊಯ್ಯುತ್ತಿದೆ ಎನ್ನುವುದನ್ನು ಯೋಚಿಸುವಾಗ ನಿಜಕ್ಕೂ ಭಯವಾಗುತ್ತಿದೆ. ಭ್ರಷ್ಟ ರಾಜಕಾರಣಿಗಳು ನಾಡನ್ನು ದೋಚಿದರು. ಸಂಘಪರಿವಾರ, ತನ್ನ ಕೋಮು ವಿಷಬೀಜವನ್ನು ಬಿತ್ತಲು ಶಿಕ್ಷಣ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸುತ್ತಿದೆ. ತಹಶೀಲ್ದಾರ ಕಚೇರಿಯಲ್ಲೇ ಪಾಕಿಸ್ತಾನದ ಧ್ವಜ ಹಾರಿಸಲಾಯಿತು.
ಅಪರಾಧಗಳನ್ನು ಸ್ವತಃ ಸರಕಾರವೇ ರಕ್ಷಿಸುತ್ತಿದೆ. ಕೋಮುವಾದಿ ಶಕ್ತಿಗಳು ವಿಜೃಂಭಿಸುತ್ತಿವೆ. ಇದರ ಜೊತೆಗೆ ಹೆಣ್ಣಿನ ಮಾನ ಬೀದಿ ಪಾಲಾಗಿದೆ. ಶಾಸಕರೊಬ್ಬರ ಪತ್ನಿಯ ನಿಗೂಢ ಸಾವಿನಿಂದ ಹಿಡಿದು, ಇದೀಗ ಸದನದಲ್ಲೇ ಬ್ಲೂಫಿಲಂ ನೋಡುವಂತಹ ಘಟನೆಗಳಿಗೆ ನಾಡು ಸಾಕ್ಷಿಯಾಗಬೇಕಾಯಿತು. ಅಂದರೆ, ಆರ್ಥಿಕವಾಗಿ, ಸಾಮಾಜಿಕವಾಗಿ, ನೈತಿಕವಾಗಿ ಮೂರೂ ರೀತಿಯಲ್ಲೂ ನಾಡು ಪತನದತ್ತ ಸಾಗುತ್ತಿದೆ. ಇಷ್ಟಾದರೂ ಈ ಕುರಿತಂತೆ ಸರಕಾರಕ್ಕೆ ಎಳ್ಳಷ್ಟೂ ಪಾಪಪ್ರಜ್ಞೆ ಇದ್ದಂತಿಲ್ಲ.
ಒಂದು ನಾಡು ಆರ್ಥಿಕವಾಗಿ ಬಡವಾಗಿರಲಿ, ಅಲ್ಲಿ ಶಿಕ್ಷಣ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯೇ ಇರಲಿ, ಇವೆಲ್ಲವನ್ನೂ ನಾವು ನಿಧಾನಕ್ಕೆ ತುಂಬಿಕೊಳ್ಳಬಹುದು. ಆದರೆ ನೈತಿಕತೆಯನ್ನು, ಚಾರಿತ್ರ‍್ಯವನ್ನು ಕಳೆದುಕೊಳ್ಳುತ್ತಾ ಬಂದರೆ ಮಾತ್ರ ಅದನ್ನು ತುಂಬಿಸಲು ಸಾಧ್ಯವಿಲ್ಲ. ಕರ್ನಾಟಕದ ಸ್ಥಿತಿ ಇಂದು ಆ ದಿಕ್ಕಿಗೆ ನಡೆಯುತ್ತಿದೆ. ರಾಜಕಾರಣಿಗಳು ಕೇವಲ ಹಣ, ಸಂಪತ್ತನ್ನಷ್ಟೇ ದೋಚುತ್ತಿಲ್ಲ. ಈ ನಾಡಿನ ಚಾರಿತ್ರಿಯ, ನೈತಿಕ ಮೌಲ್ಯಗಳನ್ನೂ ಧ್ವಂಸ ಮಾಡುತ್ತಿದ್ದಾರೆ. ಇದು ಅಪಾಯಕಾರಿ ಯಾದಂತಹ ಅಂಶ. ಒಂದೆಡೆ ಸಂಸ್ಕೃತಿ, ಮಹಿಳೆ, ಪರಂಪರೆಗಳನ್ನು ಗುತ್ತಿಗೆ ಹಿಡಿದು ಮಾತನಾಡುತ್ತಲೇ, ಇನ್ನೊಂದೆಡೆ ಮಹಿಳೆ ಯನ್ನು ಅತ್ಯಂತ ಹೀನವಾಗಿ ನಡೆಸಿ ಕೊಳ್ಳುತ್ತಿರುವ ಈ ಸರಕಾರ ಆತ್ಮಸಾಕ್ಷಿಯನ್ನು ಕಳೆದುಕೊಂಡಿದೆ. ಇಡೀ ಸದನದ ಪಾವಿತ್ರವನ್ನು ಹರಾಜಿಗಿಟ್ಟಿದೆ. ಶಾಸಕರ ಅನರ್ಹತೆಯ ಸಂದರ್ಭದಲ್ಲಿ ನಡೆದ ಗದ್ದಲ, ಸದನದ ಸರ್ವ ಗಾಂಭೀರ್ಯವನ್ನೂ ಬೀದಿಗಿಟ್ಟಿತ್ತು. ವಿಧಾನಸಭೆ ರಣರಂಗವಾಗಿತ್ತು. ಅಲ್ಲಿ ಏನು ನಡೆಯಬಾರದಿತ್ತೋ ಅದು ನಡೆದು ಹೋಯಿತು. ಇದೀಗ ಎರಡನೆ ಹಂತಕ್ಕೆ ಸರಕಾರ ಹೆಜ್ಜೆಯಿಟ್ಟಿದೆ.
ಇಂದು ಸಚಿವರಿಂದ ನಡೆದ ಅನೈತಿಕ ಕೃತ್ಯವನ್ನು ಯಾವ ರೀತಿಯಲ್ಲೂ ಸಮರ್ಥಿಸಲು ಸಾಧ್ಯವಿಲ್ಲ. ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ್ದೇ ಅಲ್ಲದೆ, ಇದನ್ನು ಅಧ್ಯಯನಕ್ಕೋಸ್ಕರ ವೀಕ್ಷಿಸಿದೆವು ಎನ್ನುತ್ತಿದ್ದಾರೆ ಸಹಕಾರ ಸಚಿವರು. ಯಾವ ಅಧ್ಯಯನ? ಬರಗಾಲದ ಅಧ್ಯಯನವೆ? ನೆರೆಪರಿಹಾರ ಸಂತ್ರಸ್ತರ ಕುರಿತ ಅಧ್ಯಯನವೆ? ಸಿಂಧಗಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ ದೇಶದ್ರೋಹಿಗಳ ಕುರಿತ ಅಧ್ಯಯನವೆ? ಕಲಾಪ ನಡೆಯುತ್ತಿರುವಾಗ ಮೊಬೈಲ್‌ನಲ್ಲಿ ವ್ಯವಹರಿಸುವುದೇ ಮೊದಲ ತಪ್ಪು. ಆದರೆ ಇಲ್ಲಿ ವ್ಯವಹರಿಸಿದ್ದು ಮಾತ್ರವಲ್ಲ, ಅಶ್ಲೀಲ ಚಿತ್ರವನ್ನು ಸಚಿವರು ವೀಕ್ಷಿಸಿದ್ದಾರೆ. ಮೂವರು ಸಚಿವರು ಇದರಲ್ಲಿ ಭಾಗವಹಿಸಿರುವುದು ಮಾಧ್ಯಮಗಳಿಂದ ಬಹಿರಂಗವಾಗಿದೆ.
ತನಗೆ ಅಶ್ಲೀಲ ಚಿತ್ರವನ್ನು ವಿತರಿಸಿದ್ದು ಸಚಿವ ಪಾಲೆಮಾರ್ ಎಂದು ಸ್ವತಃ ಸವದಿಯೇ ಹೇಳಿದ್ದಾರೆ. ಅಶ್ಲೀಲ ಚಿತ್ರದ ಕುರಿತಂತೆ ಸಚಿವರೇ ಸಮರ್ಥನೆ ನೀಡಿದರೆ ಉಳಿದ ಜನಸಾಮಾನ್ಯರ ಸ್ಥಿತಿಯೇನು? ನಾಳೆ ಎಲ್ಲ ಬ್ಲೂಫಿಲಂ ಅಡ್ಡೆಗಳೂ ಇದೇ ಹೇಳಿಕೆಯನ್ನು ತಮ್ಮ ರಕ್ಷಣೆಗಾಗಿ ಬಳಸಲಾರವೆ? ಇದು ಮುಂದುವರಿದಲ್ಲಿ ನಾವು ಬ್ಲೂಫಿಲಂ ಕೇಂದ್ರಗಳನ್ನೇ ಅಧ್ಯಯನ ಕೇಂದ್ರಗಳೆಂದು ಕರೆಯಬೇಕಾಗಿ ಬರಬಹುದು. ನಮ್ಮ ಮಕ್ಕಳು, ಯುವಕರು ರಾಜಕಾರಣಿಗಳ ಇಂತಹ ವರ್ತನೆಯಿಂದ ಯಾವ ಪಾಠವನ್ನು ಕಲಿಯಬೇಕು?
ಸಚಿವರು ಮಾಡಿದ ಕೃತ್ಯಕ್ಕಾಗಿ ಮುಖ್ಯಮಂತ್ರಿ ಕ್ಷಮೆಯಾಚಿಸಬೇಕು ಮಾತ್ರವಲ್ಲ, ಪ್ರಕರಣದಲ್ಲಿ ಪಾಲ್ಗೊಂಡಿರುವ ಮೂವರು ಸಚಿವರನ್ನೂ ತಕ್ಷಣ ವಜಾ ಮಾಡಬೇಕು. ಸಚಿವ ಹುದ್ದೆಯಲ್ಲಾಗಲಿ, ಶಾಸಕ ಹುದ್ದೆಯಲ್ಲಾಗಲಿ ಅವರು ಮುಂದುವರಿಯಲು ಅನರ್ಹರು. ಒಂದು ವೇಳೆ ಸವದಿ, ಸಿ.ಸಿ.ಪಾಟೀಲ್ ಮತ್ತು ಪಾಲೆಮಾರ್ ರಾಜೀನಾಮೆ ನೀಡದೇ ಇದ್ದರೆ, ವಿಧಾನಸೌಧ ವನ್ನು ನಾವು ತಪ್ಪುದಾರಿಗೆ ನೂಕಿದಂತಾಗುತ್ತದೆ. ಮೊಬೈಲ್‌ಗಳಲ್ಲಿ ಕಾಣಿಸಿಕೊಂಡ ಮಹಿಳೆಯರು ನಾಳೆ ಶಾಸಕರ ಭವನದ ಕೊಠಡಿಗಳೊಳಗೂ ಕಾಲಿಡಬಹುದು. ಮೊಬೈಲ್‌ನೊಳಗಿನ ತರುಣಿಯರು ವಿಧಾನಸೌಧದ ಗೇಟುಗಳಲ್ಲಿಯೂ ಕಾಣಿಸಿಕೊಳ್ಳಬಹುದು. ಆದುದರಿಂದ ತಕ್ಷಣ ಬಿಜೆಪಿಯ ವರಿಷ್ಠರು ಮಧ್ಯ ಪ್ರವೇಶಿಸಿ, ಆರೋಪಿಗಳ ಮೇಲೆ ಕ್ರಮ ಕೈಗೊಂಡು ಪಕ್ಷದ, ಸರಕಾರದ ಹಾಗೂ ನಾಡಿನ ಮರ್ಯಾದೆಯನ್ನು ಉಳಿಸಬೇಕಾಗಿದೆ. ಅಷ್ಟೇ ಅಲ್ಲ, ತಮ್ಮ ಕಚ್ಚೆ ಹರುಕ ಶಾಸಕರಿಗೆ ಲಕ್ಷ್ಮಣ ರೇಖೆಯನ್ನು ಹಾಕಿ, ಅವರನ್ನು ಬಂದೋಬಸ್ತ್‌ನಲ್ಲಿ ಇಡಬೇಕಾಗಿದೆ.
Please follow and like us:
error