ಸರ್ಕಾರಿ ಶಾಲೆ, ಆಸ್ಪತ್ರೆಗಳ ಬಗ್ಗೆ ಸಾರ್ವಜನಿಕರಲ್ಲಿ ಉತ್ತಮ ಅಭಿಪ್ರಾಯ ಮೂಡಿಸಿ- ಮೀರಾ ಸಕ್ಸೇನಾ

 

ಮಕ್ಕಳಿಗೆ ಉಚಿತ ಶಿಕ್ಷಣ ದೊರೆಯುವ ಸರ್ಕಾರಿ ಶಾಲೆಗಳು ಹಾಗೂ ಸಾರ್ವಜನಿಕರಿಗೆ ಉಚಿತ ಚಿಕಿತ್ಸೆ ದೊರೆಯುವ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಸಾರ್ವಜನಿಕರಲ್ಲಿ ಉತ್ತಮ ಅಭಿಪ್ರಾಯ ಮೂಡಿಸ
ಲು ಶಿಕ್ಷಕರು ಮತ್ತು ವೈದ್ಯರು ಪ್ರಾಮಾಣಿಕ ಯತ್ನ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷೆ ಮೀರಾ ಸಕ್ಸೇನಾ ಅವರು ಅಧಿಕಾರಿಗಳಿಗೆ ಮನವಿ ಮಾಡಿದರು.

  ಮಾನವ ಹಕ್ಕುಗಳ ಉಲ್ಲಂಘನೆ ಸಂಬಂಧಿಸಿದಂತೆ ದಾಖಲಾಗಿರುವ ದೂರುಗಳ ವಿಚಾರಣೆ ಕುರಿತು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟ, ಹಾಲು ವಿತರಣೆ, ಶಿಷ್ಯವೇತನ ಸೇರಿದಂತೆ ಹಲವಾರು ಯೋಜನೆಗಳು ಜಾರಿಯಲ್ಲಿವೆ.  ಇಂತಹ ಜನಪ್ರಿಯ ಯೋಜನೆಗಳು ಖಾಸಗಿ ಶಾಲೆಗಳಲ್ಲಿ ಇಲ್ಲ, ಪ್ರತಿಭಾವಂತ ಶಿಕ್ಷಕರೂ ಅಲ್ಲಿಲ್ಲ.  ಆದರೂ ಬಡ ಕೂಲಿ ಕಾರ್ಮಿಕನೂ ಸಹ ಖಾಸಗಿ ಶಾಲೆಗೆ ತಮ್ಮ ಮಕ್ಕಳನ್ನು ದಾಖಲಿಸಲು ಇಚ್ಛೆಪಡುತ್ತಾರೆ.  ಇದಕ್ಕೆ ಕಾರಣ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ ಎಂಬುದಾಗಿ ಸಾರ್ವಜನಿಕ ವಲಯದಲ್ಲಿ ಮನೆ ಮಾಡಿರುವ ಕೆಟ್ಟ ಅಭಿಪ್ರಾಯ.  ಅದೇ ರೀತಿ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ, ಔಷಧಿ ಎಲ್ಲವೂ ಲಭ್ಯವಿದ್ದರೂ, ರೋಗಿಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಯಸುತ್ತಾರೆ.  ಕಾರಣ ಸರ್ಕಾರಿ ಆಸ್ಪತ್ರೆಯ ವೈದ್ಯರು ತಮ್ಮನ್ನು ನಿರ್ಲಕ್ಷಿಸುತ್ತಾರೆ ಎನ್ನುವ ಅಭಿಪ್ರಾಯ.  ಸರ್ಕಾರಿ ಕ್ಷೇತ್ರಗಳ ಬಗ್ಗೆ ಸಾರ್ವಜನಿಕರಲ್ಲಿ ಮನೆ ಮಾಡಿರುವ ಕೆಟ್ಟ ಅಭಿಪ್ರಾಯವನ್ನು ತೊಡೆದುಹಾಕಿ, ಉತ್ತಮ ಸೇವೆ ಹಾಗೂ ಉತ್ತಮ ಸ್ಪಂದನೆ ನೀಡುವ ಮೂಲಕ ಸಾರ್ವಜನಿಕರಲ್ಲಿ ಒಳ್ಳೆಯ ಅಭಿಪ್ರಾಯ ಮೂಡಿಸಬೇಕು.  ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಆಕರ್ಷಿಸುವಂತಾಗಲು ಅಧಿಕಾರಿಗಳು ಪ್ರಾಮಾಣಿಕ ಯತ್ನ ಮಾಡಬೇಕು.  ಇದು ಅಸಾಧ್ಯವಾದುದೇನೂ ಅಲ್ಲ.  ಒಬ್ಬರಿಂದ ಏನೂ ಸಾಧ್ಯವಿಲ್ಲ ಎಂಬ ಮನೋಭಾವ ತರವಲ್ಲ.  ಹಿಂದೆ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್. ಶೇಷನ್ ಅವರು ಇಡೀ ಚುನಾವಣೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿದ ನಿದರ್ಶನ ನಮ್ಮ ಮುಂದಿದೆ ಎಂದು ಮೀರಾ ಸಕ್ಸೇನಾ ಅವರು ಹೇಳಿದರು.
ಬಾಲಕಾರ್ಮಿಕರನ್ನು ಮುಖ್ಯವಾಹಿನಿಗೆ ತನ್ನಿ : ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಾಲಕಾರ್ಮಿಕ ಪ್ರಕರಣಗಳು ವರದಿಯಾಗುತ್ತಿದ್ದು, ಈವರೆಗೆ ೯೭೦ ಬಾಲ ಕಾರ್ಮಿಕ ಮಕ್ಕಳನ್ನು ಪತ್ತೆ ಮಾಡಲಾಗಿದೆ.  ಇಂತಹ ಮಕ್ಕಳನ್ನು ಪುನರ್ವಸತಿ ಕಾರ್ಯಕ್ರಮಗಳಲ್ಲಿ ಸೇರಿಸಿ, ಸೇತುಬಂಧ ಶಾಲೆಗಳ ಮೂಲಕ ಶಿಕ್ಷಣದ ಮುಖ್ಯವಾಹಿನಿಗೆ ತರಲು ಸೂಕ್ತ ಕ್ರಮ ಕೈಗೊಳ್ಳಬೇಕು.  ಬಾಲಕಾರ್ಮಿಕ ಪ್ರಕರಣಗಳನ್ನು ಪತ್ತೆ ಹಚ್ಚುವ ಕಾರ್ಯದ ಬಗ್ಗೆ ಕಾರ್ಮಿಕ ಇಲಾಖೆ ಹೆಚ್ಚಿನ ಆದ್ಯತೆ ನೀಡಬೇಕು.  ಅಲ್ಲದೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಹಿಂಜರಿಯಬಾರದು.  ಜಿಲ್ಲೆಯಲ್ಲಿ ಗುತ್ತಿಗೆ ಆಧಾರಿತ ನೌಕರಿಗೆ ಕನಿಷ್ಟ ವೇತನ ಜಾರಿಯಾಗುತ್ತಿರುವ ಬಗ್ಗೆ ಕಾರ್ಮಿಕ ಇಲಾಖೆ ಸೂಕ್ತ ತಪಾಸಣೆ ಕೈಗೊಂಡು, ಶೋಷಿತರಿಗೆ ನ್ಯಾಯ ಒದಗಿಸಬೇಕು ಎಂದರು.
ಮಹಿಳೆ ಮತ್ತು ಮಕ್ಕಳ ರಕ್ಷಣೆ : ಜಿಲ್ಲೆಯಲ್ಲಿ ದೇವದಾಸಿ ಪದ್ಧತಿ ಜೀವಂತವಾಗಿದೆ ಎನ್ನುವ ಬಗ್ಗೆ ಆಗಾಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬರುತ್ತಿವೆ.  ಇಂತಹ ವರದಿಯನ್ನು ಆಧರಿಸಿ, ಆಯೋಗವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.  ಇಂತಹ ಅನಿಷ್ಠ ಪದ್ಧತಿಯ ನಿರ್ಮೂಲನೆಗೆ ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆ ವಿವರಣೆ ನೀಡಬೇಕು.  ಅದೇ ರೀತಿ ಜಿಲ್ಲೆಯ ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆಗೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ಆಯೋಗದ ಅಧ್ಯಕ್ಷರು ಪ್ರಶ್ನಿಸಿದರು.  ಇದಕ್ಕೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ಅವರು, ಕೊಪ್ಪಳ ತಾಲೂಕು ಹಿರೇಸಿಂದೋಗಿಯಲ್ಲಿ ದೇವದಾಸಿ ಪದ್ಧತಿ ಜೀವಂತವಾಗಿದೆ ಎಂಬುದಾಗಿ ಮಾಧ್ಯಮಗಳಲ್ಲಿ ವರದಿಯಾದ ಕೂಡಲೆ, ಗ್ರಾಮಕ್ಕೆ ಭೇಟಿ ನೀಡಿ, ಹಲವು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.  ಅಂತಹ ಕುಟುಂಬಗಳೂ ಸಹ ಇದಕ್ಕೆ ಸ್ಪಂದಿಸಿವೆ.  ಜಿಲ್ಲೆಯಲ್ಲಿ ಒಟ್ಟು ೨೩೩೫ ತೀವ್ರ ಅಪೌಷ್ಠಿಕ ಮಕ್ಕಳನ್ನು ಗುರುತಿಸಿ, ಅಂತಹ ಮಕ್ಕಳಿಗೆ ಹಾಲು, ಮೊಟ್ಟೆ ಜೊತೆಗೆ ಪೂರಕ ಪೌಷ್ಠಿಕ ಆಹಾರ ಒದಗಿಸಲಾಗುತ್ತಿದೆ.  ಸದ್ಯ ೧೪೧೪ ಮಕ್ಕಳ ಆರೋಗ್ಯ ಸುಧಾರಿಸಿದ್ದು, ಉಳಿದ ಮಕ್ಕಳ ಆರೋಗ್ಯದ ಬಗ್ಗೆಯೂ ತೀವ್ರ ನಿಗಾ ವಹಿಸಲಾಗಿದೆ ಎಂದರು.
  ಸಭೆಯಲ್ಲಿ ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
Please follow and like us:
error