ಏ. ೧೧ ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ಕೊಪ್ಪಳ ಜಿಲ್ಲಾಡಳಿತ ಸಜ್ಜು

 ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಸಮಾನತೆಗಾಗಿ ಸರ್ವರ ಸಮೀಕ್ಷೆಯನ್ನು ನಡೆಸಲು ಈಗಾಗಲೆ ಸಿದ್ಧತೆಯನ್ನು ಕೈಗೊಂಡಿದ್ದು, ೨೦೧೫ ರ ಏಪ್ರಿಲ್ ೧೧ ರಿಂದ ೩೦ ರವರೆಗೆ ಇಪ್ಪತ್ತು ದಿನಗಳ ಕಾಲ ಕರ್ನಾಟಕ ರಾಜ್ಯಾದ್ಯಂತ ಎಲ್ಲ ವರ್ಗದವರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯಲಿದೆ.  ಸಮೀಕ್ಷಾ ಕಾರ್ಯವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾಡಳಿತ ಸಜ್ಜಾಗಿದ್ದು, ಸಿದ್ಧತೆಗಳನ್ನು ಸಮರೋಪಾದಿಯಲ್ಲಿ ನಡೆಸಿದೆ.

  ಸಮೀಕ್ಷೆಯನ್ನು ವ್ಯವಸ್ಥಿತ ರೀತಿಯಲ್ಲಿ ಕೈಗೊಳ್ಳುವ ಸಲುವಾಗಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳನ್ನು ಪ್ರಧಾನ ಸಮೀಕ್ಷಾಧಿಕಾರಿಗಳೆಂದು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.  ಅದೇ ರೀತಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಹೆಚ್ಚುವರಿ ಪ್ರಧಾನ ಸಮೀಕ್ಷಾಧಿಕಾರಿಗಳೆಂದು, ಉಪವಿಭಾಗಾಧಿಕಾರಿಗಳನ್ನು ಉಪವಿಭಾಗ ಸಮೀಕ್ಷಾಧಿಕಾರಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ- ಜಿಲ್ಲಾ ಸಮೀಕ್ಷಾಧಿಕಾರಿ (ತಾಂತ್ರಿಕ) ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯನ್ನು ಜಿಲ್ಲಾ ಸಮನ್ವಯ ಮತ್ತು ಸಂಪರ್ಕ ಅಧಿಕಾರಿಯೆಂದು ಸರ್ಕಾರ ನೇಮಿಸಿದೆ. ಅಲ್ಲದೆ ಆಯಾ ತಹಸಿಲ್ದಾರರು ಗ್ರಾಮೀಣ ಪ್ರದೇಶದ ಬ್ಲಾಕ್‌ಗಳಿಗೆ ಚಾರ್ಜ್ ಅಧಿಕಾರಿಗಳಾಗಿದ್ದು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳು ನಗರ/ಪಟ್ಟಣ ಪ್ರದೇಶದ ಬ್ಲಾಕ್‌ಗಳಿಗೆ ಚಾರ್ಜ್ ಅಧಿಕಾರಿಯಾಗಿರುತ್ತಾರೆ. 
ಸಮೀಕ್ಷೆಗೆ ಸಿದ್ಧತೆ : ಜಿಲ್ಲೆಯಲ್ಲಿ ಸಮೀಕ್ಷಾ ಕಾರ್ಯಕ್ಕೆ ಒಟ್ಟು ೨೭೧೯ ಸಿಬ್ಬಂದಿಗಳನ್ನು ಈಗಾಗಲೆ ನಿಯೋಜಿಸಲಾಗಿದೆ.   ಇದರಲ್ಲಿ ೨೩೨೭ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಗಣತಿದಾರರನ್ನಾಗಿ ಹಾಗೂ ೩೯೨ ಪ್ರೌಢಶಾಲಾ ಶಿಕ್ಷಕರನ್ನು ಮೇಲ್ವಿಚಾರಕರನ್ನಾಗಿ ನೇಮಿಸಲಾಗಿದೆ.  ಪ್ರತಿ ೧೨೦ ರಿಂದ ೧೫೦ ಮನೆಗಳಿಗೆ ಒಂದು ಬ್ಲಾಕ್‌ನಂತೆ ಜಿಲ್ಲೆಯಲ್ಲಿ ೨೪೬೭ ಬ್ಲಾಕ್‌ಗಳನ್ನು ಮಾಡಲಾಗಿದೆ.  ಈ ಪೈಕಿ ಗ್ರಾಮೀಣ ಪ್ರದೇಶಗಳಲ್ಲಿ ೨೦೭೪ ಬ್ಲಾಕ್‌ಗಳಾದರೆ, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ೩೯೩ ಬ್ಲಾಕ್‌ಗಳಿವೆ.  ಕೊಪ್ಪಳ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ೫೧೫ ಬ್ಲಾಕ್‌ಗಳಿದ್ದು, ಅದೇ ರೀತಿ ಗಂಗಾವತಿ ತಾಲೂಕು- ೬೪೭, ಕುಷ್ಟಗಿ ತಾಲೂಕು- ೪೬೦ ಮತ್ತು ಯಲಬುರ್ಗಾ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ೪೫೨ ಬ್ಲಾಕ್‌ಗಳಿವೆ.  ಕೊಪ್ಪಳ ನಗರದಲ್ಲಿ ೧೨೮ ಬ್ಲಾಕ್‌ಗಳು, ಗಂಗಾವತಿ- ೧೯೩, ಕುಷ್ಟಗಿ-೪೪ ಮತ್ತು ಯಲಬುರ್ಗಾ ಪಟ್ಟಣದಲ್ಲಿ ೨೮ ಬ್ಲಾಕ್‌ಗಳಿವೆ.  ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ತರಬೇತಿಯನ್ನು ನೀಡುವ ಸಲುವಾಗಿ ಜಿಲ್ಲೆಯಲ್ಲಿ ಒಟ್ಟು ೨೮ ಜನರನ್ನು ಮಾಸ್ಟರ್ ಟ್ರೈನರ್‌ಗಳಾಗಿ ನೇಮಿಸಲಾಗಿದ್ದು,   ಸಮೀಕ್ಷಾ ಕಾರ್ಯ ಕುರಿತಂತೆ ಈಗಾಗಲೆ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ಈಗಾಗಲೆ  ಮೂರು ಹಂತಗಳಲ್ಲಿ ತರಬೇತಿ ನೀಡಲಾಗಿದೆ.  ಸಮೀಕ್ಷೆಯ ವಿಧಾನ ಅರಿಯಲು ಜಿಲ್ಲೆಯ ನಾಲ್ಕೂ ತಾಲೂಕುಗಳ ತಲಾ ಒಂದು ಬ್ಲಾಕ್‌ನಲ್ಲಿ ಪೂರ್ವಭಾವಿಯಾಗಿ ಪ್ರಾಯೋಗಿಕ ಸಮೀಕ್ಷಾ ಕಾರ್ಯ ಕೈಗೊಳ್ಳಲಾಗಿದ್ದು, ಕೊಪ್ಪಳ ನಗರ, ಗಂಗಾವತಿ ತಾಲೂಕಿನ ಮರಳಿ, ಕುಷ್ಟಗಿ ತಾಲೂಕಿನ ಹನುಮನಾಳ ಹಾಗೂ ಯಲಬುರ್ಗಾ ತಾಲೂಕಿನ ಹನುಮಾಪುರದ ತಲಾ ಒಂದು ಬ್ಲಾಕ್‌ನಲ್ಲಿ ಪ್ರಾಯೋಗಿಕ ಸಮೀಕ್ಷೆ ನಡೆಸಲಾಗಿದ್ದು, ಒಟ್ಟು ೪೪೩ ಕುಟುಂಬಗಳ ಗಣತಿಯನ್ನು ಯಶಸ್ವಿಯಾಗಿ ನಡೆಸಲಾಗಿದೆ.  ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕುರಿತಂತೆ ಜಿಲ್ಲಾ ಮಟ್ಟದಲ್ಲಿ ವಿವಿಧ ಜಾತಿ, ಸಮುದಾಯ, ಸಂಘ ಸಂಸ್ಥೆಗಳೊಂದಿಗೆ ಸಭೆ ನಡೆಸಿ, ಸಮೀಕ್ಷೆಯ ಹಂತ, ಉದ್ದೇಶ ಹಾಗೂ ಉಪಯೋಗಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗಿದೆ.
ಸಮೀಕ್ಷೆ ಉದ್ದೇಶ : ಎಲ್ಲ ಸಮುದಾಯಗಳ ಈಗಿನ ಸ್ಥಿತಿಗತಿಗೆ ಸಂಬಂಧಿಸಿದಂತೆ ವೈಜ್ಞಾನಿಕವಾದ ವಿಶ್ಲೇಷಣೆ ನಡೆಸುವುದು, ಜನಸಂಖ್ಯೆಯ ಪ್ರಮಾಣವನ್ನು ತಿಳಿಯುವುದು ಮತ್ತು ಗಣತಿಯಲ್ಲಿ ಹೊರಹೊಮ್ಮುವ ಅಂಶಗಳ ಆಧಾರದಲ್ಲಿ, ಅಂತಹ ಸಮುದಾಯಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಾನಮಾನವನ್ನು ಅಧ್ಯಯನ ಮಾಡಿ, ಅವರ ಏಳಿಗೆಗೆ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿರುತ್ತದೆ.  ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ಜಾತಿಗಳು ಹಾಗೂ ಇತರೆ ಜಾತಿಗಳನ್ನೊಳಗೊಂಡಂತೆ ರಾಜ್ಯದ ಪ್ರತಿಯೊಂದು ಕುಟುಂಬದ ಸಮಗ್ರ ಸಮೀಕ್ಷೆ ಕೈಗೊಂಡು, ವಿವಿಧ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ವಿಶ್ಲೇಷಣೆ ಮಾಡಿ, ಹಿಂದುಳಿದ ವರ್ಗಗಳ ಪಟ್ಟಿಯನ್ನು ಪರಿಷ್ಕರಿಸುವ ಕುರಿತು ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಜವಾಬ್ದಾರಿಯನ್ನು ಆಯೋಗ ಹೊಂದಿದೆ.  ಈಗ ಕೈಗೊಳ್ಳಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಪ್ರಮುಖ ಉದ್ದೇಶಗಳು ಇಂತಿವೆ.  ರಾಜ್ಯದ ಎಲ್ಲ ವರ್ಗಗಳ/ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಸ್ಥಿತಿಗತಿಗಳ ಕುರಿತು ಸಮೀಕ್ಷೆ ಮುಖಾಂತರ ಸಮಗ್ರ ಅಂಕಿ-ಅಂಶಗಳನ್ನು ಸಂಗ್ರಹಿಸುವುದು.  ಸಮೀಕ್ಷೆಯಲ್ಲಿ ಅನುಸರಿಸಿದ ವಿವಿಧ ಮಾನದಂಡಗಳ ಆಧಾರದ ಮೇಲೆ, ಸಂಗ್ರಹಿಸಿದ ಅಂಕಿ-ಅಂಶಗಳ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳನ್ನು ಗುರುತಿಸಿ, ಅವರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವ ಕಾರ್ಯಕ್ರಮಗಳನ್ನು ರೂಪಿಸುವುದಾಗಿದೆ.
ಗಣತಿದಾರರ ಪಾತ್ರ : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಯಶಸ್ವಿಯಲ್ಲಿ ಗಣತಿದಾರರ ಪಾತ್ರ ಮಹತ್ವದ್ದಾಗಿದೆ.  ಸಮೀಕ್ಷೆ ಪ್ರಶ್ನಾವಳಿಯ ಭಾಗ-೧ ರಲ್ಲಿ ಪ್ರತಿ ಕುಟುಂಬದ ಮುಖ್ಯಸ್ಥ ಹಾಗೂ ಸದಸ್ಯರ ವೈಯಕ್ತಿಕ ವಿವರಗಳನ್ನು  ಹಾಗೂ ಭಾಗ-೨ ರಲ್ಲಿ ಕುಟುಂಬದ ಸಮಗ್ರ ವಿವರಗಳನ್ನು ದಾಖಲಿಸಲಾಗುತ್ತದೆ. ಸಮೀಕ್ಷೆ ಕೈಗೊಳ್ಳ್ಳುವ ಮುನ್ನ, ಗಣತಿದಾರರಿಗೆ ವಹಿಸಲಾಗಿರುವ ಪ್ರದೇಶದ ಹಿರಿಯ ಮತ್ತು ಪ್ರಮುಖ ವ್ಯಕ್ತಿಗಳನ್ನು ಭೇಟಿ ಮಾಡಿ, ತಮ್ಮ ಭೇಟಿಯ ಉದ್ದೇಶವನ್ನು ಅಲ್ಲಿನ ನಿವಾಸಿಗಳಿಗೆ ವಿವರಿಸುವ ಮೂಲಕ ಅವರೊಂದಿಗೆ ನಿಕಟ ಸೌಹಾರ್ದತೆ ಹೊಂದುವುದು ಬಹುಮುಖ್ಯ.  ಯಾವುದೇ ಕುಟುಂಬವನ್ನು ಸಂದರ್ಶಿಸಿ, ಪ್ರಶ್ನಾವಳಿಯಲ್ಲಿನ ಪ್ರಶ್ನೆಗಳನ್ನು ಕೇಳುವಾಗ ಅವಸರವಾಗದಂತೆ, ನಗುಮುಖದೊಡನೆ ಮತ್ತು ಸೌಜನ್ಯಪೂರ್ವಕವಾಗಿ ಕುಟುಂಬದವರಿಗೆ ವಿವರಿಸುವಂತಾಗಬೇಕು.  ಗಣತಿದಾರರ ಸ್ನೇಹ ಮತ್ತು ವಿವೇಚನಾಯುಕ್ತ ಸಮಯಪ್ರಜ್ಞೆಯ ನಡೆನುಡಿಗಳು ಕುಟುಂಬ ಸದಸ್ಯರಿಗೆ ನಿರಾಳತೆಯನ್ನು ನೀಡಿ, ಅವರಿಂದ ಸಮರ್ಪಕ ಉತ್ತರ ಪಡೆಯಲು ಅನುಕೂಲವಾಗಲಿದೆ.  ಗಣತಿದಾರರು ಯಾವುದೇ ಮನೆಯನ್ನು ಸಮೀಕ್ಷೆಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಬೇಕಾಗಿದ್ದು, ಇಲ್ಲಿ ಪ್ರಮುಖವಾಗಿದೆ.  ಒಟ್ಟಾರೆಯಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಏರ್ಪಡಿಸಿರುವ ಸಮೀಕ್ಷಾ ಕಾರ್ಯದ ಯಶಸ್ವಿಯಲ್ಲಿ ಗಣತಿದಾರರ ಪಾತ್ರ ಮಹತ್ವದ್ದಾಗಿದೆ.
ಜಾಗೃತಿಗೆ ಕ್ರಮ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಉದ್ದೇಶ ಹಾಗೂ ಅಗತ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ವಿಶೇಷ ವಾಹನದ ಮೂಲಕ, ಜಾಗೃತಿ ಗೀತೆಗಳು ಹಾಗೂ ಕರಪತ್ರಗಳ ಮೂಲಕ ಅರಿವು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.  ಜಾಗೃತಿ ಅಭಿಯಾನವು ಏ. ೦೧ ರಿಂದ ಈಗಾಗಲೆ ಪ್ರಾರಂಭವಾಗಿದ್ದು, ಜಿಲ್ಲೆಯ ಎಲ್ಲ ತಾಲೂಕುಗಳ ಗ್ರಾಮಗಳಿಗೆ ಸಂಚರಿಸುತ್ತಿದೆ.
ಸಾರ್ವಜನಿಕರ ಕರ್ತವ್ಯ : ದೇಶದ ಸಮಗ್ರ ಅಭಿವೃದ್ಧಿ ಯೋಜನೆಗಳಿಗೆ ಜನಗಣತಿ ಕಾರ್ಯಕ್ರಮ ಹೇಗೆ ದಿಕ್ಸೂಚಿಯಂತೆ ಕಾರ್ಯ ನಿರ್ವಹಿಸಲಿದೆಯೋ,  ಅದೇ ರೀತಿ ಬರುವ ಏ. ೧೧ ರಿಂದ ೩೦ ರವರೆಗೆ ಕರ್ನಾಟಕ ರಾಜ್ಯಾದ್ಯಂತ ಜರುಗಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಹತ್ವ ಹೊಂದಿದೆ.  ಸಮೀಕ್ಷಾ ಅವಧಿಯಲ್ಲಿ ಒಂದು ವೇಳೆ ಯಾವುದೇ ಕುಟುಂಬ ಅಥವಾ ಮನೆಗೆ ಗಣತಿದಾರರು ಭೇಟಿ ನೀಡಿ ಮಾಹಿತಿ ಸಂಗ್ರಹಿಸದಿರುವ ಬಗ್ಗೆ ದೂರುಗಳಿದ್ದಲ್ಲಿ, ಕೂಡಲೆ ಸಂಬಂಧಪಟ್ಟವರು ಜಿಲ್ಲಾಧಿಕಾರಿಗಳಿಗೆ ಅಥವಾ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ  ಮಾಹಿತಿ ನೀಡಬಹುದಾಗಿದೆ.  ಪ್ರತಿಯೊಂದು ಕುಟುಂಬದ, ಪ್ರತಿಯೊಂದು ವ್ಯಕ್ತಿಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿ-ಗತಿಯ ಬಗ್ಗೆ ಸಮೀಕ್ಷೆಯಲ್ಲಿ ಗಣತಿದಾರರು ವರದಿ ಸಂಗ್ರಹಿಸಲಿದ್ದಾರೆ.  ಇದಕ್ಕಾಗಿ ಗಣತಿದಾರರು ಪ್ರತಿ ಮನೆ, ಮನೆಗೆ ಭೇಟಿ ನೀಡಿ ನಿಗದಿತ ನಮೂನೆಯಲ್ಲಿ ಮಾಹಿತಿಯನ್ನು ಕ್ರೋಢೀಕರಿಸುವರು.  ಗಣತಿದಾರರು ಸಮೀಕ್ಷೆಗಾಗಿ ಮನೆಗೆ ಬಂದಾಗ, ಸಾರ್ವಜನಿಕರು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ದಾಖಲೆಯನ್ನು ತೋರಿಸಿ, ಗಣತಿದಾರರಿಗೆ ಕುಟುಂಬದ ಸಮಗ್ರ ನೈಜ ಮಾಹಿತಿಯನ್ನು ನೀಡಿ ಸಹಕರಿಸಬೇಕು.  ಸಾರ್ವಜನಿಕರು ಗಣತಿದಾರರಿಗೆ ನೈಜ ಮತ್ತು ನಿಖರ ಮಾಹಿತಿಯನ್ನು ನೀಡಿ ಸರ್ಕಾರದ ಮಹತ್ವಾಕಾಂಕ್ಷಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಯಶಸ್ವಿಗೊಳಿಸಬೇಕು.  ರಾಜ್ಯದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸುವಲ್ಲಿ ಈ ಮೂಲಕ ನೆರವಾಗಬೇಕಾಗಿರುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ.
                                                                       – ತುಕಾರಾಂರಾವ್ ಬಿ.ವಿ.
                                                                          ಜಿಲ್ಲಾ ವಾರ್ತಾಧಿಕಾರಿ,
                                                                                ಕೊಪ್ಪಳ
Please follow and like us:
error

Related posts

Leave a Comment