ಬೇಸಿಗೆಯ ನೀರಿನ ಸಮಸ್ಯೆಗೆ ಈಗಿನಿಂದಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಿ- ವಿನಯಕುಮಾರ್ ಸೊರಕೆ

ಕೊಪ್ಪಳ ಫೆ.  : ಬೇಸಿಗೆ ಕಾಲದಲ್ಲಿ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಯ ಯಾವುದೇ ವ್ಯತ್ಯಯವಾಗದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಈಗಿನಿಂದಲೇ ಪ್ರಾರಂಭಿಸಬೇಕು ಎಂದು 
ರಾಜ್ಯ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ನಗರ/ಪಟ್ಟಣ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಬೇಸಿಗೆ ಕಾಲ ಸಮೀಪಿಸುತ್ತಿದ್ದು, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಈಗಿನಿಂದಲೇ ಪ್ರಾರಂಭಿಸಬೇಕು.  ಸದ್ಯ ಕೊಪ್ಪಳ ನಗರದಲ್ಲಿ ವಾರಕ್ಕೊಮ್ಮೆ, ಗಂಗಾವತಿ ನಗರದಲ್ಲಿ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ.  ಕೊಪ್ಪಳ ನಗರದಲ್ಲಿ ಸದ್ಯ ಜಾರಿಯಲ್ಲಿರುವ ೨೪ * ೭ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿ ನಿಧಾನಗತಿಯಲ್ಲಿ ನಡೆದಿದ್ದು, ನಗರದಲ್ಲಿ ಇತ್ತೀಚೆಗೆ ನೀರಿನ ಟ್ಯಾಂಕ್ ಕುಸಿತ ಪ್ರಕರಣದಿಂದ ಯೋಜನೆಗೆ ಇನ್ನಷ್ಟು ಹಿನ್ನಡೆಯಾಗಿದೆ.  ಬೇಸಿಗೆಯಲ್ಲಿ ಯಾವುದೇ ಕಾರಣಕ್ಕೂ ನೀರು ಪೂರೈಕೆಯಲ್ಲಿ ತೊಂದರೆ ಉಂಟಾಗದಂತೆ, ಈಗಿರುವ ಬೋರ್‌ವೆಲ್‌ಗಳಿಗೆ ಮೋಟಾರ್ ಅಳವಡಿಸಿ, ನೀರು ವಿತರಣೆ ಪೈಪ್‌ಲೈನ್‌ಗೆ ಸಂಪರ್ಕ ಕಲ್ಪಿಸಿಕೊಡಬೇಕು.  ಕೊಪ್ಪಳ ನಗರದಲ್ಲಿ ಸದ್ಯ ಇರುವ ಪೈಪ್‌ಲೈನ್ ಬಹಳಷ್ಟು ಸೋರಿಕೆ ಇರುವ ಬಗ್ಗೆ ದೂರುಗಳು ಬಂದಿದ್ದು, ಅಂತಹ ಸೋರಿಕೆಯನ್ನು ಸರಿಪಡಿಸಿಕೊಳ್ಳಬೇಕು.  ಟ್ಯಾಂಕರ್‌ಗಳ ಮೂಲಕ ಪೂರೈಕೆ ಮಾಡುವುದಕ್ಕೂ ಸಿದ್ಧವಾಗಿರಬೇಕು.  ತುಂಗಭದ್ರಾ ಜಲಾಶಯದ ಹಿನ್ನೀರಿನ ಬಳಿಯ ಜಾಕ್‌ವೆಲ್ ಬಳಿ ನೀರು ಲಭ್ಯವಾಗದಿರುವುದರಿಂದ, ಮರಳು ಚೀಲಗಳ ಮೂಲಕ ತಡೆಗೋಡೆ ನಿರ್ಮಿಸಿ ನೀರು ಸಂಗ್ರಹಿಸಿಟ್ಟುಕೊಳ್ಳಬೇಕು. ಕುಡಿಯುವ ನೀರು ಪೂರೈಕೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಬಾರದು.  ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಬರುವ ಬೇಸಿಗೆಯಲ್ಲಿ ನೀರು ಪೂರೈಕೆ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸುವ ಬಗ್ಗೆ ಸಮಗ್ರ ಯೋಜನೆಯನ್ನು ಸಿದ್ಧಪಡಿಸಿ, ೧೫ ದಿನಗಳ ಒಳಗಾಗಿ ಸಲ್ಲಿಸಬೇಕು.  ಕೊಪ್ಪಳ ನಗರಕ್ಕೆ ಒಂದು ರಿಂಗ್‌ರೋಡ್ ಅತ್ಯವಶ್ಯಕವಾಗಿದ್ದು, ಕೂಡಲೆ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಸಲ್ಲಿಸಬೇಕು.  ಕೊಪ್ಪಳ ನಗರದ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಪೊಲೀಸ್ ಇಲಾಖೆ ಕೋರಿದ್ದು, ಈ ಬಗ್ಗೆಯೂ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಸಚಿವ ವಿನಯಕುಮಾರ್ ಸೊರಕೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯುಜಿಡಿ ಕಾಮಗಾರಿ ತ್ವರಿತಗೊಳಿಸಿ : ಕೊಪ್ಪಳ ನಗರದಲ್ಲಿ ನಡೆದಿರುವ ಯುಜಿಡಿ ಕಾಮಗಾರಿ ಬಹಳಷ್ಟು ಮಂದಗತಿಯಲ್ಲಿ ಸಾಗುತ್ತಿರುವ ಬಗ್ಗೆ ಪದೇ ಪದೇ ದೂರುಗಳು ಕೇಳಿಬರುತ್ತಿವೆ.  ೨೦೧೧ ರಲ್ಲಿ ಪ್ರಾರಂಭಗೊಂಡಿರುವ ಯುಜಿಡಿ ಕಾಮಗಾರಿಗೆ ಹಲವು ಬಾರಿ ಕಾಲಮಿತಿಯನ್ನು ವಿಸ್ತರಿಸಿದ್ದರೂ ಪ್ರಯೋಜನವಾಗುತ್ತಿಲ್ಲ.  ಈಗಾಗಲೆ ೧೯ ಕೋಟಿ ರೂ.ಗಳ ಬಿಲ್ ಪಾವತಿ ಮಾಡಲಾಗಿದೆ.  ಯುಜಿಡಿ ಕಾಮಗಾರಿಗಳಿಂದಾಗಿ ಕೊಪ್ಪಳ ನಗರದ ಬಹುತೇಕ ರಸ್ತೆಗಳು ಹಾಳಾಗಿದ್ದು, ಇದುವರೆಗೂ ರಸ್ತೆಗಳ ಅಭಿವೃದ್ಧಿಪಡಿಸುವ ಕಾಮಗಾರಿ ಪ್ರಾರಂಭವಾಗಿಲ್ಲದಿರುವ ಬಗ್ಗೆ ಸಚಿವರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.  ಯುಜಿಡಿ ಕಾಮಗಾರಿಯಿಂದ ಹಾಳಾಗಿರುವ ಕೊಪ್ಪಳ ನಗರದ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಸಂಚಾರ ಸುಗಮಗೊಳಿಸಬೇಕು.  ಯುಜಿಡಿ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಸಾಕಷ್ಟು ರಕ್ಷಣಾ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕರ ವಸೂಲಾತಿಗೆ ವೇಗ ನೀಡಿ : ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಆಸ್ತಿ ತೆರಿಗೆ, ನೀರಿನ ಕರ ವಸೂಲಾತಿ ಅಲ್ಲದೆ ಜಾಹೀರಾತು ಫಲಕಗಳಿಗೆ ಶುಲ್ಕವನ್ನು ವಸೂಲಿ ಮಾಡುವಲ್ಲಿ ಅಧಿಕಾರಿಗಳು ಆಸಕ್ತಿ ತೋರದ ಕಾರಣ, ಸ್ಥಳೀಯ ಸಂಸ್ಥೆಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಂಪನ್ಮೂಲ ಕ್ರೋಢೀಕರಣವಾಗುತ್ತಿಲ್ಲ.  ಆಸ್ತಿ ತೆರಿಗೆ ಹಾಗೂ ನೀರಿನ ಕರ ವಸೂಲಾತಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ.  ಇದು ನಗರಗಳ ಅಭಿವೃದ್ಧಿಗೆ ಸಹಕಾರಿಯಾಗಲಿದ್ದು, ನೀರು ಪೂರೈಕೆ ವ್ಯವಸ್ಥೆ ಸುಧಾರಿಸಲು ಇದು ಅಗತ್ಯವಾಗಿದೆ ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರೋತ್ಥಾನ ಕಾಮಗಾರಿ : ನಗರೋತ್ಥಾನ ಯೋಜನೆಯ ಎರಡನೆ ಹಂತದಲ್ಲಿ ಜಿಲ್ಲೆಯಲ್ಲಿ ಒಟ್ಟು ೫೫ ಕಾಮಗಾರಿಗಳನ್ನು ಕೈಗೊಳ್ಳಬೇಕಿದ್ದು, ಕಾಮಗಾರಿಗಳು ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ.  ಇದುವರೆಗೂ ೪೬ ಕಾಮಗಾರಿಗಳು ಪ್ರಗತಿಯಲ್ಲಿವೆ. ಯೋಜನೆಗೆ ಈಗಾಗಲೆ ೧೫೭೫. ೫೬ ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.  ಕೊಪ್ಪಳ ನಗರದಲ್ಲಿ ೨೭ ಕಾಮಗಾರಿಗಳ ಪೈಕಿ ೨೩ ಪ್ರಗತಿಯಲ್ಲಿವೆ. ೦೧ ಕಾಮಗಾರಿ ಪೂರ್ಣಗೊಂಡಿದೆ.  ಗಂಗಾವತಿಯಲ್ಲಿ ೧೦ ರ ಪೈಕಿ ೯ ಪ್ರಗತಿಯಲ್ಲಿವೆ.  ಕುಷ್ಟಗಿಯಲ್ಲಿ ೮ ರ ಪೈಕಿ ೭ ಹಾಗೂ ಯಲಬುರ್ಗಾದಲ್ಲಿ ೧೦ ರ ಪೈಕಿ ೭ ಕಾಮಗಾರಿಗಳು ಪ್ರಗತಿಯಲ್ಲಿವೆ.  ಈ ಆರ್ಥಿಕ ವರ್ಷದೊಳಗೆ  ನಗರೋತ್ಥಾನ ಯೋಜನೆಯ ಕಾಮಗಾರಿ ಪೂರ್ಣಗೊಳಿಸಿ, ಸಂಪೂರ್ಣ ಅನುದಾನ ವಿನಿಯೋಗವಾಗದಿದ್ದಲ್ಲಿ, ಯೋಜನೆಯ ೩ ನೇ ಹಂತದ ಕಾಮಗಾರಿಗಳಿಗೆ ಮಂಜೂರಾತಿ ದೊರೆಯುವುದಿಲ್ಲವಾದ್ದರಿಂದ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ತಿಳಿಸಿದರು.
  ಸಭೆಯಲ್ಲಿ ಸಂಸದ ಸಂಗಣ್ಣ ಕರಡಿ, ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಗುಲಬರ್ಗಾ ವಿಭಾಗದ ಮುಖ್ಯ ಇಂಜಿನಿಯರ್ ಕೃಷ್ಣಮೂರ್ತಿ ಸೇರಿದಂತೆ ನಗರಸಭೆ, ಪುರಸಭೆ, ನಗರಾಭಿವೃದ್ಧಿ ಪ್ರಾಧಿಕಾರಗಳ ಅಧಿಕಾರಿಗಳು, ನಗರಸಭೆ ಸದಸ್ಯರುಗಳು ಉಪಸ್ಥಿತರಿದ್ದರು.
  ಪ್ರಗತಿಪರಿಶೀಲನಾ ಸಭೆಗೂ ಪೂರ್ವದಲ್ಲಿ, ಸಚಿವರು ಕೊಪ್ಪಳ ನಗರದ ಎನ್.ಜಿ.ಓ. ಕಾಲೋನಿಯಲ್ಲಿ ಇತ್ತೀಚೆಗೆ ನೀರಿನ ಟ್ಯಾಂಕ್ ಕುಸಿತವಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ಅಲ್ಲದೆ ನಗರದ ಬೇಂದ್ರೆ ನಗರ, ಗವಿಶ್ರೀ ನಗರದಲ್ಲಿ ನಿರ್ಮಿಸಲಾಗುತ್ತಿರುವ ಹೊಸ ನೀರಿನ ಟ್ಯಾಂಕ್ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ, ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದುಕೊಂಡರು.
Please follow and like us:
error